ಶಬರಿಮಲೆ ಮಂಡಲೋತ್ಸವ ಆರಂಭ, ನವೆಂಬರ್ 30ವರೆಗೆ ಆನ್ಲೈನ್ ಬುಕ್ಕಿಂಗ್ ಫುಲ್, ಅಯ್ಯಪ್ಪ ದರ್ಶನ ವಿಷೇಶತೆಗಳೇನು?
Nov 17, 2024 12:02 PM IST
ಶಬರಿಮಲೆ ಮಂಡಲೋತ್ಸವ ಆರಂಭ, ನವೆಂಬರ್ 30ವರೆಗೆ ಆನ್ಲೈನ್ ಬುಕ್ಕಿಂಗ್ ಫುಲ್, ಅಯ್ಯಪ್ಪ ದರ್ಶನ ವಿಷೇಶತೆಗಳೇನು?
- Sabarimala Mandala Mahotsavam: ಸರ್ವ ಸಿದ್ಧತೆಯೊಂದಿಗೆ ಶಬರಿಮಲೆ ಮಂಡಲ ಮಹೋತ್ಸವ ಹಾಗೂ ಮಕರಜ್ಯೋತಿ ಉತ್ಸವ ಆರಂಭಗೊಂಡಿದೆ. ನವೆಂಬರ್ 16ರ ಶನಿವಾರದಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. (ವರದಿ-ಹರೀಶ ಮಾಂಬಾಡಿ)
ಕಾಸರಗೋಡು: ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಭಕ್ತರ ಸ್ವಾಗತಕ್ಕೆ ಅಲ್ಲಿನ ದೇವಸ್ವಂ ಬೋರ್ಡ್ ಸಜ್ಜಾಗುತ್ತಿದೆ. ಈಗಾಗಲೇ ಮಂಡಲೋತ್ಸವ (Sabarimala Mandala Mahotsavam) ಆರಂಭಗೊಂಡಿದೆ. ಡಿಸೆಂಬರ್ 26ರಂದು ಮಂಡಳ ಪೂಜೆ, ಜನವರಿ 14ರಂದು ಮಕರ ಜ್ಯೋತಿ ದರ್ಶನವಿದೆ. ಈಗಾಗಲೇ ಆನ್ಲೈನ್ ಬುಕ್ಕಿಂಗ್ ಫುಲ್ ನವೆಂಬರ್ 30ರವರೆಗೆ ಆಗಿದೆ. ಸರ್ವ ಸಿದ್ಧತೆಯೊಂದಿಗೆ ಶಬರಿಮಲೆ ಮಂಡಲ ಮಹೋತ್ಸವ ಹಾಗೂ ಮಕರಜ್ಯೋತಿ ಉತ್ಸವ ಶುಕ್ರವಾರ (ನವೆಂಬರ್ 15) ಸಂಜೆಯಿಂದಲೇ ಆರಂಭಗೊಂಡಿದೆ. ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ ಬಳಿಕ ಸನ್ನಿಧಾನದ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಶನಿವಾರದಿಂದ (ನವೆಂಬರ್ 16) ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನವೆಂಬರ್ 30ರವರೆಗೆ ಆನ್ಲೈನ್ ಬುಕ್ಕಿಂಗ್ ಫುಲ್ ಆಗಿದೆ. ಪ್ರತಿ ದಿನಕ್ಕೆ 70 ಸಾವಿರ ಭಕ್ತರಿಗೆ ಅವಕಾಶ ನೀಡುವ ರೀತಿಯಲ್ಲಿ ಆನ್ಲೈನ್ ಬುಕ್ಕಿಂಗ್ ಮಾಡಲಾಗುತ್ತಿದೆ. ನೇರ ತೆರಳುವ ಭಕ್ತರಿಗೆ ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆ ಇದ್ದು, 10 ಸಾವಿರ ಭಕ್ತರಿಗೆ ಈ ಸೌಲಭ್ಯ ದೊರೆಯಲಿದೆ.
ಮಂಡಲ ಪೂಜೆ ಸಮಯ ಹೀಗಿದೆ…
ಡಿಸೆಂಬರ್ 26ರಂದು ಸಂಜೆ 6.30ಕ್ಕೆ ಮಂಡಲ ಪೂಜೆ ಸನ್ನಿಧಾನದಲ್ಲಿ ನಡೆಯಲಿದೆ. ಅಲ್ಲಿವರೆಗೆ ಪ್ರತಿದಿನ ಬೆಳಗ್ಗೆ 3 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ 3ರಿಂದ ರಾತ್ರಿ 11 ಗಂಟೆವರೆಗೆ ಅಯ್ಯಪ್ಪ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ. ಬೆಳಗ್ಗೆ 3.30ರಿಂದ ತುಪ್ಪಾಭಿಷೇಕ, 7.30ಕ್ಕೆ ಉಷಃಪೂಜೆ, ಮಧ್ಯಾಹ್ನ 12.30ಕ್ಕೆ ಪೂಜೆ, ಸಂಜೆ 6.30ಕ್ಕೆ ದೀಪಾರಾಧನೆ, ರಾತ್ರಿ 9.30ಕ್ಕೆ ಅತ್ತಾಯ ಪೂಜೆ, 11 ಗಂಟೆಗೆ ಪರಿವಾರಾಸನಂ ಗೀತೆಯೊಂದಿಗೆ ಬಾಗಿಲು ಹಾಕುವುದು. ಡಿಸೆಂಬರ್ 1ರಿಂದ ಜನವರಿ 19ರವರೆಗೆ ಮಕರ ಉತ್ಸವ ಪೂರ್ಣಗೊಳ್ಳುವವರೆಗೆ ಬಾಗಿಲು ತೆರೆದಿರುತ್ತದೆ. ಜನವರಿ 14ರಂದು ಮಕರಜ್ಯೋತಿ ದರ್ಶನ.
18 ಮೆಟ್ಟಿಲಿಗಿಂತ ಮೇಲೆ ಮೊಬೈಲ್ ಬಳಕೆಗೆ ನಿರ್ಬಂಧ
ಶಬರಿಮಲೆಯ ಅಯ್ಯಪ್ಪ ಸನ್ನಿಧಾನದಲ್ಲಿ ಮೊಬೈಲ್ ಫೋನ್ ಬಳಕೆ ನಿರ್ಬಂಧಿಸಲಾಗಿದೆ. ಮೊಬೈಲ್ ಫೋನ್ ಕ್ಯಾಮರಾ ಮೂಲಕ ದೃಶ್ಯಗಳನ್ನು ಸೆರೆಹಿಡಿಯುವುದು ಕಂಡುಬಂದ ಹಿನ್ನೆಲೆಯಲ್ಲಿ 18 ಮೆಟ್ಟಿಲಿಗಿಂತ ಮೇಲೆ ಮೊಬೈಲ್ ಬಳಕೆ ನಿರ್ಬಂಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಪಿಎಸ್ ಪ್ರಶಾಂತ್ ತಿಳಿಸಿದ್ದಾರೆ.
ವಿಶೇಷ ಹವಾಮಾನ ಮುನ್ಸೂಚನೆ
ಶಬರಿಮಲೆ ಯಾತ್ರಿಕರಿಗೆ ತಿರುವನಂತಪುರದ ಹವಾಮಾನ ನಿರೀಕ್ಷಣಾ ಕೇಂದ್ರದ ವಿಶೇಷ ಹವಾಮಾನ ಮುನ್ಸೂಚನೆ ದೊರಕಲಿದೆ. ಸನ್ನಿಧಾನ, ಪಂಪಾ, ನಿಲಕ್ಕಲ್ ಕೇಂದ್ರೀಕರಿಸಿ ಹವಾಮಾನ ಮುನ್ಸೂಚನೆ ನೀಡಲಾಗುವುದು. ಈ 3 ಕೇಂದ್ರಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಉಂಟು ಎಂದು ಗುರುವಾರ ಮೊದಲ ಮುನ್ಸೂಚನಾ ವರದಿ ತಿಳಿಸಿತ್ತು. ಮಳೆ ಸಾಧ್ಯತೆ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ಗಂಟೆಗಳ ಮುಂಚಿತವಾಗಿ ಮಾಹಿತಿ ನೀಡುವ ವ್ಯವಸ್ಥೆ ಇದೆ.
ಎಸ್ಎನ್ಎಲ್ ವೈಫೈ ವ್ಯವಸ್ಥೆ ಹೀಗಿದೆ
ಈ ಬಾರಿ ಮಂಡಲ, ಮಕರಜ್ಯೋತಿ ತೀರ್ಥಯಾತ್ರೆ ಸಂದರ್ಭ ಸನ್ನಿಧಾನ, ಶರಂಗುತ್ತಿ, ಪಂಪಾ ಮತ್ತು ನಿಲಕ್ಕರ್ನಲ್ಲಿ ಅರ್ಧ ಗಂಟೆಗಳ ಉಚಿತ ಇಂಟರ್ನೆಟ್ ಸೇವೆ ಲಭ್ಯವಿದೆ. ದೇವಸ್ವಂ ಬೋರ್ಡ್ ಮತ್ತು ಬಿಎಸ್ಎನ್ಎಲ್ ಜಂಟಿಯಾಗಿ ಈ ವೈಫೈ ಸ್ವಿಮ್ ಬೋರ್ಡ್ ಯೋಜನೆ ಕಾರ್ಯಗತಗೊಳಿಸಿದೆ. ಪಂಪಾ, ನಿಲಕ್ಕಲ್ನ ಎಲ್ಲ ಭಾಗಗಳಲ್ಲಿ ಹಾಗೂ ಶರಂಗುತ್ತಿಯಿಂದ ಸನ್ನಿಧಾನದವರೆಗೆ ಈ ಉಚಿತವೈಫೈ ಸೇವೆ ಬಳಸಬಹುದು. ಮೊಬೈಲ್ ಫೋನ್ ನಲ್ಲಿ ವೈಫೈ ಸಂಪರ್ಕಿಸಿದಾಗ ಲಭಿಸುವ BSNLWiFi ಮೂಲಕ ಇಂಟರ್ನೆಟ್ ಸೇವೆ ಪಡೆಯಬಹುದು ಎಂದು ದೇವಸ್ವಂ ಬೋರ್ಡ್ ಹೇಳಿದೆ.
ಇದನ್ನು ಆಯ್ಕೆ ಮಾಡಿದ ಕೂಡಲೇ ಮೊಬೈಲ್ ಸಂಖ್ಯೆಗೆ ಲಭಿಸುವ ಒಟಿಪಿಯನ್ನು ದಾಖಲಿಸಿದಾಗ ಉಚಿತ ವೈಫೈ ಸಂಪರ್ಕ ಪಡೆಯಬಹುದು. ಅರ್ಧ ಗಂಟೆ ಬಳಿಕ ಇಂಟರ್ನೆಟ್ ರೀಚಾರ್ಜ್ ಮಾಡುವ ಅವಕಾಶವನ್ನೂ ನೀಡಲಾಗುತ್ತದೆ. ಆನ್ಲೈನ್ನಲ್ಲಿ ಹಣ ಪಾವತಿಸಿ ವೈಫೈ ಪಡೆಯಬಹುದಾಗಿದೆ. ಸನ್ನಿಧಾನದ 22, ಪಂಪಾ 13 ಮತ್ತು ನಿಲಕ್ಕಲ್ 13 ವೈಫೈ ಸ್ವಿಮ್ ಬೋರ್ಡ್ಗಳನ್ನು ಅಳವಡಿಸಲಾಗಿದೆ. ಬಿಎಸ್ಎನ್ಎಲ್ ಸರ್ವತ್ರ ಎಂಬ ಹೆಸರಿನ ಹೊಸ ವೈಫೈ ರೋಮಿಂಗ್ ವ್ಯವಸ್ಥೆಯೂ ಮೂರು ಕಡೆ ಸಿಗಲಿದೆ. ಮನೆಯಲ್ಲಿ ಎಸ್ಎನ್ಎಲ್ ಫೈಬರ್ ಕನೆಕ್ಷನ್ ಹೊಂದಿದವರು.
ಶಬರಿಮಲೆಯಲ್ಲಿ ವೈಫೈ ರೋಮಿಂಗ್ ವ್ಯವಸ್ಥೆ ಬಳಸುವ ಮೂಲಕ ಸೌಲಭ್ಯ ಪಡೆಯಲು ಸಾಧ್ಯ. ಇದಕ್ಕಾಗಿ http://portal.bsnl.in/ftth/wifiroaming ಎಂಬ ಪೋರ್ಟಲ್ ಅಥವಾ BSNL WiFi roaming ಎಂಬ ವೈಫೈ ಪಾಯಿಂಟ್ನಿಂದ ನೋಂದಾಯಿಸಿಕೊಳ್ಳಬೇಕು. ಯಾತ್ರಾ ಮಾರ್ಗದಲ್ಲಿ ಮೊಬೈಲ್ ಕವರೇಜ್ ಸುಗಮಗೊಳಿಸಲು 21 ಮೊಬೈಲ್ ಟವರ್ಗಳನ್ನು ಸ್ಥಾಪಿಸಲಾಗಿದೆ. ಸೇವೆಗಳಿಗಾಗಿ ಮೊಬೈಲ್ ಸಂಖ್ಯೆ 9400901010, ಚಾಟ್ ಬಾಕ್ಸ್ 18004444 ಸಂಪರ್ಕಿಸುವಂತೆ ಬಿಎಸ್ಎನ್ಎಲ್ ಪ್ರಿನ್ಸಿಪಲ್ ಜನರಲ್ ಮ್ಯಾನೇಜರ್ ಕೆ ಸಾಜು ಜಾರ್ಜ್ ಮಾಹಿತಿ ನೀಡಿದ್ದಾರೆ.