logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kiran Rijiju: ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭುಗಿಲೆದ್ದ ಆಕ್ರೋಶ: ಭಾರತದ ವರ್ಚಸ್ಸು ಕುಗ್ಗಿಸುವ ಪ್ರಯತ್ನ ಎಂದ ರಿಜಿಜು

Kiran Rijiju: ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭುಗಿಲೆದ್ದ ಆಕ್ರೋಶ: ಭಾರತದ ವರ್ಚಸ್ಸು ಕುಗ್ಗಿಸುವ ಪ್ರಯತ್ನ ಎಂದ ರಿಜಿಜು

HT Kannada Desk HT Kannada

Jan 22, 2023 03:50 PM IST

google News

ಕಿರಣ್‌ ರಿಜಿಜು (ಸಂಗ್ರಹ ಚಿತ್ರ)

    • ಗುಜರಾತ್‌ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪಾತ್ರದ ಕುರಿತು ಬಿಬಿಸಿಯಲ್ಲಿ ಪ್ರಸಾರವಾದ ಸಾಕ್ಷ್ಯಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿರುವವ ಕೇಂದ್ರ ಸಚಿವ ಕಿರಣ್‌ ರಿಜಿಜು, ಕೆಲವರು ಬಿಬಿಸಿಯನ್ನು ಸುಪ್ರೀಂಕೋರ್ಟ್‌ಗಿಂತ ದೊಡ್ಡದು ಎಂದು ಭಾವಿಸಿದಂತಿದೆ ಎಂದು ಹರಿಹಾಯ್ದಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..
ಕಿರಣ್‌ ರಿಜಿಜು (ಸಂಗ್ರಹ ಚಿತ್ರ)
ಕಿರಣ್‌ ರಿಜಿಜು (ಸಂಗ್ರಹ ಚಿತ್ರ) (PTI)

ನವದೆಹಲಿ: ಬಿಬಿಸಿಯಲ್ಲಿ ಪ್ರಸಾರವಾಗಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತಾದ ಸಾಕ್ಷ್ಯಚಿತ್ರವೊಂದು ಇದೀಗ ವಿವಾದ ಎಬ್ಬಿಸಿದೆ. ಗುಜರಾತ್‌ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪಾತ್ರದ ಕುರಿತು ಬಿಬಿಸಿಯಲ್ಲಿ ಪ್ರಸಾರವಾದ ಸಾಕ್ಷ್ಯಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಮಾತನಾಡಿರುವವ ಕೇಂದ್ರ ಸಚಿವ ಕಿರಣ್‌ ರಿಜಿಜು, ಕೆಲವರು ಬಿಬಿಸಿಯನ್ನು ಸುಪ್ರೀಂಕೋರ್ಟ್‌ಗಿಂತ ದೊಡ್ಡದು ಎಂದು ಭಾವಿಸಿದಂತಿದೆ ಎಂದು ಹರಿಹಾಯ್ದಿದ್ದಾರೆ. ಗುಜರಾತ್‌ ಗಲಭೆ ವಿಚಾರವಾಗಿ ಸುಪ್ರೀಂಕೋರ್ಟ್‌ ಪ್ರಧಾನಿ ಮೋದಿ ಅವರಿಗೆ ಕ್ಲಿನ್‌ಚಿಟ್‌ ನೀಡಿದ್ದು, ಮೋದಿ ಅವರ ವ್ಯಕ್ತಿತ್ವ ಹರಣ ಮಾಡಲೆಂದೇ ಬಿಬಿಸಿ ಸುಳ್ಳು ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದೆ ಎಂದು ಕಿರಣ್‌ ರಿಜಿಜು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಭಾರತದ ಬಗ್ಗೆ ದೇಶದ ಒಳಗೂ ಹಾಗೂ ಹೊರಗೂ ಬಿಬಿಸಿ ದುರುದ್ದೇಶಪೂರಿತ ಅಭಿಯಾನ ನಡೆಸುತ್ತಿದೆ. ಭಾರತ ದೇಶದ ಘನತೆಯನ್ನು ಕುಗ್ಗಿಸಬೇಕು, ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಹಾಳು ಮಾಡಬೇಕು ಎಂಬುದು ಬಿಬಿಸಿಯ ಉದ್ದೇಶವಾಗಿದೆ ಎಂದು ಕಿರಣ್‌ ರಿಜಿಜು ಗಂಭೀರ ಆರೋಪ ಮಾಡಿದ್ದಾರೆ.

ಬಿಬಿಸಿ ತಮ್ಮ ನೈತಿಕ ಗುರುಗಳನ್ನು ಮೆಚ್ಚಿಸುವ ಪ್ರಯತ್ನದಲ್ಲಿದೆ. ಇದಕ್ಕಾಗಿ ಅದು ಪ್ರಧಾನಿ ಮೋದಿ ಅವರ ವ್ಯಕ್ತಿತ್ವದ ಮೇಲೆ ಮಸಿ ಬಳಿಯಲೂ ಹೇಸುವುದಿಲ್ಲ. ಆದರೆ ಬಿಬಿಸಿ ಕೇವಲ ಪ್ರಧಾನಿ ಮೋದಿ ಅವರ ಮೇಲೆ ಮಾತ್ರವಲ್ಲ, ಭಾರತದ ಮೇಲೂ ಪರೋಕ್ಷವಾಗಿ ದಾಳಿ ಮಾಡುತ್ತಿದೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಕಿರಣ್‌ ರಿಜಿಜು ಗುಡುಗಿದ್ದಾರೆ.

''ಭಾರತದಲ್ಲಿ ಬಹುಸಂಖ್ಯಾತರು ಮತ್ತು ಅಲಪಸಂಖ್ಯಾತರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಅಲ್ಪಸಂಖ್ಯಾತರು ಈ ದೇಶದಲ್ಲಿ ಸುರಕ್ಷಿತ ಹಾಗೂ ಧನಾತ್ಮಕ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ. ಪ್ರಧಾನಿ ಮೋದಿ ಅವರು ದೇಶದ 140 ಕೋಟಿ ಪ್ರಜೆಗಳ ಪ್ರತಿನಿಧಿಯಾಗಿದ್ದು, ಅವರು 140 ಕೋಟಿ ಜನರ ಧ್ವನಿಯೂ ಹೌದು..'' ಎಂದು ಕಿರಣ್ ರಿಜಿಜು ಟ್ವೀಟ್‌ ಮಾಡಿದ್ದಾರೆ.

ಭಾರತದಲ್ಲಿ ಕೆಲವರು ಇನ್ನೂ ವಸಾಹತುಶಾಹಿ ಅಮಲಿನಿಂದ ಹೊರಗೆ ಬಂದಿಲ್ಲ. ಬಿಬಿಸಿಯನ್ನು ಅವರು ಸುಪ್ರೀಂ ಕೋರ್ಟ್‌ಗಿಂತಲೂ ದೊಡ್ಡದು ಎಂದು ಭಾವಿಸಿದ್ದಾರೆ. ದೇಶದ ಘನತೆಯನ್ನು ಕುಗ್ಗಿಸುವ ಬಿಬಿಸಿ ಪ್ರಯತ್ನದಲ್ಲಿ ಇವರೂ ಕೂಡ ಭಾಗಿದಾರರು. ಇಂತವರಿಂದ ಬೇರೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತವನ್ನು ದುರ್ಬಲಗೊಳಿಸುವುದೇ ಇವರ ಏಕೈಕ ಉದ್ದೇಶ ಎಂದು ಕಿರಣ್‌ ರಿಜಿಜು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. .

ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಭಾರತದ ಬಾಹ್ಯ ಬೇಹುಗಾರಿಕಾ ಸಂಸ್ಥೆ 'ರಾ'ದ ಮಾಜಿ ಮುಖ್ಯಸ್ಥ ಸಂಜೀವ್ ತ್ರಿಪಾಠಿ, ಬಿಬಿಸಿಯ ಸಾಕ್ಷ್ಯ ಚಿತ್ರದಲ್ಲಿ ಸತ್ಯಾಂಶಗಳೇ ಇಲ್ಲ ಎಂದು ಕಿಡಿಕಾರಿದ್ದರು. ಬಿಬಿಸಿ ಪ್ರಧಾನಿ ಮೋದಿ ಅವರ ವರ್ಚಸ್ಸಿನ ಮೇಲೆ ದಾಳಿ ಮಾಡಿದ್ದು, ಈ ಮೂಲಕ ಭಾರತದ ಬಗ್ಗೆ ಜಾಗತಿಕ ಅಭಿಪ್ರಾಯವನ್ನು ಬದಲಿಸುವುದು ಅದರ ದುರುದ್ದೇಶವಾಗಿದೆ ಎಂದು ಸಂಜೀವ್‌ ತ್ರಿಪಾಠಿ ಆರೋಪಿಸಿದ್ದರು.

ಏನಿದು ವಿವಾದ?

ಯುನೈಟಡ್​ ಕಿಂಗ್​ಡಮ್​​ನ ರಾಷ್ಟ್ರೀಯ ಪ್ರಸಾರ ಮಾಧ್ಯಮವಾದ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ), 'ಇಂಡಿಯಾ: ದಿ ಮೋದಿ ಕ್ವಶ್ಚನ್' ಹೆಸರಿನ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿದೆ. ಇದರಲ್ಲಿ ಗುಜರಾತ್‌ ಕೋಮುಗಲಭೆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರದ ಕುರಿತು ಚರ್ಚಿಸಲಾಗಿತ್ತು.

ಈ ಸಾಕ್ಷ್ಯಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೇ, ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಮೊದಲ ಸಂಚಿಕೆಯನ್ನು ಪ್ರಕಟಿಸಿದ ಯೂಟ್ಯೂಬ್ ವಿಡಿಯೋಗಳನ್ನು ಹಾಗೂ ಸಾಕ್ಷ್ಯಚಿತ್ರದ ಕುರಿತ 50ಕ್ಕೂ ಹೆಚ್ಚು ಟ್ವೀಟ್​ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಆದೇಶಿಸಿತ್ತು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ