ಪಿಎಂ ಇಂಟರ್ನ್‌ಶಿಪ್ ಸ್ಕೀಮ್‌ಗೆ ಇನ್ನೂ ಅರ್ಜಿ ಸಲ್ಲಿಸಿಲ್ವಾ, ನಾಳೆಯೇ ಕೊನೆ ದಿನ, ಅರ್ಹತೆ, ಮಾನದಂಡ ನೋಡ್ಕೊಳ್ಳಿ ಇಂದೇ ಅರ್ಜಿ ಸಲ್ಲಿಸಿ
Nov 09, 2024 01:09 PM IST
ಪಿಎಂ ಇಂಟರ್ನ್‌ಶಿಪ್ ಸ್ಕೀಮ್‌ಗೆ ಇನ್ನೂ ಅರ್ಜಿ ಸಲ್ಲಿಸಿಲು ನಾಳೆಯೇ ಕೊನೆ ದಿನ (ಸಾಂಕೇತಿಕ ಚಿತ್ರ)
PM Internship Scheme 2024: ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಸಿಕ್ಕಿಲ್ವಾ, ಚಿಂತೆ ಬಿಡಿ. ಪಿಎಂ ಇಂಟರ್ನ್‌ಶಿಪ್ ಸ್ಕೀಮ್‌ಗೆ ಇನ್ನೂ ಅರ್ಜಿ ಸಲ್ಲಿಸಿ. ಅಂದ ಹಾಗೆ ಅರ್ಜಿ ಸಲ್ಲಿಸುವುದಕ್ಕೆ ನಾಳೆಯೇ ಕೊನೆ ದಿನ. ಅರ್ಹತೆ, ಮಾನದಂಡ ನೋಡ್ಕೊಳ್ಳಿ ಇಂದೇ ಅರ್ಜಿ ಸಲ್ಲಿಸಿ. ವಿವರ ಈ ವರದಿಯಲ್ಲಿದೆ.
ಬೆಂಗಳೂರು: ಪ್ರತಿ ತಿಂಗಳೂ 5000 ರೂಪಾಯಿ ಖಾತೆ ಜಮೆ ಆಗಬಹುದಾದ ಅವಕಾಶ ಇದು. ನೀವು ಹತ್ತನೇ ಕ್ಲಾಸ್, ಪಿಯುಸಿ, ಪದವಿ ಮುಗಿಸಿ ಉದ್ಯೋಗ ಹುಡುಕೋದಕ್ಕೆ ಶುರುಮಾಡಿದ್ದಷ್ಟೆಯಾ? ಹಾಗಾದರೆ ನಿಮಗೆ ಹೇಳಿ ಮಾಡಿಸಿರುವ ಅವಕಾಶ ಇದು. ನೀವಿನ್ನೂ ಪಿಎಂ ಇಂಟರ್ನ್‌ಶಿಪ್ ಸ್ಕೀಮ್ 2024 (PM Internship Scheme 2024) ಕ್ಕೆ ಅರ್ಜಿ ಸಲ್ಲಿಸಿಲ್ವಾ? ನಾಳೆಯೇ (ನವೆಂಬರ್ 10) ಕೊನೇ ದಿನ. ಇನ್ನೇಕೆ ತಡ ಮಾಡ್ತೀರಿ. ಅರ್ಹತೆ, ಮಾನದಂಡ ಮುಂತಾದ ವಿವರ ಎಲ್ಲ ನೋಡ್ಕೊಳ್ಳಿ. ಇಂದೇ ಅರ್ಜಿ ಸಲ್ಲಿಸಿ.
ಏನಿದು ಪಿಎಂ ಇಂಟರ್ನ್‌ಶಿಪ್ ಸ್ಕೀಮ್ 2024
ಕಳೆದ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಿಎಂ ಇಂಟರ್ನ್‌ಶಿಪ್ ಯೋಜನೆ ವಿಚಾರ ಪ್ರಕಟಿಸಿದ್ದರು. ಅಕ್ಟೋಬರ್ 3ಕ್ಕೆ ಇದರ ವಿವರ ನೀಡಿದ್ದ ಕೇಂದ್ರ ಸರ್ಕಾರ ಅಕ್ಟೋಬರ್ 12 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಲಿದೆ ಎಂದು ಹೇಳಿತ್ತು. ಇದರಂತೆ ಕಳೆದ ತಿಂಗಳು 12ನೇ ತಾರೀಕಿನಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಇಂಟರ್ನ್‌ಶಿಪ್ ಯೋಜನೆಯ ಮೂಲಕ, ಯುವಕರು ವಿವಿಧ ವೃತ್ತಿ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ನಿಜ-ಜೀವನದ ವ್ಯಾಪಾರ ಪರಿಸರದಲ್ಲಿ 12 ತಿಂಗಳ ಕಾಲ ಕೆಲಸ ಮಾಡಿ ಕೌಶಲ ವೃದ್ಧಿ ಮಾಡಿಕೊಳ್ಳಲಿದ್ದಾರೆ. ಆ ಮೂಲಕ ಉದ್ಯೋಗಾವಕಾಶ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಲು ಈ ಉಪಕ್ರಮ ಅವಕಾಶ ನೀಡುತ್ತದೆ. ಅದಾನಿ ಗ್ರೂಪ್, ಕೋಕಾ-ಕೋಲಾ, ಐಷರ್, ಡೆಲಾಯ್ಟ್, ಮಹೀಂದ್ರಾ ಗ್ರೂಪ್, ಮಾರುತಿ ಸುಜುಕಿ, ಪೆಪ್ಸಿಕೋ, ಎಚ್‌ಡಿಎಫ್‌ಸಿ, ವಿಪ್ರೋ, ಐಸಿಐಸಿಐ, ಹಿಂದೂಸ್ತಾನ್ ಯೂನಿಲಿವರ್, ಸ್ಯಾಮ್‌ಸಂಗ್ ಮತ್ತು ಹೆವ್ಲೆಟ್ ಪ್ಯಾಕರ್ಡ್ ಸೇರಿ 500 ಸಂಸ್ಥೆಗಳು ಪಿಎಂ ಇಂಟರ್ನ್‌ಶಿಪ್ ಸ್ಕೀಮ್ 2024 ರಲ್ಲಿ ಹೆಸರು ನೋಂದಾಯಿಸಿಕೊಂಡಿವೆ.
ಪಿಎಂ ಇಂಟರ್ನ್‌ಶಿಪ್ ಸ್ಕೀಮ್ 2024 ಅರ್ಹತೆ, ಮಾನದಂಡ
1) ಅಭ್ಯರ್ಥಿಗಳು ಹೈಸ್ಕೂಲ್, ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉತ್ತೀರ್ಣರಾಗಿರಬೇಕು. ಐಟಿಐಯಿಂದ ಪ್ರಮಾಣಪತ್ರವನ್ನು ಹೊಂದಿರಬೇಕು. ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್‌ನಿಂದ ಡಿಪ್ಲೊಮಾವನ್ನು ಹೊಂದಿರಬೇಕು. ಅಥವಾ ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಬಿಎ, ಬಿ ಫಾರ್ಮಾ ಮುಂತಾದ ಪದವಿ ಪಡೆದವರಾಗಿರಬೇಕು.
2) ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳ ವಯಸ್ಸು 21 ವರ್ಷ ಮತ್ತು 24 ವರ್ಷದೊಳಗೆ ಇರಬೇಕು.
3) ಭಾರತೀಯ ಪೌರರಾಗಿರಬೇಕು
4) ಎಲ್ಲೂ ಪೂರ್ಣ ಪ್ರಮಾಣದ ಉದ್ಯೋಗಿ ಆಗಿರಬಾರದು. ಅದೇ ರೀತಿ ಪೂರ್ಣ ಪ್ರಮಾಣದ ಶಿಕ್ಷಣ ಪಡೆಯುತ್ತಿರಬಾರದು.
5) ಆನ್‌ಲೈನ್ / ದೂರಶಿಕ್ಷಣ ಕಾರ್ಯಕ್ರಮಗಳಲ್ಲಿ ದಾಖಲಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಪಿಎಂ ಇಂಟರ್ನ್‌ಶಿಪ್ ಸ್ಕೀಮ್ 2024: ಅರ್ಜಿ ಸಲ್ಲಿಸುವುದು ಹೀಗೆ
1) ಪಿಎಂ ಇಂಟರ್ನ್‌ಶಿಪ್ ಸ್ಕೀಮ್ 2024ಕ್ಕೆ ಅರ್ಜಿ ಸಲ್ಲಿಸಲು pminternship.mca.gov.in ತಾಣಕ್ಕೆ ಭೇಟಿ ನೀಡಬೇಕು
2) ಅಲ್ಲಿ ರಿಜಿಸ್ಟರ್ ಎಂಬ ಲಿಂಕ್ ಕ್ಲಿಕ್ ಮಾಡಬೇಕು. ಹೊಸ ಪುಟ ತೆರೆದುಕೊಳ್ಳುತ್ತದೆ.
3) ನೋಂದಣಿ ವಿವರ ಭರ್ತಿ ಮಾಡಬೇಕು ಮತ್ತು ಸಬ್‌ಮಿಟ್ ಬಟನ್ ಕ್ಲಿಕ್ ಮಾಡಬೇಕು
4) ಅಭ್ಯರ್ಥಿಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ, ಪೋರ್ಟಲ್ ಮೂಲಕ ರೆಸ್ಯೂಮ್ ಅನ್ನು ರಚಿಸಲಾಗುತ್ತದೆ.
5) ಸ್ಥಳ, ವಲಯ, ಕ್ರಿಯಾತ್ಮಕ ಪಾತ್ರ ಮತ್ತು ಅರ್ಹತೆಗಳು ಮುಂತಾದ ಆದ್ಯತೆಗಳ ಆಧಾರದ ಮೇಲೆ 5 ಇಂಟರ್ನ್‌ಶಿಪ್ ಅವಕಾಶಗಳಿಗಾಗಿ ಅರ್ಜಿ ಸಲ್ಲಿಸಬಹುದು.
6) ಇದೆಲ್ಲವೂ ಒಮ್ಮೆ ಭರ್ತಿ ಮಾಡಿದ ಬಳಿಕ ಸಬ್‌ಮಿಟ್ ಕ್ಲಿಕ್ ಮಾಡಿ. ಕನ್‌ಫರ್ಮೇಶನ್ ಪೇಜ್ ಅನ್ನು ಡೌನ್‌ಲೋಡ್ ಮಾಡಿ.
ಹಾರ್ಡ್ ಕಾಪಿಯನ್ನು ಮುದ್ರಿಸಿ ಇಟ್ಟುಕೊಳ್ಳಿ. ಭವಿಷ್ಯದ ಸಂವಹನದ ಅಗತ್ಯಗಳಿಗೆ ಇದು ಬೇಕಾಗಬಹುದು. ಹೆಚ್ಚಿನ ಮಾಹಿತಿಗೆ ಪಿಎಂ ಇಂಟರ್ನ್‌ಶಿಪ್‌ನ ವೆಬ್‌ಸೈಟ್‌ಗೆ ಭೇಟಿ ಕೊಡಿ.