ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kerala Train Fire Incident: ಕೇರಳ ರೈಲಿಗೆ ಬೆಂಕಿ ಹಚ್ಚಿದ ಶಂಕಿತನಿಗಾಗಿ ನೋಯ್ಡಾದಲ್ಲಿ ಶೋಧ, ಈತನಿಗಿದೆಯಂತೆ ಹಲವು ವಿಳಾಸ

Kerala train fire incident: ಕೇರಳ ರೈಲಿಗೆ ಬೆಂಕಿ ಹಚ್ಚಿದ ಶಂಕಿತನಿಗಾಗಿ ನೋಯ್ಡಾದಲ್ಲಿ ಶೋಧ, ಈತನಿಗಿದೆಯಂತೆ ಹಲವು ವಿಳಾಸ

ಶಂಕಿತ ವ್ಯಕ್ತಿ ನೋಯ್ಡಾ ಮತ್ತು ಹರ್ಯಾಣದಲ್ಲಿ ಹಲವು ವಿಳಾಸಗಳನ್ನು ಹೊಂದಿದ್ದಾನೆ ಎಂದು ಹೇಳಲಾಗಿದೆ. ಈತನ ಪತ್ತೆಗಾಗಿ ಪೊಲೀಸರು ನೋಯ್ಡಾ ತಲುಪಿದ್ದಾರೆ.

ಶಂಕಿತ ವ್ಯಕ್ತಿಯ ರೇಖಾ ಚಿತ್ರ
ಶಂಕಿತ ವ್ಯಕ್ತಿಯ ರೇಖಾ ಚಿತ್ರ (ANI)

ನೋಯ್ಡಾ: ಕೇರಳದ ಕೋಯಿಕೋಡ್‌ನಲ್ಲಿ ಇತ್ತೀಚೆಗೆ ರೈಲಿಗೆ ಬೆಂಕಿ ಹಚ್ಚಿ 3 ಜನರ ಸಾವು ಮತ್ತು 9 ಜನರು ಗಾಯಗೊಳ್ಳಲು ಕಾರಣವಾದ ಆರೋಪಿಯ ಶೋಧಕ್ಕಾಗಿ ಇದೀಗ ರೈಲ್ವೆ ಪೊಲೀಸ್‌ ಅಧಿಕಾರಿಗಳು ನೋಯ್ಡಾಕ್ಕೆ ಆಗಮಿಸಿದ್ದಾರೆ. ಶಂಕಿತ ವ್ಯಕ್ತಿ ನೋಯ್ಡಾ ಮತ್ತು ಹರ್ಯಾಣದಲ್ಲಿ ಹಲವು ವಿಳಾಸಗಳನ್ನು ಹೊಂದಿದ್ದಾನೆ ಎಂದು ಕೇರಳ ಪೊಲೀಸ್ ಮೂಲಗಳು ತಿಳಿಸಿವೆ.

ಟ್ರೆಂಡಿಂಗ್​ ಸುದ್ದಿ

ಆರೋಪಿಯ ರೇಖಾಚಿತ್ರವನ್ನು ಪೊಲೀಸರು ಸಿದ್ಧಪಡಿಸಿದ್ದಾರೆ. ಪ್ರಕರಣದ ನಿರ್ಣಾಯಕ ಸಾಕ್ಷಿಯಾಗಿರುವ ರಜಾಕ್ ಸಹಾಯದಿಂದ ಕೋಯಿಕೋಡ್‌ನ ಎಲತ್ತೂರ್ ಪೊಲೀಸ್ ಠಾಣೆಯಲ್ಲಿ ರೇಖಾಚಿತ್ರವನ್ನು ಸಿದ್ಧಪಡಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಭಯೋತ್ಪಾದನಾ ನಿಗ್ರಹ ದಳ ಕೂಡ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಕೃತ್ಯಕ್ಕೆ ಉಗ್ರ ನಂಟಿರಬಹುದಾದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ.

ವರದಿಯೊಂದರ ಪ್ರಕಾರ, ರೈಲು ಹಳಿ ಬಳಿ ಬಿದ್ದಿದ್ದ ಸಿಮ್‌ ಕಾರ್ಡ್‌ ಇಲ್ಲದ ಮೊಬೈಲ್‌ ಅನ್ನು ಪೊಲೀಸರು ವಶಕ್ಕೆ ಪಡೆದು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ. ಈ ಮೊಬೈಲ್‌ ಅನ್ನು ಮಾರ್ಚ್‌ 30ರಂದು ಕೊನೆಯದಾಗಿ ಬಳಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಕೃತ್ಯವೆಸಗಿದ ನಂತರ ರೈಲಿನಿಂದ ಜಿಗಿದು ಪರಾರಿಯಾಗಿರುವ ಈತನು ಕೋಯಿಕೋಡ್‌ನ ಕಾರ್ಮಿಕನೂ ಆಗಿರಬಹುದು ಎನ್ನಲಾಗಿದೆ. ಈತ ರೈಲಿಗೆ ಪೆಟ್ರೋಲ್‌ ತಂದಿರುವುದೇಕೆ, ಪೂರ್ವಯೋಜಿತ ಕೃತ್ಯವೇ ಇತ್ಯಾದಿ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತನಿಖಾ ತಂಡವು ಸೋಮವಾರ ರೈಲ್ವೇ ಹಳಿ ಬಳಿ ಬ್ಯಾಗ್ ಅನ್ನು ವಶಪಡಿಸಿಕೊಂಡಿದೆ. ಈ ಬ್ಯಾಗ್‌ ಆರೋಪಿಯದ್ದು ಎನ್ನಲಾಗಿದೆ. ಅದರಲ್ಲಿ ಖಾಲಿ ಪೆಟ್ರೋಲ್‌ ಕ್ಯಾನ್‌ ದೊರಕಿದೆ ಎನ್ನಲಾಗಿದೆ. ಬ್ಯಾಗ್‌ನಿಂದ  ದಾಳಿಕೋರ ಮತ್ತು ಅವನ ಇರುವಿಕೆಯ ಬಗ್ಗೆ ಸೂಚಿಸುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಲಪ್ಪುಳ-ಕಣ್ಣೂರು ಎಕ್ಸ್‌ಪ್ರೆಸ್  ಕೋಯಿಕೋಡ್‌ನ ಎಲತ್ತೂರ್ ಕೊರಪುಳ ಸೇತುವೆಯನ್ನು ತಲುಪಿದಾಗ ಆತ ಪೆಟ್ರೋಲ್‌/ದಹನಕಾರಿ ವಸ್ತು ಸಿಂಪಡಿಸಿ ಬೆಂಕಿ ಹಚ್ಚಿದ್ದ. ರಾತ್ರಿ 9.30 ರ ಸುಮಾರಿಗೆ ಈ ಘಟನೆ ನಡೆದಿತ್ತು. ಘಟನೆ ನಡೆದ ಕೆಲವು ಗಂಟೆಗಳ ನಂತರ ಎನ್‌ಐಎ ತಂಡವು ಭಾನುವಾರ ಕೋಯಿಕೋಡ್‌ಗೆ ಭೇಟಿ ನೀಡಿತ್ತು.

ಚಲಿಸುತ್ತಿರುವ ರೈಲಿನ ಕಂಪಾರ್ಟ್‌ಮೆಂಟ್‌ನೊಳಗೆ ಅಪರಿಚಿತ ವ್ಯಕ್ತಿಯೊಬ್ಬ ದಹನಕಾರಿ ವಸ್ತುವನ್ನು ಸಿಂಪಡಿಸಿ ಬೆಂಕಿ ಹಚ್ಚಿದ ನಂತರ ಮೂವರು ಮೃತಪಟ್ಟಿದ್ದರು. ಹಲವಾರು ಪ್ರಯಾಣಿಕರು ಸುಟ್ಟ ಗಾಯಕ್ಕೆ ಈಡಾಗಿದ್ದಾರೆ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೃತ್ಯವನ್ನು ಭಯೋತ್ಪಾದಕ ಕೃತ್ಯವೆಂದು ಇನ್ನೂ ಘೋಷಿಸಿಲ್ಲ. ರೇಖಾ ಚಿತ್ರವನ್ನು ಹೋಲುವ ವ್ಯಕ್ತಿಯೊಬ್ಬರು ಕಣ್ಣೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಆಸ್ಪತ್ರೆಗೆ ಆಗಮಿಸಿ ವಿವರ ಸಂಗ್ರಹಿಸಿದ್ದಾರೆ. ರೈಲನ್ನು ನಿಲ್ಲಿಸಲು ಯಾರೋ ಚೈನ್ ಎಳೆದ ನಂತರ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಗಾಯಗೊಂಡವರಲ್ಲಿ ಮೂವರನ್ನು ಖಾಸಗಿ ಆಸ್ಪತ್ರೆಗೆ, ಐವರನ್ನು ಕೋಯಿಕೋಡ್‌ ವೈದ್ಯಕೀಯ ಕಾಲೇಜಿಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಗಾಯಗೊಂಡವರಲ್ಲಿ ಮೂವರು ಮಹಿಳೆಯರಿದ್ದಾರೆ.

IPL_Entry_Point