ಗೂಗಲ್ ಸರ್ಚ್‌ನಲ್ಲಿ ಎಲ್‌ಐಸಿ ಟ್ರೆಂಡಿಂಗ್, ಮಣಿಪಾಲ ಆರೋಗ್ಯ ವಿಮಾ ಕಂಪನಿ ಸ್ವಾಧೀನ? 2 ಸಾವಿರ ಕೋಟಿ ಡೀಲ್!
Nov 28, 2024 05:48 PM IST
ಮಣಿಪಾಲ್‌ಸಿಗ್ನಾ ಹೆಲ್ತ್ ಇನ್ಸೂರೆನ್ಸ್‌ನ ಶೇಕಡ 50ರಷ್ಟು ಪಾಲು ಎಲ್‌ಐಸಿ ಪಡೆಯಲಿದೆ ಎಂದು ವರದಿಗಳು ತಿಳಿಸಿವೆ.
LIC and ManipalCigna Health Insurance Deal: ಗೂಗಲ್ ಸರ್ಚ್‌ನಲ್ಲಿ ಎಲ್‌ಐಸಿ ಟ್ರೆಂಡಿಂಗ್‌ನಲ್ಲಿದೆ. ಏನಿದು 20000000000 ರೂಪಾಯಿಯ ಸ್ವಾಧೀನ ಪ್ರಕ್ರಿಯೆ ಎಂದು ಜನ ಹುಡುಕುತ್ತಿದ್ದಾರೆ. ಇದಕ್ಕೂ ಬೆಂಗಳೂರಿನ ಮಣಿಪಾಲಸಿಗ್ನಾ ಹೆಲ್ತ್ ಇನ್ಸೂರೆನ್ಸ್‌ಗೂ ಸಂಬಂಧವಿದೆ.
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ದೇಶದ ಬೃಹತ್ ವಿಮಾ ಸಂಸ್ಥೆ. ಇದೀಗ ಎಲ್‌ಐಸಿ ಗೂಗಲ್ ಸರ್ಚ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಮಣಿಪಾಲ್‌ಸಿಗ್ನಾ ಹೆಲ್ತ್ ಇನ್ಸೂರೆನ್ಸ್‌ನ ಶೇಕಡ 50ರಷ್ಟು ಪಾಲು ಎಲ್‌ಐಸಿ ಪಡೆಯಲಿದೆ ಎಂಬ ಚರ್ಚೆ ಆರಂಭವಾಗಿದೆ ಎಂಬ ಸುದ್ದಿಯಿಂದಾಗಿ ಜನರು ಎಲ್‌ಐಸಿ ಡೀಲ್ ಕುರಿತು ಹುಡುಕಾಟ ನಡೆಸುತ್ತಿದ್ದಾರೆ. ಭಾರತದ ಆರೋಗ್ಯ ವಿಮಾ ವಲಯದಲ್ಲಿ ತನ್ನ ಅಸ್ತಿತ್ವ ಹೆಚ್ಚಿಸಿಕೊಳ್ಳಲು ಎಲ್‌ಐಸಿಗೆ ಈ ಡೀಲ್ ನೆರವಾಗಲಿದೆ. ಎಕಾನಮಿಕ್ ಟೈಮ್ಸ್ ಪ್ರಕಾರ ಎಲ್ಲಾದರೂ ಈ ಡೀಲ್ ನಡೆದರೆ ಎಲ್‌ಐಸಿಗೆ ತನ್ನ ಸ್ಥಾನ ಹೆಚ್ಚಿಸಿಕೊಳ್ಳಲು ನೆರವಾಗಲಿದೆ. ಭಾರತದಲ್ಲಿ ವೈದ್ಯಕೀಯ ವಿಮಾ ಕವರೇಜ್‌ಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಎಲ್‌ಐಸಿ ವ್ಯವಹಾರಕ್ಕೆ ಇದು ಪ್ರಯೋಜನಕಾರಿಯಾಗಲಿದೆ.
ಮಣಿಪಾಲ್‌ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪನಿ ಬಗ್ಗೆ
ಮಣಿಪಾಲ್‌ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಎನ್ನುವುದು ಬೆಂಗಳೂರು ಮೂಲದ ಮಣಿಪಾಲ್ ಎಜುಕೇಷನ್ ಆಂಡ್ ಮಣಿಪಾಲ್ ಗ್ರೂಪ್ ಹಾಗೂ ಅಮೆರಿಕ ಮೂಲದ ಸಿಗ್ನಾ ಕಾರ್ಪೊರೇಷನ್‌ನ ಜಂಟಿ ಉದ್ಯಮ. ಸದ್ಯ ಈ ಜಂಟಿ ಉದ್ಯಮದಲ್ಲಿ ಮಣಿಪಾಲ್ ಗ್ರೂಪ್ ಶೇಕಡ 51ರಷ್ಟು ಪಾಲು ಹೊಂದಿದೆ. ಉಳಿದ ಶೇಕಡ 49 ಪಾಲು ಸಿಗ್ನಾ ಹೊಂದಿದೆ. ಸದ್ಯದ ವರದಿಗಳ ಪ್ರಕಾರ ಮಣಿಪಾಲ್ ಗ್ರೂಪ್ ಮತ್ತು ಸಿಗ್ನಾ ಕಂಪನಿಗಳು ತಮ್ಮ ಪಾಲು ಕಡಿಮೆ ಮಾಡಿಕೊಳ್ಳಲು ಬಯಸಿವೆ. ಶೇಕಡ 50ರಷ್ಟು ಪಾಲು ಎಲ್‌ಐಸಿ ಸ್ವಾಧೀನಪಡಿಸಿಕೊಳ್ಳಲಿದೆ ಎನ್ನಲಾಗುತ್ತಿದೆ.
ಕಂಪನಿಯ ವ್ಯಾಲ್ಯುವೇಷನ್
ಈಗ ಈ ಡೀಲ್ ಕುರಿತು ಮಾತುಕತೆ ಆರಂಭಿಕ ಹಂತದಲ್ಲಿದೆ. ಉದ್ಯಮ ಮೂಲಗಳ ಪ್ರಕಾರ ಮಣಿಪಾಲ್‌ಸಿಗ್ನಾ ಕಂಪನಿಯ ಒಟ್ಟಾರೆ ಮೌಲ್ಯ ಸುಮಾರು 4 ಸಾವಿರ ಕೋಟಿ ರೂಪಾಯಿ ಇರಬಹುದು. ಇದು ಕಂಪನಿಯ ಗ್ರೋಸ್ ರಿಟನ್ ಪ್ರೀಮಿಯಂ (ಜಿಡಬ್ಲ್ಯುಪಿ) ಆಧರಿತವಾಗಿದೆ. ಕಂಪನಿಯ ಜಿಡಬ್ಲ್ಯುಪಿ ಕಳೆದ ಆರ್ಥಿಕ ವರ್ಷದಲ್ಲಿ 1,691 ಕೋಟಿ ರೂಪಾಯಿ ಇತ್ತು. ಎಲ್ಲಾದರೂ ಈ ಡೀಲ್ ನಡೆದರೆ ಎಲ್‌ಐಸಿಯು ಈ ಕಂಪನಿಯ ಶೇಕಡ 50 ಪಾಲನ್ನು ಅಂದಾಜು 1,750 ಕೋಟಿ ರೂಪಾಯಿಯಿಂದ 2 ಸಾವಿರ ಕೋಟಿ ರೂಪಾಯಿಗೆ ಸ್ವಾಧೀನ ಪಡಿಸಿಕೊಳ್ಳಲಿದೆ.
ಎಲ್‌ಐಸಿಯು ಆರೋಗ್ಯ ವಿಮೆ ಕ್ಷೇತ್ರಕ್ಕೆ ಪ್ರವೇಶಿಸಿದರೆ ಕಂಪನಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಕಂಪನಿಯು ಈ ಹಿಂದೆ ತನ್ನ ವ್ಯವಹಾರದಲ್ಲಿ ವೈವಿದ್ಯತೆ ತರುವ ಕುರಿತು ಮಾತನಾಡಿತ್ತು. ನವೆಂಬರ್ ತಿಂಗಳಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಿದ್ಧಾರ್ಥ ಮೊಹಂತಿ ಅವರು "ಈ ಆರ್ಥಿಕ ವರ್ಷದಲ್ಲಿ ಆರೋಗ್ಯ ವಿಮಾ ಕ್ಷೇತ್ರದಲ್ಲಿ ಪಾಲು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಕುರಿತು ಅನ್ವೇಷಿಸಲಾಗುವುದು" ಎಂದು ಹೇಳಿದ್ದರು. ಇವರು ನೀಡಿರುವ ಹೇಳಿಕೆಗೂ ಈಗ ಬಂದಿರುವ ಮಣಿಪಾಲ್ ಸಿಗ್ನಾ ಡೀಲ್ ವದಂತಿಗೂ ತಾಳೆಯಾಗುತ್ತಿದೆ.