Exit Poll: ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಲ್ಲ; ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದ ಚುನಾವಣೋತ್ತರ ಸಮೀಕ್ಷೆ
Oct 05, 2024 10:51 PM IST
ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದ ಚುನಾವಣೋತ್ತರ ಸಮೀಕ್ಷೆ
- Haryana Exit Poll: ಹರಿಯಾಣದಲ್ಲಿ ಸರ್ಕಾರ ರಚಿಸಲು ಒಂದು ಪಕ್ಷ ಅಥವಾ ಮೈತ್ರಿಕೂಟಕ್ಕೆ 46 ಸ್ಥಾನಗಳು ಬೇಕಾಗುತ್ತವೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ಹರಿಯಾಣ ವಿಧಾನಸಭಾ ಚುನಾವಣೆ 2024ರ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಈ ಬಾರಿ ಕಾಂಗ್ರೆಸ್‌ಗೆ ಬಹುಮತ ಬರುವ ನಿರೀಕ್ಷೆ ಇದೆ. ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಕಾಂಗ್ರೆಸ್ ಅಡ್ಡಿಯಾಗುತ್ತೆ ಎಂದು ಎಕ್ಸಿಟ್ ಪೋಲ್ ತಿಳಿಸಿದೆ. ಕಾಂಗ್ರೆಸ್ ಪಕ್ಷವು 44ರಿಂದ 64 ಸ್ಥಾನಗಳವರೆಗೆ ಗೆದ್ದು ಸರ್ಕಾರ ರಚಿಸುತ್ತದೆ ಎಂದು ಹಲವು ಎಕ್ಸಿಟ್ ಪೋಲ್ ಭವಿಷ್ಯವಾಣಿ ಹೇಳಿವೆ. ಆದರೆ, ಆಡಳಿತಾರೂಢ ಬಿಜೆಪಿ ಕೇವಲ 15ರಿಂದ 32 ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರ ಕಳೆದುಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದೆ.
ಹರಿಯಾಣ ವಿಧಾನಸಭೆಯ ಒಟ್ಟ 90 ಸ್ಥಾನಗಳಿಗೆ ಶನಿವಾರ ಒಂದೇ ಹಂತದ ಮತದಾನ ಮುಗಿದಿದೆ. ಮತದಾನದ ಬೆನ್ನಲ್ಲೇ ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಿದ್ದಿದ್ದು, ಇದರೊಂದಿಗೆ ರಾಜ್ಯದಲ್ಲಿ 10 ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಮರಳುವ ನಿರೀಕ್ಷೆಯಿದೆ ಎಂಬ ಸುಳಿವು ಸಿಕ್ಕಿದೆ. ಆದರೆ, ನಿಖರ ಫಲಿತಾಂಶವು ಅಕ್ಟೋಬರ್ 8ರಂದು ನಡೆಯುವ ಮತ ಎಣಿಕೆ ಬಳಿಕ ಸಿಗಲಿದೆ.
ಈ ವರ್ಷದ ಆರಂಭದಲ್ಲಿ ಮನೋಹರ್ ಲಾಲ್ ಖಟ್ಟರ್ ಅವರ ಸ್ಥಾನಕ್ಕೆ ಮುಖ್ಯಮಂತ್ರಿಯಾಗಿ ಬಂದ ನಯಾಬ್ ಸಿಂಗ್ ಸೈನಿ ಅವರು ಬಿಜೆಪಿ ಪರ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದರು. ಈ ಚುನಾವಣೆಯ ಫಲಿತಾಂಶವು ಅವರ ರಾಜಕೀಯ ಭವಿಷ್ಯಕ್ಕೆ ಮುನ್ನಡಿ ಬರೆಯಲಿದೆ. ಇಷ್ಟೇ ಅಲ್ಲದೆ ಇತರ ಹಲವು ಹರಿಯ ನಾಯಕರ ಭವಿಷ್ಯ ಈ ಚುನಾವಣೆ ಫಲಿತಾಂಶದಲ್ಲಿ ಅಡಗಿದೆ.
ಹರಿಯಾಣ ಎಕ್ಸಿಟ್ ಪೋಲ್ ಫಲಿತಾಂಶ
ದೈನಿಕ್ ಭಾಸ್ಕರ್
- ಕಾಂಗ್ರೆಸ್ 44-54 ಸ್ಥಾನಗಳು (90 ಸ್ಥಾನಗಳಲ್ಲಿ)
- ಬಿಜೆಪಿ 15-29 ಸ್ಥಾನಗಳು
ರಿಪಬ್ಲಿಕ್-ಮ್ಯಾಟ್ರಿಜ್
- ಕಾಂಗ್ರೆಸ್ 55-62 ಸ್ಥಾನಗಳು
- ಬಿಜೆಪಿ 18-24 ಸ್ಥಾನಗಳು
ರೆಡ್ ಮೈಕ್-ದತಾಂಶ್
- ಕಾಂಗ್ರೆಸ್ 50-55 ಸ್ಥಾನಗಳು
- ಬಿಜೆಪಿ 20-25 ಸ್ಥಾನಗಳು
ಧ್ರುವ್ ರಿಸರ್ಚ್
- ಕಾಂಗ್ರೆಸ್ 50-64 ಸ್ಥಾನಗಳು
- ಬಿಜೆಪಿ 22-32 ಸ್ಥಾನಗಳು
ಪೀಪಲ್ಸ್ ಪಲ್ಸ್
- ಕಾಂಗ್ರೆಸ್ 49-60 ಸ್ಥಾನಗಳು
- ಬಿಜೆಪಿ 20-32 ಸ್ಥಾನಗಳು
90 ಸದಸ್ಯ ಬಲ ಇರುವ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆದಿತ್ತು. ಆಡಳಿತಾರೂಢ ಬಿಜೆಪಿ ಸತತ ಮೂರನೇ ಅವಧಿಗೆ ಗೆದ್ದು ಹ್ಯಾಟ್ರಿಕ್ ಸಾಧಿಸುವ ಗುರಿ ಹೊಂದಿದೆ. 2014 ಮತ್ತು 2019ರ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಿದ ಮತ್ತೊಮ್ಮೆ ಕುರ್ಚಿ ಮೇಲೆ ಕಣ್ಣಿಟ್ಟಿದೆ.
ಅತ್ತ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ 2024ರ ಫಲಿತಾಂಶದ ಪ್ರಕಾರ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗಲ್ಲ. ನ್ಯಾಷನಲ್ ಕಾನ್ಫರೆನ್ಸ್ 33ರಿಂದ 35 ಸ್ಥಾನಗಳೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸುಳಿವನ್ನು ಎಕ್ಸಿಟ್ ಪೋಲ್ ಹೇಳಿವೆ.