logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಯಲಾಗಿಲ್ಲ ಮಹಾರಾಷ್ಟ್ರ ಸಿಎಂ ಯಾರೆಂಬ ಚಿದಂಬರ ರಹಸ್ಯ, ಪುತ್ರ ಶ್ರೀಕಾಂತ್ ರಾಜಕೀಯ ಭವಿಷ್ಯದ ಕಾರಣ ಏಕನಾಥ್ ಶಿಂಧೆ ಫುಲ್ ಟೆನ್ಶನ್‌

ಬಯಲಾಗಿಲ್ಲ ಮಹಾರಾಷ್ಟ್ರ ಸಿಎಂ ಯಾರೆಂಬ ಚಿದಂಬರ ರಹಸ್ಯ, ಪುತ್ರ ಶ್ರೀಕಾಂತ್ ರಾಜಕೀಯ ಭವಿಷ್ಯದ ಕಾರಣ ಏಕನಾಥ್ ಶಿಂಧೆ ಫುಲ್ ಟೆನ್ಶನ್‌

Umesh Kumar S HT Kannada

Dec 02, 2024 01:26 PM IST

google News

ಮಹಾರಾಷ್ಟ್ರ ಸಿಎಂ ಯಾರೆಂಬ ಚಿದಂಬರ ರಹಸ್ಯ ಬಯಲಾಗಿಲ್ಲ. ಪುತ್ರ ಶ್ರೀಕಾಂತ್ ರಾಜಕೀಯ ಭವಿಷ್ಯದ ಕಾರಣ, ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಫುಲ್ ಟೆನ್ಶನ್‌ನಲ್ಲಿರುವಂತೆ ಕಂಡುಬಂದಿರುವುದಾಗಿ ವರದಿ ಹೇಳಿದೆ. (ಕಡತ ಚಿತ್ರ).

  • Maharashtra CM: ಮಹಾರಾಷ್ಟ್ರದಲ್ಲಿ ಹೊಸ ಮುಖ್ಯಮಂತ್ರಿ, ಹೊಸ ಸಚಿವ ಸಂಪುಟ ಡಿಸೆಂಬರ್ 5 ರಂದು ಪ್ರಮಾಣ ಸ್ವೀಕರಿಸಲಿದೆ ಎಂಬ ಸುದ್ದಿ ಇದೆ. ಆದಾಗ್ಯೂ, ಮಹಾರಾಷ್ಟ್ರ ಸಿಎಂ ಯಾರೆಂಬ ಚಿದಂಬರ ರಹಸ್ಯ ಬಯಲಾಗಿಲ್ಲ. ಏಕನಾಥ್ ಶಿಂಧೆ ಅವರಿಗೆ ಪುತ್ರ ಶ್ರೀಕಾಂತ್ ಶಿಂಧೆಯ ರಾಜಕೀಯ ಭವಿಷ್ಯದ್ದೂ ಚಿಂತೆ ಕಾಡಿದೆ.

ಮಹಾರಾಷ್ಟ್ರ ಸಿಎಂ ಯಾರೆಂಬ ಚಿದಂಬರ ರಹಸ್ಯ ಬಯಲಾಗಿಲ್ಲ. ಪುತ್ರ ಶ್ರೀಕಾಂತ್ ರಾಜಕೀಯ ಭವಿಷ್ಯದ ಕಾರಣ, ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಫುಲ್ ಟೆನ್ಶನ್‌ನಲ್ಲಿರುವಂತೆ ಕಂಡುಬಂದಿರುವುದಾಗಿ ವರದಿ ಹೇಳಿದೆ. (ಕಡತ ಚಿತ್ರ).
ಮಹಾರಾಷ್ಟ್ರ ಸಿಎಂ ಯಾರೆಂಬ ಚಿದಂಬರ ರಹಸ್ಯ ಬಯಲಾಗಿಲ್ಲ. ಪುತ್ರ ಶ್ರೀಕಾಂತ್ ರಾಜಕೀಯ ಭವಿಷ್ಯದ ಕಾರಣ, ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಫುಲ್ ಟೆನ್ಶನ್‌ನಲ್ಲಿರುವಂತೆ ಕಂಡುಬಂದಿರುವುದಾಗಿ ವರದಿ ಹೇಳಿದೆ. (ಕಡತ ಚಿತ್ರ).

Maharashtra CM: ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಯೊಳಗಿನ ರಾಜಕೀಯ ಬೆಳವಣಿಗೆ ದಿನೇದಿನೆ ಕುತೂಹಲ ಕೆರಳಿಸಿದೆ. ಮಹಾರಾಷ್ಟ್ರ ಸಿಎಂ ಯಾರು ಎಂಬ ಚಿದಂಬರ ರಹಸ್ಯ ಇನ್ನೂ ಬಯಲಾಗಿಲ್ಲ. ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸತಾರಾದಿಂದ ಹಿಂತಿರುಗಿದ್ದಾರೆ. ಇಂದು (ಡಿಸೆಂಬರ್ 2) ಅಜಿತ್ ಪವಾರ್, ದೇವೇಂದ್ರ ಫಡ್ನವಿಸ್ ಮತ್ತು ಏಕನಾಥ್ ಶಿಂಧೆ ಸಭೆ ನಡೆಯಲಿದೆ. ಇದಲ್ಲದೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಗ್ಗೆಯೂ ಪ್ರಸ್ತಾಪಿಸಲಾಗಿದ್ದು, ಆ ಬಳಿಕ ಮಹಾರಾಷ್ಟ್ರ ಸಿಎಂ ಯಾರಾಗಬೇಕೆಂಬುದನ್ನು ನಿರ್ಧರಿಸಲಾಗುವುದು. ಏಕನಾಥ್ ಶಿಂಧೆ ಅವರ ಕೋಪ ಮುಂದುವರೆದಿದೆ ಎಂದು ಮೂಲಗಳು ತಿಳಿಸಿದ್ದಾಗಿ ಲೈವ್ ಹಿಂದೂಸ್ತಾನ್ ವರದಿ ಮಾಡಿದೆ. ಆದರೆ ಸತಾರಾದಿಂದ ಹಿಂದಿರುಗಿದ ನಂತರ ಅವರು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಒಪ್ಪಿಕೊಳ್ಳುವುದಾಗಿ ಹೇಳಿರುವುದು ಗಮನಸೆಳೆದಿದೆ. ಹೀಗಿರುವಾಗ ಹೊಸ ಸರ್ಕಾರದಲ್ಲಿ ಏಕನಾಥ್ ಶಿಂಧೆ ಅವರಿಗೆ ಯಾವ ಜವಾಬ್ದಾರಿ ಸಿಗಲಿದೆ ಎಂಬ ಊಹಾಪೋಹಗಳು ಎದ್ದಿವೆ. ಮುಖ್ಯಮಂತ್ರಿಯಾಗಿದ್ದ ಕಾರಣ ಉಪ ಮುಖ್ಯಮಂತ್ರಿಯಾಗುವ ಇರಾದೆ ಅವರಿಗೆ ಇಲ್ಲ ಎಂದು ಸ್ವತಃ ಶಿವಸೇನೆ ನಾಯಕರೇ ಹೇಳಿದ್ದಾರೆ.

ಶ್ರೀಕಾಂತ್ ಶಿಂಧೆ ಉಪ ಮುಖ್ಯಮಂತ್ರಿ ಆಗ್ತಾರಾ; ಪುತ್ರನ ರಾಜಕೀಯ ಭವಿಷ್ಯದ ಬಗ್ಗೆ ಏಕನಾಥ್‌ ಶಿಂಧೆ ಚಿಂತೆ

ಸದ್ಯ ಲೋಕಸಭೆ ಸದಸ್ಯರಾಗಿರುವ ಅವರ ಪುತ್ರ ಶ್ರೀಕಾಂತ್ ಶಿಂಧೆ ರಾಜ್ಯದ ಉಪಮುಖ್ಯಮಂತ್ರಿಯಾಗುತ್ತಾರಾ ಎಂಬ ಚರ್ಚೆ ತೀವ್ರಗೊಂಡಿದೆ. ಭಾನುವಾರ (ಡಿಸೆಂಬರ್ 1) ಏಕನಾಥ್ ಶಿಂಧೆ ಅವರಿಗೂ ಈ ಕುರಿತು ಪ್ರಶ್ನೆ ಕೇಳಿದಾಗ ಅವರು ಬಹಿರಂಗವಾಗಿ ಏನನ್ನೂ ಹೇಳದೆ ಊಹಾಪೋಹಗಳೆಲ್ಲ ಪತ್ರಕರ್ತರು ಸೃಷ್ಟಿಸಿದ್ದು ಎಂದು ಹೇಳಿದ್ದಾರೆ. ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ, ಸಭೆ ನಡೆಸಿ ಚರ್ಚೆ ನಡೆಸಿ ಎಲ್ಲವನ್ನೂ ಬಗೆಹರಿಸಲಾಗುವುದು. ಗೃಹ ಸಚಿವ ಸ್ಥಾನ ಬೇಕು ಎಂಬ ಬೇಡಿಕೆ ಇರಿಸಿದ್ದಾರಾ ಎಂಬುದು ಕೂಡ ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಇನ್ನೂ ಸಾಧ್ಯವಾದಂತಿಲ್ಲ ಎಂದು ವರದಿ ಹೇಳಿದೆ.

ಮುಖ್ಯಮಂತ್ರಿಯಾಗಿದ್ದ ಕಾರಣ ಮತ್ತೆ ಉಪ ಮುಖ್ಯಮಂತ್ರಿಯಾಗುವ ಮನಸ್ಸು ಏಕನಾಥ್ ಶಿಂಧೆ ಅವರಿಗಿಲ್ಲ ಎಂಬ ಮಾತು ಕೇಳಿ ಬಂದಿದೆ. ಹೀಗಾಗಿ, ಶಿವಸೇನಾದಲ್ಲಿ ಯಾರು ಉಪಮುಖ್ಯಮಂತ್ರಿ ಆಗುತ್ತಾರೆ ಎಂಬ ಚರ್ಚೆ ತೀವ್ರಗೊಂಡಿದೆ. ಅವರು ಗೃಹ ಸಚಿವರಾಗಿ ಸಚಿವ ಸಂಪುಟದಲ್ಲಿ ಮಹತ್ವದ ಸ್ಥಾನ ಹೊಂದುವ ಕಡೆಗೆ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ, ಅವರ ಪುತ್ರ ಶ್ರೀಕಾಂತ್ ಶಿಂಧೆ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎನ್ನುವ ಆಲೋಚನೆಯೂ ಏಕನಾಥ್ ಶಿಂಧೆ ಅವರಲ್ಲಿದ್ದರೂ ಅದು ಪುತ್ರನ ರಾಜಕೀಯ ಭವಿಷ್ಯ ಮೊಟಕುಗೊಳಿಸಬಹುದು ಎಂಬ ಆತಂಕವೂ ಅವರನ್ನು ಕಾಡಿದೆ ಎಂದು ಅವರ ಆಪ್ತ ಮೂಲಗಳು ಹೇಳಿರುವುದಾಗಿ ವರದಿ ವಿವರಿಸಿದೆ.

ಶ್ರೀಕಾಂತ್ ಶಿಂಧೆ ಉಪ ಮುಖ್ಯಮಂತ್ರಿಯಾದರೆ ಉದ್ಧವ್ ಠಾಕ್ರೆ ರೀತಿ ಅಪವಾದದ ಆತಂಕ

ಒಂದೊಮ್ಮೆ ಶ್ರೀಕಾಂತ್ ಶಿಂಧೆ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಎಂದರೆ, ಆಗ ಈ ಹಿಂದೆ ಉದ್ಧವ್ ಠಾಕ್ರೆ ಅವರು ಎದುರಿಸಿದ ಅದೇ ಆರೋಪವನ್ನು ತಾನೂ ಎದುರಿಸಬೇಕಾಗಬಹುದು ಎಂಬ ಆತಂಕವೂ ಏಕನಾಥ್ ಶಿಂಧೆ ಅವರನ್ನು ಕಾಡಿದೆ. ಬಿಜೆಪಿಯೂ ಇಂತಹ ಬೇಡಿಕೆಗಳಿಗೆ ಸ್ಪಂದಿಸುವುದೆಂಬ ನಿರೀಕ್ಷೆ ಇಲ್ಲ. 2022ರಲ್ಲಿ ಶಿವಸೇನೆಯೊಳಗೆ ಬಂಡಾಯವೆದ್ದ ಏಕನಾಥ್ ಶಿಂಧೆ, ಉದ್ಧವ್ ಠಾಕ್ರೆ ಅವರು ತಮ್ಮ ಮಗನ ರಾಜಕೀಯ ಭವಿಷ್ಯ ಭದ್ರಪಡಿಸಲು ಹಾತೊರೆಯುತ್ತಿದ್ದಾರೆ. ಪಕ್ಷ ಹಿತವನ್ನು ಕಡೆಗಣಿಸುತ್ತಿದ್ಧಾರೆ ಎಂದು ಆರೋಪಿಸಿದ್ದುರ. ಈಗ ಅದನ್ನೇ ತಾನು ಮಾಡಿದರೆ, ತನ್ನ ಮೇಲೂ ಅಂಥದ್ದೇ ಅಪವಾದ ಬರಬಹುದು ಎಂಬುದು ಸ್ಪಷ್ಟ ಎಂದು ರಾಜಕೀಯ ಚಿಂತಕರು ಹೇಳಿದ್ದಾಗಿ ವರದಿ ಹೇಳಿದೆ.

ಇಂತಹ ಸನ್ನಿವೇಶದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಸ್ಥಾನವನ್ನು ಶಿವಸೇನಾದ ಆಪ್ತ ನಾಯಕರಿಗೆ ನೀಡಿ ಏಕನಾಥ್ ಶಿಂಧೆ ತಾನು ಪವರ್‌ಫುಲ್ ಸಚಿವರಾಗಿ ಸಚಿವ ಸಂಪುಟ ಸೇರುವ ಸಾಧ್ಯತೆ ದಟ್ಟವಾಗಿದೆ. ಗೃಹ ಖಾತೆಯಲ್ಲದೆ, ಹಣಕಾಸು, ನಗರಾಭಿವೃದ್ಧಿ, ಕೈಗಾರಿಕೆ, ಕೃಷಿ ಖಾತೆ ಬೇಕು ಎಂದು ಶಿವಸೇನಾ ಹೇಳುತ್ತಿದೆ ಎಂದು ವರದಿ ವಿವರಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ