Kerala News: ಕೇರಳ ರೈಲಿಗೆ ಬೆಂಕಿ ಹಚ್ಚಿದ್ದು ಯೋಜಿತ ಕೃತ್ಯ, ಆರೋಪಿ ಮೂಲಭೂತವಾದಿ, ಝಾಕೀರ್ ನಾಯ್ಕ್ ಅನುಯಾಯಿ: ಎಸ್‌ಐಟಿಯಿಂದ ಮಾಹಿತಿ
Apr 17, 2023 03:14 PM IST
Kerala News: ಕೇರಳ ರೈಲಿಗೆ ಬೆಂಕಿ ಹಚ್ಚಿದ್ದು ಯೋಜಿತ ಕೃತ್ಯ, ಆರೋಪಿ ಮೂಲಭೂತವಾದಿ, ಝಾಕೀರ್ ನಾಯ್ಕ್ ಅನುಯಾಯಿ: ಎಸ್‌ಐಟಿ ಮಾಹಿತಿ (PTI)
ಇತ್ತೀಚೆಗೆ ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿ (Kerala train arson incident) ಮೂವರ ಸಾವಿಗೆ ಕಾರಣನಾದ ವ್ಯಕ್ತಿಯು ಮೂಲಭೂತವಾದಿಯಾಗಿದ್ದು, ಝಾಕೀರ್ ನಾಯ್ಕ್ (Zakir Naik) ಅನುಯಾಯಿಯಾಗಿದ್ದನು ಎಂದು ತನಿಖಾ ತಂಡ ಮಾಹಿತಿ ನೀಡಿದೆ.
ಕೋಯಿಕೋಡ್: ಇತ್ತೀಚೆಗೆ ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿ (Kerala train arson incident) ಮೂವರ ಸಾವಿಗೆ ಕಾರಣನಾದ ವ್ಯಕ್ತಿಯ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ಒಂದಿಷ್ಟು ಮಾಹಿತಿ ನೀಡಿದೆ. "ಈತನು ಅತ್ಯಂತ ತೀವ್ರಗಾಮಿ/ಮೂಲಭೂತವಾದಿ ವ್ಯಕ್ತಿಯಾಗಿದ್ದು, ಈ ಅಪರಾಧವನ್ನು ಎಸಗಲು ಯೋಜಿತ ರೀತಿಯಲ್ಲಿ ಕೇರಳಕ್ಕೆ ಆಗಮಿಸಿದ್ದನು" ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ( Special Investigation Team ) ಮಾಹಿತಿ ನೀಡಿದೆ.
ಆರೋಪಿ ಶಾರುಖ್ ಸೈಫಿ ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕೀರ್ ನಾಯ್ಕ್ ಅವರ ಆಮೂಲಾಗ್ರ ವೀಡಿಯೊಗಳನ್ನು ಹೆಚ್ಚು ನೋಡುತ್ತಿದ್ದನು. ಈತನ ವಿರುದ್ಧ ಸಂಗ್ರಹಿಸಿದ ವೈಜ್ಞಾನಿಕ ಪುರಾವೆಗಳ ಆಧಾರದಲ್ಲಿ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತಿದೆ" ಎಂದು ಎಸ್‌ಐಟಿ ಮುಖ್ಯಸ್ಥರಾಗಿರುವ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂಆರ್ ಅಜಿತ್ ಕುಮಾರ್ ಮಾಹಿತಿ ನೀಡಿದ್ದಾರೆ.
ತನಿಖಾ ತಂಡವು ಭಯೋತ್ಪಾದಕ ಕೃತ್ಯಗಳಿಗೆ ಶಿಕ್ಷೆಗೆ ಸಂಬಂಧಿಸಿದಂತೆ ಯುಎಪಿಎಯ ಸೆಕ್ಷನ್ 16ಯಡಿ ಈತನ ವಿರುದ್ಧ ಪ್ರಕರಣ ದಾಖಲಿಸಿದೆ. "ನಾವು ವಿವಿಧ ರಾಜ್ಯಗಳಿಗೆ ಹೋಗಿ ವೈಜ್ಞಾನಿಕ, ಡಾಕ್ಯುಮೆಂಟರಿ ಮತ್ತು ಮೌಖಿಕ ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಈ ಕುರಿತು ಸಮಗ್ರ ತನಿಖೆ ನಡೆಸಿದ್ದೇವೆ. ಈತನ ವಿರುದ್ಧ ಯುಎಪಿಎಗೆ (UAPA) ಸಂಬಂಧಿಸಿದ ಕಾನೂನು ಕ್ರಮಗಳನ್ನು ಅನ್ವಯಿಸಲು ನಿರ್ಧರಿಸಿದ್ದೇವೆ. ಆತ ತೀವ್ರಗಾಮಿ, ಮೂಲಭೂತವಾದಿ. ಜಾಕೀರ್ ನಾಯ್ಕ್ ಮತ್ತು ಇತರೆ ಮೂಲಭೂತವಾದಿಗಳ ವಿಡಿಯೋಗಳನ್ನು ಹೆಚ್ಚಾಗಿ ನೋಡುವ ಅಭ್ಯಾಸ ಹೊಂದಿದ್ದಾನೆ. ಈತ ಪೂರ್ವಯೋಜಿತವಾಗಿ ಅಪರಾಧ ಕೃತ್ಯ ಎಸಗಲು ಕೇರಳಕ್ಕೆ ಬಂದಿದ್ದನು" ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆರೋಪಿಗೆ 27 ವರ್ಷ ವಯಸ್ಸಾಗಿದ್ದು, ನ್ಯಾಷನಲ್ ಓಪನ್ ಸ್ಕೂಲ್‌ನಲ್ಲಿ ಹನ್ನೆರಡನೇ ತರಗತಿ ಶಿಕ್ಷಣ ಪೂರೈಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ತಂಡಕ್ಕೆ ಆರೋಪಿ ಮತ್ತು ಆತ ಎಸಗಿದ ಅಪರಾಧಕ್ಕೆ ಸಂಬಂಧಿಸಿದಂತೆ ಪುರಾವೆಗಳು ಸಿಕ್ಕಿದೆ. ಈತನಿಗೆ ಕೃತ್ಯಕ್ಕೆ ಬೇರೆಯವರು ನೆರವು ನೀಡಿದ್ದಾರೆಯೇ ಎನ್ನುವ ಕುರಿತೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಅಲಪ್ಪುಳ-ಕಣ್ಣೂರು ಎಕ್ಸ್‌ಪ್ರೆಸ್ ಕೋಯಿಕೋಡ್‌ನ ಎಲತ್ತೂರ್ ಕೊರಪುಳ ಸೇತುವೆಯನ್ನು ತಲುಪಿದಾಗ ಆತ ಪೆಟ್ರೋಲ್/ದಹನಕಾರಿ ವಸ್ತು ಸಿಂಪಡಿಸಿ ಬೆಂಕಿ ಹಚ್ಚಿದ್ದ. ರಾತ್ರಿ 9.30 ರ ಸುಮಾರಿಗೆ ಈ ಘಟನೆ ನಡೆದಿತ್ತು. ಘಟನೆ ನಡೆದ ಕೆಲವು ಗಂಟೆಗಳ ನಂತರ ಎನ್‌ಐಎ ತಂಡವು ಭಾನುವಾರ ಕೋಯಿಕೋಡ್‌ಗೆ ಭೇಟಿ ನೀಡಿತ್ತು. ಚಲಿಸುತ್ತಿರುವ ರೈಲಿನ ಕಂಪಾರ್ಟ್‌ಮೆಂಟ್‌ನೊಳಗೆ ಅಪರಿಚಿತ ವ್ಯಕ್ತಿಯೊಬ್ಬ ದಹನಕಾರಿ ವಸ್ತುವನ್ನು ಸಿಂಪಡಿಸಿ ಬೆಂಕಿ ಹಚ್ಚಿದ ನಂತರ ಮೂವರು ಮೃತಪಟ್ಟಿದ್ದರು. ಹಲವಾರು ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿದ್ದವು.