ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿ ಯಾರು; ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್ ಉತ್ತರ ಹೀಗಿತ್ತು
Nov 23, 2024 08:37 PM IST
ಮಹಾರಾಷ್ಟ್ರ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಈ ರೀತಿ ಕಾಣಿಸಿಕೊಂಡಿದ್ದರು. ಅವರ ನಡುವಿನ ಹೊಂದಾಣಿಕೆ ಸ್ಪಷ್ಟವಾಗಿದ್ದು, ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್ ನೀಡಿದ ಉತ್ತರ ಅದನ್ನು ಬಿಂಬಿಸಿತ್ತು.
Maharashtra Election Results: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಯಿತು. ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕಾರಿ ಪ್ರಶ್ನೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉತ್ತರ ಹೀಗಿತ್ತು ನೋಡಿ.
Maharashtra Election Results: ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಶಿವಸೇನೆ ಮತ್ತು ಎನ್‌ಸಿಪಿ ಮೈತ್ರಿಕೂಟವು ಭರ್ಜರಿ ಗೆಲುವಿನ ಹಾದಿಯಲ್ಲಿರುವಾಗ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಉಪ ದೇವೇಂದ್ರ ಫಡ್ನವಿಸ್ ಎಲ್ಲರನ್ನೂ ಕಾಡುತ್ತಿದ್ದ “ಮಹಾರಾಷ್ಟ್ರದ ಮುಂದಿನ ಸಿಎಂ ಯಾರು” ಎಂಬ ದೊಡ್ಡ ಪ್ರಶ್ನೆಗೆ ಉತ್ತರಿಸಿದರು. ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಇನ್ನೂ ಪೂರ್ತಿಯಾಗಿ ಪ್ರಕಟವಾಗಿಲ್ಲ. ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಬಿಜೆಪಿ 118ರಲ್ಲಿ ಗೆಲುವು ದಾಖಲಿಸಿದ್ದು, 14ರಲ್ಲಿ ಮುನ್ನಡೆಯಲ್ಲಿದೆ. ಶಿವಸೇನಾ 52ರಲ್ಲಿ ಗೆಲುವು ದಾಖಲಿಸಿ, 5ರಲ್ಲಿ ಮುನ್ನಡೆ ಹೊಂದಿದೆ. ಎನ್‌ಸಿಪಿ 39ರಲ್ಲಿ ಗೆಲುವು ದಾಖಲಿಸಿದ್ದು, 2ರಲ್ಲಿ ಮುನ್ನಡೆಯಲ್ಲಿದೆ. ಒಟ್ಟು ಮಹಾಯುತಿ ಮೈತ್ರಿಯಲ್ಲಿ ಈ ಮೂರು ಪಕ್ಷಗಳು 230 ಸ್ಥಾನಗಳನ್ನು ಖಾತ್ರಿ ಮಾಡಿಕೊಂಡಿವೆ. 288 ಸ್ಥಾನಗಳ ವಿಧಾನಸಭೆಯಲ್ಲಿ ಆಡಳಿತ ನಡೆಸುವುದಕ್ಕೆ ಸರಳ ಬಹುಮತ 145 ಸ್ಥಾನಗಳ ಗೆಲುವು. ಇದು ಭರ್ಜರಿ ಗೆಲುವು ಆಗಿದ್ದು, ಬಿಜೆಪಿಗೆ ಹೆಚ್ಚು ಸ್ಥಾನಗಳು ಸಿಕ್ಕಿವೆ. ಸಹಜವಾಗಿಯೆ ಎಲ್ಲರ ನೋಟವೂ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮೇಲೆ ಕಡೆಗೆ ಹೊರಳಿದೆ.
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರು
ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ಎಂದೂ ಕರೆಯಲ್ಪಡುವ ಎನ್‌ಡಿಎ, ಆರಂಭಿಕ ಟ್ರೆಂಡ್‌ನಲ್ಲೇ ಬಹುಮತದ ಮಾರ್ಕ್ ಅನ್ನು ಖಾತರಿಪಡಿಸಿತ್ತು. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾದ ಸ್ವಲ್ಪ ಹೊತ್ತಿನಲ್ಲೇ ಅದರ ಪ್ರತಿಸ್ಪರ್ಧಿ ಮಹಾ ವಿಕಾಸ್ ಅಘಾಡಿಗಿಂತ ಹೆಚ್ಚಿನ ಮುನ್ನಡೆ ಸಾಧಿಸಿತು. ಕ್ರಮವಾಗಿ ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಮತ್ತು ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ಒಡೆದ ಬಣಗಳನ್ನು ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಭಾರಿ ಮುಖಭಂಗ ಅನುಭವಿಸಿದೆ. ಪ್ರಸ್ತುತ ( ನವೆಂಬರ್ 23ರ ರಾತ್ರಿ 8.30ಕ್ಕೆ) ಈ ಮೂರು ಪಕ್ಷಗಳ ಸ್ಥಾನ 46ರ ಆಸುಪಾಸಿನಲ್ಲಿದೆ.
ಮಹಾಯುತಿ ಮೈತ್ರಿಯ ಅಮೋಘ ಗೆಲುವು ಮತ್ತು ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸಿಎಂ ಮತ್ತು ಶಿವಸೇನೆ ನಾಯಕ ಏಕನಾಥ್ ಶಿಂಧೆ, “ಅಂತಿಮ ಫಲಿತಾಂಶ ಬರಲಿ.. ನಂತರ ಅದೇ ರೀತಿಯಲ್ಲಿ ನಾವು ಒಟ್ಟಾಗಿ ಚುನಾವಣೆ ಎದುರಿಸಿದ್ದೇವೆ, ಮೂರೂ ಪಕ್ಷಗಳು ಒಟ್ಟಿಗೆ ಕುಳಿತು ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇ ಪ್ರಶ್ನೆಯನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ಕೇಳಲಾಗಿತ್ತು. ಅದಕ್ಕೆ ಅವರು ಪ್ರತಿಕ್ರಿಯಿಸಿದ್ದು ಹೀಗೆ-
''ಸಿಎಂ ಆಯ್ಕೆ ವಿಚಾರದಲ್ಲಿ ನಮ್ಮೊಳಗೆ ಯಾವುದೇ ತಕರಾರು ಇಲ್ಲ, ಚುನಾವಣೆ ಫಲಿತಾಂಶ ಬಂದ ನಂತರ ಮೂರೂ ಪಕ್ಷಗಳ ಮುಖಂಡರು ಒಟ್ಟಾಗಿ ಕುಳಿತು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಫಲಿತಾಂಶ ಪ್ರಕಟವಾದ ಮಾರನೇ ದಿನವೇ ಈ ವಿಚಾರ ತೀರ್ಮಾನವಾಗಲಿದೆ. ಮೂರು ಪಕ್ಷದ ನಾಯಕರು ಒಟ್ಟು ಸೇರಿ ತೆಗೆದುಕೊಳ್ಳುವ ನಿರ್ಧಾರ ಎಲ್ಲರಿಗೂ ಒಪ್ಪಿಗೆಯಾಗಲಿದೆ. ಯಾವುದೇ ತಕರಾರು ಇರಲ್ಲ" ಎಂದು ದೇವೇಂದ್ರ ಫಡ್ನವಿಸ್ ಸ್ಪಷ್ಟಪಡಿಸಿದರು.
ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಅವರ ಪಕ್ಷವನ್ನು ಒಳಗೊಂಡಿದೆ.
ಮತದಾನದ ಬಳಿಕ ಶುಕ್ರವಾರ ಶಿವಸೇನೆ ಶಾಸಕ ಮತ್ತು ಪಕ್ಷದ ವಕ್ತಾರ ಸಂಜಯ್ ಶಿರ್ಸಾತ್ ಅವರು, "ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನೇತೃತ್ವದಲ್ಲೇ ವಿಧಾನಸಭಾ ಚುನಾವಣೆಯನ್ನು ಎದುರಿಸಲಾಯಿತು. ಮತದಾರರು ಮತದಾನದ ಮೂಲಕ ಶಿಂಧೆಗೆ ತಮ್ಮ ಒಲವನ್ನು ತೋರಿಸಿದ್ದಾರೆ. ಶಿಂಧೆ (ಮುಂದಿನ ಸಿಎಂ ಆಗುವುದು) ಅವರ ಹಕ್ಕು ಎಂದು ನಾನು ಭಾವಿಸುತ್ತೇನೆ. ಅವರು ಮುಂದಿನ ಸಿಎಂ ಆಗುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು. ಏತನ್ಮಧ್ಯೆ ಬಿಜೆಪಿ ನಾಯಕ ಪ್ರವೀಣ್ ದಾರೆಕರ್ ಅವರು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ.