ಶಬರಿಮಲೆ ಮಂಡಲ-ಮಕರ ಜ್ಯೋತಿ ಉತ್ಸವ ಶುರು; ಸಾವಿರಾರು ಭಕ್ತರಿಂದ ಅಯ್ಯಪ್ಪ ಸ್ವಾಮಿ ದರ್ಶನ, ಮುಗಿಲು ಮುಟ್ಟಿದ ಶರಣು ಘೋಷ
ಇತಿಹಾಸ ಪ್ರಸಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿ (ಶಬರಿಮಲೆ ಶ್ರೀ ಧರ್ಮ ಶಾಸ್ತಾ ದೇವಸ್ಥಾನ) ಕ್ಷೇತ್ರದಲ್ಲಿ ವಾರ್ಷಿಕ ಮಂಡಲ- ಮಕರ ಜ್ಯೋತಿ ಉತ್ಸವ ಶುಕ್ರವಾರ (ನವೆಂಬರ್ 15) ಸಂಜೆ ಶುರುವಾಗಿದೆ. ಮೊದಲ ದಿನವೇ 80 ಸಾವಿರಕ್ಕೂ ಹೆಚ್ಚು ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನ ಪಡೆದರು. ಶರಣು ಘೋಷ ಮುಗಿಲು ಮುಟ್ಟಿತ್ತು.
ಪತ್ತನಂತಿಟ್ಟ: ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಇತಿಹಾಸ ಪ್ರಸಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿ (ಶಬರಿಮಲೆ ಶ್ರೀ ಧರ್ಮ ಶಾಸ್ತಾ ದೇವಸ್ಥಾನ) ಕ್ಷೇತ್ರದಲ್ಲಿ ವಾರ್ಷಿಕ ಮಂಡಲ- ಮಕರ ಜ್ಯೋತಿ ಉತ್ಸವ ಶುರುವಾಗಿದೆ. ಶುಕ್ರವಾರ (ನವೆಂಬರ್ 15) ಸಂಜೆ ಹರಿಹರ ಪುತ್ರ ಅಯ್ಯಪ್ಪ ಸ್ವಾಮಿಯ ದೇಗುಲದ ಗರ್ಭ ಗುಡಿಯ ಬಾಗಿಲು ತೆರೆದ ಮೇಲ್ಶಾಂತಿ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಶನಿವಾರ (ನವೆಂಬರ್ 17) ಮುಂಜಾನೆಯಿಂದಲೇ ಅಯ್ಯಪ್ಪ ಭಕ್ತರು ಸರದಿ ನಿಂತು ಸ್ವಾಮಿ ಅಯ್ಯಪ್ಪನ ದರ್ಶನ ಪಡೆದು ಪುನೀತರಾದರು. ಸಾವಿರಾರು ಭಕ್ತರು ನಿತ್ಯವೂ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆಗಮಿಸುತ್ತಿದ್ದು, ಪಂಪಾ ನದಿ ತಟದಲ್ಲಿ ಬೀಡುಬಿಟ್ಟು ಅಲ್ಲಿಂದ ತೀರ್ಥ ಸ್ನಾನ ಮುಗಿಸಿ ಬೆಟ್ಟ ಏರುತ್ತಿದ್ದಾರೆ. ಶಬರಿಮಲೆಯಲ್ಲಿ ಮಂಡಲ ಉತ್ಸವವು 41 ದಿನಗಳ ಕಾಲ ಇದ್ದು, ಅದಾಗಿ ಮಕರ ಜ್ಯೋತಿ ಉತ್ಸವ ನಡೆಯುತ್ತದೆ.
ಮೊದಲ ದಿನವೇ 83 ಸಾವಿರಕ್ಕೂ ಹೆಚ್ಚು ಭಕ್ತರಿಂದ ಶಬರಿಮಲೆ ಅಯ್ಯಪ್ಪ ದರ್ಶನ
ಶಬರಿಮಲೆ ಶ್ರೀ ಧರ್ಮ ಶಾಸ್ತಾ ದೇವಸ್ಥಾನದಲ್ಲಿ ಶುಕ್ರವಾರ (ನವೆಂಬರ್ 15) ಅಪರಾಹ್ನ ಅಯ್ಯಪ್ಪ ಸ್ವಾಮಿ ದೇವರ ಗರ್ಭ ಗುಡಿ ತೆರೆದ ಬಳಿಕ 83,429 ಭಕ್ತರು ದೇವರ ದರ್ಶನ ಮಾಡಿದ್ದಾರೆ. ನವೆಂಬರ್ 30ರ ತನಕ ವರ್ಚುವಲ್ ಕ್ಯೂ ಪೂರ್ತಿ ಭರ್ತಿಯಾಗಿದೆ. ಶನಿವಾರ ಸಂಜೆ 5 ಗಂಟೆ ತನಕ ಶಬರಿಮಲೆ ಬೆಟ್ಟ ಏರಿದ ಭಕ್ತರ ಸಂಖ್ಯೆ 54,615. ಈ ಪೈಕಿ 39,038 ಭಕ್ತರು ವರ್ಚುವಲ್ ಕ್ಯೂ ಸಿಸ್ಟಮ್‌ನಲ್ಲಿ ಮೊದಲೇ ಬುಕ್ ಮಾಡಿದ್ದವರು. 4,535 ಭಕ್ತರು ಸ್ಪಾಟ್ ಬುಕ್ಕಿಂಗ್ ಮಾಡಿಕೊಂಡು ಬೆಟ್ಟ ಏರಿದವರು. ಇದಲ್ಲದೆ, ಬೇರೆ ದಿನಗಳಲ್ಲಿ ಬೆಟ್ಟ ಏರುವುದಕ್ಕೆ ಸರದಿ ಕಾಯ್ದಿರಿಸಿದ್ದ 11,042 ಭಕ್ತರು ಕೂಡ ಶನಿವಾರವೇ ಬೆಟ್ಟ ಏರಿದ್ದಾರೆ ಎಂದು ದ ಹಿಂದೂ ವರದಿ ಮಾಡಿದೆ.
ದೇವಸ್ಥಾನದಲ್ಲಿ ಗಂಟೆಗೆ 3000 ಭಕ್ತರು ದೇವರ ದರ್ಶನ ಪಡೆದು ಹಿಂದಿರುಗುತ್ತಿದ್ದಾರೆ. ಶುಕ್ರವಾರ ಸಂಜೆ 26,942 ಭಕ್ತರು ದೇವಸ್ಥಾನ ತಲುಪಿದ್ದು, ಎಲ್ಲರೂ ವರ್ಚುವಲ್ ಕ್ಯೂ ಸಿಸ್ಟಮ್‌ನಲ್ಲಿ ಮುಂಗಡವಾಗಿ ಬುಕ್ ಮಾಡಿಕೊಂಡಿದ್ದರು. ಇದಲ್ಲದೆ, 1872 ಭಕ್ತರು ಸ್ಪಾಟ್ ಬುಕ್ಕಿಂಗ್ ಮೂಲಕ ಸರದಿ ಕಾಯ್ದಿರಿಸಿಕೊಂಡು ಸನ್ನಿದಾನ ತಲುಪಿದ್ದಾರೆ. ಪವಿತ್ರವಾದ ಹದಿನೆಂಟು ಮೆಟ್ಟಿಲುಗಳ ಬಳಿ ಭಕ್ತರ ನೆರವಿಗಾಗಿ ಪೊಲೀಸರು ನಿಂತಿದ್ದು, ಅವರು ಪ್ರತಿ ನಿಮಿಷಕ್ಕೆ 80 ಭಕ್ತರನ್ನು ಮೆಟ್ಟಿಲೇರುವಂತೆ ಮಾಡುತ್ತಿದ್ದಾರೆ ಎಂದು ದೇವಸ್ವಂ ಸಚಿವ ವಿ ಎನ್ ವಾಸವನ್ ಹೇಳಿದ್ದಾಗಿ ವರದಿ ಹೇಳಿದೆ.
ಸರ್ಕಾರ ಈಗಾಗಲೇ ವರ್ಚುವಲ್ ಕ್ಯೂ ಬುಕ್ಕಿಂಗ್‌ಗೆ ದಿನಕ್ಕೆ 70,000 ಯಾತ್ರಾರ್ಥಿಗಳಿಗೆ ಮಿತಿಯನ್ನು ನಿಗದಿಪಡಿಸಿದೆ. ಹೆಚ್ಚುವರಿಯಾಗಿ, ಸ್ಪಾಟ್ ಬುಕಿಂಗ್ ವ್ಯವಸ್ಥೆಯ ಮೂಲಕ 10,000 ಭಕ್ತರಿಗೆ ದರ್ಶನಕ್ಕಾಗಿ ಸ್ಲಾಟ್‌ಗಳನ್ನು ಕಾಯ್ದಿರಿಸಲು ಅವಕಾಶ ನೀಡಲಾಗುತ್ತದೆ. ಸ್ಪಾಟ್ ಬುಕಿಂಗ್ ವ್ಯವಸ್ಥೆಯಡಿ, ಯಾತ್ರಿಕರು ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಸ್ಥಾಪಿಸಲಾದ ಕೌಂಟರ್‌ಗಳಲ್ಲಿ ದರ್ಶನ ಸ್ಲಾಟ್‌ಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ಕೇರಳದ ದೇವಸ್ವಂ ಸಚಿವ ವಿ ಎನ್ ವಾಸವನ್ ತಿಳಿಸಿದ್ಧಾಗಿ ಪಿಟಿಐ ವರದಿ ಮಾಡಿದೆ.
ಶಬರಿಮಲೆ ಮಂಡಲ ಮಕರ ಜ್ಯೋತಿ ಉತ್ಸವ ಆಚರಣೆ
ಶಬರಿಮಲೆ ಶ್ರೀ ಧರ್ಮಶಾಸ್ತಾ ದೇವಸ್ಥಾನದ ಮಂಡಲ ಮತ್ತು ಮಕರ ಜ್ಯೋತಿ ಉತ್ಸವ ಆಚರಣೆಗೆ ಶುಕ್ರವಾರ ಚಾಲನೆ ಸಿಕ್ಕಿದೆ. ನಿರ್ಗಮಿತ ಮೇಲ್ಶಾಂತಿ (ಪ್ರಧಾನ ಅರ್ಚಕ) ಪಿ.ಎನ್.ಮಹೇಶ್ ನಂಬೂತಿರಿ ಅವರು ದೇವಸ್ಥಾನದ ಗರ್ಭಗುಡಿಯನ್ನು ತೆರೆದು, ಉತ್ಸವಕ್ಕೆ ಅವಕಾಶ ಮಾಡಿಕೊಟ್ಟರು. ನೂತನವಾಗಿ ನೇಮಕಗೊಂಡ ಮೇಲ್ಶಾಂತಿಗಳಾದ ಎಸ್.ಅರುಣ್ ಕುಮಾರ್ ನಂಬೂತಿರಿ ಮತ್ತು ವಾಸುದೇವನ್ ನಂಬೂತಿರಿ ಅವರು ಅಯ್ಯಪ್ಪ ದೇವಸ್ಥಾನ ಮತ್ತು ಮಾಳಿಗಪ್ಪುರಂ ದೇವಿ ದೇವಸ್ಥಾನದಲ್ಲಿ ಅಧಿಕೃತವಾಗಿ ಪೂಜಾ ನಿರ್ವಹಣೆಯ ಅಧಿಕಾರ ವಹಿಸಿಕೊಂಡರು.