ಪುಷ್ಪ 2 ನಟ ಅಲ್ಲು ಅರ್ಜುನ್ ಮನೆ ಮೇಲೆ ದಾಳಿ; ಕಲ್ಲು-ಟೊಮೆಟೊ ಎಸೆದು ಆಕ್ರೋಶ, ಉದ್ವಿಗ್ನ ಪರಿಸ್ಥಿತಿಗೆ ಕಾರಣ ಯಾರು?
Dec 22, 2024 08:22 PM IST
ಪುಷ್ಪ 2 ನಟ ಅಲ್ಲು ಅರ್ಜುನ್ ಮನೆ ಮೇಲೆ ದಾಳಿ; ಕಲ್ಲು-ಟೊಮೆಟೊ ಎಸೆದು ಆಕ್ರೋಶ
- ತೆಲುಗು ನಟ ಅಲ್ಲು ಅರ್ಜುನ್ ಅವರ ಹೈದರಾಬಾದ್ ನಿವಾಸದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಮೇಲೆ ದಾಳಿ ನಡೆಸಿ ಕಲ್ಲು, ಟೊಮೆಟೊ ಎಸೆಯಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತೆಲಂಗಾಣದ ರಾಜಧಾನಿ ಹೈದರಾಬಾದ್ ನಗರದಲ್ಲಿರುವ ನಟ ಅಲ್ಲು ಅರ್ಜುನ್ ಅವರ ಮನೆ ಮೇಲೆ ದಾಳಿ ನಡೆದಿದೆ. ಮನೆಯ ಆವರಣದಲ್ಲಿದ್ದ ಹೂವಿನ ಕುಂಡಗಳನ್ನು ಕೆಲವರು ಧ್ವಂಸಗೊಳಿಸಿದ್ದಾರೆ. ಮನೆ ಮೇಲೆ ಕಲ್ಲು, ಟೊಮೆಟೊ ಎಸೆದು ನ್ಯಾಯ ನೀಡುವಂತೆ ಘೋಷಣೆಗಳನ್ನು ಕೂಗಿದ್ದಾರೆ. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಘಟನೆ ಕುರಿತು ಮಾಹಿತಿ ಪಡೆದಿರುವ ಪೊಲೀಸರು, ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಡಿಸೆಂಬರ್ 22ರ ಭಾನುವಾರ ಸಂಜೆ ವೇಳೆ ಫಲಕಗಳನ್ನು ಹಿಡಿದ ಜನರ ಗುಂಪೊಂದು ಅಲ್ಲು ಅರ್ಜುನ್ ಅವರ ಮನೆ ಬಳಿ ಬಂದಿದೆ. ಒಳಗೆ ನುಗ್ಗಲು ಗೇಟ್ ತೆರೆಯುವಂತೆ ಕೇಳಿದ್ದಾರೆ. ಆದರೆ ಅಲ್ಲು ಅರ್ಜುನ್ ಮನೆಯ ಭದ್ರತಾ ಸಿಬ್ಬಂದಿ ಅದಕ್ಕೆ ನಿರಾಕರಿಸಿದ್ದಾರೆ. ಈ ವೇಳೆ ಘೋಷಣೆಗಳನ್ನು ಕೂಗುತ್ತಾ, ಗೋಡೆಯ ಮೇಲೆ ಹತ್ತಿ ಮನೆಯ ಆವರಣಕ್ಕೆ ದುಷ್ಕರ್ಮಿಗಳು ಪ್ರವೇಶಿಸಿದ್ದಾರೆ. ಮನೆಯ ಆವರಣದಲ್ಲಿದ್ದ ಹೂವಿನ ಕುಂಡಗಳನ್ನು ನೆಲಕ್ಕೆಸೆದು ಹಾನಿಗೊಳಿಸಿದ್ದಾರೆ. ಅವರು ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ, ಭದ್ರತಾ ಸಿಬ್ಬಂದಿ ಅವರನ್ನು ತಡೆದ್ದಾರೆ. ಅದನ್ನೂ ಮೀರಿ ಮನೆಯ ಕಾಂಪೌಂಡ್ ಒಳಗೆ ನುಗ್ಗಿದ್ದಾರೆ.
ದಾಳಿ ಮಾಡಿದವರು ಯಾರು?
'ಪುಷ್ಪ 2' ಚಿತ್ರದ ಪ್ರದರ್ಶನದ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿರುವ ರೇವತಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಘೋಷಣೆಗಳನ್ನು ಕೂಗಿದ್ದಾರೆ. ಅವರು ಒಯು ಜೆಎಸಿಯ (ಒಸ್ಮಾನಿಯಾ ಯುನಿವರ್ಸಿಟಿ ಜಾಯಿಂಟ್ ಆಕ್ಷನ್ ಕಮಿಟಿ) ನಾಯಕರು ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಪೊಲೀಸರು ಇದನ್ನು ದೃಢಪಡಿಸಿಲ್ಲ. ಆದರೆ ಕೆಲವು ದುಷ್ಕರ್ಮಿಗಳು ಅಲ್ಲು ಮನೆಯ ಮೇಲೆ ಟೊಮೆಟೊ ಮತ್ತು ಕಲ್ಲುಗಳನ್ನು ಎಸೆದಿದ್ದಾರೆ. ಜೊತೆಗೆ ರೇವತಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಘೋಷಣೆಗಳನ್ನು ಕೂಗಿದ್ದಾರೆ. ರೇವತಿ ಮಗನಿಗೆ ಸಹಾಯ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನಾಕಾರರು ತಾವು ಒಯು ಜೆಎಸಿ (ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜಂಟಿ ಕ್ರಿಯಾ ಸಮಿತಿ) ಸದಸ್ಯರು ಎಂದು ಹೇಳಿಕೊಂಡಿದ್ದಾರೆ. ಪುಷ್ಪಾ 2: ದಿ ರೂಲ್ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸಂಪಾದನೆ ಮಾಡಿದೆ. ಹೀಗಾಗಿ ಅರ್ಜುನ್ ಸಂತ್ರಸ್ತೆಯ ಕುಟುಂಬಕ್ಕೆ ಕನಿಷ್ಠ 1 ಕೋಟಿ ರೂಪಾಯಿಗಳನ್ನು ಪಾವತಿಸಬೇಕು ಎಂದು ಬೇಡಿಕೆ ಇಟ್ಟಿರುವುದಾಗಿ ಬಿಗ್ ಟಿವಿ ವರದಿ ಹಾಗೂ ವಿಡಿಯೋ ಪ್ರಸಾರ ಮಾಡಿದೆ.
ರೇವತಿ ಕುಟುಂಬಕ್ಕೆ ನೆರವಾಗಲು ಬೇಡಿಕೆ
"ದಿವಂಗತ ರೇವತಿ ಅವರ ಕುಟುಂಬವನ್ನು ಅಲ್ಲು ಅರ್ಜುನ್ ನೋಡಿಕೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ. ಅವರು ಜೈಲಿನಲ್ಲಿದ್ದು ಹೊರಬಂದಾಗ ಅನೇಕ ಚಲನಚಿತ್ರ ಸ್ಟಾರ್‌ಗಳು ಅವರನ್ನು ಭೇಟಿ ಮಾಡಿದರು. ಆದರೆ ಅವರಲ್ಲಿ ರೇವತಿ ಎನ್ನುವ ಮಹಿಳೆ ಸತ್ತಾಗ ಒಬ್ಬರೂ ಕಾಳಜಿ ವಹಿಸಲಿಲ್ಲ. ಹೀಗಾಗಿ ರೇವತಿಯ ಕುಟುಂಬದ ಜೊತೆಗೆ ನಿಂತು ಶ್ರೀ ತೇಜಾ ಅವರಿಗಾಗಿ ನೆರವಾಗುವ ಸಮಯ ಇದು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾವು ನಿಮ್ಮನ್ನು ಎಲ್ಲಿಯೂ ಹೋಗಲು ಬಿಡುವುದಿಲ್ಲ" ಎಂದು ಪ್ರತಿಭಟನಾಕಾರರೊಬ್ಬರು ಚಾನೆಲ್‌ಗೆ ಹೇಳಿದ್ದಾರೆ.
ದಾಳಿ ಸಮಯದಲ್ಲಿ ನಟ ಮನೆಯಲ್ಲಿದ್ದರೇ ಎಂಬುದು ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.