logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Russia-china Relations: 'ಬಿಗ್‌ ಬ್ರದರ್' ಭೇಟಿಯಿಂದ ಪುಟಿನ್ ಪುಳಕಿತ:‌ ಯುದ್ಧೋನ್ಮಾದ ನಾಯಕರ ಆಲಿಂಗನ ತರದಿರಲಿ ಅನಾಹುತ!

Russia-China Relations: 'ಬಿಗ್‌ ಬ್ರದರ್' ಭೇಟಿಯಿಂದ ಪುಟಿನ್ ಪುಳಕಿತ:‌ ಯುದ್ಧೋನ್ಮಾದ ನಾಯಕರ ಆಲಿಂಗನ ತರದಿರಲಿ ಅನಾಹುತ!

Nikhil Kulkarni HT Kannada

Mar 24, 2023 05:54 PM IST

ಕ್ಸಿ ಜಿನ್‌ಪಿಂಗ್-ವ್ಲಾಡಿಮಿರ್‌ ಪುಟಿನ್

  • ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ರಷ್ಯಾ ಪ್ರವಾಸ ಜಾಗತಿಕವಾಗಿ ಚರ್ಚೆಗೆ ಒಳಪಟ್ಟಿದೆ. ರಷ್ಯಾ-ಚೀನಾ ದೇಶಗಳ ನಡುವೆ ಬೆಳೆಯುತ್ತಿರುವ ಅಸಮಾನ್ಯ ಮೈತ್ರಿಯ ಕುರಿತು ಜಗತ್ತು ಈಗ ಹೆಚ್ಚು ಚಿಂತಿಸುವಂತಾಗಿದೆ. ಚೀನಾದ ಮೇಲಿನ ರಷ್ಯಾದ ಅವಲಂಬನೆಯ ಗ್ರಹಿಕೆ ಗಾಢವಾಗುತ್ತಿರುವುದು ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಕರ ಗಮನ ಸೆಳೆದಿದೆ. ಈ ಕುರಿತು ಇಲ್ಲಿದೆ ಮಾಹಿತಿ..

ಕ್ಸಿ ಜಿನ್‌ಪಿಂಗ್-ವ್ಲಾಡಿಮಿರ್‌ ಪುಟಿನ್
ಕ್ಸಿ ಜಿನ್‌ಪಿಂಗ್-ವ್ಲಾಡಿಮಿರ್‌ ಪುಟಿನ್ (HT_PRINT)

ಮಾಸ್ಕೋ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ರಷ್ಯಾ ಪ್ರವಾಸ ಜಾಗತಿಕವಾಗಿ ಚರ್ಚೆಗೆ ಒಳಪಟ್ಟಿದೆ. ಉಕ್ರೇನ್‌ ವಿರುದ್ಧ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಜಾಗತಿಕವಾಗಿ ಕೆಂಗಣ್ಣಿಗೆ ಗುರಿಯಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌, 'ನೀರಿನಲ್ಲಿ ಮುಳುಗುತ್ತಿರುವವನಿಗೆ ಹುಲ್ಲ ಕಡ್ಡಿಯೂ ಆಸರೆ..' ಎಂಬ ಗಾದೆ ಮಾತಿನಂತೆ, ಕ್ಸಿ ಜಿನ್‌ಪಿಂಗ್‌ ಅವರ ಮಾಸ್ಕೋ ಭೇಟಿಯನ್ನೇ ವಿಜೃಂಭಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್‌ ದೇಶ ಬಿಟ್ಟು ಹೋಗಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೇ ಕಾರಣ, ಇಂತವರ ಪರ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

ಮಾಸ್ಕೋಗೆ ಕ್ಸಿ ಜಿನ್‌ಪಿಂಗ್ ಅವರ ಆಡಂಬರ ತುಂಬಿದ ಭೇಟಿಯು, ರಷ್ಯಾ-ಚೀನಾ ದೇಶಗಳ ನಡುವೆ ಬೆಳೆಯುತ್ತಿರುವ ಅಸಮಾನ್ಯ ಮೈತ್ರಿಯತ್ತ ಬೆಳಕು ಚೆಲ್ಲಿದೆ. ಅಲ್ಲದೇ ಕ್ಸಿ ಜಿನ್‌ಪಿಂಗ್‌ ಮತ್ತು ವ್ಲಾಡಿಮಿರ್‌ ಪುಟಿನ್‌ ಅವರ ಆಲಿಂಗನವು, ರಷ್ಯಾ ಪಾಲಿಗೆ ಚೀನಾ 'ಹಿರಿಯ ಸಹೋದರ' ಇದ್ದಂತೆ ಎಂಬ ಜಾಗತಿಕ ಅಭಿಪ್ರಾಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಉಕ್ರೇನ್‌ ವಿರುದ್ಧದ ಯುದ್ಧದಿಂದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಜಾಗತಿಕವಾಗಿ ಛಿಮಾರಿಗೆ ಒಳಗಾಗಿದ್ದಾರೆ. ಅಲ್ಲದೇ ಸುದೀರ್ಘ ಯುದ್ಧದಿಂದಾಗಿ ರಷ್ಯಾದ ಆರ್ಥಿಕತೆ ಸೊರಗುತ್ತಿದೆ. ಅಲ್ಲದೇ ಪಾಶ್ಚಿಮಾತ್ಯ ನಿರ್ಬಂಧದ ಒತ್ತಡ ಕೂಡ, ರಷ್ಯಾವನ್ನು ಸಾಕಷ್ಟು ಹಿಂಸಿಸುತ್ತಿದೆ. ಈ ವರ್ಷ ರಷ್ಯಾದ ಆರ್ಥಿಕತೆ ಸುಮಾರು ಶೇ. 2.5ರಷ್ಟು ಕುಗ್ಗುವ ಮುನ್ಸೂಚನೆ ದೊರೆತಿದೆ.

ಹೀಗಾಗಿ ರಷ್ಯಾಗೆ ಈಗ ತುರ್ತಾಗಿ ರಾಜತಾಂತ್ರಿಕ ಮತ್ತು ಆರ್ಥಿಕ ನೆರವಿನ ಅಗತ್ಯವಿದೆ. ಚೀನಾ ಈ ಅಗತ್ಯತೆಯನ್ನು ಪೂರೈಸಲು ಸಿದ್ಧವಾಗಿದ್ದು, ರಷ್ಯಾವನ್ನು ಜಾಗತಿಕವಾಗಿ ಒಬ್ಬಂಟಿಗೊಳಿಸುವ ಅಮೆರಿಕದ ಪ್ರಯತ್ನಗಳಿಗೆ ಹಿನ್ನಡೆಯುಂಟು ಮಾಡುವ ಸಾಧ್ಯತೆಗಳಿವೆ. ಇದಕ್ಕೆ ಪೂರಕವಾಗಿ ಕ್ಸಿ ಜಿನ್‌ಪಿಂಗ್‌ ಅವರು ವ್ಲಾಡಿಮಿರ್‌ ಪುಟಿನ್‌ ಅವರಿಗೆ ವ್ಯಾಪಾರ ಮತ್ತು ನೈತಿಕ ಬೆಂಬಲದ ವಾಗ್ದಾನ ಮಾಡಿ ಗಮನ ಸೆಳೆದಿದ್ದಾರೆ.

ರಷ್ಯಾದಿಂದ ಕಚ್ಚಾತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಇರಾದೆ ಇದುವರೆಗೂ ಚೀನಾಗೆ ಇರಲಿಲ್ಲ. ಆದರೆ ಉಭಯ ದೇಶಗಳ ನಡುವೆ ವಾಣಿಜ್ಯ ಚಟುವಟಿಕೆಗಳು ಹೆಚ್ಚಲಿವೆ ಎಂಬ ಕ್ಸಿ ಜಿನ್‌ಪಿಂಗ್‌ ಅವರ ಸಂದೇಶ, ರಷ್ಯಾದಿಂದ ಚೀನಾ ಕಚ್ಚಾತೈಲವನ್ನು ಖರೀದಿಸಲಿದೆ ಎಂಬುದರ ಮುನ್ಸೂಚನೆ ಎಂದು ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು ಅಂದಾಜಿಸಿದ್ದಾರೆ.

ಆದರೆ ರಷ್ಯಾ ಜೊತೆಗಿನ ಚೀನಾದ 'ಸ್ನೇಹ ಭಾವನೆರಹಿತ ಮತ್ತು ಹಿತಾಸಕ್ತಿ-ಚಾಲಿತ ಸ್ವರೂಪವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಏಷ್ಯಾ ಸೊಸೈಟಿಯ ತಜ್ಞ ಫಿಲಿಪ್ ಇವನೊವ್ ಹೇಳಿದ್ದಾರೆ. ರಷ್ಯಾದ ಸದ್ಯದ ಪರಿಸ್ಥಿತಿಯ ಲಾಭ ಪಡೆಯಲು ಚೀನಾ ಹವಣಿಸುತ್ತಿದೆಯೇ ಹೊರತು, ನೈಜ ಸನೇಹ ಸಂಬಂಧ ಸ್ಥಾಪಿಸುವ ಯಾವುದೇ ಇರಾದೆ ಡ್ರ್ಯಾಗನ್‌ ರಾಷ್ಟ್ರಕ್ಕಿಲ್ಲ ಎಂದು ಇವನೊವ್‌ ಅಭಿಪ್ರಾಯಪಟ್ಟಿದ್ದಾರೆ.

ಚೀನಾದ ಮೇಲಿನ ರಷ್ಯಾದ ಅವಲಂಬನೆಯ ಗ್ರಹಿಕೆಯನ್ನು ಗಾಢಗೊಳಿಸುವುದು ಕ್ಸಿ ಜಿನ್‌ಪಿಂಗ್‌ ಅವರ ಉದ್ದೇಶವಾಗಿದೆ. ಪುಟಿನ್‌ ಕೂಡ ಈ ಸತ್ಯವನ್ನು ಬಲ್ಲವರಾಗಿದ್ದು, ಸದ್ಯದ ಅತಂತ್ರ ಪರಿಸ್ಥಿತಿಯಿಂದ ಹೊರಬರಲು, ಕ್ಸಿ ಜಿನ್‌ಪಿಂಗ್‌ ಅವರನ್ನು 'ಬಿಗ್‌ ಬ್ರದರ್'(ಹಿರಿಯ ಸಹೋದರ) ಎಂದು ಬಣ್ಣಿಸಿದ್ದಾರೆ ಎಂಬುದು ಇವನೊವ್‌ ಅವರ ವಾದವಾಗಿದೆ.

ಕ್ಸಿ ಜಿನ್‌ಪಿಂಗ್ ಅವರ ರಷ್ಯಾ ಭೇಟಿಯು, ಚೀನಾದ ರಾಜತಾಂತ್ರಿಕ ಪ್ರಭಾವವನ್ನು ವರ್ಧಿಸುವ ಸಂಘಟಿತ ಪ್ರಯತ್ನದ ಭಾಗವಾಗಿ ಕಂಡುಬಂದಿದೆ. ಇತ್ತೀಚಿನ ದಶಕಗಳಲ್ಲಿ ಬೀಜಿಂಗ್ ತನ್ನ ಆರ್ಥಿಕ ಗುರಿಯನ್ನು ಏಷ್ಯಾದಿಂದ ಆಫ್ರಿಕಾದತ್ತ ವರ್ಗಾಯಿಸುತ್ತಿದೆ. ಅಲ್ಲದೇ ಸಾಂಪ್ರದಾಯಿಕ ಎದುರಾಳಿಗಳಾದ ಇರಾನ್ ಮತ್ತು ಸೌದಿ ಅರೇಬಿಯಾ ನಡುವೆ ಮಧ್ಯಸ್ಥಿಕೆವಹಿಸುವ ಮೂಲಕ, ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ತನ್ನ ಪ್ರಭಾವ ವಿಸ್ತರಿಸುವ ಯೋಜನೆ ರೂಪಿಸಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

"ಚೀನಾ-ರಷ್ಯಾದ ಸಂಬಂಧವು ಬೀಜಿಂಗ್‌ನ ನಿಯಮಗಳ ಮೇಲೆ ಅಭಿವೃದ್ಧಿ ಹೊಂದುತ್ತಿದೆ ಮತ್ತು ಅದನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಪುಟಿನ್‌ಗೆ ಬೇರೆ ದಾರಿಯಿಲ್ಲ. ಅವರು ಈಗ ಕ್ಸಿ ಅವರ ಜೂನಿಯರ್ ಪಾಲುದಾರರಾಗಿದ್ದಾರೆ.." ಎಂದು ಪ್ರಖ್ಯಾತ ರಾಜಕೀಯ ವಿಶ್ಲೇಷಕ ವಿಟ್ಮೋರ್ ಹೇಳಿದ್ದಾರೆ.

"ರಷ್ಯಾ-ಚೀನಾ ಸಂಬಂಧ ಸ್ಪಷ್ಟವಾಗಿ ಅಸಮಾನವಾಗಿದೆ. ಚೀನಾದ ಆರ್ಥಿಕತೆಯು ರಷ್ಯಾಕ್ಕಿಂತ 10 ಪಟ್ಟು ದೊಡ್ಡದಾಗಿದೆ. ಬೀಜಿಂಗ್‌ ಮೇಲೆ ಮಾಸ್ಕೋದ ಅವಲಂಬನೆಯು ವೇಗವಾಗಿ ಬೆಳೆಯುತ್ತಿದೆ. ರಷ್ಯಾವನ್ನು ತನ್ನ ಅಧೀನ ರಾಷ್ಟ್ರವನ್ನಾಗಿ ಮಾಡಿಕೊಳ್ಳಲು ಚೀನಾಗೆ ಇದು ಸೂಕ್ತ ಕಾಲ ಎಂದು ವಿಟ್ಮೋರ್ ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾ-ಭಾರತ ಸಂಬಂಧಕ್ಕೆ ಧಕ್ಕೆ:

ತನ್ನ ಸಾಂಪ್ರದಾಯಿಕ ಶತ್ರು ಚೀನಾದೊಂದಿಗೆ ರಷ್ಯಾ ಸಂಬಂಧ ಬೆಳೆಸುತ್ತಿರುವುದು, ಸಹಜವಾಗಿ ಭಾರತದ ಆತಂಕಕ್ಕೆ ಕಾರಣವಾಗಿದೆ. ಆದರೆ ಕ್ಸಿ ಜಿನ್‌ಪಿಂಗ್‌ ಅವರ ಮಾಸ್ಕೋ ಭೇಟಿಯಿಂದ, ರಷ್ಯಾ-ಭಾರತದ ನಡುವಿನ ಸಂಬಂಧಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ರಷ್ಯಾದ ರಾಯಭಾರ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು