Explained: ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕದಾಟು; ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ರಾಜಕೀಯ ಸಮರ
Mar 22, 2024 11:01 AM IST
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (ಎಡ ಚಿತ್ರ); ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ತಡೆಯುವ ಪ್ರಸ್ತಾಪ (ಮಧ್ಯ ಚಿತ್ರ), ಮೇಕೆದಾಟು (ಬಲ ಚಿತ್ರ)
Explained: ಲೋಕಸಭೆ ಚುನಾವಣೆಗೆ ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆ ಪ್ರಕಟಿಸಿದ ಪ್ರಣಾಳಿಕೆಯಲ್ಲಿ ಮೇಕದಾಟು ಯೋಜನೆ ತಡೆಯುವ ವಿಚಾರ ಪ್ರಸ್ತಾಪವಾಗಿದೆ. ಇದು ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ರಾಜಕೀಯ ಸಮರ ಕಾರಣವಾಗಿದ್ದು, 4 ಅಂಶಗಳಲ್ಲಿ ಪ್ರಸ್ತುತ ವಿದ್ಯಮಾನದ ಸಮಗ್ರ ಚಿತ್ರಣ ಹೀಗಿದೆ.
ಬೆಂಗಳೂರು: ಕರ್ನಾಟಕದ ಮಟ್ಟಿಗೆ ವಿಶೇಷವಾಗಿ ಬೆಂಗಳೂರು ಸುತ್ತಮುತ್ತ ಪ್ರದೇಶಗಳಿಗೆ ಅತ್ಯಂತ ಪ್ರಮುಖವಾಗಿರುವ ಮೇಕೆದಾಟು ಯೋಜನೆ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಈ ಯೋಜನೆಯನ್ನು ನೆರೆ ರಾಜ್ಯ ತಮಿಳುನಾಡು ವಿರೋಧಿಸುತ್ತಲೇ ಬಂದಿದೆ. ಈಗ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಮಿಳುನಾಡಿ ಆಡಳಿತಾರೂಢ ಡಿಎಂಕೆ ತನ್ನದೇ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಪಕ್ಷದ ಮಿತ್ರ ಪಕ್ಷವಾಗಿರುವ ಡಿಎಂಕೆಯ 68 ಪುಟಗಳ ಪ್ರಣಾಳಿಕೆಯಲ್ಲಿ ಕೃಷಿ ವಿಭಾಗದಲ್ಲಿ 14ನೇ ಪಾಯಿಂಟ್‌ನಲ್ಲಿ ಮೇಕೆದಾಟು ಯೋಜನೆ ನಿಲ್ಲಿಸುವ ವಿಚಾರ ಪ್ರಸ್ತಾಪವಾಗಿದೆ. ಮೇಕೆದಾಟು ಯೋಜನೆಯ ಮೂಲಕ ಬೆಂಗಳೂರಿಗೆ 4 ಟಿಎಂಸಿ ನೀರು ಪೂರೈಸುವ ಉದ್ದೇಶವೂ ಇದೆ. ಕರ್ನಾಟಕ ಸರ್ಕಾರದ ಮಟ್ಟಿಗೆ ಇದು ಅತ್ಯಂತ ಮಹತ್ವದ ಯೋಜನೆಯಾಗಿದೆ. ಹೀಗಾಗಿ ಇದು ಕರ್ನಾಟಕದಲ್ಲಿ ಬಿಜೆಪಿ ನಾಯಕರ ಗಮನಸೆಳೆದಿದ್ದು, ಅವರು ನಿನ್ನೆ (ಮಾರ್ಚ್ 21) ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಲಾರಂಭಿಸಿದ್ದಾರೆ.
ನಮ್ಮ ಕಾವೇರಿ ನಮ್ಮ ಹಕ್ಕು; ಬಿಜೆಪಿ ಟ್ವೀಟ್ ಅಭಿಯಾನ
ಇಂಡಿಯಾ ಮೈತ್ರಿಕೂಟದ ಸ್ವಾರ್ಥ ರಾಜಕಾರಣಕ್ಕಾಗಿ ರಾಜ್ಯದ ರೈತರು ಮತ್ತು ನಾಗರಿಕರ ಕುಡಿಯುವ ನೀರನ್ನು ಕರ್ನಾಟಕದ ಕಾಂಗ್ರೆಸ್ ಸರಕಾರವು "ತ್ಯಾಗ" ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಗುರುವಾರ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ಅದರಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ಬಿವೈ ವಿಜಯೇಂದ್ರ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅವರು ವೀಕ್ ಸಿಎಂ, ನಮ್ಮಕಾವೇರಿ ನಮ್ಮಹಕ್ಕು ಎಂಬ ಹ್ಯಾಷ್ ಟ್ಯಾಗನ್ನೂ ಬಳಸಿದ್ದಾರೆ.
ಭೀಕರ ಬರಗಾಲದ ಈ ಸಂದರ್ಭದಲ್ಲಿ ಎಂ ಕೆ ಸ್ಟಾಲಿನ್ (ತಮಿಳುನಾಡು ಸಿಎಂ) ಅವರೊಂದಿಗಿನ ಸಿದ್ದರಾಮಯ್ಯ ಸರ್ಕಾರದ ರಹಸ್ಯ ಒಪ್ಪಂದವನ್ನು ಡಿಎಂಕೆ ಪ್ರಣಾಳಿಕೆ ಬಹಿರಂಗಪಡಿಸುತ್ತದೆ. ನಮ್ಮ ರೈತರಿಗೆ ಕುಡಿಯುವ ನೀರು ಮತ್ತು ನೀರಾವರಿ ಉದ್ದೇಶಗಳ ಪ್ರಾಥಮಿಕ ಮೂಲವಾದ ನಮ್ಮ ಜೀವನಾಡಿ "ಕಾವೇರಿ" ಯನ್ನು ಕಳೆದುಕೊಂಡಿದ್ದೇವೆ ಎಂದು ವಿಜಯೇಂದ್ರ ಹೇಳಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ದ ಜೊತೆಗೆ ರಾಜ್ಯದ ನ್ಯಾಯಯುತವಾದ ಕಾವೇರಿ ನೀರಿನ ಪಾಲುಗಾಗಿ ಹೋರಾಡುವ “ಧೋರಣೆ ಕೊರತೆ” ಕರ್ನಾಟಕ ಸರ್ಕಾರದ್ದು. ಹೀಗಾಗಿ ತಮಿಳುನಾಡಿಗೆ ನಮಗಿಂತ ಹೆಚ್ಚು ನೀರು ಹಂಚಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಜಯೇಂದ್ರ ಖೇದ ವ್ಯಕ್ತಪಡಿಸಿದ್ದಾರೆ.
''ಒಂದು ವೇಳೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಮೇಕೆದಾಟು ಯೋಜನೆಯನ್ನು ನಿಲ್ಲಿಸಿ, ಹೆಚ್ಚಿನ ಕಾವೇರಿ ನೀರಿಗಾಗಿ ಡಿಎಂಕೆ ತನ್ನ ಮೈತ್ರಿಕೂಟದ ಶಕ್ತಿಯನ್ನು ಬಳಸಿಕೊಂಡರೆ ಆಶ್ಚರ್ಯವಿಲ್ಲ. ಕಾಂಗ್ರೆಸ್‌ಗೆ ಮತ ಹಾಕಿದರೆ ನಮ್ಮ ರಾಜ್ಯದ ಹಿತಾಸಕ್ತಿಗೆ ಹಾನಿಯಾಗುತ್ತದೆ. ಕರ್ನಾಟಕ ಬಿಜೆಪಿಯಿಂದ ಮಾತ್ರವೇ ನಮ್ಮ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲು ಸಾಧ್ಯ" ಎಂದು ವಿಜಯೇಂದ್ರ ಹೇಳಿದರು.
ಕ್ಷುಲ್ಲಕ ರಾಜಕಾರಣ ಬಿಟ್ಟು ಮೇಕೆದಾಟು ಜಾರಿಗೆ ನೆರವಾಗಿ
ಡಿಎಂಕೆ ತನ್ನ ಪ್ರಣಾಳಿಕೆ ಬಿಡುಗಡೆ ಮಾಡುವುದಕ್ಕೆ ಕೆಲವು ದಿನಗಳ ಮೊದಲು ಅಂದರೆ ಕಳೆದ ಗುರುವಾರ (ಮಾರ್ಚ್ 15) ಕರ್ನಾಟಕದ ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಕೆದಾಟು ಯೋಜನೆ ಕುರಿತು ಮಾತನಾಡಿದ್ದರು.
ಮೇಕೆದಾಟು ಅಣೆಕಟ್ಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯುವಂತೆ ಒತ್ತಾಯಿಸುತ್ತಿರುವಾಗ ರಾಜ್ಯ ಸರ್ಕಾರವನ್ನು ಕೆಟ್ಟದಾಗಿ ಬಿಂಬಿಸುವ ಕೆಲಸವನ್ನು ಕರ್ನಾಟಕ ಬಿಜೆಪಿ ಮಾಡುತ್ತಿದೆ. ನೀರಿನ ವಿಚಾರದಲ್ಲಿ ಅಗ್ಗದ ರಾಜಕಾರಣ ಮಾಡುವ ಬದಲು ಬಿಜೆಪಿಯು ಮೇಕೆದಾಟು ಯೋಜನೆಗೆ ಅನುಮೋದನೆ ಪಡೆಯಬೇಕು. ಇದರಿಂದ ಬೆಂಗಳೂರಿನ ಎಲ್ಲಾ ನೀರಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನೀರಿನ ಬಿಕ್ಕಟ್ಟನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಬಿಜೆಪಿಯವರು ತಪ್ಪು ಮಾಹಿತಿ ಅಭಿಯಾನ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದರು.
ತಮಿಳುನಾಡಿಗೂ ಬೆಂಗಳೂರಿನ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ತಮಿಳುನಾಡು ಕರ್ನಾಟಕದಿಂದ ನೀರು ಕೇಳಿಲ್ಲ. ಬೆಂಗಳೂರಿಗೆ ಸಮರ್ಪಕ ನೀರು ಪೂರೈಕೆಗಾಗಿ ಕೆಆರ್‌ಎಸ್‌ನಿಂದ ನೀರು ಬಿಡಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.
ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ವಿಚಾರ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರಾಜ್ಯಪಾಲರ ಹಸ್ತಕ್ಷೇಪ ದೂರ ಮಾಡುವುದು, ತಮಿಳು ಭಾಷೆ, ತಮಿಳುನಾಡಿನ ಜನರಿಗೆ ಪ್ರಾಮುಖ್ಯತೆ ನೀಡುವ ವಿಚಾರ, ಎಲ್‌ಪಿಜಿ ಸಿಲಿಂಡರ್ 500 ರೂಪಾಯಿಗೆ ಒದಗಿಸುವುದು, ರಾಷ್ಟ್ರಪತಿ ಆಳ್ವಿಕೆಗೆ ತಡೆ ಹೇರುವುದು ಇತ್ಯಾದಿ ವಿಚಾರಗಳನ್ನು ಅದರಲ್ಲಿ ಸೇರಿಸಿದೆ. ಇದಲ್ಲದೆ ಕೃಷಿ ವಿಭಾಗದಲ್ಲಿ 14 ನೇ ಪಾಯಿಂಟ್‌ನಲ್ಲಿ ಕರ್ನಾಟಕದ ಮೇಕೆದಾಟು ಯೋಜನೆ ಅನುಷ್ಠಾನವಾಗದಂತೆ ತಡೆಯುವುದಾಗಿ ಘೋಷಿಸಲಾಗಿದೆ.
“ಮೇಕೆದಾಟು ಅಣೆಕಟ್ಟು ನಿರ್ಮಾಣದ ಪ್ರಯತ್ನ ನಿಲ್ಲಿಸಲಾಗುವುದು. ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿ ಡೆಲ್ಟಾ ಪ್ರದೇಶದ ರೈತರ ಹಿತ ಕಾಪಾಡಲು ಮತ್ತು ತಮಿಳುನಾಡಿನ ವಿವಿಧ ಭಾಗಗಳಿಗೆ ನೀರು ಸರಬರಾಜು ಮಾಡಲು ದೃಢವಾದ ಕಾನೂನು ಕ್ರಮಗಳ ಮೂಲಕ ಡಿಎಂಕೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂಬ ಉಲ್ಲೇಖ 14ನೇ ಪಾಯಿಂಟ್‌ನಲ್ಲಿದೆ.
ಏನಿದು ಮೇಕೆದಾಟು ಯೋಜನೆ
ರಾಮನಗರ ಜಿಲ್ಲೆಯ ಕನಕಪುರ ಬಳಿ ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಇದು ಸಮತೋಲನ ಜಲಾಶಯದ ನಿರ್ಮಾಣವನ್ನು ಒಳಗೊಂಡ ಬಹುಪಯೋಗಿ (ಕುಡಿಯುವ ನೀರು ಮತ್ತು ವಿದ್ಯುತ್) ಯೋಜನೆಯಾಗಿದೆ. ಈ ಯೋಜನೆ ಪೂರ್ಣಗೊಂಡ ನಂತರ, ಬೆಂಗಳೂರು ನಗರಕ್ಕೆ ಕುಡಿಯುವ ಉದ್ದೇಶಕ್ಕಾಗಿ 4 ಟಿಎಂಸಿ (ಸಾವಿರ ಮಿಲಿಯನ್ ಘನ ಅಡಿ) ನೀರನ್ನು ಪೂರೈಸುವ ನಿರೀಕ್ಷೆಯಿದೆ. ಸುಮಾರು 5,000 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿರುವ ಈ ಯೋಜನೆಯನ್ನು ಪೂರ್ಣಗೊಳಿಸಲು ಅಂದಾಜು ವೆಚ್ಚ ಸುಮಾರು 14,000 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ.
ಕರ್ನಾಟಕವು ತನ್ನ ಪ್ರದೇಶದೊಳಗಿನ ಯೋಜನೆಯು ಎರಡೂ ರಾಜ್ಯಗಳಿಗೆ ಪ್ರಯೋಜನವನ್ನು ನೀಡುತ್ತದೆ. ಸಂಕಷ್ಟದ ವರ್ಷದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ನೀರನ್ನು ಎರಡೂ ರಾಜ್ಯಗಳ ನಡುವೆ ನಿರ್ವಹಿಸಬಹುದು. ಈ ಯೋಜನೆಯ ಅನುಷ್ಠಾನಗೊಳಿಸುವುದರಿಂದ ತಮಿಳುನಾಡಿನ ರೈತ ಸಮುದಾಯಗಳ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಏಕೆಂದರೆ ಅದರ ನೀರಿನ ಪಾಲಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ಈ ಯೋಜನೆಯು ಕೃಷ್ಣರಾಜಸಾಗರದ ಕೆಳಗಿನ ಜಲಾನಯನ ಪ್ರದೇಶವಾದ ಕಬಿನಿ ಉಪ-ಜಲಾನಯನ ಪ್ರದೇಶದಿಂದ ಮತ್ತು ಶಿಂಶಾ, ಅರ್ಕಾವತಿ, ಸುವರ್ಣಾವತಿ ಉಪ-ಜಲಾನಯನ ಪ್ರದೇಶಗಳಿಂದ ಅನಿಯಂತ್ರಿತ ನೀರಿನ ಹರಿವನ್ನು "ಬೇರೆಡೆಗೆ ತಿರುಗಿಸುತ್ತದೆ" ಎಂಬುದು ತಮಿಳುನಾಡು ಸರ್ಕಾರದ ನಂಬಿಕೆ.
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)