Beauty Tips: ಆಲೂಗೆಡ್ಡೆ ಫೇಸ್‌ಪ್ಯಾಕ್‌ನಲ್ಲಿದೆ ಸೌಂದರ್ಯದ ರಹಸ್ಯ; ಆದ್ರೆ ಬಳಸುವ ಮುನ್ನ ಈ ವಿಚಾರ ಮರಿಬೇಡಿ
ಸೌಂದರ್ಯದ ರಹಸ್ಯ ಎಂದಾಕ್ಷಣ ಕಿವಿ ಚುರುಕಾಗುತ್ತದೆ. ಸೌಂದರ್ಯ ವೃದ್ಧಿಸಿಕೊಳ್ಳುವ ಬಯಕೆ ಎಲ್ಲರಲ್ಲೂ ಇರುತ್ತದೆ. ನೀವು ಮುಖದಲ್ಲಿನ ಕಪ್ಪು ಕಲೆ, ಮೊಡವೆ, ಕಣ್ಣಿನ ಸುತ್ತ ಕಪ್ಪು ಇಂತಹ ಸಮಸ್ಯೆಗಳಿಂದ ಬೇಸತ್ತಿದ್ದೀರಾ, ನಿಮ್ಮೆಲ್ಲಾ ಸಮಸ್ಯೆಗಳಿಗೆ ಆಲೂಗೆಡ್ಡೆ ಫೇಸ್‌ಪ್ಯಾಕ್‌ನಲ್ಲಿದೆ ಪರಿಹಾರ. ಆದರೆ ಬಳಸುವ ಮುನ್ನ ಈ ವಿಚಾರ ಮರೆಯದಿರಿ.
ತ್ವಚೆಯ ಕಾಳಜಿಯ ವಿಚಾರಕ್ಕೆ ಬಂದಾಗ ನಾವೆಲ್ಲರೂ ನೈಸರ್ಗಿಕ ಉತ್ಪನ್ನಗಳತ್ತ ಹೆಚ್ಚು ಗಮನ ಹರಿಸುತ್ತೇವೆ. ಇದು ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಎಂಬುದು ನಂಬಿಕೆ. ಅಲ್ಲದೆ ಇದು ಇನ್‌ಸ್ಟ್ಯಾಂಟ್ ಯುಗ. ಇಲ್ಲಿ ಎಲ್ಲವೂ ತಕ್ಷಣಕ್ಕೆ ಹಾಗೂ ಸುಲಭವಾಗಿ ಆಗಬೇಕು. ಸೌಂದರ್ಯವರ್ಧಕಗಳ ವಿಚಾರದಲ್ಲೂ ಇದು ಹೆಚ್ಚು ಅಳವಡಿಕೆಯಾಗುತ್ತದೆ. ಆದರೆ ಎಲ್ಲಾ ವಿಧದ ಚರ್ಮ ಹೊಂದಿವರಿಗೂ ಇದು ಹೊಂದಿಕೆಯಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಲೂಗೆಡ್ಡೆ ಫೇಸ್‌ಫ್ಯಾಕ್ ಬಗ್ಗೆ ಹೆಚ್ಚು ವಿಷಯಗಳು ಹರಿದಾಡುತ್ತಿರುತ್ತವೆ. ಇದು ಮುಖದ ಮೇಲಿನ ಕಲೆಗಳನ್ನು ನಿವಾರಿಸಿ, ಹೊಳಪು ಹೆಚ್ಚುವಂತೆ ಮಾಡುತ್ತದೆ ಎನ್ನಲಾಗುತ್ತದೆ.
ಬ್ಯೂಟಿ ಬ್ಲಾಗರ್ ಶಾಲಿನಿ ಅವರ ಪ್ರಕಾರ, ಆಲೂಗೆಡ್ಡೆಯ ಪೇಸ್ಟ್, ಮುಲ್ತಾನಿ ಮಿಟ್ಟಿ, ನಿಂಬೆರಸ ಹಾಗೂ ಲೋಳೆಸರದ ತಿರುಳು ಸೇರಿಸಿ ಮಿಶ್ರಣ ಮಾಡಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ವಚೆಯ ಅಂದ ಹೆಚ್ಚುವುದರಲ್ಲಿ ಅನುಮಾನವಿಲ್ಲ.
ಹೀಗೆ ಬಳಸಿ
* ಹತ್ತಿ ಅಥವಾ ಬ್ರಶ್‌ನ ಸಹಾಯದಿಂದ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ.
* 15 ನಿಮಿಷಗಳ ಕಾಲ ಹಾಗೆ ಬಿಡಿ
* ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ತ್ವಚೆಯ ಅಂದ ಹೆಚ್ಚಿಸುವಲ್ಲಿ ಆಲೂಗೆಡ್ಡೆ ಫೇಸ್‌ಪ್ಯಾಕ್‌ನ ಮಹತ್ವ
ಇತ್ತೀಚಿನ ದಿನಗಳಲ್ಲಿ ಆಲೂಗೆಡ್ಡೆ ಫೇಸ್‌ಪ್ಯಾಕ್ ಹೆಚ್ಚು ಸುದ್ದಿಯಾಗುತ್ತಿದೆ ಎಂದು ನಿಜ. ಮುಖದ ಮೇಲಿನ ಕಪ್ಪುಕಲೆಗಳು ಹಾಗೂ ಮೊಡವೆಗಳ ನಿವಾರಣೆಯ ವಿಚಾರದಲ್ಲಿ ಇದು ಬೆಸ್ಟ್ ರಿಸಲ್ಟ್ ನೀಡುವುದರಲ್ಲಿ ಎರಡು ಮಾತಿಲ್ಲ. ಆದರೂ ಇದರಿಂದ ಕೆಲವು ವಿಧದ ಚರ್ಮದವರಿಗೆ ಅಲರ್ಜಿ ಕೂಡ ಉಂಟಾಗಬಹುದು.
ʼಆಲೂಗೆಡ್ಡೆಯು ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ವಿಟಮಿನ್ ಸಿ ಚರ್ಮಕ್ಕೆ ಹೊಳಪು ನೀಡುತ್ತದೆ. ಆಲೂಗೆಡ್ಡೆ ಪೇಸ್ಟ್‌ನ ನಿರಂತರ ಬಳಕೆಯಿಂದ ಕಪ್ಪು ಕಲೆಗಳು ನಿಧಾನಕ್ಕೆ ಮಸುಕಾಗುತ್ತವೆ. ಆಲೂಗೆಡ್ಡೆಯಲ್ಲಿರುವ ನೈಸರ್ಗಿಕ ಕಿಣ್ವಗಳು ಸೌಮ್ಯವಾದ ಎಕ್ಸ್‌ಫೋಲಿಯೇಟಿಂಗ್ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದು ಮೊಡವೆ ನಿಯಂತ್ರಣಕ್ಕೂ ಸಹಕಾರಿ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳುತ್ತಾರೆ ದಿ ಎಸ್ತೆಟಿಕ್ ಕ್ಲಿನಿಕ್ಸ್‌ನ ಚರ್ಮರೋಗ ತಜ್ಞ ಡಾ. ರಿಂಕಿ ಕಪೂರ್.
ಚರ್ಮರೋಗ ತಜ್ಞೆ ಡಾ. ಮೇಘನಾ ಮೌರ್ ಅವರ ಪ್ರಕಾರ ಆಲೂಗೆಡ್ಡೆಗಳು ಪೊಟ್ಯಾಶಿಯಂ, ವಿಟಮಿನ್ ಸಿ, ಕ್ಯಾಟೆಕೊಲೇಸ್ಟ್ ಕಿಣ್ವ ಹಾಗೂ ಅಜೆಲಿಕ್ ಆಮ್ಲದಂತಹ ಚರ್ಮದ ಹೊಳಪು ಹೆಚ್ಚಿಸುವ ನೈಸರ್ಗಿಕ ಮೂಲಗಳನ್ನು ಹೊಂದಿದೆ. ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚುವುದರಿಂದ ಹೈಪರ್ಪಿಗ್ಮೆಂಟೇಷನ್, ನಸುಕಂದು ಮಚ್ಚೆಗಳು ಹಾಗೂ ಟ್ಯಾನ್ ಆಗುವುದನ್ನು ತಡೆಯಬಹುದು. ಅಲ್ಲದೆ ಇದರಿಂದ ಕಣ್ಣಿನ ಕೆಳಗಿನ ಕಪ್ಪುಕಲೆಗಳ ನಿವಾರಣೆಗೂ ಇದು ಸಹಕಾರಿʼ ಎಂದು ಅವರು ಹೇಳುತ್ತಾರೆ.
ಡಾ. ಕಪೂರ್ ಅವರ ಪ್ರಕಾರ ಆಲೂಗೆಡ್ಡೆ ಫೇಸ್‌ಪ್ಯಾಕ್‌ಗಳನ್ನು ಬಳಸುವ ಜೊತೆಗೆ ತ್ವಚೆಯ ಕಾಳಜಿ ಮಾಡುವುದು ಅಷ್ಟೇ ಮುಖ್ಯವಾಗುತ್ತದೆ. ತ್ವಚೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯ.
ಆದರೆ ಆಲೂಗೆಡ್ಡೆ ಫೇಸ್‌ಪ್ಯಾಕ್ ನಿಮ್ಮ ಚರ್ಮಕ್ಕೆ ಹೊಂದುವುದೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನೀವು ಚರ್ಮದ ಅಲರ್ಜಿಯಂತಹ ಸಮಸ್ಯೆಗಳನ್ನು ಹೊಂದಿದ್ದರೆ, ತಜ್ಞ ವೈದ್ಯರನ್ನು ಸಂಪರ್ಕಿಸಿ, ಅವರ ಅಭಿಪ್ರಾಯ ಪಡೆಯುವುದು ಉತ್ತಮ. ಇಲ್ಲದಿದ್ದರೆ ಇದರ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗಬಹುದು ಎನ್ನುತ್ತಾರೆ ತಜ್ಞರು.
(This copy first appeared in Hindustan Times Kannada website. To read more like this please logon to kannada.hindustantimes.com )
ವಿಭಾಗ