ಜಮ್ಮು ಮತ್ತು ಕಾಶ್ಮೀರ ಚುನಾವಣೋತ್ತರ ಸಮೀಕ್ಷೆ; ಯಾವ ಪಕ್ಷಕ್ಕೂ ಸಿಗಲ್ಲ ಬಹುಮತ, ಕಾಂಗ್ರೆಸ್-JKNC ಮೈತ್ರಿಗೆ ಹೆಚ್ಚು ಸ್ಥಾನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಮ್ಮು ಮತ್ತು ಕಾಶ್ಮೀರ ಚುನಾವಣೋತ್ತರ ಸಮೀಕ್ಷೆ; ಯಾವ ಪಕ್ಷಕ್ಕೂ ಸಿಗಲ್ಲ ಬಹುಮತ, ಕಾಂಗ್ರೆಸ್-Jknc ಮೈತ್ರಿಗೆ ಹೆಚ್ಚು ಸ್ಥಾನ

ಜಮ್ಮು ಮತ್ತು ಕಾಶ್ಮೀರ ಚುನಾವಣೋತ್ತರ ಸಮೀಕ್ಷೆ; ಯಾವ ಪಕ್ಷಕ್ಕೂ ಸಿಗಲ್ಲ ಬಹುಮತ, ಕಾಂಗ್ರೆಸ್-JKNC ಮೈತ್ರಿಗೆ ಹೆಚ್ಚು ಸ್ಥಾನ

ಜಮ್ಮು ಮತ್ತು ಕಾಶ್ಮೀರ ಚುನಾವಣೋತ್ತರ ಸಮೀಕ್ಷೆ 2024ರ ಫಲಿತಾಂಶದ ಪ್ರಕಾರ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗಲ್ಲ. ನ್ಯಾಷನಲ್ ಕಾನ್ಫರೆನ್ಸ್ 33ರಿಂದ 35 ಸ್ಥಾನಗಳೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸುಳಿವನ್ನು ಎಕ್ಸಿಟ್‌ ಪೋಲ್‌ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರ ಚುನಾವಣೋತ್ತರ ಸಮೀಕ್ಷೆ; ಯಾವ ಪಕ್ಷಕ್ಕೂ ಸಿಗಲ್ಲ ಬಹುಮತ
ಜಮ್ಮು ಮತ್ತು ಕಾಶ್ಮೀರ ಚುನಾವಣೋತ್ತರ ಸಮೀಕ್ಷೆ; ಯಾವ ಪಕ್ಷಕ್ಕೂ ಸಿಗಲ್ಲ ಬಹುಮತ (ANI)

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದೆ. ಪೀಪಲ್ಸ್ ಪಲ್ಸ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ರಾಜಕೀಯ ಪಕ್ಷ ಕೂಡಾ ಬಹುಮತ ಪಡೆಯುವ ನಿರೀಕ್ಷೆಗಳಿಲ್ಲ. ಬಹುಮತಕ್ಕೆ 46 ಕ್ಷೇತ್ರಗಳಲ್ಲಿ ಗೆಲ್ಲಬೇಕಾದ ಅಗತ್ಯವಿದ್ದು, ಯಾವುದೇ ಪಕ್ಷವೂ ಮ್ಯಾಜಿಕ್‌ ನಂಬರ್‌ ಗಳಿಸುವ ಸಾಧ್ಯತೆ ಇಲ್ಲ ಎನ್ನುತ್ತಿದೆ ಎಕ್ಸಿಟ್‌ ಪೋಲ್‌ ಫಲಿತಾಂಶ. ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.

ಪೀಪಲ್ಸ್ ಪಲ್ಸ್ ಪ್ರಕಾರ, ನ್ಯಾಷನಲ್ ಕಾನ್ಫರೆನ್ಸ್ 33ರಿಂದ 35 ಸ್ಥಾನಗಳೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಇದೇ ವೇಳೆ ಕೇಂದ್ರದಲ್ಲಿ ಚುಕ್ಕಾಣಿ ಹಿಡಿದಿರುವ ಬಿಜೆಪಿ, ಜಮ್ಮು ಮತ್ತು ಕಾಶ್ಮೀರದಲ್ಲಿ 23ರಿಂದ 27 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಆ ಮೂಲಕ ಜನತಾ ಪಕ್ಷವು ಕೇಂದ್ರಾಡಳಿತ ಪ್ರದೇಶದಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಪೀಪಲ್ಸ್ ಪಲ್ಸ್ ಚುನಾವಣೋತ್ತರ ಸಮೀಕ್ಷೆ 2024 ಫಲಿತಾಂಶ

  • ಜೆಕೆಎನ್‌ಸಿ: 33-35
  • ಬಿಜೆಪಿ : 23-27
  • ಕಾಂಗ್ರೆಸ್ :13-15
  • ಪಿಡಿಪಿ : 7-11
  • ಇತರರು - 4-5

ಇಂಡಿಯಾ ಟುಡೇ-ಸಿವೋಟರ್ ಸಮೀಕ್ಷೆ

ಇಂಡಿಯಾ ಟುಡೇ-ಸಿವೋಟರ್ ಚುನಾವಣೋತ್ತರ ಸಮೀಕ್ಷೆಯ ತುಸು ಭಿನ್ನ ಫಲಿತಾಂಶ ನೀಡಿದೆ. ಜಮ್ಮು ಪ್ರದೇಶದ 43 ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷ 27-31 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ. ಆದರೆ ನ್ಯಾಷನಲ್‌ ಕಾನ್ಫರೆನ್ಸ್ 11-15ರಿಂದ ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಹೇಳಿದೆ.

ದೈನಿಕ್ ಭಾಸ್ಕರ್ ಸಮೀಕ್ಷೆ

ದೈನಿಕ್ ಭಾಸ್ಕರ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿ 20ರಿಂದ 25 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟವು 35ರಿಂದ 40 ಸ್ಥಾನಗಳನ್ನು, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) 4-7 ಸ್ಥಾನಗಳನ್ನು ಮತ್ತು ಇತರ ಪಕ್ಷಗಳು 12-16 ಸ್ಥಾನಗಳನ್ನು ಗೆಲ್ಲಲಿವೆ.

ಗುಲಿಸ್ತಾನ್ ನ್ಯೂಸ್ ಪ್ರೊಜೆಕ್ಷನ್

ರಿಪಬ್ಲಿಕ್ ಟಿವಿಯ ಗುಲಿಸ್ತಾನ್ ನ್ಯೂಸ್ ಪ್ರೊಜೆಕ್ಷನ್ ಪ್ರಕಾರ, ನ್ಯಾಷನಲ್ ಕಾನ್ಫರೆನ್ಸ್ 28ರಿಂದ 30 ಸ್ಥಾನಗಳು, ಕಾಂಗ್ರೆಸ್ 3ರಿಂದ 6 ಸ್ಥಾನಗಳು, ಪಿಡಿಪಿ 5ರಿಂದ 7 ಸ್ಥಾನಗಳು ಮತ್ತು ಇತರ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು 8ರಿಂದ 16 ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ಹೇಳಿದೆ.

ಇವು ಚುನಾವಣೋತ್ತರ ಸಮೀಕ್ಷೆಗಳಾಗಿದ್ದು, ಅಂತಿಮ ಫಲಿತಾಂಶವು ಅಕ್ಟೋಬರ್ 8ರಂದು ಮತ ಎಣಿಕೆ ಬಳಿಕ ಹೊರಬೀಳಲಿದೆ. 2024ರ ಸೆಪ್ಟೆಂಬರ್ 30ರೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವಂತೆ 2023ರಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಜಂಟಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಪಿಡಿಪಿ ಮತ್ತು ಬಿಜೆಪಿ ಸ್ವಂತವಾಗಿ ಚುನಾವಣೆಯಲ್ಲಿ ಕಣಕ್ಕಿಳಿದಿವೆ. ಬಿಜೆಪಿ ಪರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭರ್ಜರಿ ಪ್ರಚಾರ ನಡೆಸಿದ್ದರು. ಕಾಂಗ್ರೆಸ್‌ ಪರ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ಪ್ರಮುಖ ನಾಯಕರು ಕೂಡಾ ವಾರಗಳ ಕಾಲ ಪ್ರಚಾರ ನಡೆಸಿದರು.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆಯು ಅಕ್ಟೋಬರ್ 1ರಂದು ಶಾಂತಿಯುತವಾಗಿ ಕೊನೆಗೊಂಡಿತು. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಒಟ್ಟಾರೆ ಶೇಕಡಾ 63.88ರಷ್ಟು ಮತದಾನವಾಗಿದೆ ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ. ಅಕ್ಟೋಬರ್ 1ರಂದು ನಡೆದ ಮೂರನೇ ಹಂತದಲ್ಲಿ ಶೇಕಡಾ 69.69ರಷ್ಟು ಮತದಾನವಾಗಿದೆ. ಮೊದಲ ಹಂತದಲ್ಲಿ ಶೇ.61.38 ಹಾಗೂ ಎರಡನೇ ಹಂತದಲ್ಲಿ ಶೇ.57.31ರಷ್ಟು ಮತದಾನವಾಗಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.