logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Udaipur Killing: 'ಕತ್ತು ಕೊಯ್ದ' ರಿಯಾಜ್‌ಗೆ ಐಸಿಸ್ ನಂಟು, ಮುಂದುವರಿದ ತನಿಖೆ

Udaipur Killing: 'ಕತ್ತು ಕೊಯ್ದ' ರಿಯಾಜ್‌ಗೆ ಐಸಿಸ್ ನಂಟು, ಮುಂದುವರಿದ ತನಿಖೆ

HT Kannada Desk HT Kannada

Jun 29, 2022 09:23 AM IST

google News

ರಾಜಸ್ಥಾನದ ಉದಯಪುರದಲ್ಲಿ ಮಂಗಳವಾರ ಹತ್ಯೆ ನಡೆದ ಬಳಿಕ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಚಿತ್ರಣ.

    • Udaipur Kanhaiya Lal Murder: ರಿಯಾಜ್‌ ಮತ್ತು ಆತನ ಸಹಚರನೊಬ್ಬ ಉಡುಪಿನ ಅಳತೆ ತೆಗೆಸುವ ನೆಪದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಅವರ ಅಂಗಡಿಗೆ ತೆರಳಿದ್ದರು. ಅಳತೆ ತೆಗೆಯುತ್ತಿದ್ದ ಕನ್ಹಯ್ಯ ಲಾಲ್‌ ಎಚ್ಚೆತ್ತುಕೊಳ್ಳುವ ಮೊದಲೇ ಹರಿತವಾದ ಆಯುಧದಿಂದ ಆತನ ಕತ್ತು ಕೊಯ್ದಿದ್ದರು. ಇದರ ವಿಡಿಯೋವನ್ನೂ ಚಿತ್ರೀಕರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟರು. 
ರಾಜಸ್ಥಾನದ ಉದಯಪುರದಲ್ಲಿ ಮಂಗಳವಾರ ಹತ್ಯೆ ನಡೆದ ಬಳಿಕ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಚಿತ್ರಣ.
ರಾಜಸ್ಥಾನದ ಉದಯಪುರದಲ್ಲಿ ಮಂಗಳವಾರ ಹತ್ಯೆ ನಡೆದ ಬಳಿಕ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಚಿತ್ರಣ. (ANI via REUTERS)

ಜೈಪುರ: ರಾಜಸ್ಥಾನದ ಉದಯಪುರ ಹತ್ಯಾಕಾಂಡ ದೇಶಾದ್ಯಂತ ಸಂಚಲನ ಮೂಡಿಸಿದೆ. ಟೈಲರ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ ಇಸ್ಲಾಮಿಕ್‌ ಮೂಲಭೂತವಾದಿಗಳ ಕೃತ್ಯ ವ್ಯಾಪಕ ಟೀಕೆಗೆ ಒಳಗಾಗಿದೆ.

ಟೈಲರ್‌ ಕನ್ಹಯ್ಯ ಲಾಲ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ರಿಯಾಜ್ ಅಟ್ಟಾರಿಗೆ ಐಸಿಸ್ ನಂಟು ಇರಬಹುದು ಮತ್ತು ಆತನ ಪಾಕ್‌ ಉಗ್ರ ಸಂಘಟನೆಯ ಭಾಗವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕನ್ಹಯ್ಯ ಲಾಲ್‌ ಹತ್ಯೆ ಮಾಡುವಾಗ ಇಬ್ಬರು ಜತೆಗಿದ್ದರು. ಇವರ ವಿಡಿಯೋ ವೈರಲ್‌ ಆಗಿತ್ತು. ಈ ಇಬ್ಬರನ್ನೂ ಈಗ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಕೊಲೆ ನಡೆಸಿದ ಬಳಿಕ ಅದರ ಹೊಣೆ ಹೊತ್ತುಕೊಂಡ ಆರೋಪಿಗಳು, ಇನ್ನಷ್ಟು ಹತ್ಯೆ ಮಾಡುವಂತೆ ಇತರರಿಗೆ ಕರೆ ನೀಡಿದ್ದರು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೂ ಹತ್ಯೆ ಬೆದರಿಕೆ ಹಾಕಲಾಗಿತ್ತು.

ನ್ಯೂಸ್ 18 ವರದಿ ಪ್ರಕಾರ, ರಿಯಾಜ್ ಅಟ್ಟಾರಿ ಐಸಿಸ್ ಜೊತೆ ಸಂಬಂಧ ಹೊಂದಿದ್ದಾನೆ. ಆತ ಟೋಂಕ್ ನಗರದ ನಿವಾಸಿ ಮುಜೀಬ್ ಅಬ್ಬಾಸಿಯೊಂದಿಗೆ 2021ರಲ್ಲಿ ಮೂರು ಬಾರಿ ಸಂಪರ್ಕಕ್ಕೆ ಬಂದರು. ಇತ್ತೀಚೆಗಷ್ಟೇ ಐಸಿಸ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಮುಜೀಬ್‌ನನ್ನು ರಾಜಸ್ಥಾನದಿಂದ ಬಂಧಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ರತ್ಲಾಮ್‌ನ ಕೆಲವರನ್ನು ಪೊಲೀಸರು ಬಂಧಿಸಿದ್ದರು.

ರಿಯಾಜ್ ಸ್ವತಃ ಐಸಿಸ್‌ನ ಕಾರ್ಯಕರ್ತನೂ ಆಗಿರಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ಆತ ತನ್ನ ಫೇಸ್‌ಬುಕ್ ಫೋಟೋಗಳಲ್ಲಿ ವಿಶೇಷ ಸನ್ನೆಗಳನ್ನು ನೀಡುವುದನ್ನು ಕಾಣಬಹುದು. ವಿಶೇಷವೆಂದರೆ ಈ ರೀತಿಯ ಚಿಹ್ನೆಯನ್ನು ವಿಶ್ವದಾದ್ಯಂತ ಐಸಿಸ್ ಕಾರ್ಯಕರ್ತರು ಬಳಸುತ್ತಾರೆ. ರಿಯಾಜ್ ಬರೇಲ್ವಿ ಮತ್ತು ಪಾಕಿಸ್ತಾನ ಮೂಲದ ರಾಡಿಕಲ್ ಗುಂಪು ದಾವತ್-ಎ-ಇಸ್ಲಾಮಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.

ಯಾಕೆ ಈ ಹತ್ಯೆ ಮಾಡಲಾಗಿದೆ

ರಿಯಾಜ್‌ ಮತ್ತು ಆತನ ಸಹಚರ ವೃತ್ತಿಯಲ್ಲಿ ಟೈಲರ್ ಆಗಿರುವ ಕನ್ಹಯ್ಯಾ ಲಾಲ್ ಅವರ ಅಂಗಡಿಗೆ ಉಡುಪು ಹೊಲಿಸಿಕೊಳ್ಳುವ ನೆಪದಲ್ಲಿ ಹೋಗಿದ್ದರು. ಅಲ್ಲಿ ಕನ್ಹಯ್ಯ ಲಾಲ್‌ ಅವರ ಅಳತೆ ತೆಗೆಯುತ್ತಿದ್ದಾಗ, ಆತ ಎಚ್ಚೆತ್ತುಕೊಳ್ಳುವ ಮೊದಲೇ ಹಿಡಿದಿಟ್ಟುಕೊಂಡು ಹಲ್ಲೆ ನಡೆಸಿದರು. ಹರಿತವಾದ ಆಯುಧವನ್ನು ಬಳಸಿಕೊಂಡು ಕನ್ಹಯ್ಯಲಾಲ್‌ ಅವರ ಕತ್ತನ್ನು ಕೊಯ್ದರು. ವಿಶೇಷವೆಂದರೆ ಈ ಸಂಪೂರ್ಣ ಘಟನೆಯ ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಲಾಗಿತ್ತು.

ಈ ವಿಡಿಯೋವನ್ನು ಬಳಿಕ ಅವರಿಬ್ಬರು ಶೇರ್‌ ಮಾಡಿಕೊಂಡಿದ್ದು, ಕೊಲೆಯ ಹೊಣೆಗಾರಿಕೆಯನ್ನೂ ಹೊತ್ತುಕೊಂಡಿದ್ದರು. ಈ ರೀತಿ ಹತ್ಯೆಗಳನ್ನು ಮುಂದುವರಿಸಬೇಕು ಎಂದು ಇತರೆ ಮೂಲಭೂತವಾದಿಗಳಿಗೆ ಅವರು ಇದೇ ವಿಡಿಯೋದಲ್ಲಿ ಕರೆಯನ್ನೂ ನೀಡಿದ್ದಾರೆ.

ಭಾರತೀಯ ಜನತಾ ಪಕ್ಷದ ಮಾಜಿ ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಕನ್ಹಯ್ಯ ಕುಮಾರ್‌ ಫೇಸ್‌ಬುಕ್‌ ಪೋಸ್ಟ್‌ ಮಾಡಿದ್ದರು. ಅಂದಿನಿಂದ ಅವರಿಗೆ ಜೀವ ಬೆದರಿಕೆ ಕರೆ ಬರುತ್ತಿತ್ತು. ಬೆದರಿಕೆಯನ್ನು ಎದುರಿಸುತ್ತಲೇ ಬಂದಿದ್ದಾರೆ ಎಂದು ಕನ್ಹಯ್ಯ ಕುಮಾರ್‌ ಅವರ ಕುಟುಂಬ ಸದಸ್ಯರು ಹೇಳಿದರು.

ರಾಜ್ಯದಾದ್ಯಂತ ಪ್ರಕ್ಷುಬ್ಧ ವಾತಾವಾರಣ ನಿರ್ಮಾಣವಾಗಿದೆ. ಉದಯಪುರದಲ್ಲಿ ಕೂಡಲೇ ಪ್ರತಿಭಟನೆ ವ್ಯಕ್ತವಾಗಿದ್ದು, ಹಿಂಸಾ ರೂಪಕ್ಕೆ ತಿರುಗಿದೆ. ಕೆಲವೆಡೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಪ್ರತಿಭಟನೆ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಕೈ ಮೀರದಂತೆ ಪ್ರದೇಶದಲ್ಲಿರುವ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಪರಿಸ್ಥಿತಿ ಕೈಮೀರದಂತೆ ತಡೆಯಲು ಜಿಲ್ಲೆಯಲ್ಲಿ ಮುಂದಿನ 24 ಗಂಟೆಗಳ ಕಾಲ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಘಟನೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದೆ. ದೇಶದೆಲ್ಲೆಡೆ ಈ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ತೀವ್ರ ಸ್ವರೂಪದ ಪ್ರತಿಭಟನೆ ವ್ಯಕ್ತವಾಗತೊಡಗಿದೆ.

ಹೀಗಾಗಿ ಎಲ್ಲ ರಾಜ್ಯಗಳಲ್ಲೂ ಕಟ್ಟುನಿಟ್ಟಿನ ನಿಗಾವಹಿಸುವ ಪೊಲೀಸ್‌ ಇಲಾಖೆಗಳು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿವೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ