Cloud Burst: ಮೇಘಸ್ಫೋಟಕ್ಕೆ ಕ್ಷಣಾರ್ಧದಲ್ಲಿ ಕೊಚ್ಚಿ ಹೋದ ಕಟ್ಟಡ, ವಾಹನಗಳು: ವಿಡಿಯೋ
Aug 12, 2022 11:00 AM IST
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೌರ್ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ದಿಢೀರ್ ಪ್ರವಾಹ ಉಂಟಾಗಿದೆ (ಫೋಟೋ - ANI)
Kullu cloud burst: ಕುಲು ಜಿಲ್ಲೆಯ ಖಾಡೆಲ್ ಗ್ರಾಮ ಪಂಚಾಯತ್‌ಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 55 ವರ್ಷದ ಮಹಿಳೆ ಮತ್ತು 17 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ. ನೀರಿನ ರಭಸಕ್ಕೆ ಕಟ್ಟಡವೊಂದು ನೀರುಪಾಲಾಗಿದೆ.
ಧರ್ಮಶಾಲಾ: ಹಿಮಾಚಲ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹಕ್ಕೆ ಕಟ್ಟಡವೊಂದು ಕ್ಷಣಾರ್ಧದಲ್ಲಿ ಕೊಚ್ಚಿ ಹೋಗಿರುವ ವಿಡಿಯೋ ವೈರಲ್ ಆಗಿದೆ. ಮೇಘಸ್ಫೋಟದಿಂದಾಗಿ ರಭಸವಾಗಿ ಹರಿಯುತ್ತಿದ್ದ ನೀರಿನ ಪಕ್ಕದಲ್ಲೇ ಇದ್ದ ಕಟ್ಟಡ ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋಗಿದೆ. ಇದರ ಜೊತೆಗೆ ವಿದ್ಯುತ್ ಕಂಬವೂ ನೀರುಪಾಲಾಗಿದೆ. ಇದೀಗ ಹರಿಯುತ್ತಿರುವ ನೀರಿನ ಪಕ್ಕದಲ್ಲೇ ಪಂಚಾಯ್ತಿ ಕಟ್ಟಡ ಇರುವುದು ಆತಂಕ ಮೂಡಿಸಿದೆ.
ಕುಲು ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಮೇಘಸ್ಫೋಟದಿಂದ ನಗರ ಪಂಚಾಯತ್‌ಗೆ ಸೇರಿದ ಹತ್ತು ಅಂಗಡಿಗಳು ಮತ್ತು ಮೂರು ವಾಹನಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಕಚೇರಿ ಮಾಹಿತಿ ನೀಡಿದೆ. ವಿದ್ಯುತ್ ತಂತಿ, ಕಂಬಗಳಿಗೂ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳೆ ಬಸ್ ನಿಲ್ದಾಣ ಹಾಗೂ ಪಂಚಾಯಿತಿ ಕಟ್ಟಡ ಕೊಚ್ಚಿಹೋಗುವ ಭೀತಿ ಎದುರಾಗಿದೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಕುಲು ಜಿಲ್ಲೆಯ ಖಾಡೆಲ್ ಗ್ರಾಮ ಪಂಚಾಯತ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 55 ವರ್ಷದ ಮಹಿಳೆ ಮತ್ತು 17 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.
ಇಂದು ಬೆಳಗ್ಗೆ ಭೂಕುಸಿತದಿಂದಾಗಿ ಮನಾಲಿ-ಕುಲು ರಾಷ್ಟ್ರೀಯ ಹೆದ್ದಾರಿ 21 ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಟಾವುಲಾ ಮೂಲಕ ಸಂಚಾರದ ಮಾರ್ಗ ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿಮಾಚಲ ಪ್ರದೇಶದ ಹಲವು ಜಿಲ್ಲೆಗಳು ಭಾರೀ ಮಳೆಯಿಂದಾಗಿ ಪ್ರಕೃತಿ ವಿಕೋಪ ಉಂಟಾಗಿದೆ. ರಾಜ್ಯದ ಚಂಬಾ ಜಿಲ್ಲೆಯ ಖಾಂಡ್ವಾ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಹಲವು ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಈ ಘಟನೆಯಲ್ಲಿ ಬೆಳೆ ಹಾನಿಯಿಂದ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ ನಂತರ ಹಿಮಾಚಲ ಪ್ರದೇಶ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಬಳಿಯಿರುವ ಮನೆಗಳನ್ನು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಹಿಮಾಚಲ ಪ್ರದೇಶದ ಲಾಹೋಲ್-ಸ್ಪಿತಿ ಎಂಬಲ್ಲಿ ಇದೇ ಆಗಸ್ಟ್ 1 ರಂದು ಭಾರಿ ಮಳೆಯಿಂದ ಎದುರಾಗಿರುವ ಹಠಾತ್ ಪ್ರವಾಹದ ಮಧ್ಯೆ 150 ಜನ ಸಿಲುಕಿಕೊಂಡಿದ್ದರು.
ಆಡಳಿತ, ಪೊಲೀಸ್ ಮತ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಸಿಬ್ಬಂದಿಯನ್ನು ಒಳಗೊಂಡ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿ ಜನರನ್ನು ರಕ್ಷಿಸಲಾಯಿತು ಎಂದು ಲಾಹೌಲ್-ಸ್ಪಿಟಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (ಡಿಇಒಸಿ) ತಿಳಿಸಿದೆ. ಹಠಾತ್ ಪ್ರವಾಹದಿಂದಾಗಿ ಲಾಹೌಲ್ ಉಪ ವಿಭಾಗದ ಸುಮ್ಡೋ-ಕಾಜಾ-ಗ್ರಾಂಫೂ (ಎಸ್‌ಕೆಜಿ) ರಸ್ತೆಯು ಬ್ಲಾಕ್ ಆಗಿದ್ದರಿಂದ, ರವಿವಾರ ರಾತ್ರಿ 11.15 ರ ಸುಮಾರಿಗೆ ಚತ್ರು ಮತ್ತು ದೋರ್ನಿ ಮೋರ್ಹ್ ಬಳಿ 150 ಕ್ಕೂ ಹೆಚ್ಚು ಜನರು ಸಿಲುಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು ಎಂದು ಡಿಇಒಸಿ ಹೇಳಿದೆ. ಕೇಲಾಂಗ್ ಉಪವಿಭಾಗದ ತಹಶೀಲ್ದಾರ್, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಯೋಧರು ಮತ್ತು ಪೊಲೀಸರು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು.