Ayodhya Ram mandir: ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಇಂದು, ನೀವು ತಿಳಿದಿರಬೇಕಾದ 10 ಅಂಶಗಳು
Jan 22, 2024 10:51 AM IST
ಬಾಲರಾಮ ಪ್ರಾಣ ಪ್ರತಿಷ್ಠಾ ಮಹೋತ್ಸವಕ್ಕೆ ಸಜ್ಜಾಗಿರುವ ಅಯೋಧ್ಯೆ ರಾಮ ಮಂದಿರ
Ayodhya Ram mandir Pran Prathishta today: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾ ಕಾರ್ಯ ಪ್ರಗತಿಯಲ್ಲಿದ್ದು, ಪ್ರಾಣ ಪ್ರತಿಷ್ಠಾ ಮಹೋತ್ಸವ ಮಧ್ಯಾಹ್ನ ಅಭಿಜಿತ್ ಮುಹೂರ್ತದಲ್ಲಿ ಸಂಪನ್ನವಾಗಲಿದೆ. ಈ ಕಾರ್ಯಕ್ರಮದ ಕುರಿತು ತಿಳಿದಿರಬೇಕಾದ 10 ಅಂಶಗಳ ವಿವರಣೆ.
ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ವಿಗ್ರಹದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಶುರುವಾಗಿದ್ದು, ಗಣ್ಯಾತಿಗಣ್ಯರು ಸೇರಿ ಸಾವಿರಾರು ಜನ ಪಾಲ್ಗೊಳುತ್ತಿದ್ದಾರೆ. ಬಾಲರಾಮ ವಿಗ್ರಹದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಕರ್ನಾಟಕದ ವೀಣೆ ಸೇರಿ ವಿವಿಧ ರಾಜ್ಯಗಳ 50 ವಾದ್ಯಗಳ ಮಂಗಳ ಧ್ವನಿಯೊಂದಿಗೆ ಶುರುವಾಗಿದೆ.
ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿದ್ದು, ಧಾರ್ಮಿಕ ವಿಧಿವಿಧಾನಗಳನ್ನು ವೈದಿಕರು ನೆರವೇರಿಸುತ್ತಿದ್ದಾರೆ. ರಾಮ ಭಕ್ತರಾದ ವಿವಿಧ ಸಮುದಾಯಗಳ ಪ್ರತಿನಿಧಿಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕುರಿತು ತಿಳಿದಿರಬೇಕಾದ 10 ಅಂಶಗಳು
1) ಅಯೋಧ್ಯೆ ರಾಮ ಮಂದಿರ ಬಾಲರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಮಂಗಲ ಧ್ವನಿಯೊಂದಿಗೆ ಸೋಮವಾರ (ಜ.22) ಬೆಳಗ್ಗೆ 10 ಗಂಟೆಗೆ ಶುರುವಾಗಿದೆ. ಮಧ್ಯಾಹ್ನ 12.20ಕ್ಕೆ ಪ್ರಾಣ ಪ್ರತಿಷ್ಠಾ ಮಹೋತ್ಸವ ಶುರುವಾಗಿ ಮಧ್ಯಾಹ್ನ 1 ಗಂಟೆಗೆ ಸಂಪನ್ನಗೊಳ್ಳಲಿದೆ. ಬಾಲರಾಮ ಪ್ರಾಣ ಪ್ರತಿಷ್ಠಾ ಮಹೋತ್ಸವವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾಷಣ ಇರಲಿದೆ.
2) ಪ್ರಧಾನಿ ಮೋದಿ ಕುಬೇರ್ ತಿಲಾಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಪುರಾತನ ಶಿವ ದೇಗುಲ ಇದ್ದು, ಅದರ ಪ್ರತಿಷ್ಠಾ ಮಹೋತ್ಸ ಮತ್ತು ಪೂಜೆಯಲ್ಲಿ ಭಾಗಿಯಾಗುತ್ತಾರೆ.
3) ಬಾಲರಾಮನಿಗೆ 114 ಕಲಶಾಭಿಷೇಕ ನಡೆಯಲಿದೆ. ಈ ಕಲಶಗಳಲ್ಲಿ ಔಷಧಯುಕ್ತ ನೀರು ಇರಲಿದ್ದು, ಈ ಪವಿತ್ರ ಜಲವನ್ನು ದೇಶದ ವಿವಿಧ ನದಿ, ಕಲ್ಯಾಣಿಗಳಿಂದ ತರಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
4) ಪ್ರಾಣ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿ ಧಾರ್ಮಕ ವಿಧಿ ವಿಧಾನಗಳು ಸರಯೂ ನದಿ ತಟದಿಂದ ಜನವರಿ 16ರಂದು ಶುರುವಾಗಿದ್ದು, ಇಂದು ಅಪರಾಹ್ನ ಅಭಿಜಿತ್ ಮುಹೂರ್ತದಲ್ಲಿ ಸಂಪನ್ನಗೊಳ್ಳಲಿದೆ.
5) ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ 51 ಇಂಚು ಎತ್ತರ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ವಿವಿಧ ಧಾರ್ಮಿಕ ವಿಧಿ ವಿಧಾನ ನೆರವೇರಿಸುವ ಯಜಮಾನ ಸ್ಥಾನದ ಹೊಣೆಗಾರಿಕೆಯನ್ನು ದೇಶದ ವಿವಿಧ ಭಾಗಗಳ 14 ದಂಪತಿ ನಿರ್ವಹಿಸುತ್ತಿದ್ದಾರೆ.
6) ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಿಮಿತ್ತ ಅಯೋಧ್ಯೆಯ ಉದ್ದಗಲಕ್ಕೂ ಹಲವು ಪದರಗಳ ಭದ್ರತಾ ವ್ಯವಸ್ಥೆ ಜಾರಿಯಲ್ಲಿದೆ. ಜನರ ಚಲನವಲನಗಳ ಮೇಲೆ ನಿಗಾ ಇರಿಸುವುದಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಾಲಿತ 10,000 ಸಿಸಿಟಿವಿ ಕ್ಯಾಮೆರಾ, ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ನಾಗರಿಕರ ವೇಷದಲ್ಲಿ ಪೊಲೀಸರೂ ಪಹರೆ ನಡೆಸುತ್ತಿದ್ದಾರೆ.
7) ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್, ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಮತ್ತು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾದ ಪ್ರಮುಖರಲ್ಲಿ ಸೇರಿದ್ದಾರೆ. 7000ಕ್ಕೂ ಹೆಚ್ಚು ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಈ ಪೈಕಿ 506 ಮಂದಿ ಅತಿಗಣ್ಯರ ಪಟ್ಟಿಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ಈ ಕಾರ್ಯಕ್ರಮವನ್ನು ಬಿಜೆಪಿ- ಆರ್‌ಎಸ್‌ಎಸ್ ಕಾರ್ಯಕ್ರಮ ಎಂದು ಆರೋಪಿಸಿದೆ.
8) ಅಯೋಧ್ಯೆಯ 283 ಕಡೆಗಳಲ್ಲಿ ಬೃಹತ್ ಎಲ್‌ಇಡಿ ಪರದೆಗಳನ್ನು ಸ್ಥಾಪಿಸಲಾಗಿದ್ದು, ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇರ ಪ್ರಸಾರ ಈ ಪರದೆಗಳಲ್ಲಿ ಕಾಣಲಿದೆ.
9) ಬಾಲರಾಮನ ಮೂರ್ತಿಯನ್ನು ಕಳೆದ ವಾರ ರಾಮ ಮಂದಿರಕ್ಕೆ ತಂದು ಮೂರು ದಿನಗಳ ಹಿಂದೆ ಕೂರ್ಮ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿ ಕೆತ್ತನೆ ಮಾಡಿದ ಅರುಣ್ ಯೋಗಿ ರಾಜ್ ಶಿಲ್ಪಿ ಎಂಬ ನೆಲೆಯಲ್ಲಿ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಭಾಗಿಯಾಗಲು ಕಂಕಣ ಬದ್ಧರಾಗಿದ್ದಾರೆ.
10) ಅಯೋಧ್ಯೆ ರಾಮ ಮಂದಿರದ ಸಮೀಪ ಬಾಲಾಲಯದಲ್ಲಿದ್ದ ರಾಮನ ಮೂಲ ವಿಗ್ರಹವನ್ನು ಹೊಸ ಬಾಲರಾಮನ ವಿಗ್ರಹದ ಎದುರು ಇರಿಸಲಾಗುತ್ತದೆ. ಅಯೋಧ್ಯೆ ರಾಮ ಮಂದಿರಕ್ಕೆ ನಾಳೆ (ಜ.23) ಯಿಂದ ಸಾರ್ವಜನಿಕರಿಗೆ ಪ್ರವೇಶ ಸಿಗಲಿದೆ.
---------------
ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಲೈವ್ ಅಪ್ಡೇಟ್ಸ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ…
Ayodhya Ramamandir Opening Live : ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ನೇರಪ್ರಸಾರ – Prana Pratishtapane Live