logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explained: ಕಚ್ಚತೀವು ವಿವಾದದ ಕಿಡಿ ಹೊತ್ತಿಸಿದ ಅಣ್ಣಾಮಲೈ; ಏನಿದು, ಯಾಕಿಷ್ಟು ಚರ್ಚೆ, ಹೀಗಿದೆ 5 ಅಂಶಗಳ ಸರಳ ವಿವರಣೆ

Explained: ಕಚ್ಚತೀವು ವಿವಾದದ ಕಿಡಿ ಹೊತ್ತಿಸಿದ ಅಣ್ಣಾಮಲೈ; ಏನಿದು, ಯಾಕಿಷ್ಟು ಚರ್ಚೆ, ಹೀಗಿದೆ 5 ಅಂಶಗಳ ಸರಳ ವಿವರಣೆ

Umesh Kumar S HT Kannada

Apr 01, 2024 03:11 PM IST

google News

ಕಚ್ಚತೀವು ವಿವಾದದ ಕಿಡಿ ಹೊತ್ತಿಸಿದ ಅಣ್ಣಾಮಲೈ

  • ಲೋಕಸಭೆ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಕಚ್ಚತೀವು ವಿವಾದದ ಕಿಡಿ ಹೊತ್ತಿಸಿದ ಅಣ್ಣಾಮಲೈ, ಈ ಕುರಿತು ಗಂಭೀರ ಚರ್ಚೆ ನಡೆಯುವಂತೆ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಡಿಎಂಕೆಗಳ ನಿಲುವನ್ನು ಪ್ರಶ್ನಿಸಿದ್ದಾರೆ. ಏನಿದು ವಿವಾದ, ಯಾಕಿಷ್ಟು ಚರ್ಚೆ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಹೀಗಿದೆ 5 ಅಂಶಗಳ ಸರಳ ವಿವರಣೆ.

ಕಚ್ಚತೀವು ವಿವಾದದ ಕಿಡಿ ಹೊತ್ತಿಸಿದ ಅಣ್ಣಾಮಲೈ
ಕಚ್ಚತೀವು ವಿವಾದದ ಕಿಡಿ ಹೊತ್ತಿಸಿದ ಅಣ್ಣಾಮಲೈ

ಚೆನ್ನೈ/ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರದ ಕಾವು ಏರುತ್ತಿರುವಾಗ ರಾಜಕೀಯವಾಗಿ “ಕಚ್ಚತೀವು ದ್ವೀಪ” ವಿವಾದ (Katchatheevu controversy) ಮುನ್ನೆಲೆಗೆ ಬಂದಿದೆ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ (Tamil Nadu BJP chief K. Annamalai) ಅವರು ನಿನ್ನೆ (ಮಾರ್ಚ್ 31) ಸುದ್ದಿಗೋಷ್ಠಿ ನಡೆಸಿ ಭಾರತದ ವಿದೇಶಾಂಗ ಸಚಿವಾಲಯ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದ ದಾಖಲೆಗಳಲ್ಲಿರುವ ಅಂಶಗಳನ್ನು ವಿವರಿಸಿದರು.

ಇದೇ ದಾಖಲೆಯ ಅಂಶಗಳನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರೂ ಕಚ್ಚತೀವು ವಿಚಾರ ಪ್ರಸ್ತಾಪಿಸಿ, ತಮಿಳುನಾಡು ಆಡಳಿತಾರೂಢ ಡಿಎಂಕೆ ರಾಜ್ಯದ ಹಿತವನ್ನು ಕಾಪಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಕಚ್ಚತೀವು ವಿಚಾರ ಪ್ರಸ್ತಾಪಿಸಿ, ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದ್ದಾರೆ.

ಕೆ. ಅಣ್ಣಾಮಲೈ ಅವರು ಆರ್‌ಟಿಐ ಅರ್ಜಿಯ ಮೂಲಕ ಪಡೆದ ದಾಖಲೆಗಳು ಶ್ರೀಲಂಕಾದೊಂದಿಗಿನ ಕಚ್ಚತೀವು ದ್ವೀಪ ವಿವಾದದ ವಿಚಾರದಲ್ಲಿ ಹಿಂದಿನ ಭಾರತ ಸರ್ಕಾರ ತೀರ್ಮಾನ ತೆಗೆದುಕೊಂಡ ವಿಧಾನದ ಮೇಲೆ ಬೆಳಕು ಚೆಲ್ಲಿವೆ. ಪುಟ್ಟದಾಗಿರುವ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ನಿರ್ಧಾರ ಈಗ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ತಮಿಳುನಾಡು ಮೀನುಗಾರರು ಕಚ್ಚತೀವು ದ್ವೀಪದ ಸಮೀಪ ಮೀನುಗಾರಿಕೆಗೆ ಹೋದರೆ ಶ್ರೀಲಂಕಾ ಅಧಿಕಾರಿಗಳು ಅವರನ್ನು ಬಂಧಿಸುತ್ತಿರುವ ಕಾರಣ, ಈ ವಿವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬಂದಿದೆ. ಚುನಾವಣೆ ಸಂದರ್ಭದಲ್ಲಿ ಚರ್ಚೆಗೊಳಗಾಗಿರುವ ಈ ದಾಖಲೆಗಳು ಕಚ್ಚತೀವು ದ್ವೀಪದ ಮಾಲೀಕತ್ವದ ಸುತ್ತಲಿನ ಚರ್ಚೆ ಮತ್ತು ಭಾರತೀಯ ಮೀನುಗಾರರ ಮೇಲೆ ಪರಿಣಾಮ ಬೀರಲಿವೆ.

1) ಕಚ್ಚತೀವು ದ್ವೀಪವನ್ನು ಜೊತೆಗೂಡಿ ಕೈಬಿಟ್ಟ ಕಾಂಗ್ರೆಸ್‌, ಡಿಎಂಕೆ

ಅಣ್ಣಾಮಲೈ ಅವರು ಆರ್‌ಟಿಐ ಮೂಲಕ ಪಡೆದುಕೊಂಡ ದಾಖಲೆಗಳನ್ನು ಇಟ್ಟುಕೊಂಡು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿ ಪ್ರಕಾರ, ಭಾರತದ ಕಡಲ ತೀರದಿಂದ 20 ಕಿ.ಮೀ. ದೂರದ 1.9 ಚದರ ಕಿ.ಮೀ. ಗಾತ್ರದ ಪುಟ್ಟ ದ್ವೀಪ ಪ್ರದೇಶವನ್ನು ಎಲ್ಲ ದಾಖಲೆಗಳಿದ್ದಾಗ್ಯೂ ಶ್ರೀಲಂಕಾಕ್ಕೆ ಅಂದಿನ ಕಾಂಗ್ರೆಸ್ ಮತ್ತು ಡಿಎಂಕೆ ಸರ್ಕಾರಗಳು ಜೊತೆಗೂಡಿ ಬಿಟ್ಟುಕೊಟ್ಟವು. ಅಷ್ಟೇ ಅಲ್ಲ ಈ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡದಂತೆ ತೀರ್ಮಾನವನ್ನೂ ತೆಗೆದುಕೊಂಡಿದ್ದವು.

ಸ್ವಾತಂತ್ರ್ಯ ಸಿಗುವವರೆಗೂ ಕಚ್ಚತೀವು ದ್ವೀಪ ಭಾರತದ ಅಧೀನದಲ್ಲೇ ಇತ್ತು. ಸ್ವಾತಂತ್ರ್ಯಾನಂತರ ಅಂದು ಸಿಲೋನ್ ಎಂದು ಕರೆಯಲ್ಪಟ್ಟಿದ್ದ ಇಂದಿನ ಶ್ರೀಲಂಕಾ ಆ ದ್ವೀಪ ತನ್ನದೆಂದು ಪ್ರತಿಪಾದಿಸತೊಡಗಿತು. ರಾಯಲ್ ಇಂಡಿಯನ್ ನೇವಿ (ಭಾರತೀಯ ನೌಕಾಪಡೆ) ತನ್ನ ಒಪ್ಪಿಗೆ ಇಲ್ಲದೆ ಆ ದ್ವೀಪಕ್ಕೆ ಕಾಲಿರಿಸುವಂತೆ ಇಲ್ಲ ಎಂದು ತಾಕೀತು ಮಾಡಿತು. ಇದರ ಬೆನ್ನಿಗೆ 1955ರ ಅಕ್ಟೋಬರ್‌ನಲ್ಲಿ ಸಿಲೋನ್ ಏರ್ ಫೋರ್ಸ್‌ (ಶ್ರೀಲಂಕಾ ವಾಯುಪಡೆ) ಆ ದ್ವೀಪದಲ್ಲಿ ತಾಲೀಮು ನಡೆಸಿತು. ಶ್ರೀಲಂಕಾ ಬಲವಾಗಿ ಪ್ರತಿಪಾದಿಸಿದಾಗ ಭಾರತ ಸ್ಪಷ್ಟ ನಿಲುವು ತಾಳಲಿಲ್ಲ. ಅಗತ್ಯ ದಾಖಲೆಗಳಿದ್ದರೂ ಅದನ್ನು ಬಳಸಲಿಲ್ಲ ಎಂಬುದನ್ನು ದಾಖಲೆಗಳು ತೋರಿಸುತ್ತವೆ ಎಂಬುದನ್ನು ಅಣ್ಣಾಮಲೈ ಪ್ರತಿಪಾದಿಸಿದರು.

2) ಅಂದಿನ ಪ್ರಧಾನಿ ಜವಹರಲಾಲ್ ನೆಹರು ಮನಸ್ಥಿತಿ ಹೀಗಿತ್ತು

ಕಚ್ಚತೀವು ದ್ವೀಪವನ್ನು ಭಾರತದ ಬಳಿಯೇ ಉಳಿಸಿಕೊಳ್ಳುವ ವಿಚಾರದಲ್ಲಿಲ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಉದಾಸೀನ ತೋರಿದ್ದರು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂಬುದನ್ನು ದಾಖಲೆಗಳು ತೋರಿಸುತ್ತವೆ. ದ್ವೀಪವನ್ನು ಹಗುರಾಗಿ ಪರಿಗಣಿಸಿದ ಅವರು ಅದರ ಮೇಲಿನ ಹಕ್ಕುಗಳನ್ನು ಬಿಟ್ಟುಕೊಡಲು ತೀರ್ಮಾನಿಸಿದರು. ಇದಕ್ಕೆ ಅಂದಿನ ಅಟಾರ್ನಿ ಜನರಲ್‌ ವಿರೋಧ ವ್ಯಕ್ತಪಡಿಸಿದ್ದರು. ಅವರ ಅಭಿಪ್ರಾಯ ಭಿನ್ನವಾಗಿತ್ತು. ಅವರು ಐತಿಹಾಸಿಕ ಮಾಲೀಕತ್ವ ಹಕ್ಕು ಇರುವ ಕಾರಣ ಅದನ್ನು ಕಾನೂನಾತ್ಮಕವಾಗಿ ಗೆಲ್ಲಬಹುದು ಎಂಬ ಅಭಿಪ್ರಾಯನ್ನು ವ್ಯಕ್ತಪಡಿಸಿದ್ದರು.

ಅಂದಿನ ಪ್ರಧಾನಿ ನೆಹರೂ ಅವರು 1961ರ ಮೇ 10 ರಂದು ಆ ಸಮಸ್ಯೆಯನ್ನು ಅಸಮಂಜಸವೆಂದು ತಳ್ಳಿಹಾಕಿದರು. ಆ ಪುಟ್ಟ ದ್ವೀಪಕ್ಕೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಅದರ ಮೇಲಿನ ನಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಇದು ಅನಿರ್ದಿಷ್ಟಾವಧಿಗೆ ಬಾಕಿ ಉಳಿದಿರುವುದು ಮತ್ತು ಸಂಸತ್ತಿನಲ್ಲಿ ಮತ್ತೆ ಈ ವಿಚಾರವನ್ನು ಎತ್ತುವುದು ಇಷ್ಟವಿಲ್ಲ ಎಂದು ನೆಹರೂ ಬರೆದಿರುವ ದಾಖಲೆಗಳಿವೆ ಎಂದು ಅಣ್ಣಾಮಲೈ ಹೇಳಿದ್ದಾರೆ.

3) ಕಚ್ಚತೀವು ದ್ವೀಪದ ಹಕ್ಕು ತ್ಯಾಗ ಮಾಡಿದ್ದು 1974ರಲ್ಲಿ

ಸುದೀರ್ಘ ಮಾತುಕತೆಗಳ ಬಳಿಕ ಭಾರತವು ಶ್ರೀಲಂಕಾದ ಪ್ರತಿಪಾದನೆಗೆ ತಲೆಬಾಗಿ ಕಚ್ಚತೀವು ದ್ವೀಪದ ಹಕ್ಕು ತ್ಯಾಗ ಮಾಡಲು ತೀರ್ಮಾನಿಸಿತು. 1974 ಜೂನ್‌ ತಿಂಗಳಲ್ಲಿ ವಿದೇಶಾಂಗ ಕಾರ್ಯದರ್ಶಿ ಕೇವಲ್ ಸಿಂಗ್ ಅವರು ಕಳೆದ ವರ್ಷ ಕೊಲಂಬೊದಲ್ಲಿ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗಳ ನಂತರ, ಕಚ್ಚತೀವು ಮೇಲಿನ ಹಕ್ಕನ್ನು ಬಿಟ್ಟುಕೊಡುವ ಭಾರತದ ನಿರ್ಧಾರವನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರಿಗೆ ತಿಳಿಸಿದರು. ಸಭೆಯಲ್ಲಿ, ರಾಮನಾಡಿನ (ರಾಮನಾಥಪುರಂ) ರಾಜನ ಜಮೀನ್ದಾರಿ ಹಕ್ಕುಗಳು ಮತ್ತು ದ್ವೀಪದ ಶ್ರೀಲಂಕಾದ ಮಾಲೀಕತ್ವವನ್ನು ಸಾಬೀತುಪಡಿಸುವ ಸಾಕ್ಷ್ಯಚಿತ್ರ ಸಾಕ್ಷ್ಯಗಳ ಅನುಪಸ್ಥಿತಿಯನ್ನು ಸಿಂಗ್ ಎತ್ತಿ ತೋರಿಸಿದರು ಎಂದು ದಾಖಲೆಗಳು ಹೇಳುತ್ತಿವೆ. ಸಣ್ಣ ರಾಷ್ಟ್ರಗಳ ಕುರಿತಾದ ಧೋರಣೆ ಮತ್ತು ಕರುಣಾನಿಧಿ ಅವರ ಒಪ್ಪಿಗೆ ಕಾರಣ ಬಹುಬೇಗ ಅದು ಮುಗಿದು ಹೋಯಿತು. 1976ರಲ್ಲಿ ಸೇತು ಸಮುದ್ರ ಗಡಿ ರೇಖೆ ಗುರುತಿಸುವ ಹೊತ್ತಿಗೆ ಈ ಕೆಲಸ ರಹಸ್ಯವಾಗಿ ಮುಗಿದುಹೋಗಿತ್ತು.

4) ಸಂಸತ್ತಲ್ಲಿ ವಿಪಕ್ಷ ವಿರೋಧ, ತಮಿಳುನಾಡನಲ್ಲಿ ಕರುಣಾನಿಧಿ ವಿರುದ್ಧ ಟೀಕೆ

ಕಚ್ಚತೀವು ದ್ವೀಪವನ್ನು ಬಿಟ್ಟುಕೊಡುವ ಕುರಿತು ಅಂದು ಭಾರತವನ್ನಾಗಳಿದ ಕಾಂಗ್ರೆಸ್ ಸರ್ಕಾರ ಮತ್ತು ಶ್ರೀಲಂಕಾ ಸರ್ಕಾರಗಳ ನಡುವಿನ ರಹಸ್ಯ ಒಪ್ಪಂದಕ್ಕೆ ವಿಪಕ್ಷ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಸಂಬಂಧಿಸಿ 1974 ಜುಲೈನಲ್ಲಿ ನಡೆದ ಚರ್ಚೆಯಲ್ಲಿ ಡಿಎಂಕೆ, ಎಐಎಡಿಎಂಕೆ, ಜನಸಂಘ, ಸ್ವತಂತ್ರ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ಹೆಚ್ಚಿನ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ್ದವು.

ಜನಸಂಘದ ನಾಯಕರಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ದ್ವೀಪವನ್ನು ಹಸ್ತಾಂತರಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಪ್ರತಿಪಾದಿಸಿದ್ದರು. ಅವರನ್ನು ಹಿರಿಯ ಸಮಾಜವಾದಿ ನಾಯಕ ಮಧು ಲಿಮಯೆ ಬೆಂಬಲಿಸಿದರು. ಆ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ, 1973ರಲ್ಲಿ ದ್ವೀಪ ಹಸ್ತಾಂತರ ಚರ್ಚೆಗಳು ನಡೆಯುತ್ತಿದ್ದಾಗಲೂ ‘ಭಾರತಕ್ಕೆ ಸೇರಿದ್ದು, ತಮಿಳುನಾಡಿಗೆ ಮಾತ್ರ ಸೇರಿದ್ದಲ್ಲ’ ಎಂದು ಜನಸಾಮಾನ್ಯರ ಭಾವನೆ ಕಚ್ಚತೀವು ಉಳಿಸಿಕೊಳ್ಳುವ ಪರವಾಗಿದೆ ಎಂಬುದನ್ನು ಪ್ರಧಾನಿ ಇಂದಿರಾಗಾಂಧಿಯವರ ಗಮನಕ್ಕೆ ತರಲು ಪ್ರಯತ್ನಿಸದಿfದರು ಎಂದು ದ ಹಿಂದೂ ವರದಿ ಹೇಳಿದೆ. 1973ರ ಅಕ್ಟೋಬರ್ 17ರ ದ ಹಿಂದೂ ವರದಿ ಪ್ರಕಾರ, ಒಪ್ಪಂದ ಏರ್ಪಟ್ಟು ದ್ವೀಪ ಹಸ್ತಾಂತರವಾದ ಮೂರು ತಿಂಗಳ ನಂತರ, ಕರುಣಾನಿಧಿ ಪುನಃ ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯನ್ನು 1974 ರ ಒಪ್ಪಂದಕ್ಕೆ ಸಹಿ ಹಾಕಿದ ಮಾರನೇ ದಿನ ಬಿಡುಗಡೆ ಮಾಡಲಾಗಿತ್ತು. ಆಗ ಎಐಎಡಿಎಂಕೆಯ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ಅವರು ಕರುಣಾನಿಧಿ ಅವರು ಕಚ್ಚತೀವು ವಿಷಯದ ಬಗ್ಗೆ "ಕೇಂದ್ರಕ್ಕೆ ಸರಿಯಾಗಿ ಮಾರ್ಗದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ" ಎಂದು ಟೀಕಿಸಿದ್ದರಲ್ಲದೆ, ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು.

5) 15 ವರ್ಷಗಳ ಬಳಿಕ 1991ರಲ್ಲಿ ಮತ್ತೆ ಮುನ್ನೆಲೆಗೆ ಕಚ್ಚತೀವು

ಕಚ್ಚತೀವು ದ್ವೀಪ ವಿವಾದ ಹದಿನೈದು ವರ್ಷ ನಂತರ ಪುನಃ ಮುನ್ನೆಲೆಗೆ ಬಂತು. 1991ರ ಆಗಸ್ಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಜೆ ಜಯಲಲಿತಾ, ಕಚ್ಚತೀವು ದ್ವೀಪ ವಾಪಸ್ ಪಡೆಯಬೇಕೆಂಬ ವಿಚಾರಕ್ಕೆ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಈ ವಿಚಾರವಾಗಿ ಜಯಲಲಿತಾ ಮತ್ತು ಕರುಣಾನಿಧಿ ಸುಪ್ರೀಂ ಕೋರ್ಟ್ ಮೊರೆ ಹೋದರು. ಇದಾಗಿ 2013ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಭಾರತ ಸರ್ಕಾರ, ಅದು ಭಾರತದ್ಧೇ ಭಾಗವಾಗಿದ್ದು ಅದನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ಪ್ರಶ್ನೆ ಇಲ್ಲ. ಆ ದ್ವೀಪಕ್ಕೆ ಸಂಬಂಧಿಸಿ ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಸಿಲೋನ್ ನಡುವೆ ವಿವಾದ ಇತ್ತು ಎಂದು ತಿಳಿಸಿತ್ತು. ಇನ್ನೊಂದೆಡೆ, 2022ರ ಡಿಸೆಂಬರ್‌ನಲ್ಲಿ ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ಕಚ್ಚತೀವು ಭಾರತ ಮತ್ತು ಶ್ರೀಲಂಕಾದ ಅಂತಾರಾಷ್ಟ್ರೀಯ ಸಾಗರ ಗಡಿ ರೇಖೆಯ ಶ್ರೀಲಂಕಾ ಭಾಗದಲ್ಲಿದೆ. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದು ಹೇಳಿತ್ತು.

ಈ ನಡುವೆ ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಸುದ್ದಿಗೋಷ್ಠಿ ನಡೆಸಿದ್ದು, ಎರಡನೇ ಹಂತದ ದಾಖಲೆಗಳನ್ನು ನಾಳೆ (ಏಪ್ರಿಲ್ 2) ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ