Census Report: ಶೀಘ್ರವೇ ಜಾತಿಗಣತಿ ವರದಿ ಜಾರಿ ಮಾಡಿಯೇ ತೀರುತ್ತೇನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಶಪಥ-mysuru news i will implement karnataka caste census report soon says chief minister siddaramaiah prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Census Report: ಶೀಘ್ರವೇ ಜಾತಿಗಣತಿ ವರದಿ ಜಾರಿ ಮಾಡಿಯೇ ತೀರುತ್ತೇನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಶಪಥ

Census Report: ಶೀಘ್ರವೇ ಜಾತಿಗಣತಿ ವರದಿ ಜಾರಿ ಮಾಡಿಯೇ ತೀರುತ್ತೇನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಶಪಥ

CM Siddaramaiah: ಸಚಿವ ಸಂಪುಟದ ಮುಂದಿರಿಸಿ ಸಾಮಾಜಿಕ ಗಣತಿ (ಜಾತಿ ಗಣತಿ) ವರದಿ ಜಾರಿ ಮಾಡಲು ಕ್ರಮ ಕೈಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಸೌಲಭ್ಯಗಳಿಂದ ವಂಚಿತರಾದವರನ್ನು ಗುರುತಿಸುವ ಉದ್ದೇಶದಿಂದ ನಮ್ಮ ಸರ್ಕಾರ ಸಾಮಾಜಿಕ ಗಣತಿಯನ್ನು ನಡೆಸಿದ್ದು, ಶೀಘ್ರದಲ್ಲೇ ಈ ವರದಿಯನ್ನು ಸಚಿವ ಸಂಪುಟದ ಮುಂದಿರಿಸುತ್ತೇನೆ. ಅದರ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸೆಪ್ಟೆಂಬರ್​ 29ರ ಭಾನುವಾರ ಮೈಸೂರಿನಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯಗಳ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಆದರೆ ಹಲವು ಕಾರಣಗಳಿಂದ ಆ ವರದಿ ಇನ್ನೂ ಜಾರಿ ಮಾಡಿಲ್ಲ. ಆದರೆ, ಮುಂದಿನ ದಿನಗಳಲ್ಲಿ ವರದಿಯನ್ನು ಸಚಿವ ಸಂಪುಟದ ಮುಂದಿರಿಸಿ ಜಾರಿಗೆ ಕ್ರಮಕೈಗೊಳ್ಳಲಾಗುವುದು. ಜಾತಿ ಜನಗಣತಿ ಕಾಂಗ್ರೆಸ್‌ ಪಕ್ಷದ ಸಿದ್ದಾಂತವೂ ಆಗಿದೆ. ದೇಶದಲ್ಲಿ ಜನಸಂಖ್ಯೆಯ ಗಣತಿಯೊಂದಿಗೆ ಜಾತಿ ಗಣತಿ ಕಾರ್ಯ 1930ರ ನಂತರ ಆಗಿಲ್ಲ. ಈಗ ಎಲ್ಲಾ ರಾಜ್ಯಗಳಲ್ಲಿ ಜಾತಿ ಗಣತಿ ಕುರಿತು ಚರ್ಚೆ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.

1977 ವಿದ್ಯಾರ್ಥಿ ನಿಲಯಗಳು ಪ್ರಾರಂಭ

ನಮ್ಮ ಸಂವಿಧಾನ ಜಾರಿಯಾಗುವ ಮೊದಲೇ ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಗಿತ್ತು. 1960 ರಲ್ಲಿ ನಾಗೇಗೌಡ ಸಮಿತಿ ರಚನೆಯಾಯಿತು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವನೂರು ಆಯೋಗ ರಚಿಸಲಾಯಿತು. ವರದಿಗೆ ವಿರೋಧದ ನಡುವೆಯೂ ಜಾರಿಗೆ ತರಲಾಯಿತು. 1977 ರಲ್ಲಿ ಹಿಂದುಳಿದ ವರ್ಗಗಳ ಮಕ್ಕಳಿಗೆ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿನಿಲಯಗಳಲ್ಲಿ ಶೇ.75 ರಷ್ಟು ಹಿಂದುಳಿದ ಜಾತಿಗಳ ಮಕ್ಕಳಿದ್ದರೆ, ಶೇ.25 ರಷ್ಟು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಮಕ್ಕಳಿದ್ದಾರೆ. 1,87,000 ವಿದ್ಯಾರ್ಥಿಗಳು ಇಂದು ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ವಿದ್ಯಾರ್ಥಿ ದೆಸೆಯಲ್ಲಿನ ಸಂಕಷ್ಟಗಳನ್ನು ಸ್ಮರಿಸಿಕೊಂಡು ಸಿಎಂ

ನಾನು ಓದುವಾಗ ಮೀಸಲಾತಿ ವ್ಯವಸ್ಥೆ ಇಲ್ಲದಿದ್ದ ಕಾರಣ, ಉನ್ನತ ಶಿಕ್ಷಣಕ್ಕೆ ಅವಕಾಶ ದೊರಕಲಿಲ್ಲ. ಪಿಯುಸಿ, ಪದವಿ ಮಾಡುವ ಸಂದರ್ಭದಲ್ಲಿ ವಸತಿ ವ್ಯವಸ್ಥೆ ಇಲ್ಲದೇ, ನಾನೇ ಒಂದು ರೂಂ ಮಾಡಿಕೊಂಡು ಓದುತ್ತಿದ್ದೆ. ಆದ್ದರಿಂದ ವಿದ್ಯಾರ್ಥಿಗಳ ಕಷ್ಟಗಳ ಬಗ್ಗೆ ಅರಿತಿದ್ದ ನಾನು ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ತಿಳಿಸಿದ ಸಿಎಂ, ಕಾನೂನು ಪದವಿ ಓದಲು ತಾನು ಮಾಡಿದ ಸಂಘರ್ಷಗಳನ್ನೂ ವಿವರಿಸಿದ್ದಾರೆ.

ವಿದ್ಯಾರ್ಥಿ ವೇತನ ಹೆಚ್ಚಳ

ವಿದ್ಯಾರ್ಥಿ ನಿಲಯಗಳಲ್ಲಿ ಪೌಷ್ಟಿಕ ಆಹಾರ ದೊರಕಿಸುವ ಉದ್ದೇಶದಿಂದ ಪ್ರೀಮೆಟ್ರಿಕ್ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಹೆಚ್ಚಳ ಮಾಡಿದೆ. ಹೀಗೆ ಐದು ವರ್ಷವೂ ಕೂಡ ವಿದ್ಯಾರ್ಥಿ ವೇತನವನ್ನು ಹಂತ ಹಂತವಾಗಿ ಹೆಚ್ಚಿಸಲಾಗಿ, ಮುಂಚೆ ಇದ್ದ 750 ರೂಪಾಯಿ ವಿದ್ಯಾರ್ಥಿ ವೇತನವನ್ನು 1750 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಹಾಸ್ಟೆಲ್​ಗಳಲ್ಲಿರುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಲಭಿಸಿದಾಗ ಮಾತ್ರ ಉತ್ತಮ ಜ್ಞಾನಾರ್ಜನೆ ಮಾಡಲು ಸಾಧ್ಯ. 2024-25 ರಲ್ಲಿಯೂ ಕೂಡ ವಿದ್ಯಾರ್ಥಿ ವೇತನವನ್ನು 1850 ರೂಪಾಯಿಗಳಿಗೆ ಪುನಃ ಹೆಚ್ಚಿಸಲಾಗಿದೆ ಎಂದು ವಿವರಿಸಿದ್ದಾರೆ.

ಪ್ರತಿ ಹೋಬಳಿಗೊಂದು ವಸತಿ ಶಾಲೆ ಗುರಿ ಸಾಧಿಸಲು ಬದ್ಧ

ನಾನು ಹಣಕಾಸು ಮಂತ್ರಿಯಾಗಿದ್ದಾಗ, ದಲಿತ ಸಂಘರ್ಷ ಸಮಿತಿಯವರು ಸಾರಾಯಿ ಅಂಗಡಿ ಬೇಡ, ಮಕ್ಕಳಿಗೆ ವಸತಿ ಶಾಲೆ ನಿರ್ಮಾಣವಾಗಬೇಕೆಂಬ ಬೇಡಿಕೆಯನ್ನಾಧರಿಸಿ, 1994-95 ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಪ್ರಾರಂಭಿಸಲಾಯಿತು. ಹೋಬಳಿಗೊಂದು ವಸತಿ ಶಾಲೆ ಯೋಜನೆಯಂತೆ ರಾಜ್ಯದಲ್ಲಿ ಒಟ್ಟು 822 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ಈ ವರ್ಷ 20 ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಹಳ್ಳಿಗಾಡಿನ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಮುಂದಿನ ವರ್ಷದೊಳಗೆ ಉಳಿದೆಲ್ಲ ಹೋಬಳಿಗಳಲ್ಲೂ ರಾಜ್ಯದ ಪ್ರತಿ ಹೋಬಳಿಯಲ್ಲಿ ಒಂದು ವಸತಿ ಶಾಲೆ ನಿರ್ಮಿಸುವ ಗುರಿಯನ್ನು ಸಾಧಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ 10ನೆ ತರಗತಿಯಲ್ಲಿ ಓದುವ ಮಕ್ಕಳಿಗೆ ವಾರಕ್ಕೆ 6 ದಿನ ಮೊಟ್ಟೆ ನೀಡಲಾಗುತ್ತಿದೆ. ಅನ್ನಭಾಗ್ಯದಡಿ 5 ಕೆಜಿ ಅಕ್ಕಿ, ಕ್ಷೀರಭಾಗ್ಯ ಕಾರ್ಯಕ್ರಮ, ಬಡಮಕ್ಕಳಿಗೆ ಶೂ ಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆ ಜಾರಿಗೆ ತರಲಾಗಿದೆ ಎಂದರು.

mysore-dasara_Entry_Point