ಡಿಸಿ ಅಪ್ಪನ ಫ್ರೆಂಡು, ನಮ್ ಹತ್ರ ತುಂಬಾ ದುಡ್ಡಿದೆ; ಲೇಟಾಗಿ ಬಂದು, ಕ್ಲಾಸ್‌ನಲ್ಲೇ ಪ್ರೊಫೆಸರ್‌ಗೆ ಬೈದ ವಿದ್ಯಾರ್ಥಿಗೆ ಜಾಡಿಸಿದ ನೆಟ್ಟಿಗರು
Sep 29, 2024 07:12 PM IST
ಡಿಸಿ ಅಪ್ಪನ ಫ್ರೆಂಡು, ನಮ್ ಹತ್ರ ತುಂಬಾ ದುಡ್ಡಿದೆ; ಲೇಟಾಗಿ ಬಂದು, ಕ್ಲಾಸ್‌ನಲ್ಲೇ ಪ್ರೊಫೆಸರ್‌ಗೆ ಬೈದ ವಿದ್ಯಾರ್ಥಿಗೆ ಜಾಡಿಸಿದ ನೆಟ್ಟಿಗರು
- Mohanlal Sukhadia University: ರಾಜಸ್ಥಾನದ ವಿದ್ಯಾರ್ಥಿಯೊಬ್ಬ ಕ್ಲಾಸ್ಗೆ 40 ನಿಮಿಷ ತಡವಾಗಿ ಬಂದು ಮಹಿಳಾ ಪ್ರೊಫೆಸರ್‌ಗೆ ಅವಾಜ್ ಹಾಕಿದ ವಿಡಿಯೋ ವೈರಲ್ ಆಗಿದೆ. ತನ್ನ ತಂದೆಯ ಸಂಪತ್ತಿನ ಬಗ್ಗೆ ಹೆಮ್ಮೆಪಡುತ್ತಾ ದುರಹಂಕಾರ ಮೆರೆದಿದ್ದಾನೆ.
Viral Video: ನಮ್ಮ ಸಮಾಜದಲ್ಲಿ ತಂದೆ-ತಾಯಿಗಿರುವಷ್ಟೆ ಗೌರವವನ್ನು ಗುರುವಿಗೂ ನೀಡುತ್ತೇವೆ. ಹೆತ್ತವರು ವ್ಯಕ್ತಿಯನ್ನು ರೂಪಿಸಿದರೆ, ಗುರು ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಆದರೆ ಇಲ್ಲೊಬ್ಬ ಎಂಬಿಎ ವಿದ್ಯಾರ್ಥಿ ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾನೆ. ಕ್ಲಾಸ್ಗೆ ಲೇಟ್ ಆಗಿ ಬಂದಿದ್ದಲ್ಲದೆ ಶಿಕ್ಷಕರಿಗೇ ಮನಬಂದಂತೆ ಬೈದಿದ್ದಾನೆ. ಅವಾಜ್ ಹಾಕಿ ಬೆದರಿಸಿದ್ದಾನೆ. ರಾಜಸ್ಥಾನದ ಉದಯಪುರದ ಮೋಹನ್ಲಾಲ್ ಸುಖಾಡಿಯಾ ವಿಶ್ವವಿದ್ಯಾಲಯದ ಎಫ್ಎಂಎಸ್ ಕಾಲೇಜಿನಲ್ಲಿ ಘಟನೆ ನಡೆದಿದೆ. ಶಿಕ್ಷಕರಿಗೆ ಅವಾಜ್ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ವಿದ್ಯಾರ್ಥಿ ವರ್ತನೆಗೆ ಕಿಡಿಕಾರಿದ್ದು, ಈತನಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ವರದಿಗಳ ಪ್ರಕಾರ, ವಿದ್ಯಾರ್ಥಿಯನ್ನು ಕೈಫ್ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ತನ್ನ ಇ-ಕಾಮರ್ಸ್ ತರಗತಿಗೆ 40 ನಿಮಿಷ ತಡವಾಗಿ ಬಂದ. ಆದರೆ, ಪ್ರೊಫೆಸರ್ನನ್ನು ಲೆಕ್ಕಿಸದೆ ಕ್ಲಾಸ್ನಲ್ಲಿ ಕೂರಲು ಹೋದನು. ಈ ವೇಳೆ ಪ್ರೊಫೆಸರ್, ಪ್ರಶ್ನಿಸಿದರು. ಇದೇನಾ ಶಿಸ್ತು? ಕ್ಲಾಸ್ ಬಿಟ್ಟು ಹೋಗುವಂತೆ ಹೇಳಿದರು. ಆದರೆ ವಿದ್ಯಾರ್ಥಿ, ಮಹಿಳಾ ಪ್ರೊಫೆಸರ್ ಮೇಲೆ ಕೋಪದಿಂದ ಅರಚಿ ಬೆದರಿಸಿದ್ದಾನೆ. ತಂದೆಯ ಆರ್ಥಿಕ ಬಲದಿಂದ ಜಂಬಕೊಚ್ಚಿಕೊಂಡ ವಿದ್ಯಾರ್ಥಿ ಅಹಂಕಾರ ಪ್ರದರ್ಶಿಸಿದ. ನನ್ನು ತಂದೆ ಇಂತಹ ಇನ್ನೂ ನಾಲ್ಕು ಕಾಲೇಜುಗಳನ್ನು ನಿರ್ಮಿಸುತ್ತಾರೆ ಎಂದಿದ್ದಾನೆ. ತನ್ನ ತಂದೆಯ ಆರ್ಥಿಕ ಪ್ರಭಾವದ ಕುರಿತು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದದ್ದು ಆತನ ದುರಂಹಕಾರವನ್ನು ಎತ್ತಿ ತೋರಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ನನ್ನ ಅಪ್ಪನಿಗೆ ಕಲೆಕ್ಟರ್ ಗೊತ್ತು. ತನ್ನ ತಂದೆ ಕಲೆಕ್ಟರ್ನೊಂದಿಗೆ ಕುಳಿತುಕೊಳ್ತಾರೆ ಎಂದು ಅವಾಜ್ ಹಾಕಿದ್ದಾನೆ. ಕಲೆಕ್ಟರ್ ಮತ್ತು ನನ್ನ ಅಪ್ಪ ಉತ್ತಮ ಸ್ನೇಹಿತರು. ನಮ್ಮತ್ರ ತುಂಬಾ ದುಡ್ಡಿದೆ. ನೀನು ನನಗೆ ಶಿಸ್ತಿನ ಪಾಠ ಕಲಿಸಲು ಬರಬೇಡ ಎಂದು ಹೇಳಿದ್ದಾನೆ. ಅಲ್ಲದೆ, ಕ್ಲಾಸ್ನಿಂದ ಹೊರಹೋಗಲು ಅಷ್ಟೇ ನಾಟಕೀಯವಾಗಿತ್ತು. ಕ್ಲಾಸ್ ಬಿಟ್ಟು ಹೋಗುವಾಗ ಕ್ಲಾಸ್‌ನಲ್ಲೇ ಎಂಜಲು ಉಗುಳಿದ್ದಾನೆ. ಇದು ಎಲ್ಲರನ್ನೂ ಅಚ್ಚರಿ ಮೂಡಿಸಿತು. ಮಹಿಳಾ ಪ್ರೊಫೆಸರ್ ಅವರ ಮಾತಿಗೆ ಅವಾಜ್ ಹಾಕುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಆತನ ಜನ್ಮ ಜಾಲಾಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಎಫ್ಎಂಎಸ್ ಕಾಲೇಜಿನ ನಿರ್ದೇಶಕಿ ಡಾ ಮೀರಾ ಮಾಥುರ್ ಅವರು ವಿದ್ಯಾರ್ಥಿಯ ವಿರುದ್ಧ ಪ್ರತಾಪ್ ನಗರ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ್ದಾರೆ.
ಕ್ಲಿಪ್ ಇಲ್ಲಿದೆ ನೋಡಿ
ನೆಟ್ಟಿಗರು ಗರಂ
ನೆಟ್ಟಿಗರು ವಿದ್ಯಾರ್ಥಿಯನ್ನು ಹಿಗ್ಗಾಮುಗ್ಗಾ ಜಾಡಿಸಿದ್ದು, 'ಹಣ ಬಲದಿಂದ ನೀನು ನಡವಳಿಕೆಯನ್ನು ಖರೀದಿಸೋಕೆ ಸಾಧ್ಯವಿಲ್ಲ. ಇಂದಿನ ಯುವಕರಿಗೆ ಏನಾಗ್ತಿದೆ? ಯಾಕ್ ಹೀಗೆ ಆಡ್ತಿದ್ದಾರೆ. ಇಂತಹವರನ್ನು ಕಾಲೇಜಿನಿಂದ ಹೊರಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಈತನ ತಪ್ಪಲ್ಲ, ಮನೆಯ ಅಪ್ಪ-ಅಮ್ಮನದ್ದು. ಹುಟ್ಟಿನಿಂದಲೇ ಮಕ್ಕಳಿಗೆ ಗೌರವನ್ನು ಕಲಿಸಬೇಕಿತ್ತು. ನಯ-ವಿನಯ ಕಲಿಸಬೇಕಿತ್ತು ಎಂದು ಅವರ ಪೋಷಕರಿಗೂ ತರಾಟೆ ತೆಗೆದುಕೊಂಡಿದ್ದಾರೆ. ಸಂಪತ್ತಿನ ಅಹಂನಿಂದ ಸಭ್ಯತೆಯನ್ನು ಮರೆಯಬಾರದು ಎಂದು ಕೆಲವರು ಹೇಳಿದರೆ, ಶಿಕ್ಷಣ ಸಂಸ್ಥೆಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಇಂತಹವರಿಗೆ ಶಿಕ್ಷೆ ನೀಡಬೇಕು ಎಂದು ಕೇಳಿದ್ದಾರೆ.