Ocean Near Earth's Core: ವಸುಧೆಯ ಒಡಲಾಳದಲ್ಲಿ ಸಾಗರ: ಭೂಗರ್ಭ ರೋಚಕಗಳ ಆಗರ..!
Oct 06, 2022 02:05 PM IST
ಸಾಂದರ್ಭಿಕ ಚಿತ್ರ
- ಅಂತರಾಷ್ಟ್ರೀಯ ಅಧ್ಯಯನದ ಪ್ರಕಾರ, ಭೂಮಿಯ ಕೇಂದ್ರದಲ್ಲಿ ಭಾರೀ ಪ್ರಮಾಣದ ನೀರಿನ ಸಂಗ್ರಹ ಇರುವ ಬೃಹತ್ ಸಮುದ್ರವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಭೂಮಿಯ ಮೇಲ್ಮೈ ಮೇಲಿರುವ ಎಲ್ಲಾ ಸಾಗರಗಳ ಪರಿಮಾಣದ ಮೂರು ಪಟ್ಟು ನೀರಿನ ಸಂಗ್ರಹವನ್ನು ಈ ಸಮುದ್ರ ಹೊಂದಿದೆ ಎಂದೂ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಭೂಮಿಯ ಮೇಲಿನ ಮತ್ತು ಕೆಳಗಿನ ಪರಿವರ್ತನಾ ವಲಯದ ನಡುವೆ ಈ ಸಾಗರ ಪತ್ತೆಯಾಗಿದೆ ಎನ್ನಲಾಗಿದೆ.
ವಾಷಿಂಗ್ಟನ್: ಸಕಲ ಜೀವ ರಾಶಿಗಳನ್ನು ಸಾಕಿ ಸಲುಹುತ್ತಿರುವ ವಸುಧೆ, ತನ್ನ ಒಡಲಾಳದಲ್ಲಿಇಟ್ಟುಕೊಂಡಿರುವ ರಹಸ್ಯಗಳು ಒಂದೆರೆಡಲ್ಲ. ಜೀವಿಗಳ ಆವಾಸ ಸ್ಥಾನವಾಗಿರುವ ಬ್ರಹ್ಮಾಂಡದ ಏಕೈಕ ಗ್ರಹ ಎಂಬ ಖ್ಯಾತಿ ಪಡೆದಿರುವ ಭೂಮಿ, ವಿಶ್ವದ ಅತ್ಯಂತ ಸುಂದರ ಮತ್ತು ಅನನ್ಯ ರಚನೆ ಎಂಬುದರಲ್ಲಿ ಎರಡು ಮಾತಿಲ್ಲ.
ಭೂಮಿ ತನ್ನ ಒಡಲಾಳದಲ್ಲಿ ಅನೇಕ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಈ ಪೈಕಿ ಅತ್ಯಂತ ರೋಚಕ ರಹಸ್ಯವೊಂದನ್ನು ಭೂಗರ್ಭ ಶಾಸ್ತ್ರಜ್ಞರು ಹೊರಗೆಡವಿದ್ದಾರೆ. ಅಂತರಾಷ್ಟ್ರೀಯ ಅಧ್ಯಯನದ ಪ್ರಕಾರ, ಭೂಮಿಯ ಕೇಂದ್ರದಲ್ಲಿ ಭಾರೀ ಪ್ರಮಾಣದ ನೀರಿನ ಸಂಗ್ರಹ ಇರುವ ಬೃಹತ್ ಸಮುದ್ರವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಭೂಮಿಯ ಮೇಲ್ಮೈ ಮೇಲಿರುವ ಎಲ್ಲಾ ಸಾಗರಗಳ ಪರಿಮಾಣದ ಮೂರು ಪಟ್ಟು ನೀರಿನ ಸಂಗ್ರಹವನ್ನು ಈ ಸಮುದ್ರ ಹೊಂದಿದೆ ಎಂದೂ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಭೂಮಿಯ ಮೇಲಿನ ಮತ್ತು ಕೆಳಗಿನ ಪರಿವರ್ತನಾ ವಲಯದ ನಡುವೆ ಈ ಸಾಗರ ಪತ್ತೆಯಾಗಿದೆ ಎನ್ನಲಾಗಿದೆ. ಸಂಶೋಧನಾ ತಂಡವು ರಾಮನ್ ಸ್ಪೆಕ್ಟ್ರೋಸ್ಕೋಪಿ ಮತ್ತು ಎಫ್‌ಟಿಐಆರ್ ಸ್ಪೆಕ್ಟ್ರೋಮೆಟ್ರಿ ಸೇರಿದಂತೆ ಹಲವು ಅಧುನಿಕ ತಂತ್ರಜ್ಞಾನಗಳ ಸಹಾಯದಿಂದ, ಈ ರೋಚಕ ರಹಸ್ಯವನ್ನು ಬಯಲಿಗೆಳೆದಿದ್ದಾರರ.
ಭೂಮಿಯ ಮೇಲ್ಮೈಯಿಂದ 660 ಮೀಟರ್ ಕೆಳಗೆ ರೂಪುಗೊಂಡ ವಜ್ರದ ಪ್ರಮಾಣವನ್ನು ವಿಶ್ಲೇಷಣೆ ಮಾಡಿರುವ ಈ ಸಂಶೋಧನಾ ತಂಡ, ಭುಮಿಯ ಕೇಂದ್ರದಲ್ಲಿ ಬಥಹತ್ ಸಾಗರ ಇರುವುದನ್ನು ಪತ್ತೆ ಮಾಡಿದೆ. ಸಮುದ್ರದ ನೀರು ಚಪ್ಪಡಿಗಳನ್ನು ಒಳಗೊಳ್ಳುತ್ತದೆ ಮತ್ತು ಹೀಗೆ ಪರಿವರ್ತನೆಯ ವಲಯವನ್ನು ಪ್ರವೇಶಿಸುತ್ತದೆ. ಅಂದರೆ ನಮ್ಮ ಗ್ರಹದ ಜಲಚಕ್ರವು ಭೂಮಿಯ ಒಳಭಾಗವನ್ನೂ ಒಳಗೊಂಡಿದೆ ಎಂದು ಈ ಸಂಶೋಧನಾ ತಂಡ ಅಭಿಪ್ರಾಯಪಟ್ಟಿದೆ.
ಈ ಖನಿಜ ರೂಪಾಂತರಗಳು ಭೂಮಿಯ ಒಳಗಿನ ಬಂಡೆಯ ಚಲನೆಯನ್ನು ಬಹುವಾಗಿ ತಡೆಹಿಡಿಯುತ್ತವೆ. ಮ್ಯಾಂಟಲ್ ಪ್ಲೂಮ್‌ಗಳು, ಆಳವಾದ ಬಿಸಿ ಬಂಡೆಯ ಏರುತ್ತಿರುವ ಕಾಲಮ್‌ಗಳು ಕೆಲವೊಮ್ಮೆ ಸಂಕ್ರಮಣ ವಲಯದ ಕೆಳಗೆ ನೇರವಾಗಿ ನಿಲ್ಲುತ್ತವೆ. ಇದರ ವಿರುದ್ಧ ದಿಕ್ಕಿನಲ್ಲಿ ದ್ರವ್ಯರಾಶಿಯ ಚಲನೆಯೂ ನಿಲ್ಲುತ್ತದೆ ಎಂದು ಫ್ರಾಂಕ್‌ಫರ್ಟ್‌ನಲ್ಲಿರುವ ಗೋಥೆ ವಿಶ್ವವಿದ್ಯಾಲಯದ ಭೂವಿಜ್ಞಾನದ ಸಂಸ್ಥೆಯ ಪ್ರೊ. ಫ್ರಾಂಕ್ ಬ್ರೆಂಕರ್ ಹೇಳಿದ್ದಾರೆ.
ಸಬ್ಡಕ್ಟಿಂಗ್ ಪ್ಲೇಟ್‌ಗಳು ಸಾಮಾನ್ಯವಾಗಿ ಸಂಪೂರ್ಣ ಪರಿವರ್ತನೆಯ ವಲಯವನ್ನು ಭೇದಿಸಲು ಕಷ್ಟಪಡುತ್ತವೆ. ಆದ್ದರಿಂದ ಯುರೋಪಿನ ಕೆಳಗಿರುವ ಈ ವಲಯದಲ್ಲಿ ಅಂತಹ ಫಲಕಗಳ ಪೂರ್ಣ ಪ್ರಮಾಣದ ಸ್ಮಶಾನವೇ ಅಡಗಿದೆ ಎಂದು ಪ್ರೊ. ಫ್ರಾಂಕ್ ಬ್ರೆಂಕರ್ ಸ್ಪಷ್ಟಪಡಿಸಿದ್ದಾರೆ.
ಪರಿವರ್ತನಾ ವಲಯದ ಭೂರಾಸಾಯನಿಕ ಸಂಯೋಜನೆ, ಹೆಚ್ಚಿನ ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಆದರೆ ಇದುವರೆಗೂ ಹೆಚ್ಚು ಸ್ಥಿರವಾದ ರೂಪದಲ್ಲಿ ಪರಿವರ್ತನೆಯ ವಲಯವನ್ನು ಪ್ರವೇಶಿಸಿರುವ ನೀರಿನ ಪ್ರಮಾಣ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ ಎಂದು ಪ್ರೊ. ಫ್ರಾಂಕ್ ಬ್ರೆಂಕರ್ ಮಾಹಿತಿ ನೀಡಿದ್ಧಾರೆ.
ಆದರೆ ಸದ್ಯದ ಭೂ ಕೇಂದ್ರದ ಪರಿಸ್ಥಿತಿಗಳು ಖಂಡಿತವಾಗಿಯೂ ಭಾರೀ ಪ್ರಮಾಣದ ನೀರಿನ ಸಂಗ್ರಹಕ್ಕೆ ಅನುಕೂಲಕರವಾಗಿದೆ. ದಟ್ಟವಾದ ಖನಿಜಗಳಾದ ವಾಡ್ಸ್ಲೇಲೈಟ್ ಮತ್ತು ರಿಂಗ್‌ವುಡೈಟ್‌ಗಳು ದೊಡ್ಡ ಪ್ರಮಾಣದ ನೀರನ್ನು ಸಂಗ್ರಹಿಸಬಲ್ಲವು. ಆದ್ದರಿಂದ ಭೂಕೇಂದ್ರದ ಗಡಿ ಪದರವು ನೀರನ್ನು ಸಂಗ್ರಹಿಸುವ ಅಗಾಧ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರೆಂಕರ್ ತಿಳಿಸಿದ್ಧಾರೆ.
ಫ್ರಾಂಕ್‌ಫರ್ಟ್ ಭೂವಿಜ್ಞಾನಿಯ ನೇತೃತ್ವದ ಈ ಅಂತಾರಾಷ್ಟ್ರೀಯ ಸಂಶೋಧನಾ ತಂಡ, ಭೂಮಿಯಿಂದ 660 ಕಿ.ಮೀ. ಆಳದಲ್ಲಿ ರೂಪುಗೊಂಡ ಆಫ್ರಿಕಾದ ಬೋಟ್ಸ್ವಾನಾದ ವಜ್ರವನ್ನು ವಿಶ್ಲೇಷಣೆ ಮಾಡಿದೆ. ಸಂಕ್ರಮಣ ವಲಯ ಮತ್ತು ಭೂಕೇಂದ್ರದ ನಡುವಿನ ಅಂತರ ಸಂಪರ್ಕದಲ್ಲಿ, ರಿಂಗ್‌ವುಡೈಟ್ ಖನಿಜ ಹೇರಳ ಪ್ರಮಾಣದಲ್ಲಿದೆ. ಇದು ಹೆಚ್ಚಿನ ನೀರಿನ ಅಂಶವನ್ನು ದೃಢೀಕರಿಸುತ್ತದೆ ಎಂದು ಸಂಶೋಧನಾ ತಂಡ ಹೇಳಿದೆ.