ಪಾಕಿಸ್ತಾನ: ಇಸ್ಲಾಮಾಬಾದ್ ತಲುಪಿದ ಇಮ್ರಾನ್ ಖಾನ್ ಬೆಂಬಲಿಗರು, ಹಿಂಸಾಚಾರಕ್ಕೆ ತಿರುಗಿದ ಪಿಟಿಐ ಪ್ರತಿಭಟನೆ, ಮತ್ತೊಮ್ಮೆ ಅಸ್ಥಿರತೆಯ ಭೀತಿ
Nov 26, 2024 08:56 AM IST
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ತಲುಪಿದ ಇಮ್ರಾನ್ ಖಾನ್ ಬೆಂಬಲಿಗರು ಪ್ರತಿಭಟನೆ ಮುಂದುವರಿಸಿದ್ದು, ಭದ್ರತಾ ಪಡೆಗಳೊಂದಿಗೆ ಹಿಂಸಾಚಾರ ಇಳಿದ ಕಾರಣ 70 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮತ್ತೊಮ್ಮೆ ಅಸ್ಥಿರತೆಯ ಭೀತಿ ಕಾಡಿದೆ.
ಪಾಕಿಸ್ತಾನದಲ್ಲಿ ಮತ್ತೊಮ್ಮೆ ಪ್ರತಿಭಟನೆಯ ಕಿಚ್ಚು ಹರಡಿದೆ. ಇಮ್ರಾನ್ ಖಾನ್ ಬೆಂಬಲಿಗರು ಇಸ್ಲಾಮಾಬಾದ್ ತಲುಪಿದ್ದು, ಭದ್ರತಾ ಪಡೆಗಳೊಂದಿಗೆ ಸಂಘರ್ಷಕ್ಕೆ ಇಳಿದ ಕಾರಣ ಹಿಂಸಚಾರ ನಡೆದಿದೆ. ಇದರೊಂದಿಗೆ, ಪಿಟಿಐ ಪ್ರತಿಭಟನೆ ಹಿಂಸಾತ್ಮಕವಾಗಿದ್ದು, ಅಲ್ಲಿ ಮತ್ತೊಮ್ಮೆ ಅಸ್ಥಿರತೆಯ ಭೀತಿ ಕಾಡಿದೆ.
ಇಸ್ಲಾಮಾಬಾದ್: ಪಾಕಿಸ್ತಾನದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಗರು ವಿವಿಧೆಡೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸುತ್ತ ರಾಜಧಾನಿ ಇಸ್ಲಾಮಾಬಾದ್ ಪ್ರವೇಶಿಸಿದ್ದಾರೆ. ಇದೇ ವೇಳೆ ಪ್ರತಿಭಟನಾ ಮೆರವಣಿಗೆ ಹಿಂಸಚಾರಕ್ಕೆ ತಿರುಗಿದ್ದು, ಪೊಲೀಸರು, ಸೇನೆ ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಕನಿಷ್ಠ ಒಬ್ಬ ಪೊಲೀಸ್ ಅಧಿಕಾರಿ, 4 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರ ಪೈಕಿ ಒಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಪಾಕಿಸ್ತಾನ ಸೇನೆ ಕಂಡಲ್ಲಿ ಗುಂಡು ಹಾರಿಸುವಂತೆ ಆದೇಶ ನೀಡಿದ್ದಾಗಿ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಈ ನಡುವೆ, ಪ್ರತಿಭಟನಾಕಾರರು ಪ್ರತಿಭಟನೆ ನಡೆಸುವುದಕ್ಕಾಗಿ ಡಿ ಚೌಕ್ ತಲುಪಲು ಪ್ರಯತ್ನಿಸಿದ್ದರು. ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ನಾಯಕ ಇಮ್ರಾನ್ ಖಾನ್ ಅವರು ನವೆಂಬರ್ 24 ರಂದು ರಾಷ್ಟ್ರ ವ್ಯಾಪಿ ಪ್ರತಿಭಟನೆ ನಡೆಸುವಂತೆ ನೀಡಿದ್ದ ಕರೆಗೆ ಸ್ಪಂದಿಸಿ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು.
ಪಾಕಿಸ್ತಾನದಲ್ಲಿ ಪಿಟಿಐ ಬೆಂಬಲಿಗರ ಪ್ರತಿಭಟನೆ; 5 ಮುಖ್ಯ ಅಂಶಗಳು
ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂದಪುರ್ ಮತ್ತು ವಿರೋಧ ಪಕ್ಷದ ನಾಯಕ ಒಮರ್ ಅಯೂಬ್ ನೇತೃತ್ವದ ಪಿಟಿಐ ಬೆಂಗಾವಲು ಪಡೆ ಇಸ್ಲಾಮಾಬಾದ್ ತಲುಪಿದೆ. ಈ ಸಮಯದಲ್ಲಿ, ಅವರು ಗಾಜಿ ಬ್ರೋತಾ ಸೇತುವೆಯ ಮೇಲೆ ಪೊಲೀಸರಿಂದ ಪ್ರತಿರೋಧ ಎದುರಿಸಬೇಕಾಯಿತು. ಸ್ಥಳದಲ್ಲಿ ಸಂಘರ್ಷ ನಡೆಸಿದ ಪ್ರತಿಭಟನಾಕಾರರು ಪೊಲೀಸ್ ನಿರ್ಬಂಧವನ್ನು ಮುರಿದು, ಸುಮಾರು 2 ಕಿಮೀ ಉದ್ದದ ಬೆಂಗಾವಲು ಪಡೆ ಮುಂದೆ ಸಾಗಿದ್ದಾಗಿ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ವಿವರಿಸಿದೆ.
1) ಹಿಂಸಾಚಾರದ ಪ್ರತಿಭಟನೆ, ಪೊಲೀಸ್ ಅಧಿಕಾರಿ ಹತ್ಯೆ, ಹಲವರಿಗೆ ಗಾಯ
ಇಮ್ರಾನ್ ಖಾನ್ ಅವರ ಬೆಂಬಲಿಗರು ಮತ್ತು ಪ್ರತಿಭಟನಾಕಾರರು ಇಸ್ಲಾಮಾಬಾದ್ ತಲುಪುವುದನ್ನು ತಡೆಯಲು ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಘರ್ಷಣೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟು ಇತರ 70 ಮಂದಿ ಗಾಯಗೊಂಡರು. ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಬೆಂಬಲಿಗರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ ನಂತರ ಹಲವಾರು ಪೊಲೀಸರನ್ನು ಒತ್ತೆಯಾಳುಗಳಾಗಿ ಇರಿಸಲಾಗಿದೆ ಎಂದು ಪಂಜಾಬ್ ಸರ್ಕಾರದ ಮಾಹಿತಿ ಸಚಿವ ಅಜ್ಮಾ ಬುಖಾರಿ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
2) ಯಾವ ವಿಷಯಕ್ಕಾಗಿ ಪಿಟಿಐ ಪ್ರತಿಭಟನೆ
'ಕದ್ದ ಜನಾದೇಶ', ಜನರ ಅನ್ಯಾಯದ ಬಂಧನ ಮತ್ತು 26 ನೇ ತಿದ್ದುಪಡಿಯ ಅಂಗೀಕಾರವನ್ನು ಖಂಡಿಸಿ ಖಾನ್ ಅವರು ನವೆಂಬರ್ 24 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕರೆ ನೀಡಿದ್ದರು. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಬೆಂಬಲಿಗರು ಸೋಮವಾರ ರಾಜಧಾನಿಯನ್ನು ಪ್ರವೇಶಿಸುವ ಮತ್ತು ಧರಣಿ ನಡೆಸುವ ತನ್ನ ಪ್ರಯತ್ನವನ್ನು ವಿಫಲಗೊಳಿಸಲು ಅಧಿಕಾರಿಗಳ ತೀವ್ರ ಪ್ರತಿರೋಧದ ನಡುವೆ ರಾತ್ರಿ ಕೊಂಚ ವಿರಾಮ ಪಡೆದರು. ಬಳಿಕ, ಇಸ್ಲಾಮಾಬಾದ್ ಕಡೆಗೆ ತನ್ನ ಮೆರವಣಿಗೆಯನ್ನು ಪುನರಾರಂಭಿಸಿದರು. ಖಾನ್ ಅವರ ಬೆಂಬಲಿಗರು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಲು ಮತ್ತು ರಾಷ್ಟ್ರಪತಿ ಭವನ, ಪ್ರಧಾನ ಮಂತ್ರಿ ಕಚೇರಿ, ಸಂಸತ್ತು ಮತ್ತು ಸುಪ್ರೀಂ ಕೋರ್ಟ್ ಸೇರಿದಂತೆ ಹಲವಾರು ಪ್ರಮುಖ ಸರ್ಕಾರಿ ಕಟ್ಟಡಗಳ ಬಳಿ ಇರುವ ಡಿ-ಚೌಕ್‌ನಲ್ಲಿ ಧರಣಿ ನಡೆಸಲಿದ್ದಾರೆ.
3) ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿ ವಿರುದ್ಧ ಆರೋಪ
'ಕಾನ್‌ಸ್ಟೇಬಲ್ ಮುಬಾಶಿರ್ ಇಸ್ಲಾಮಾಬಾದ್‌ಗೆ ಹೋಗುತ್ತಿದ್ದಾಗ ಕಾಟಿ ಬೆಟ್ಟದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆದ ಘರ್ಷಣೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ನಂತರವೂ ಹೀಗೆ ಹೇಳುತ್ತಾರಾ ಎಂದು ರಾಜಕೀಯ ಪಕ್ಷ ಎಂದು ಕರೆಯುವವರನ್ನು ಕೇಳುತ್ತೇನೆ. ಇಮ್ರಾನ್‌ಖಾನ್ ಬೆಂಬಲಿಗರಿಂದ ಪೊಲೀಸ್ ಅಧಿಕಾರಿಗಳನ್ನು ಒತ್ತೆಯಾಳಾಗಿಟ್ಟುಕೊಂಡಿರುವುದು... ಇದೇನಾ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿ ಈ ದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಬುಖಾರಿ ಹೇಳಿದ್ದಾರೆ. ಬುಶ್ರಾ ಬೀಬಿ ತನ್ನ ಪತಿಯನ್ನು ಬಿಡುಗಡೆ ಮಾಡಿಸುವಂತೆ ಪಶ್ತೂನರನ್ನು (ಪಠಾಣರನ್ನು) ಪ್ರಚೋದಿಸುತ್ತಿದ್ದಾಳೆ' ಎಂದು ಸಚಿವ ಅಜ್ಮಾ ಬುಖಾರಿ ಆರೋಪಿಸಿದ್ದಾರೆ.
4) 3500ಕ್ಕೂ ಹೆಚ್ಚು ಪಿಟಿಐ ಬೆಂಬಲಿಗರ ಬಂಧನ
ಪಂಜಾಬ್ ಮತ್ತು ಇಸ್ಲಾಮಾಬಾದ್‌ನಲ್ಲಿ ಪೊಲೀಸರು 3,500 ಕ್ಕೂ ಹೆಚ್ಚು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಹೇಳಿದೆ. ಖಾನ್ ಅವರ ಪಕ್ಷದ ಹಿರಿಯ ನಾಯಕರೊಬ್ಬರು, 'ಇಸ್ಲಾಮಾಬಾದ್‌ಗೆ ತೆರಳುತ್ತಿದ್ದಾಗ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಪಕ್ಷದ ಹತ್ತಾರು ಕಾರ್ಯಕರ್ತರು ಗಾಯಗೊಂಡಿದ್ದಾರೆ ಮತ್ತು 3,500 ಕ್ಕೂ ಹೆಚ್ಚು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ' ಎಂದು ಹೇಳಿದರು.
5) ಹಿಂಸಾಚಾರಕ್ಕೆ ತಿರುಗಿದ ಪಿಟಿಐ ಪ್ರತಿಭಟನೆ; ಶೂಟ್ ಅಟ್ ಸೈಟ್ ಆದೇಶ ನೀಡಿದ ಸೇನೆ
ವರದಿಗಳ ಪ್ರಕಾರ, ಪ್ರತಿಭಟನಾಕಾರರೊಂದಿಗಿನ ಘರ್ಷಣೆಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಮತ್ತು ಕನಿಷ್ಠ ಒಬ್ಬ ಪ್ರತಿಭಟನಾಕಾರ ಮೃತಪಟ್ಟಿದ್ದಾರೆ. ಇದಾದ ನಂತರ ಪಾಕಿಸ್ತಾನ ಸೇನೆ ಶೂಟ್ ಅಟ್ ಸೈಟ್ ಆದೇಶ ನೀಡಿದೆ. ಪರಿಸ್ಥಿತಿ ನಿಯಂತ್ರಿಸಲು ಮತ್ತು ಪ್ರತಿಭಟನಾಕಾರರು ಇಸ್ಲಾಮಾಬಾದ್ ತಲುಪುವುದನ್ನು ತಪ್ಪಿಸಲು ಸೇನೆ ಹೆಚ್ಚಿನ ಮುತುವರ್ಜಿವಹಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.
6) ಇಮ್ರಾನ್ ಖಾನ್ ಜೈಲಿನಲ್ಲಿರೋದು ಯಾಕೆ, ಅವರ ವಿರುದ್ಧದ ಪ್ರಕರಣಗಳೇನು
ಇಮ್ರಾನ್ ಖಾನ್ ಅವರ ಕರೆಯ ಮೇರೆಗೆ ಭಾನುವಾರ ಪ್ರತಿಭಟನೆ ಶುರುವಾಗಿದೆ. ಅವರ ವಿರುದ್ಧದ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಾಮೀನು ನೀಡಿದರೂ ಅಥವಾ ಶಿಕ್ಷೆಯನ್ನು ಅಮಾನತುಗೊಳಿಸಿದರೂ ಅವರು ಬಂಧನದಲ್ಲಿಯೇ ಇದ್ದಾರೆ. ಮಾಜಿ ಕ್ರಿಕೆಟ್ ತಾರೆಯಾಗಿದ್ದ ಖಾನ್ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದರು. ಭ್ರಷ್ಟಾಚಾರದಿಂದ ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಅಧಿಕಾರದ ದುರುಪಯೋಗದವರೆಗೆ ಅವರು ಪ್ರಧಾನಿಯಾಗಿದ್ದ ಸಮಯಕ್ಕೆ ಸಂಬಂಧಿಸಿದ 150 ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
(ಏಜೆನ್ಸಿ ಸುದ್ದಿಗಳ ಮಾಹಿತಿ)