Assembly elecitons2023: ಮಧ್ಯಪ್ರದೇಶ, ಛತ್ತೀಸಗಡ ವಿಧಾನಸಭೆ ಚುನಾವಣೆ ಮತದಾನ ಶುರು: ಸದ್ಯಕ್ಕೆ ಶಾಂತಿಯುತ
Nov 17, 2023 09:38 AM IST
ವಿಧಾನಸಭೆ ಚುನಾವಣೆಗೆ ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತ ಮಹಿಳೆಯರು
- Assembly elections ಮಧ್ಯಪ್ರದೇಶ ಹಾಗೂ ಛತ್ತೀಸಗಡದ ವಿಧಾನಸಭೆ ಚುನಾವಣೆಗೆ ಶುಕ್ರವಾರ ಮತದಾನ ಶುರುವಾಗಿದೆ.
ಭೋಪಾಲ್/ ರಾಯಪುರ: ಮಧ್ಯಪ್ರದೇಶ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಗೆ ಶುಕ್ರವಾರ ಮತದಾನ ಶುರುವಾಯಿತು.
ಬೆಳಿಗ್ಗೆ 8ರಿಂದಲೇ ಮಧ್ಯಪ್ರದೇಶದ 230 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಹಾಗೂ ಛತ್ತೀಸಗಡದ 70 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಆರಂಭಗೊಂಡಿವೆ.
ಎರಡೂ ರಾಜ್ಯಗಳಲ್ಲಿ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದ್ದು. ಭದ್ರತೆ ನಡುವೆ ಮತದಾನ ಈವರೆಗೂ ಶಾಂತಿಯುತವಾಗಿತ್ತು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಸೇಹೋರ್‌ನಲ್ಲಿ ಪತ್ನಿ ಸಾಧನಾ ಸಿಂಗ್ ಜತೆಗೆ ಆಗಮಿಸಿ ಬೆಳಿಗ್ಗೆಯೇ ಮತದಾನ ಮಾಡಿದರು.
ಮಧ್ಯಪ್ರದೇಶದಲ್ಲಿ ಸವಾಲು
ಮಧ್ಯಪ್ರದೇಶದಲ್ಲಿ ಒಟ್ಟು 230 ವಿಧಾನಸಭೆ ಸ್ಥಾನಗಳಿಗೆ ಈಗ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಕಳೆದ ಬಾರಿ ಆಡಳಿತ ವಿರೋಧಿ ಅಲೆಯಲ್ಲಿ ಬಿಜೆಪಿ ಸೋಲು ಕಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ ಕಾಂಗ್ರೆಸ್‌ನ ಆಂತರಿಕ ಕಚ್ಚಾಟದ ಲಾಭ ಪಡೆದ ಬಿಜೆಪಿ ಅಧಿಕಾರ ಹಿಡಿದು ಶಿವರಾಜಸಿಂಗ್ ಚೌಹಾಣ್ ಮತ್ತೆ ಸಿಎಂ ಆಗಿದ್ದರು. ಈ ಬಾರಿಯೂ ಅವರು ಆಡಳಿತ ವಿರೋಧಿ ಅಲೆಯ ನಡುವೆಯೇ ಅಖಾಡಕ್ಕೆ ಧುಮುಕಿದ್ದಾರೆ. ಎರಡು ದಶಕದಿಂದ ಅಧಿಕಾರದಲ್ಲಿರುವ ಶಿವರಾಜಸಿಂಗ್ ಚೌಹಣ್ ಮೆದು ಮಾತಿನ ನಾಯಕ. ಅವರನ್ನು ಮಾಮಾ ಎಂದೇ ,ಮಧ್ಯಪ್ರದೇಶದಲ್ಲಿ ಕರೆಯಲಾಗುತ್ತದೆ. ಈ ಬಾರಿ ಶಿವರಾಜಸಿಂಗ್ ಚೌಹಾಣ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸದೇ ಖುದ್ದು ಪ್ರಧಾನಿ ಮೋದಿ ಅವರೇ ಹಲವು ಕಡೆ ಚುನಾವಣಾ ಪ್ರಚಾರ ನಡೆಸಿದ್ದರು.
ಈ ಬಾರಿ ಸೋಲುವ ಆತಂಕದಲ್ಲಿರುವ ಬಿಜೆಪಿ ಕೇಂದರದ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪ್ರಲ್ಹಾದ್ ಪಟೇಲ್, ಫಗ್ಗನ್ ಸಿಂಗ್ ಖುಲಸ್ತೆ ಸಹಿತ ಏಳು ಸಂಸದರಿಗೆ ಟಿಕೆಟ್ ನೀಡಿದೆ. ತೋಮರ್ ಅವರ ಮೇಲೂ ಪಕ್ಷ ನೆಚ್ಚಿಕೊಂಡಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಕೇಂದ್ರದಲ್ಲಿ ಮಂತ್ರಿಯಾಗಿರು ಜ್ಯೋತಿರಾಧಿತ್ಯ ಸಿಂಧಿಯಾ ಸ್ಪರ್ಧಿಸದೇ ಇದ್ದರೂ ತಮ್ಮ ಬಲ ಸಾಬೀತುಪಡಿಸುವ ಅನಿವಾರ್ಯತೆಯೂ ಇದೆ. ಈ ಎಲ್ಲದರ ನಡುವೆ ಮಧ್ಯಪ್ರದೇಶದಲ್ಲಿ ಮತದಾನ ನಡೆದಿದೆ.
ಛತ್ತೀಸಗಡದಲ್ಲೂ ತುರುಸಿನ ಸ್ಪರ್ಧೆ
ಛತ್ತೀಸಗಡದಲ್ಲಿ ಈಗಾಗಲೇ ಮೊದಲ ಹಂತದ ಮತದಾನ ನಡೆದಿತ್ತು. ಈಗ ಎರಡನೇ ಹಾಗೂ ಕೊನೆಯ ಹಂತದ ಮತದಾನ 70 ವಿಧಾನಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆಯುತ್ತಿದೆ. ಎರಡನೇ ಹಂತದ ಚುನಾವಣೆಯಲ್ಲಿ ಪ್ರಮುಖ ನಾಯಕರು ಕಣದಲ್ಲಿದ್ದಾರೆ. ಅದರಲ್ಲಿ ಪ್ರಮುಖವಾಗಿ ಛತ್ತೀಸಗಡ ಮುಖ್ಯಮಂತ್ರಿ ಭುಪೇಶ್ ಬಗೇಲ್, ಉಪಮುಖ್ಯಮಂತ್ರಿ ಮಂತ್ರಿ ಟಿ.ಎಸ್.ಸಿಂಗ್ ದೇವ್, ಎಂಟು ಮಂದಿ ಸಚಿವರು ಹಾಗು ನಾಲ್ವರು ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷ ಅರುಣ್ ದೇವ್ ಕಣದಲ್ಲಿದ್ದಾರೆ.
ಇಡೀ ಛತ್ತೀಸಗಡ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆಯೇ ಸ್ಪರ್ಧೆಯಿದೆ. ಇದರೊಟ್ಟಿಗೆ ಆಮ್ ಆದ್ಮಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಗಳೂ ಹಲವು ಕಡೆ ಪ್ರಬಲ ಸ್ಪರ್ಧೆಯೊಡ್ಡಿದ್ದಾರೆ. ಈ ಬಾರಿ ಆಡಳಿತದಲ್ಲಿರುವ ಕಾಂಗ್ರೆಸ್ ಭುಪೇಶ್ ಬಗೇಲ್ ಅವರು ಅಭಿವೃದ್ದಿ ಪಥದಲ್ಲಿ ರಾಜ್ಯವನ್ನು ಕೊಂಡೊಯ್ದಿದ್ದಾರೆ. ಇದರಿಂದ ಕಾಂಗ್ರೆಸ್ ಮರು ಆಯ್ಕೆಯಾಗಬಹುದು ಎನ್ನುವ ಚರ್ಚೆಗಳು ನಡೆದಿವೆ. ಈ ಬಾರಿ ಒಟ್ಟು 90ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 75 ಕ್ಷೇತ್ರಗಳಲ್ಲಾದರೂ ಗೆಲ್ಲಬಹುದು ಎನ್ನುವ ನಿರೀಕ್ಷೆಯನ್ನು ಆಡಳಿತಾರೂಢ ಕಾಂಗ್ರೆಸ್ ಇಟ್ಟುಕೊಂಡಿದೆ.
ಈಗಾಗಲೇ ಮಿಜೋರಾಂನಲ್ಲಿ ಚುನಾವಣೆ ಮುಕ್ತಾಯವಾಗಿದೆ. ಮಧ್ಯಪ್ರದೇಶದಲ್ಲಿ ಒಂದೇ ಹಂತದಲ್ಲಿ, ಛತ್ತೀಸಗಡದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆದಿದೆ. ರಾಜಸ್ತಾನ ಹಾಗೂ ತೆಲಂಗಾಣದಲ್ಲಿ ಮತದಾನ ಬಾಕಿಯಿದೆ. ಇದಾದ ನಂತರ ಡಿಸೆಂಬರ್ 3ರಂದು ಏಕಕಾಲಕ್ಕೆ ಐದೂ ರಾಜ್ಯಗಳಲ್ಲಿ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುತ್ತದೆ.
ಮೋದಿ ಮನವಿ
ಈ ಬಾರಿ ಮಧ್ಯಪ್ರದೇಶ ಹಾಗೂ ಛತ್ತೀಸಗಡ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಮತದಾನ ಮಾಡಬೇಕು. ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.