Puri Rath Yatra 2022: ಪುರುಷೋತ್ತಮ ಕ್ಷೇತ್ರ ಮತ್ತು ಅದರ ವೈಶಿಷ್ಟ್ಯಗಳೇನು?
Jul 01, 2022 06:36 AM IST
ಪುರಿಯಲ್ಲಿ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ಸುಭದ್ರಾ ದೇವಿಯ ರಥಗಳು ರಥಯಾತ್ರೆಯ ಉತ್ಸವದ ಮುನ್ನಾ ದಿನ ಗುರುವಾರ ಸಿಂಘದ್ವಾರವನ್ನು ತಲುಪಿದ ಸಂದರ್ಭ. (PTI Photo)
- ಎರಡು ವರ್ಷಗಳ ಬಳಿಕ ಒಡಿಶಾದ ಪುರಿ ಜಗನ್ನಾಥ ಮಂದಿರದಲ್ಲಿ ಇಂದಿನಿಂದ 12ರ ತನಕ ಜಗತ್ಪ್ರಸಿದ್ಧ ರಥಯಾತ್ರಾ ಉತ್ಸವ ಬಹಳ ವಿಜೃಂಭಣೆಯೊಂದಿಗೆ ನಡೆಯುತ್ತಿದೆ. ಪುರಿ ಜಗನ್ನಾಥ ಮಂದಿರ ಮತ್ತು ಅದರ ವಿಶೇಷತೆಗಳನ್ನು ಅರಿತುಕೊಳ್ಳುವುದಕ್ಕೆ ಈ ಸಮಯ ಒಂದು ನಿಮಿತ್ತ.
ವೈಷ್ಣವರ ನಾಲ್ಕು ಧಾ ಮಗಳಲ್ಲಿ ಒಡಿಶಾದ ಪುರಿಯೂ ಒಂದು. ಶ್ರೀ ಜಗನ್ನಾಥನು ಬದ್ರಿನಾಥದಲ್ಲಿ ಸ್ನಾನ ಮಾಡಿ, ದ್ವಾರಕಾದಲ್ಲಿ ಉಡುಪು ಧರಿಸಿಕೊಳ್ಳುತ್ತಾನೆ. ಪುರಿಯಲ್ಲಿ ಆಹಾರ ಸೇವಿಸಿ ರಾಮೇಶ್ವರದಲ್ಲಿ ವಿಶ್ರಾಂತಿ ಪಡೆಯುತ್ತಾನೆ.
ಆದ್ದರಿಂದ ಬದ್ರಿನಾಥ, ದ್ವಾರಕಾ, ರಾಮೇಶ್ವರ ಮತ್ತು ಪುರಿ ಈ ನಾಲ್ಕು ಧಾಮಗಳ ಪೈಕಿ ಪುರಿಯಲ್ಲಿ ಸಾಕ್ಷಾತ್ ಭಗವಂತ ಆಹಾರ ಸ್ವೀಕರಿಸುವುದರಿಂದ ಈ ಕ್ಷೇತ್ರಕ್ಕೆ ಭಾರಿ ಮಹತ್ವ ಬಂದಿದೆ. ಇಲ್ಲಿನ ಪ್ರಸಾದಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಇಂದಿಗೂ ಪುರಿಯ ಪ್ರಸಾದಗೃಹದಲ್ಲಿ ನಿತ್ಯವೂ ಸಾವಿರಾರು ಜನ ಭೋಜನ ಸ್ವೀಕರಿಸುತ್ತಾರೆ. ಪುರಿಯನ್ನು ಪುರುಷೋತ್ತಮ ಕ್ಷೇತ್ರ, ನೀಲಗಿರಿ, ನೀಲಾಂಚಲ, ಉತ್ಕಲ ದೇಶವೆಂದು ಕರೆಯುತ್ತಾರೆ.
ಜಗನ್ನಾಥ ಮಂದಿರದ ವಿಶೇಷ
ಪ್ರಸ್ತುತ ಇರುವ ಜಗನ್ನಾಥ ದೇವಾಲಯ ಹಿಂದೆ ಚೋಳರಕಾಲದಲ್ಲಿ ಬೇರೆಯೇ ರೀತಿ ಇತ್ತು. ಪುರಿಯಲ್ಲಿ ಜಗನ್ನಾಥ ದೇವಾಲಯವನ್ನು ಮೊದಲು ಕಟ್ಟಿಸಿದ್ದು ಚೋಳ ರಾಜರು. ಈಗ ಇರುವಂಥದ್ದು ಎರಡನೇ ಬಾರಿ ಮರು ನಿರ್ಮಾಣ ಮಾಡಿರುವ ದೇಗುಲ.
ಜಗನ್ನಾಥ ಮಂದಿರದ ಮಂದಿರದ ವಿಸ್ತೀರ್ಣ 4 ಲಕ್ಷ ಚದರ ಮೀಟರ್ ಆಗಿದ್ದು, ಎತ್ತರ 214 ಅಡಿಗಳಷ್ಟಿದೆ. ಇಲ್ಲಿ ಪ್ರತಿನಿತ್ಯ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆ ತನಕ ಜಗನ್ನಾಥನ ದರ್ಶನಕ್ಕೆ ಅವಕಾಶವಿದೆ.
ಜಗತ್ತಿನ ಎಲ್ಲೆಡೆ ಕರಾವಳಿ ಪ್ರದೇಶದಲ್ಲಿ ಹಗಲಿನ ಸಂದರ್ಭದಲ್ಲಿ ಗಾಳಿಯು ಸಮುದ್ರದಿಂದ ಭೂಮಿಯತ್ತ ಮತ್ತು ಸಂಜೆ ನಂತರ ಭೂಮಿಯಿಂದ ಸಮುದ್ರದ ಕಡೆಗೆ ಸಂಚರಿಸುತ್ತದೆ. ಆದರೆ, ಪುರಿಯಲ್ಲಿ ತದ್ವಿರುದ್ಧವಾಗಿ ಗಾಳಿಯ ಸಂಚಾರ ಇರುತ್ತದೆ.
ಜಗನ್ನಾಥ ಮಂದಿರದ ಮೇಲೆ ಒಂದೇ ಒಂದು ಪಕ್ಷಿಯೂ ಹಾರಾಡುವುದಿಲ್ಲ. ಅಷ್ಟೇ ಏಕೆ ವಿಮಾನಗಳೂ ಹಾರಾಟ ನಡೆಸುವುದಿಲ್ಲ.
ಜಗನ್ನಾಥ ಮಂದಿರದ ಶಿಖರಕ್ಕೆ ಅಳವಡಿಸಿರುವ ಧ್ವಜವು ಯಾವಾಗಲೂ ಗಾಳಿ ಬೀಸುವ ವಿರುದ್ಧ ದಿಕ್ಕಿನಲ್ಲಿ ಹಾರಾಡುತ್ತದೆ. ಈ ಧ್ವಜವನ್ನು ಧರ್ಮ ಧ್ವಜ ಎನ್ನುತ್ತಾರೆ.
ಈ ದೇವಸ್ಥಾನದಲ್ಲಿ ಆಚರಿಸಿಕೊಂಡು ಬಂದಿರುವ 1800 ವರ್ಷಗಳ ಸಂಪ್ರದಾಯ ಒಂದಿದೆ. ಇದರ ಪ್ರಕಾರ, ಅರ್ಚಕರು ನಿತ್ಯವೂ 1000 ಅಡಿ ಎತ್ತರದ ಗೋಪುರವನ್ನು ಹತ್ತಿ ಬಾವುಟ ಬದಲಾಯಿಸುತ್ತಾರೆ. ಅಕಸ್ಮಾತ್ ಒಂದು ದಿನ ತಪ್ಪಿದರೆ, 18 ವರ್ಷ ದೇವಾಲಯದ ಬಾಗಿಲು ತೆರೆಯುವಂತಿಲ್ಲ ಎಂಬ ನಂಬಿಕೆ ಇದೆ.
ಪುರಿಯಲ್ಲಿ ಯಾವುದೇ ದಿಕ್ಕಿನಿಂದ ನೋಡಿದರೂ ಜಗನ್ನಾಥ ಮಂದಿರದ ಗೋಪುರದ ಮೇಲಿರುವ ಚಕ್ರವು 20 ಅಡಿ ಎತ್ತರ ಇದೆ. ಪುರಿಯ ಯಾವ ದಿಕ್ಕಿನಿಂದ ನೋಡಿದರೂ ಚಕ್ರ ನಮ್ಮೆಡೆಗೇ ಮುಖ ಮಾಡಿದಂತೆ ಕಾಣುತ್ತದೆ. ಅಂದರೆ ಸುದರ್ಶನ ಚಕ್ರ ನೇರ ಎದುರೇ ಇರುವಂತೆ ಭಾಸವಾಗುತ್ತದೆ. ಅದರ ಬೇರೆ ಪಾರ್ಶ್ವಗಳು ಗೋಚರಿಸುವುದಿಲ್ಲ.
ಜಗನ್ನಾಥ ದೇಗುಲದ ಮುಖ್ಯ ಗೋಪುರದ ನೆರಳು ಕಾಣಸಿಗುವುದೇ ಇಲ್ಲ. ಬೆಳಗ್ಗೆ ಮಧ್ಯಾಹ್ನ ಅಥವಾ ಸೂರ್ಯಾಸ್ತದ ಸಂದರ್ಭದಲ್ಲಿ ಯಾವ ಹೊತ್ತಿನಲ್ಲೂ ಈ ಗೋಪುರದ ನೆರಳು ನೋಡುವುದು ಸಾಧ್ಯವೇ ಇಲ್ಲ.
ಪುರಿ ದೇವಾಲಯದ ಪಾಕಶಾಲೆಗೆ ಅತಿದೊಡ್ಡ ಪಾಕಶಾಲೆ ಎಂಬ ಹೆಗ್ಗಳಿಕೆ ಇದೆ. ಇಲ್ಲಿ 500 ಪೂರ್ಣಕಾಲಿಕ ಅಡುಗೆಯವರು, 300 ಸಹಾಯಕರು ಕಾರ್ಯನಿರ್ವಹಿಸುತ್ತಾರೆ.
ಪುರಿ ದೇಗುಲದ ಪಾಕಶಾಲೆಯಲ್ಲಿ ಪ್ರಸಾದ ಅಡುಗೆ ತಯಾರಿ ಮಾಡುವುದಕ್ಕೂ ವಿಶಿಷ್ಟ ಕ್ರಮವನ್ನು ಪಾಲಿಸುತ್ತಾರೆ. ಇದಕ್ಕಾಗಿ ಏಳು ದೊಡ್ಡ ಪಾತ್ರೆಗಳನ್ನು ಅನುಕ್ರಮವಾಗಿ ಜೋಡಿಸಿಡುತ್ತಾರೆ. ಮೊದಲು ದೊಡ್ಡ ಪಾತ್ರೆ ಬಳಿಕ ಅನುಕ್ರಮವಾಗಿ ಜೋಡಿಸಿಟ್ಟ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಲಾಗುತ್ತದೆ.
ಜಗನ್ನಾಥ ದೇವಾಲಯದಲ್ಲಿ ಪ್ರಸಾದವನ್ನು 'ಮಹಾಪ್ರಸಾದ' ಎನ್ನುತ್ತಾರೆ. ಪ್ರಸಾದವನ್ನು ಮಹಾಪ್ರಸಾದ ಎಂದು ಕರೆಯುವ ಏಕೈಕ ದೇವಾಲಯ ಇದು. ಈ ಮಹಾಪ್ರಸಾದವನ್ನು ಏಳು ಮಣ್ಣಿನ ಪಾತ್ರೆಗಳಲ್ಲಿ ಅಥವಾ ಮರದ ಪಾತ್ರೆಗಳಲ್ಲಿ ತಯಾರಿಸಲಾಗುತ್ತದೆ.