ಅತ್ಯುತ್ತಮ ಟರ್ಮ್ ಇನ್ಶುರೆನ್ಸ್ ಆಯ್ಕೆ ಮಾಡಿಕೊಳ್ಳುವುದು ಹೇಗೆ, ಗಮನಿಸಬೇಕಾದ 5 ಪ್ರಮುಖ ಅಂಶಗಳು
Sep 11, 2023 03:33 PM IST
ಟರ್ಮ್ ಇನ್ಶುರೆನ್ಸ್ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು ಹಲವು. ಅವುಗಳ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಅತ್ಯುತ್ತಮ ಟರ್ಮ್ ಇನ್ಶುರೆನ್ಸ್ ಖರೀದಿಸುವ ಬಗ್ಗೆ ಆಲೋಚಿಸುತ್ತಿದ್ದೀರಾ, ಹಾಗಾದರೆ ಗಮನಿಸಬೇಕಾದ ಕೆಲವು ಅಂಶಗಳಿವೆ. ನಿಮಗೆ ಈಗಾಗಲೇ ಇರುವ ವಿಮಾ ರಕ್ಷಣೆ ಎಷ್ಟಿದೆ, ಯಾವ ಜೀವ ವಿಮಾ ಕಂಪನಿಯಿಂದ ವಿಮೆ ಖರೀದಿಸಬೇಕು, ನಿಮ್ಮ ಆದಾಯಕ್ಕೆ ಎಷ್ಟು ಪ್ರಮಾಣದ ವಿಮೆ ಅವಶ್ಯಕತೆ ಇದೆ ಎಂಬುದನ್ನು ಖಚಿತಪಡಿಸಿಕೊಂಡು ಈ 5 ಪ್ರಮುಖ ಅಂಶಗಳನ್ನು ಖಚಿತವಾಗಿ ಗಮನಿಸಿ.
ಸಾಧನೆಗೆ ಒಂದು ಗುರಿ ಇಟ್ಟುಕೊಳ್ಳಬಹುದು. ಅದನ್ನು ಈಡೇರಿಸಲು ಪ್ರಯತ್ನವನ್ನೂ ಮಾಡಬಹುದು. ಆದರೆ ಆಯುಸ್ಸು ಎಷ್ಟಿದೆ ಎಂದು ಖಾತರಿಯಾಗಿ ಹೇಳುವುದು ಸಾಧ್ಯವಿದೆಯೇ? ಖಚಿತವಾಗಿ ಸಾಧ್ಯವಿಲ್ಲ. ಬದುಕಿನಲ್ಲಿ ಮುಂದೆಷ್ಟು ದಿನ ಎಂಬ ಪ್ರಶ್ನೆಗೆ ಇದುವರೆಗೆ ಖಚಿತ ಉತ್ತರ ಸಿಕ್ಕಿಲ್ಲ. ಬದುಕಿನಲ್ಲಿ ಅನಿರೀಕ್ಷಿತ ವಿದ್ಯಮಾನ, ಘಟನೆಗಳನ್ನು ಮುನ್ನಂದಾಜು ಮಾಡುವುದು ಸಾಧ್ಯವಿಲ್ಲ. ಅದರಲ್ಲಿ ಅಪಘಾತ, ಪ್ರಕೃತಿ ವಿಕೋಪ ಮುಂತಾದವು ಸೇರಿಕೊಂಡಿವೆ. ಶಾಶ್ವತ ಅಂಗವೈಕಲ್ಯ ಉಂಟಾದರೆ ಬದುಕಿನ ಗತಿ ಏನು, ನಂಬಿಕೊಂಡಿರುವ ಕುಟುಂಬ ಸದಸ್ಯರ ಪಾಡೇನು, ಇಂತಹ ಸನ್ನಿವೇಶದಲ್ಲಿ ಕುಟುಂಬದ ಆರ್ಥಿಕ ಭದ್ರತೆ ಬಹಳಷ್ಟು ಪ್ರಾಮುಖ್ಯತೆ ಪಡೆಯುತ್ತದೆ.
ಆರ್ಥಿಕ ಭದ್ರತೆ ಎಂದ ಕೂಡಲೇ ಜೀವ ವಿಮೆ ಆಯ್ಕೆ ಮುಂಚೂಣಿಗೆ ಬರುತ್ತದೆ. ಜೀವ ವಿಮೆಯಲ್ಲಿ ವ್ಯಕ್ತಿಯ ಬದುಕಿಗೆ ಲಭ್ಯವಾಗುವ ವಿಮಾ ರಕ್ಷಣೆ ಬಹಳ ಕಡಿಮೆ. ಹೀಗಾಗಿ ನಾಲ್ಕಾರು ಜೀವ ವಿಮೆ ಉತ್ಪನ್ನಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದರ ಪ್ರೀಮಿಯಂ ಸ್ವಲ್ಪ ಹೆಚ್ಚೇ ಇರುತ್ತದೆ. ಇದಕ್ಕೆ ಪರಿಹಾರವಾಗಿ ನೋಡುವುದಾದರೆ ಟರ್ಮ್ ಇನ್ಶುರೆನ್ಸ್ ಪ್ಲಾನ್ (term insurance plan) ಕಣ್ಣಮುಂದೆ ನಿಲ್ಲುತ್ತದೆ. ನಾಲ್ಕಾರು ಜೀವ ವಿಮೆ ಮಾಡಿಸುವ ಬದಲು ಕನಿಷ್ಠ 1, ಹೆಚ್ಚು ಎಂದರೆ 2 ಟರ್ಮ್ ಇನ್ಶುರೆನ್ಸ್ ಪ್ಲಾನ್ ಹೊಂದಿದರೆ ತಪ್ಪಿಲ್ಲ. ಆದರೆ, ಅದಕ್ಕಿಂತ ಹೆಚ್ಚು ಟರ್ಮ್ ಇನ್ಶುರೆನ್ಸ್ ಮಾಡಿಸಬಾರದು.
ಟರ್ಮ್ ಇನ್ಶುರೆನ್ಸ್ ಖರೀದಿ ಮಾಡುವಾಗ ಗಮನಿಸಬೇಕಾದ 5 ಅಂಶಗಳಿವು
ಜೀವ ವಿಮೆ (ಲೈಫ್ ಇನ್ಶುರೆನ್ಸ್) ಮತ್ತು ಟರ್ಮ್ ಇನ್ಶುರೆನ್ಸ್ ನಡುವಿನ ವ್ಯತ್ಯಾಸ ಗಮನಿಸಿಕೊಳ್ಳಿ. ಜೀವ ವಿಮೆ ಹೊಂದಿದ್ದರೆ ಅದರ ಮೆಚುರಿಟಿ ತನಕ, ವಾರ್ಷಿಕ ಪ್ರೀಮಿಯಂನ ಹತ್ತು ಪಟ್ಟು ಜೀವ ವಿಮಾ ರಕ್ಷಣೆ ಇರುತ್ತದೆ. ಇಲ್ಲಿ ಪ್ರೀಮಿಯಂ ಹೆಚ್ಚು ವಿಮಾ ರಕ್ಷಣೆ ಕಡಿಮೆ. ಟರ್ಮ್ ಇನ್ಶುರೆನ್ಸ್‌ನಲ್ಲಿ ಪ್ರೀಮಿಯಂ ಕಡಿಮೆ, ವಿಮಾ ರಕ್ಷಣೆ ಹೆಚ್ಚು.
1. ಟರ್ಮ್ ಇನ್ಶುರೆನ್ಸ್‌ನಲ್ಲಿ ವಿಮಾ ಮೊತ್ತ ಎಷ್ಟಿರಬೇಕು
ಟರ್ಮ್ ಇನ್ಶುರೆನ್ಸ್ ಖರೀದಿಸುವಾಗ ಮೊದಲು ಗಮನಿಸಹರಿಸಬೇಕಾದ್ದೇ ವಿಮಾ ಮೊತ್ತ (ಸಮ್ ಇನ್ಶುರ್ಡ್) ಎಷ್ಟು ಬೇಕು ಎಂಬುದರ ಕಡೆಗೆ. ಪಾಲಿಸಿದಾರರು ಟರ್ಮ್ ಇನ್ಶುರೆನ್ಸ್ ಖರೀದಿ ಮಾಡುವಾಗ ತಮ್ಮ ವಾರ್ಷಿಕ ಆದಾಯದ 10 ಪಟ್ಟು ವಿಮೆ ಹೊಂದಬೇಕು ಎಂಬುದು ವಿಮಾ ಪರಿಣತರ ಶಿಫಾರಸು. ಕೌಟುಂಬಿಕ ತುರ್ತು ಅಪಾಯಗಳಾದಾಗ ಈ ವಿಮಾ ಮೊತ್ತ ಕುಟುಂಬ ಸದಸ್ಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
2. ಟರ್ಮ್ ಇನ್ಶುರೆನ್ಸ್‌ನಲ್ಲಿ ಪ್ರೀಮಿಯಂ ಅವಧಿ ಮತ್ತು ಮೊತ್ತ, ಸವಲತ್ತು
ಪ್ರೀಮಿಯಂ ಮೊತ್ತದ ಕಡೆಗೂ ಗಮನಹರಿಸಿ. ಒಂದು ಸಲದ ಪ್ರೀಮಿಯಂ ಆಫರ್ ಅಥವಾ ಸಿಂಗಲ್ ಪ್ರೀಮಿಯಂ ಆಫರ್‌ಗಳಿಗೆ ಮರುಳಾಗಿ ಕಡಿಮೆ ಮೊತ್ತದ ವಿಮಾ ರಕ್ಷಣೆ ಉತ್ಪನ್ನ ಖರೀದಿಸಬೇಡಿ. ಈ ರೀತಿ ಉತ್ಪನ್ನಗಳಲ್ಲಿ ಕೆಲವು ಷರತ್ತುಗಳು ಇರಬಹುದಾದ ಸಾಧ್ಯತೆ ಇದ್ದು, ಅವುಗಳ ಕಡೆಗೂ ಸೂಕ್ಷ ನೋಟದೊಂದಿಗೆ ಪರಾಮರ್ಶೆ ಮಾಡಬೇಕಾದ್ದು ಅಗತ್ಯ.
3. ಜೀವ ವಿಮಾ ಕಂಪನಿಯನ್ನು ಆಯ್ಕೆ ಮಾಡುವುದು ಹೇಗೆ
ಟರ್ಮ್ ಇನ್ಶುರೆನ್ಸ್ ಖರೀದಿ ಮಾಡುವಾಗ ಯಾವ ಜೀವ ವಿಮಾ ಕಂಪನಿಯ ಉತ್ಪನ್ನ ಚೆನ್ನಾಗಿದೆ ಎಂಬುದನ್ನು ಗಮನಿಸಿ. ಆ ಜೀವ ವಿಮಾ ಕಂಪನಿಯ ಕ್ಲೇಮ್ ಸೆಟಲ್‌ಮೆಂಟ್ ಮತ್ತು ಗ್ರಾಹಕ ಸೇವೆ ತೃಪ್ತಿಯ ರೇಟಿಂಗ್ ಗಮನಿಸಬೇಕು. ಉತ್ಪನ್ನ ಮಾರಾಟ ಮಾಡಿದ ಬಳಿಕ ಕ್ಲೇಮ್ ಸೆಟಲ್‌ಮೆಂಟ್ ಮಾಡುವುದಕ್ಕೆ ಕಂಪನಿಗಳು ಸತಾಯಿಸಬಹುದು. ಐಆರ್‌ಡಿಎ ಪ್ರಕಟಿಸುವ ದತ್ತಾಂಶದಲ್ಲಿ ನೀವು ಆಯ್ಕೆ ಮಾಡಿದ ಕಂಪನಿ ಕ್ಲೇಮ್ ಸೆಟಲ್‌ಮೆಂಟ್ ರೇಟಿಂಗ್ ಶೇಕಡ 90ರ ಮೇಲೆ ಇದೆಯಾ ಎಂದು ಗಮನಿಸಿ. ಟರ್ಮ್ ಇನ್ಶೂರೆನ್ಸ್ ಪ್ರಯೋಜನ ಕುಟುಂಬಕ್ಕೆ ಸಿಗುವ ಕಾರಣ ಅದನ್ನು ಪಡೆಯಲು ಕುಟುಂಬ ಸದಸ್ಯರು ಪರದಾಡುವಂತಾಗಬಾರದು ಎಂಬುದಕ್ಕೆ ಈ ಮುನ್ನೆಚ್ಚರಿಕೆ ವಹಿಸಬೇಕು.
4. ಟರ್ಮ್ ಇನ್ಶುರೆನ್ಸ್ ಖರೀದಿಗೆ ಆನ್‌ಲೈನ್ ಅಥವಾ ಆಫ್‌ಲೈನ್, ಯಾವುದು ಬೆಸ್ಟ್
ಟರ್ಮ್ ಇನ್ಶುರೆನ್ಸ್ ಆನ್‌ಲೈನ್ ಮೂಲಕ ಖರೀದಿಸಬೇಕಾ ಅಥವಾ ಆಫ್‌ಲೈನ್ ಮೂಲಕ ಖರೀದಿ ಮಾಡಬೇಕಾ?, ಯಾವುದು ಬೆಸ್ಟ್ ಮುಂತಾದ ಪ್ರಶ್ನೆಗಳಿಗೆ ಅವರವರ ಅನುಕೂಲಕ್ಕೆ ಬಿಟ್ಟ ವಿಷಯ ಎಂದು ಹೇಳಬಹುದು. ಆನ್‌ಲೈನ್ ಮೂಲಕ ಖರೀದಿ ಮಾಡಿದರೆ ವಿಮೆಯ ಪ್ರೀಮಿಯಂ ಮೊತ್ತ ಸ್ವಲ್ಪ ಕಡಿಮೆ ಇರುತ್ತದೆ. ಗ್ರಾಹಕ ಸೇವೆಗೆ ಪ್ರತಿಯೊಂದಕ್ಕೂ ಕಸ್ಟಮರ್ ಕೇರ್ ಮೂಲಕವೇ ಮುನ್ನಡೆಯಬೇಕು. ಆನ್‌ಲೈನ್‌ನಲ್ಲಿ ಗ್ರಾಹಕರೇ ಎಲ್ಲವನ್ನೂ ಮಾಡಬೇಕು.
ಇನ್ನು ಆಫ್‌ಲೈನ್‌ನಲ್ಲಿ ಪ್ರೀಮಿಯಂ ಸ್ವಲ್ಪ ಹೆಚ್ಚು. ಗ್ರಾಹಕರ ನೆರವಿಗೆ ಜೀವ ವಿಮಾ ಪ್ರತಿನಿಧಿ ಜತೆಗಿರುತ್ತಾರೆ. ಮೆಡಿಕಲ್ ಟೆಸ್ಟ್‌ನಿಂದ ಹಿಡಿದು ಡಾಕ್ಯುಮೆಂಟೇಶನ್ ತನಕ ನೆರವು ಒದಗಿಸುತ್ತಾರೆ. ಜೀವ ವಿಮಾ ಪ್ರತಿನಿಧಿ ಸದಾ ಗ್ರಾಹಕರ ಸಂಪರ್ಕದಲ್ಲಿರುತ್ತಾರೆ.
5. ವಿಮೆಗೆ ನೀಡುವ ಮಾಹಿತಿ ಬಗ್ಗೆ ಎಚ್ಚರವಹಿಸಬೇಕು
ವಿಮಾ ರಕ್ಷಣೆ ಪಡೆಯುವಾಗ ವಿಮಾ ಕಂಪನಿಗೆ ನೀಡುವ ಮಾಹಿತಿಯ ಬಗ್ಗೆ ಹೆಚ್ಚಿನ ಎಚ್ಚರಿಕೆವಹಿಸಬೇಕು. ವಿಮೆಯ ಪ್ರೊಪೋಸಲ್ ಫಾರ್ಮ್‌ನಲ್ಲಿ ಕೇಳಿದ ಮಾಹಿತಿಯನ್ನು ಎಲ್ಲವನ್ನೂ ಕೊಡಬೇಕು. ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿ ಕೊಡಬೇಕಾದ್ದು ಇಲ್ಲ. ಪ್ರೀಮಿಯಂ ಮೊತ್ತ ದೊಡ್ಡಮಟ್ಟದ್ದಾದರೆ, ಅಂತಹ ಗ್ರಾಹಕರನ್ನು ಕಂಪನಿ ಹೈ ರಿಸ್ಕ್ ಪಾಲಿಸಿಹೋಲ್ಡರ್ ಎಂದು ಪರಿಗಣಿಸುತ್ತದೆ. ಅದೇ ರೀತಿ, ಈ ವಿಮೆಗೆ ನಾಮಿನಿಗಳನ್ನು ಘೋಷಿಸುವಾಗ ಯಾರಿಗೆ ಎಷ್ಟು ಪ್ರಮಾಣದಲ್ಲಿ ವಿಮಾ ಮೊತ್ತ ಒದಗಿಸಬೇಕು ಎಂಬುದನ್ನೂ ಘೋಷಿಸಬೇಕು.