Weather Report: ದೆಹಲಿ ಸಹಿತ ಉತ್ತರ ಭಾರತದಲ್ಲಿ ಶೀತ ಗಾಳಿಗೆ ಜನ ತತ್ತರ, 8 ರಾಜ್ಯಗಳಲ್ಲಿ ಮಳೆ ನಿರೀಕ್ಷೆ
Feb 07, 2024 06:56 PM IST
ದೆಹಲಿ ಹಾಗೂ ಉತ್ತರದ ಕೆಲ ಭಾಗದಲ್ಲಿ ಶೀತ ಗಾಳಿಯಿಂದ ಜನ ಬಿಸಿಗೆ ಮೊರೆ ಹೋಗುವುದು ಸಾಮಾನ್ಯವಾಗಿದೆ.
- ಉತ್ತರ ಭಾರತದಲ್ಲಿ ಈಗ ಚಳಿಯ ಜತೆಗೆ ಮಳೆ. ಕೆಲವು ರಾಜ್ಯಗಳಲ್ಲಿ ಚಳಿ ಗಾಳಿಯೂ ಅಧಿಕವಾಗಿದ್ದರೆ, ಮುಂದಿನ ಮೂರ್ನಾಲ್ಕು ದಿನ ಮಳೆಯೂ ಆಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ದೆಹಲಿ: ಭಾರತದ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಶೀತ ಗಾಳಿ ಜೋರಾಗಿದೆ. ಕೆಲ ದಿನಗಳಿಂದ ಚಳಿಯ ವಾತಾವರಣ ಉತ್ತರ ಭಾಗದಲ್ಲಿ ಇದ್ದರೂ ಒಂದೆರಡು ದಿನಗಳಲ್ಲಿ ಇದು ಅಧಿಕವಾಗಿದೆ. ಬುಧವಾರವಂತೂ ದೆಹಲಿ ಮಾತ್ರವಲ್ಲದೇ ನಾಲ್ಕೈದು ರಾಜ್ಯಗಳಲ್ಲಿ ಶೀತ ಗಾಳಿಗೆ ಜನ ತತ್ತರಿಸಿದರು. ಇದರೊಟ್ಟಿಗೆ ಕೆಲವು ಕಡೆ ಮಳೆಯೂ ಆಗಿದ್ದು, ಮುಂದಿನ ದಿನಗಳಲ್ಲಿ ಎಂಟು ರಾಜ್ಯಗಳಲ್ಲಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ದೆಹಲಿ ಭಾಗದಲ್ಲಿ ಚಳಿಯ ವಾತಾವರಣ ಕಂಡು ಬಂದಿದ್ದು. ಇದು ಇನ್ನೂ ಕೆಲವು ದಿನ ಮುಂದುವರಿಯಲಿದೆ. ಅದರಲ್ಲೂ ಹಿಮಾಲ ಪ್ರದೇಶ ಭಾಗದಲ್ಲಿ ಹಿಮಪಾತದ ಸನ್ನಿವೇಶವೂ ಕಂಡು ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗದಲ್ಲ ಹಿಮಪಾತವಾಗುತ್ತಿದ್ದು. ಎರಡೂ ರಾಜ್ಯಗಳಲ್ಲಿ ಅಲ್ಲಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ಆದರೆ ಬಹಳಷ್ಟು ರಾಜ್ಯಗಳಲ್ಲಿ ಚಳಿಗಾಳಿಯೂ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.
ದೆಹಲಿಯಲ್ಲಿ ಈಗಾಗಲೇ ಕನಿಷ್ಠ ಉಷ್ಣಾಂಶದ ಪ್ರಮಾಣ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಕೆಲವು ದಿನಗಳಿಂದಲೂ ಉಷ್ಣಾಂಶದಲ್ಲಿ ಕುಸಿತ ಕಂಡು ಬಂದಿದ್ದರೂ ಎರಡು ಮೂರು ದಿನದಲ್ಲಿ ಈ ಪ್ರಮಾಣ ಅಧಿಕವಾಗಿದೆ. ಇದರಿಂದ ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಜನ ಬೆಳಗಿನ ಹೊತ್ತಿನಲ್ಲೇ ಬೆಂಕಿ ಕಾಯಿಸಿಕೊಳ್ಳಲು ಮುಂದಾಗಿರುವುದು ಕಂಡು ಬಂದಿದೆ. ಕೆಲವು ಕಡೆ ದಟ್ಟ ಹಿಮದಿಂದ ವಾಹನ ಸಂಚಾರವೂ ತೊಂದರೆಯಾಗಿ ಸವಾರರು ಪರದಾಡುವುದು ಸಾಮಾನ್ಯವಾಗಿದೆ.
ಭಾರತೀಯ ಹವಾಮಾನ ಇಲಾಖೆ( IMD) ನೀಡಿರುವ ಮಾಹಿತಿ ಪ್ರಕಾರ, ಇಡೀ ದೇಶದಲ್ಲಿ ಹವಾಮಾನದಲ್ಲಿ ಭಾರೀ ಬದಲಾವಣೆ ಏನೂ ಇರುವುದಿಲ್ಲ. ಮುಂದಿನ ಐದು ದಿನದಲ್ಲಿ ಹವಾಮಾನ ಯಥಾರೀತಿಯಾಗಿ ಇರಲಿದೆ. ಆದರೆ ಉತ್ತರ ಭಾರತದ ದೆಹಲಿ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಚಳಿಯ ವಾತಾವರಣ ಅಧಿಕವಾಗಲಿದೆ. ಈ ಭಾಗದಲ್ಲಿ ಮುಂದಿನ ಐದು ದಿನಗಳಲ್ಲಿ ಮಳೆಯೂ ಆಗಬಹುದು ಎಂದು ತಿಳಿಸಲಾಗಿದೆ.
ಬುಧವಾರದಂದು ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಲ, ಸಿಕ್ಕಿಂ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ, ಮಣಿಪುರ. ತ್ರಿಪುರ, ಜಾರ್ಖಂಡ್‌ನ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗಬಹುದು ಎನ್ನುವ ಮುನ್ಸೂಚನೆಯನ್ನು ನೀಡಲಾಗಿದೆ. ಕೆಲವು ಕಡೆ ಸಾಧಾರಣ ಮಳೆಯೂ ಆಗಿರುವುದು ಕಂಡು ಬಂದಿದೆ.
ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಗುರುವಾರವೂ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ.
ಅದರಲ್ಲೂ ಫೆಬ್ರವರಿ 9 ಮತ್ತು 11ರಂದು ಉತ್ತರ ಭಾರತದ ಹಲವು ಕಡೆಗಳಲ್ಲಿ ಮಳೆ ಪ್ರಮಾಣ ಕೊಂಚ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ.
ಮುಂದಿನ ಮೂರು ದಿನಗಳಲ್ಲಿ ವಾಯುವ್ಯ ಭಾಗದಲ್ಲಿ ಗಾಳಿಯ ವೇಗವೂ ಹೆಚ್ಚಬಹುದು. ಗಂಟೆಗೆ 15-25 ಕಿ.ಮಿ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳು ಅಧಿಕವಾಗಿದೆ.