ಕೇಂದ್ರ ಬಜೆಟ್ 2024-25 ಜುಲೈ 3ನೇ ವಾರ ಮಂಡನೆ, ಜುಲೈ 22 ರಿಂದ ಆಗಸ್ಟ್ 9ರ ಬಜೆಟ್ ಅಧಿವೇಶನದ ಸಾಧ್ಯತೆ
Jun 14, 2024 05:38 PM IST
ಕೇಂದ್ರ ಬಜೆಟ್ 2024-25 ಜುಲೈ 3ನೇ ವಾರ ಮಂಡನೆಯಾಗಲಿದ್ದು, ಜುಲೈ 22 ರಿಂದ ಆಗಸ್ಟ್ 9ರ ಬಜೆಟ್ ಅಧಿವೇಶನದ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರದಲ್ಲಿ ಹೊಸ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಈಗ ಮೊದಲ ಬಜೆಟ್ ಮಂಡನೆ ಯಾವಾಗ ಎಂಬ ಕುತೂಹಲ ಕೆರಳಿದೆ. ಕೇಂದ್ರ ಬಜೆಟ್ 2024-25 ಜುಲೈ 3ನೇ ವಾರ ಮಂಡನೆ, ಜುಲೈ 22 ರಿಂದ ಆಗಸ್ಟ್ 9ರ ಬಜೆಟ್ ಅಧಿವೇಶನದ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
ನವದೆಹಲಿ: ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದ್ದು, ಹೊಸ ಸರ್ಕಾರದ ಬಜೆಟ್ ಅಧಿವೇಶನ ಜುಲೈ 22 ರಿಂದ ಆಗಸ್ಟ್ 9 ರ ತನಕ ನಡೆಯುವ ಸಾಧ್ಯತೆ ಇದೆ. ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಅಂದರೆ ಕೇಂದ್ರ ಬಜೆಟ್ 2024-25ರ ಮಂಡನೆ ಜುಲೈ 22ಕ್ಕೆ ನಡೆಯುವ ಸಾಧ್ಯತೆ ಇದೆ ಎಂದು ಸಂಸತ್ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ವರದಿ ಮಾಡಿದೆ.
ಆದಾಗ್ಯೂ, ಅಂತಿಮ ದಿನಾಂಕ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಸರ್ಕಾರವು ಜುಲೈ 3 ರಂದು ಸಂಸತ್ತಿನ ವಿಶೇಷ ಅಧಿವೇಶನದ ಕೊನೆಯ ದಿನವಾದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಮೋದಿ 3.0; ಜುಲೈ 22ಕ್ಕೆ ಕೇಂದ್ರ ಬಜೆಟ್ 2024-25 ಮಂಡನೆ ಸಾಧ್ಯತೆ
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಬುಧವಾರ (ಜೂನ್ 12) ಸುದ್ದಿಗಾರರ ಜೊತೆಗೆ ಮಾತನಾಡುತ್ತ, 18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24ಕ್ಕೆ ಶುರುವಾಗಲಿದೆ. ಜುಲೈ 3ರ ತನಕ ನಡೆಯಲಿದೆ. ರಾಜ್ಯ ಸಭೆಯ ಅಧಿವೇಶನ ಜೂನ್ 27 ರಿಂದ ಜುಲೈ 3 ರ ತನಕ ನಡೆಯಲಿದೆ. ಜುಲೈ 3 ರಂದು ಸರ್ಕಾರದ ಮುಂದಿನ 5 ವರ್ಷಗಳ ಮುನ್ನೋಟವನ್ನು ನೀಡಲಾಗುತ್ತದೆ ಎಂದು ಹೇಳಿದ್ದರು.
ಮೂರನೇ ಅವಧಿಯ ನರೇಂದ್ರ ಮೋದಿ ಸರ್ಕಾರದ ಮೊದಲ ಬಜೆಟ್ ಜುಲೈ 22ರಂದು ಮಂಡನೆಯಾಗಬಹುದು. ಇದಕ್ಕೆ ಪೂರಕವಾಗಿ ಹೊಸ ಸರ್ಕಾರದ ಬಜೆಟ್ ಅಧಿವೇಶನ ಜುಲೈ 22 ರಿಂದ ಆಗಸ್ಟ್ 9 ರ ತನಕ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಹೇಳಿವೆ. ಆದಾಗ್ಯೂ, ಅಧಿಕೃತ ದಿನಾಂಕ ಇನ್ನೂ ಪ್ರಕಟವಾಗಿಲ್ಲ.
ಹಣಕಾಸು ಸಚಿವರಾಗಿ ನಿರ್ಮಲಾ ಸೀತಾರಾಮನ್ 2.0
ನಿರ್ಮಲಾ ಸೀತಾರಾಮನ್ ಅವರು ಜೂನ್ 12 ರಂದು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ ಸತತ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡರು. ಅದೇ ದಿನ ಕೇಂದ್ರ ಬಜೆಟ್ 2024-25ಕ್ಕೆ ಅಗತ್ಯ ತಯಾರಿ ಶುರು ಮಾಡಲಾಗಿದೆ. ಬಜೆಟ್ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಭಾರತದ ಆರ್ಥಿಕತೆಗೆ ಪೂರಕವಾಗಿ, ಮೋದಿ ಅವರ ಮುನ್ನೋಟದಂತೆ ಬಜೆಟ್ ಸಿದ್ದವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಸತತ 6 ಬಜೆಟ್ ಮಂಡಿಸಿದ್ದ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಮುರಿಯಲಿದ್ದಾರೆ. ಸತತ ಏಳು ಬಾರಿ ಕೇಂದ್ರ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಸೀತಾರಾಮನ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಅನೇಕ ದಾಖಲೆಗಳನ್ನು ಹೊಂದಿದ್ದಾರೆ. ಅವರು 2017 ರಲ್ಲಿ ಮೊದಲ ಮಹಿಳಾ ರಕ್ಷಾ ಮಂತ್ರಿ ಅಥವಾ ರಕ್ಷಣಾ ಸಚಿವರಾಗಿ ನೇಮಕವಾಗಿದ್ದರು. ಅದು ಕೂಡ ಒಂದು ದಾಖಲೆಯಾಗಿತ್ತು. ಅದಕ್ಕೂ ಮೊದಲು ಅವರು ಉದ್ಯಮ ಮತ್ತು ವಾಣಿಜ್ಯ ಸಚಿವರಾಗಿದ್ದರು. ಅವರ ಆಪ್ತರಾಗಿದ್ದ ಅರುಣ್ ಜೇಟ್ಲಿ (ಹಣಕಾಸು ಸಚಿವ 2014-19) ಅನಾರೋಗ್ಯಕ್ಕೆ ಒಳಗಾದಾಗ, ಸೀತಾರಾಮನ್ 2019 ರ ಸಾರ್ವತ್ರಿಕ ಚುನಾವಣೆಯ ನಂತರ ಹೊಸದಾಗಿ ಪುನರಾಯ್ಕೆಯಾದ ಮೋದಿ ಸರ್ಕಾರದಲ್ಲಿ ಹಣಕಾಸು ಖಾತೆಯ ಜವಾಬ್ದಾರಿಯನ್ನು ಹೊತ್ತುಕೊಂಡರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.