Flipkart Pay Later Scam: ಆನ್‌ಲೈನ್ ಖರೀದಿದಾರರೇ ಹುಷಾರ್, ಫ್ಲಿಪ್‌ಕಾರ್ಟ್ ಪೇ ಲೇಟರ್ ಹೆಸರಲ್ಲಿ ಶುರುವಾಗಿದೆ ವಂಚನೆ
Oct 23, 2024 10:39 AM IST
ಫ್ಲಿಪ್‌ಕಾರ್ಟ್ ಪೇ ಲೇಟರ್ ವಂಚನೆ, ಆನ್‌ಲೈನ್ ವಂಚನೆ ಕುರಿತು ಎಚ್ಚರವಾಗಿರಿ
Flipkart Pay Later Scam: ವಂಚಕರು ಇದೀಗ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣ ಬಳಕೆದಾರರನ್ನು ಟಾರ್ಗೆಟ್ ಮಾಡಿದ್ದಾರೆ. ಫ್ಲಿಪ್‌ಕಾರ್ಟ್‌ನ "ಪೇ ಲೇಟರ್ (ನಂತರ ಪಾವತಿಸಿ)" ಆಯ್ಕೆ ಮೂಲಕ ವಂಚಕರ ಬಳಕೆದಾರರ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಪಡೆಯಲು ಯತ್ನಿಸುತ್ತಿದ್ದಾರೆ.
Flipkart Pay Later Scam: ಆನ್‌ಲೈನ್ ಬಳಕೆದಾರರನ್ನು ವಂಚಿಸಲು ವಂಚಕರು ನಾನಾ ತಂತ್ರ ಹೂಡುತ್ತಾರೆ. ಮೊಬೈಲ್, ಕಂಪ್ಯೂಟರ್, ಇಕಾಮರ್ಸ್ ಬಳಕೆದಾರರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು ಎನ್ನುವ ಸ್ಥಿತಿಯಿದೆ. ಏನೋ ಯೋಚಿಸುತ್ತ ಕ್ಲಿಕ್ಕಿಸಿದ ಒಂದು ಲಿಂಕ್ ಅಥವಾ ತಿಳಿಸಿದ ಒಂದು ಒಟಿಪಿಯಿಂದ ದೊಡ್ಡ ಮಟ್ಟದ ವಂಚನೆ ಎದುರಾಗಬಹುದು. ಇದೀಗ ಎಲ್ಲಾ ಇ-ಕಾಮರ್ಸ್ ತಾಣಗಳು ಹಬ್ಬದ ಸಡಗರದಲ್ಲಿವೆ. ದೀಪಾವಳಿ 2024ರ ಸೇಲ್‌ನಲ್ಲಿ ಬಿಜಿಯಾಗಿವೆ. ಗ್ರಾಹಕರು ಕೂಡ ಸ್ಮಾರ್ಟ್‌ಫೋನ್‌ಗಳು, ಐಫೋನ್‌ಗಳು, ಕಂಪ್ಯೂಟರ್, ಇಯರ್ ಬಡ್‌ಗಳು ಸೇರಿದಂತೆ ಒಳ್ಳೆಯ ಆಫರ್ ಇರುವ ಪ್ರಾಡಕ್ಟ್‌ಗಳನ್ನು ಖರೀದಿಸುತ್ತಿದ್ದಾರೆ. ಈ ಸಮಯದಲ್ಲಿ ಆನ್‌ಲೈನ್ ವಂಚಕರು ಕೂಡ ಅಲರ್ಟ್ ಆಗಿದ್ದಾರೆ. ಬಗೆಬಗೆಯ ವಂಚನೆ ಮೂಲಕ ಗ್ರಾಹಕರ ಬ್ಯಾಂಕ್ ಅಕೌಂಟ್‌ಗೆ ಕನ್ನ ಹಾಕಲು ಪ್ರಯತ್ನಿಸುತ್ತಿದ್ದಾರೆ.
ಫ್ಲಿಪ್‌ಕಾರ್ಟ್ ಬಳಕೆದಾರರನ್ನೇ ಟಾರ್ಗೇಟ್ ಮಾಡಿಕೊಂಡು ಹೊಸ ವಂಚನೆಯೊಂದು ಈಗ ಶುರುವಾಗಿದೆ. ಆನ್‌ಲೈನ್‌ನಲ್ಲಿ ಖರೀದಿಸುವ ಸಮಯದಲ್ಲಿ ಸಾಕಷ್ಟು ಜನರು ಆನ್‌ಲೈನ್‌ನಲ್ಲಿ ಪಾವತಿ ಮಾಡುತ್ತಾರೆ. ಇನ್ನು ಕೆಲವರು ಆನ್‌ಲೈನ್ ಪೇಮೇಂಟ್ ಯಾಕೆ, ಪ್ರಾಡಕ್ಟ್ ಬಂದಾಗ ಹಣ ನೀಡೋಣ ಎಂದು ಪೇ ಲೇಟರ್ ಆಯ್ಕೆ ಕ್ಲಿಕ್ ಮಾಡುತ್ತಾರೆ. ಇದೇ ಪೇ ಲೇಟರ್ ಕ್ರೆಡಿಟ್ ಆಯ್ಕೆಯನ್ನೇ ವಂಚಕರು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಇಂಡಿಯಾ ಟುಡೇ ಟೆಕ್ ವರದಿ ಮಾಡಿದೆ. ಬಳಕೆದಾರರಲ್ಲಿ ಒಟಿಪಿ ಅಥವಾ ಇತರೆ ಸೂಕ್ಷ್ಮ ಮಾಹಿತಿ ನೀಡುವಂತೆ ಮಾಡಲು ವಂಚಕರು ಪೇ ಲೇಟರ್ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ವಂಚನೆ ಹೇಗೆ ನಡೆಯುತ್ತದೆ ಎಂದು ತಿಳಿಯೋಣ.
ಫ್ಲಿಪ್‌ಕಾರ್ಟ್ ಪೇ ಲೇಟರ್ ವಂಚನೆ ಹೇಗೆ?
ಜನರಲ್ಲಿ ಭಯ ಹುಟ್ಟಿಸುವ ಮೂಲಕ ಹೆಚ್ಚಾಗಿ ಆನ್‌ಲೈನ್ ವಂಚನೆ ನಡೆಯುತ್ತದೆ. ಈ ವಂಚನೆ ಕೂಡ ಭಿನ್ನವಾಗಿಲ್ಲ. ವಂಚಕರು ನಿರ್ದಿಷ್ಟ ಬಳಕೆದಾರರನ್ನು ಕಾಂಟ್ಯಾಕ್ಟ್ ಮಾಡುತ್ತಾರೆ. ಫ್ಲಿಪ್‌ಕಾರ್ಟ್ ಪೇ ಲೇಟರ್ ಖಾತೆಯನ್ನು ಯಾರೋ ಬಳಸಲು ಪ್ರಯತ್ನಿಸುತ್ತಿದ್ದಾರೆ, ನಾವು ಫ್ಲಿಪ್‌ಕಾರ್ಟ್‌ನ ಏಜೆಂಟ್ ಎಂದು ಕರೆ ಮಾಡುತ್ತಾರೆ. ಈ ಸಮಯದಲ್ಲಿ ಈ ವಂಚಕರು ಇದು ತುರ್ತು ಪರಿಸ್ಥಿತಿ, ಇದರಿಂದ ತೊಂದರೆಯಾಗಬಹುದು ಎಂಬ ಭಯವನ್ನು ಮಾತನಲ್ಲಿ ಹುಟ್ಟಿಸಲು ಪ್ರಯತ್ನಿಸುತ್ತಾರೆ. ಈ ಭಯವನ್ನೇ ಬಂಡವಾಳ ಮಾಡಿಕೊಳ್ಳುವ ವಂಚಕರು ಇದಕ್ಕೆ ಪರಿಹಾರ ಸೂಚಿಸುತ್ತಾರೆ. "ನಾನು ಫ್ಲಿಪ್‌ಕಾರ್ಟ್ ಏಜೆಂಟ್, ನಾನು ತಿಳಿಸುವ ಈ ವಿಧಾನಗಳ ಮೂಲಕ ಖಾತೆಯನ್ನು ಸುರಕ್ಷಿತಗೊಳಿಸಿ" ಎನ್ನುತ್ತಾರೆ. ಅವರ ಮಾತು ನಂಬಿ ಬಳಕೆದಾರರು ಪ್ರೊಸೆಸ್ ಆರಂಭಿಸಿದರೆ ಖೆಡ್ಡಾಕ್ಕೆ ಬೀಳುವುದು ಖಾತ್ರಿ. ಆ ನಕಲಿ ಏಜೆಂಟರು ಬಳಕೆದಾರರಲ್ಲಿ "ನಿಮ್ಮ ಮೊಬೈಲ್‌ನಲ್ಲಿ ನಿರ್ದಿಷ್ಟ ಸಂಖ್ಯೆ ಡಯಲ್ ಮಾಡಲು" ತಿಳಿಸುತ್ತಾರೆ.
ಬಳಕೆದಾರರಿಗೆ ಎಲ್ಲೂ ಅನುಮಾನ ಬರದಂತೆ ಎಚ್ಚರಿಕೆಯಿಂದ ಮಾತನಾಡುವ ಇವರು ಕೆಲವೊಂದು ಪ್ರೊಸೆಸ್ ಹೇಳುತ್ತಾರೆ. ಈ ಸಂಖ್ಯೆಗೆ ಡಯಲ್ ಮಾಡಿ, ಈ ನಂಬರ್ ಒತ್ತಿ ಎಂದೆಲ್ಲ ಹೇಳುತ್ತಾರೆ. ಬಳಿಕ ಅದೇ ಸಂಖ್ಯೆಗೆ ಒಟಿಪಿ ಕಳುಹಿಸುತ್ತಾರೆ. ಈ ಒಟಿಟಿ ತಿಳಿಸಿ ಅಥವಾ ನಮೂದಿಸಿ ಎನ್ನುತ್ತಾರೆ. ನೆನಪಿಡಿ, ಯಾವುದೇ ಸಮಯದಲ್ಲೂ ಎಂತಹ ಸಮಯದಲ್ಲೂ ನೀವು ನಿಮ್ಮ ಒಟಿಪಿಯನ್ನು ಯಾರಿಗೂ ನೀಡಬಾರದು. ಇಂತಹ ವಂಚನೆ ಆರಂಭವಾಗಿರುವುದರ ಕುರಿತು ಇಂಡಿಯಾ ಟುಡೆ ಟೆಕ್ ಎಚ್ಚರಿಸಿದೆ. ಈ ದೀಪಾವಳಿ ಹಬ್ಬದ ಸಮಯದಲ್ಲಿ ಪೇ ಲೇಟರ್ ಏಜೆಂಟ್ ಸ್ಕ್ಯಾಮ್ ಕುರಿತು ಹುಷಾರಾಗಿರಿ.
ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಸಲಹೆ
ಯಾವುದೇ ಆನ್‌ಲೈನ್ ವಹಿವಾಟಿನಲ್ಲಿ ಎಚ್ಚರವಾಗಿರಬೇಕು. ಯಾರಾದರೂ ಕರೆ ಮಾಡಿದರೆ ಅವರ ಕುರಿತು ದೃಢೀಕರಣ ಮಾಡಿಕೊಳ್ಳುವುದು ಅಗತ್ಯ. ಸ್ಪ್ಯಾಮ್ ಎಂದು ಬಂದ ಕರೆಗಳಿಗೆ ಯಾವುದೇ ವಿವರ ನೀಡಬೇಡಿ. ಯಾವುದೇ ಸಂಸ್ಥೆಯು ಗ್ರಾಹಕರಿಂದ ಒಟಿಪಿ ಕೇಳುವುದಿಲ್ಲ. ಒಟಿಪಿ ಕೇಳಿದ ತಕ್ಷಣ ಎಚ್ಚರವಾಗಿರಿ.
ತಾಳ್ಮೆಯಿಂದ ಇರುವುದು, ಟೆನ್ಷನ್ ಮಾಡದೆ ವರ್ತಿಸುವುದು ಅಗತ್ಯ. ಆನ್‌ಲೈನ್ ವಂಚಕರು ಕರೆ ಮಾಡಿದಾಗ ಭಯಪಟ್ಟಂತೆ ಇರಬೇಡಿ. ತಾಳ್ಮೆಯಿಂದ ಹತ್ತು ಹಲವು ಪ್ರಶ್ನೆಗಳನ್ನು ಕೇಳಿ. ಯಾವುದೇ ಕಾರಣಕ್ಕೆ ಪಾಸ್‌ವರ್ಡ್ ಅಥವಾ ಒಟಿಪಿ ನೀಡಬೇಡಿ. ಕೆಲವು ವಂಚಕರು ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನ ಸ್ಕ್ರೀನ್ ಹಂಚಿಕೊಳ್ಳುವಂತೆಯೂ ಹೇಳಬಹುದು. ಅಂತಹ ಕೆಲಸ ಮಾಡಬೇಡಿ.
ಎಲ್ಲಾದರೂ ವಂಚನೆಗೆ ಒಳಗಾದರೆ ಪರಿಸ್ಥಿತಿ ಅರ್ಥಮಾಡಿಕೊಂಡು ಸಂಬಂಧಪಟ್ಟ ವಿಭಾಗಕ್ಕೆ ತಕ್ಷಣ ದೂರು ನೀಡಿ. ಇತರರಿಗೂ ಈ ರೀತಿ ವಂಚನೆಯಾಗಬಹುದು ಎಂದು ಎಚ್ಚರಿಸಿ.