logo
ಕನ್ನಡ ಸುದ್ದಿ  /  ಜೀವನಶೈಲಿ  /  ತಿಂಗಳಿಗೆ 5000 ರೂ ಖಾತೆಗೆ ಜಮೆಯಾಗುತ್ತೆ, ಟಾಪ್ ಕಂಪನಿಗಳಲ್ಲಿ ಕೆಲಸ ಮಾಡೋ ಅವಕಾಶ; ತಡವೇಕೆ ಪಿಎಂ ಇಂಟರ್ನ್‌ಶಿಪ್ ಸ್ಕೀಮ್‌ ಅರ್ಜಿ ಸಲ್ಲಿಸಿ

ತಿಂಗಳಿಗೆ 5000 ರೂ ಖಾತೆಗೆ ಜಮೆಯಾಗುತ್ತೆ, ಟಾಪ್ ಕಂಪನಿಗಳಲ್ಲಿ ಕೆಲಸ ಮಾಡೋ ಅವಕಾಶ; ತಡವೇಕೆ ಪಿಎಂ ಇಂಟರ್ನ್‌ಶಿಪ್ ಸ್ಕೀಮ್‌ ಅರ್ಜಿ ಸಲ್ಲಿಸಿ

Umesh Kumar S HT Kannada

Oct 12, 2024 10:29 AM IST

google News

ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ನೆರವಾಗಲು ಪಿಎಂ ಇಂಟರ್ನ್‌ಶಿಪ್ ಸ್ಕೀಮ್‌ ಅರ್ಜಿ ಸಲ್ಲಿಕೆ ಇಂದು (ಅಕ್ಟೋಬರ್ 12) ಶುರುವಾಗುತ್ತಿದೆ. (ಸಾಂಕೇತಿಕ ಚಿತ್ರ)

  • ನೀವು ಹತ್ತನೇ ಕ್ಲಾಸ್, ಪಿಯುಸಿ, ಪದವಿ ಮುಗಿಸಿ ಉದ್ಯೋಗ ಹುಡುಕೋದಕ್ಕೆ ಶುರುಮಾಡಿದ್ದಷ್ಟೆಯಾ? ಹಾಗಾದ್ರೆ ಇಲ್ಲೊಂದು ಸುವರ್ಣಾವಕಾಶ ಇದೆ. ತಿಂಗಳಿಗೆ 5000 ರೂ ಖಾತೆಗೆ ಜಮೆಯಾಗುತ್ತೆ, ಟಾಪ್ ಕಂಪನಿಗಳಲ್ಲಿ ಕೆಲಸ ಮಾಡೋ ಅವಕಾಶ ಕೂಡ ಸಿಗುತ್ತೆ. ಅರ್ಹರಾಗಿದ್ದು, ಆಸಕ್ತಿ ಇದ್ರೆ ಇಂದೇ ಕೇಂದ್ರ ಸರ್ಕಾರದ ಪಿಎಂ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಿ. ವಿವರ ಇಲ್ಲಿದೆ.

ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ನೆರವಾಗಲು ಪಿಎಂ ಇಂಟರ್ನ್‌ಶಿಪ್ ಸ್ಕೀಮ್‌ ಅರ್ಜಿ ಸಲ್ಲಿಕೆ ಇಂದು (ಅಕ್ಟೋಬರ್ 12) ಶುರುವಾಗುತ್ತಿದೆ. (ಸಾಂಕೇತಿಕ ಚಿತ್ರ)
ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ನೆರವಾಗಲು ಪಿಎಂ ಇಂಟರ್ನ್‌ಶಿಪ್ ಸ್ಕೀಮ್‌ ಅರ್ಜಿ ಸಲ್ಲಿಕೆ ಇಂದು (ಅಕ್ಟೋಬರ್ 12) ಶುರುವಾಗುತ್ತಿದೆ. (ಸಾಂಕೇತಿಕ ಚಿತ್ರ) (LH)

ಎಷ್ಟು ಹುಡುಕಿದ್ರೂ ಉದ್ಯೋಗ ಸಿಕ್ಕಿಲ್ಲ ಎಂಬ ಚಿಂತೆಯಲ್ಲಿದ್ದೀರಾ, ಹಾಗಾದ್ರೆ ಸದ್ಯ ಆ ಚಿಂತೆ ಬಿಡಿ, ಒಂದು ವರ್ಷ ಪ್ರತಿ ತಿಂಗಳೂ 5000 ರೂಪಾಯಿ ಖಾತೆಗೆ ಜಮೆ ಆಗಬೇಕಾ? ಹಾಗಾದ್ರೆ ಇಂದೇ ಪಿಎಂ ಇಂಟರ್ನ್‌ಶಿಪ್‌ ಯೋಜನೆಗೆ ಅರ್ಜಿ ಸಲ್ಲಿಸಿ. ಕಳೆದ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಿಎಂ ಇಂಟರ್ನ್‌ಶಿಪ್ ಯೋಜನೆ ವಿಚಾರ ಪ್ರಕಟಿಸಿದ್ದರು. ಅಕ್ಟೋಬರ್ 3ಕ್ಕೆ ಇದರ ವಿವರ ನೀಡಿದ್ದ ಕೇಂದ್ರ ಸರ್ಕಾರ ಅಕ್ಟೋಬರ್ 12 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಲಿದೆ ಎಂದು ಹೇಳಿತ್ತು. ಇದರಂತೆ ಇಂದಿನಿಂದ ಅರ್ಜಿ ಸಲ್ಲಿಕೆ ಶುರುವಾಗಿದೆ. ಈ ಯೋಜನೆಯಲ್ಲಿ ಟಿಸಿಎಸ್‌, ಟೆಕ್ ಮಹಿಂದ್ರಾ, ಎಲ್‌ಆಂಡ್‌ಟಿ, ಅಪೊಲೊ ಟೈರ್ಸ್‌, ಟೈಟಾನ್‌, ಡಿವಿಸ್ ಲ್ಯಾಬ್ಸ್‌, ಬ್ರಿಟಾನಿಯಾ ಸೇರಿ ಪ್ರಮುಖ ಕಂಪನಿಗಳಲ್ಲಿ ಇಂಟರ್ನಿಯಾಗಿ ಕೆಲಸ ಮಾಡುವ ಅಕಾಶ ಸಿಗಲಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಈ ಯೋಜನೆಯನ್ನು ನಿರ್ವಹಿಸುತ್ತಿದ್ದು, ಇದರಲ್ಲಿ ಇಂಟರ್ನ್‌ಶಿಪ್ ಒದಗಿಸಲು 200 ಕಂಪನಿಗಳು ಮೊದಲ ಹಂತದಲ್ಲೇ ಸಿದ್ಧವಾಗಿವೆ.

1.2 ಲಕ್ಷಕ್ಕೂ ಹೆಚ್ಚು ಇಂಟರ್ನ್‌ಶಿಪ್ ಅವಕಾಶ

ಪ್ರಸಕ್ತ ಹಣಕಾಸು ವರ್ಷದಲ್ಲಿ 1.2 ಲಕ್ಷಕ್ಕೂ ಹೆಚ್ಚು ಇಂಟರ್ನ್‌ಶಿಪ್‌ಗಳ ಗುರಿಯನ್ನು ನಿಗದಿಪಡಿಸಲಾಗಿದೆ. ಯೋಜನೆಗಾಗಿ ವೆಬ್‌ಸೈಟ್‌ನಲ್ಲಿರುವ ಪಟ್ಟಿ ಪ್ರಕಾರ 500 ಪಾಲುದಾರ ಕಂಪನಿಗಳಿವೆ. ಇದರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಒಎನ್‌ಜಿಸಿ, ಇನ್ಫೋಸಿಸ್, ಎನ್‌ಟಿಪಿಸಿ, ಟಾಟಾ ಸ್ಟೀಲ್, ಐಟಿಸಿ, ಇಂಡಿಯನ್ ಆಯಿಲ್ ಮತ್ತು ಐಸಿಐಸಿಐ ಬ್ಯಾಂಕ್ ಟಾಪ್ 10 ರಲ್ಲಿವೆ. ಮಹೀಂದ್ರಾ & ಮಹೀಂದ್ರಾ, ಎಲ್‌ಆಂಡ್‌ಟಿ, ಟಾಟಾ ಗ್ರೂಪ್ ಮತ್ತು ಜುಬಿಲಂಟ್ ಫುಡ್‌ವರ್ಕ್ಸ್ ಈವರೆಗೆ ಹೆಚ್ಚಿನ ಸಂಖ್ಯೆಯ ಇಂಟರ್ನ್‌ಶಿಪ್‌ಗಳನ್ನು ನೀಡುತ್ತ ಬಂದಿವೆ ಎಂದು ವರದಿಗಳು ತಿಳಿಸಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಿಎಸ್‌ಆರ್ ವೆಚ್ಚದ ಮೂಲಕ ಟಾಪ್ 500 ಕಂಪನಿಗಳು ಈ ಇಂಟರ್ನ್‌ಶಿಪ್ ಯೋಜನೆಗಳನ್ನು ನಿರ್ವಹಿಸುತ್ತ ಬಂದಿದ್ದವು.

ಪಿಎಂ ಇಂಟರ್ನ್‌ಶಿಪ್ ಅರ್ಜಿ ಸಲ್ಲಿಸುವುದು ಹೇಗೆ

1) ಪಿಎಂ ಇಂಟರ್ನ್‌ಶಿಪ್‌ನ ಅಧಿಕೃತ ಪೋರ್ಟಲ್ pminternship.mca.gov.in ಗೆ ಹೋಗಬೇಕು

2) ಪೋರ್ಟಲ್‌ನ ಬಲ ತುದಿ ಮೇಲ್ಭಾಗದಲ್ಲಿ ಯೂತ್ ರಿಜಿಸ್ಟ್ರೇಶನ್‌ ಅಂತ ಕೇಸರಿ ಬಟನ್ ಇದೆ. ಅದನ್ನು ಕ್ಲಿಕ್‌ ಮಾಡಿ ಇಂಟರ್ನ್‌ಶಿಪ್ ಅಪೇಕ್ಷಿತರು ನೋಂದಣಿ ಮಾಡಿಕೊಂಡು ಪ್ರೊಫೈಲ್ ಕ್ರಿಯೇಟ್ ಮಾಡಬೇಕು. ಇದು ಇಂದು (2024ರ ಅಕ್ಟೋಬರ್ 12) ಸಂಜೆ 5 ಗಂಟೆಯಿಂದ ಓಪನ್ ಆಗಲಿದೆ.

3) ಅಕ್ಟೋಬರ್ 25ರಂದು ಮೊದಲ ಬ್ಯಾಚ್‌ನ ಇಂಟರ್ನ್‌ಶಿಪ್‌ ಅವಕಾಶ ತೆರೆದುಕೊಳ್ಳಲಿದೆ. ಹೀಗಾಗಿ ನೋಂದಣಿ ಮಾಡಿ, ಪ್ರೊಫೈಲ್ ರಚಿಸುವಾಗ ಜಾಗರೂಕತೆಯಿಂದ ರಚಿಸಬೇಕು. ಅದರಲ್ಲಿರುವ ಮಾಹಿತಿ ಆಧರಿಸಿ ಅವಕಾಶಗಳನ್ನು ಹೊಂದಿಸಿಕೊಳ್ಳಬೇಕಾಗಿರುತ್ತದೆ. ಆ ದಿನ ಲಾಗಿನ್ ಆಗಿ, ಅವಕಾಶಗಳನ್ನು ಜಾಲಾಡಿ ಇಂಟರ್ನ್‌ಶಿಪ್‌ಗೆ ಆನ್‌ಲೈನಲ್ಲೇ ಅರ್ಜಿ ಸಲ್ಲಿಸಬಹುದು.

ಪಿಎಂ ಇಂಟರ್ನ್‌ಶಿಪ್ ಅರ್ಜಿ ಸಲ್ಲಿಸಲು ಅರ್ಹತೆಗಳು

ಪಿಎಂ ಇಂಟರ್ನ್‌ಶಿಪ್ ಅರ್ಜಿ ಸಲ್ಲಿಸಲು ಅರ್ಹತೆಗಳು

ಪಿಎಂ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 21 ರಿಂದ 24 ವರ್ಷದೊಳಗಿನವರಾಗಿರಬೇಕು. ಅಷ್ಟೇ ಅಲ್ಲ ಎಲ್ಲೂ ಪೂರ್ಣ ಅವಧಿಯ ಕೆಲಸಕ್ಕೆ ಸೇರಿರಬಾರದು. ಅಥವಾ ಪೂರ್ಣ ಅವಧಿ ಶಿಕ್ಷಣವನ್ನೂ ಪಡೆಯುತ್ತಿರಬಾರದು.

10ನೇ ತರಗತಿ ಉತ್ತೀರ್ಣರಾದವರು ಮತ್ತು ಮೇಲ್ಪಟ್ಟ ವಿದ್ಯಾಭ್ಯಾಸ ಹೊಂದಿದವರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಉದ್ಯೋಗದಲ್ಲಿರುವವರ ಮನೆಯ ಮಕ್ಕಳು ಇದಕ್ಕೆ ಅರ್ಜಿ ಸಲ್ಲಿಸುವಂತೆ ಇಲ್ಲ. ಸ್ನಾತಕೋತ್ತರ ಪದವಿ ಪಡೆದವರಿಗೂ ಇದರಲ್ಲಿ ಅವಕಾಶ ಇಲ್ಲ. ಅದೇ ರೀತಿ, ಐಐಟಿ, ಐಐಎಂ ಅಥವಾ ಐಐಎಸ್‌ಇಆರ್‌ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರು ಇದಕ್ಕೆ ಅರ್ಹರಲ್ಲ. ಅಂತೆಯೇ, ಸಿಎ ಅಥವಾ ಸಿಎಂಎ ಅರ್ಹತೆ ಪಡೆದವರೂ ಅರ್ಜಿ ಸಲ್ಲಿಸಬಾರದು. 2023- 24ರಲ್ಲಿ 8 ಲಕ್ಷ ರೂಪಾಯಿಗಿಂತ ಹೆಚ್ಚು ವರಮಾನ ಹೊಂದಿದ ಕುಟುಂಬದ ಸದಸ್ಯರು ಈ ಸ್ಕೀಮ್‌ಗೆ ಅರ್ಜಿ ಸಲ್ಲಿಸುವಂತೆ ಇಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ