ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭಾ ಅಧಿವೇಶನ ಜೂನ್ 24 ರಿಂದ ಜುಲೈ 3; ಸ್ಪೀಕರ್ ಆಯ್ಕೆ 26ಕ್ಕೆ, ಪ್ರಮಾಣ ವಚನ ಮತ್ತು ಇತರೆ ಕಲಾಪ

ಲೋಕಸಭಾ ಅಧಿವೇಶನ ಜೂನ್ 24 ರಿಂದ ಜುಲೈ 3; ಸ್ಪೀಕರ್ ಆಯ್ಕೆ 26ಕ್ಕೆ, ಪ್ರಮಾಣ ವಚನ ಮತ್ತು ಇತರೆ ಕಲಾಪ

ಲೋಕಸಭಾ ಅಧಿವೇಶನ ಜೂನ್ 24 ರಿಂದ ಜುಲೈ 3 ರ ತನಕ ನಡೆಯಲಿದೆ. ರಾಜ್ಯಸಭಾ ಅಧಿವೇಶನ ಜೂನ್ 27 ರಿಂದ ಜುಲೈ 3ರ ತನಕ ನಡೆಯಲಿದೆ. ಸ್ಪೀಕರ್ ಆಯ್ಕೆ 26ಕ್ಕೆ, ಪ್ರಮಾಣ ವಚನ ಮತ್ತು ಇತರೆ ಕಲಾಪಗಳು ಇರಲಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಲೋಕಸಭಾ ಅಧಿವೇಶನ ಜೂನ್ 24 ರಿಂದ ಜುಲೈ 3 ರ ತನಕ ನಡೆಯಲಿದೆ. ಸ್ಪೀಕರ್ ಆಯ್ಕೆ 26ಕ್ಕೆ ನಡೆಯಲಿದ್ದು, ಈ ಅವಧಿಯಲ್ಲಿ ಪ್ರಮಾಣ ವಚನ ಮತ್ತು ಇತರೆ ಕಲಾಪ ನಡೆಯಲಿದೆ. (ಸಾಂಕೇತಿಕ ಚಿತ್ರ)
ಲೋಕಸಭಾ ಅಧಿವೇಶನ ಜೂನ್ 24 ರಿಂದ ಜುಲೈ 3 ರ ತನಕ ನಡೆಯಲಿದೆ. ಸ್ಪೀಕರ್ ಆಯ್ಕೆ 26ಕ್ಕೆ ನಡೆಯಲಿದ್ದು, ಈ ಅವಧಿಯಲ್ಲಿ ಪ್ರಮಾಣ ವಚನ ಮತ್ತು ಇತರೆ ಕಲಾಪ ನಡೆಯಲಿದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಹದಿನೆಂಟನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24 ರಿಂದ ಜುಲೈ 3 ರ ತನಕ ನಡೆಯಲಿದೆ. ಜೂನ್ 26ರಂದು ಲೋಕಸಭಾ ಸಭಾಪತಿ ಆಯ್ಕೆ ನಡೆಯಲಿದೆ. ಈ ಬಗ್ಗೆ ರಾಷ್ಟ್ರಪತಿಯವರು ಅಧಿಸೂಚನೆ ಪ್ರಕಟಿಸಿದ್ದಾರೆ. ಜೂನ್ 25 ರ ತನಕ ಸ್ಪೀಕರ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅದಾಗಿ ಮಾರನೇ ದಿನ ಸ್ಪರ್ಧಿಗಳು ಇದ್ದರೆ ಚುನಾವಣೆ ನಡೆಯಲಿದೆ. ಇಲ್ಲದೇ ಇದ್ದರೆ ಅವಿರೋಧ ಆಯ್ಕೆ ವಿಚಾರ ಪ್ರಕಟಿಸಲಾಗುತ್ತದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯದೇ ಎನ್‌ಡಿಎ ಮೈತ್ರಿಕೂಟದ ಬಲದೊಂದಿಗೆ ಸರ್ಕಾರ ರಚಿಸಿರುವುದರಿಂದ ಸಾಂವಿಧಾನಿಕವಾಗಿ ಈಗ ಮಹತ್ವದ್ದಾಗಿರುವ ಈ ಹುದ್ದೆ ಯಾರ ಪಾಲಾಗಲಿದೆ ಎಂಬುದು ಕುತೂಹಲ ಹೆಚ್ಚಾಗಿದೆ. ಈಗಾಗಲೇ, ಸ್ಪೀಕರ್ ಸ್ಥಾನಕ್ಕೆ ಬಿಜಪಿ ನಾಮ ನಿರ್ದೇಶನ ಮಾಡುವ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಮಿತ್ರ ಪಕ್ಷ ಜೆಡಿಯು ಘೋಷಿಸಿದೆ.

ಟ್ರೆಂಡಿಂಗ್​ ಸುದ್ದಿ

ಸಂಸತ್ ಕಲಾಪ ಜೂನ್ 24 ರಿಂದ ಜುಲೈ 3- ಯಾವಾಗ ಏನು ಕಲಾಪ

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜುಜು ಅವರು ಲೋಕಸಭಾ ಮತ್ತು ರಾಜ್ಯಸಭಾ ಅಧಿವೇಶನಗಳ ವಿವರ ಪ್ರಕಟಿಸಿದರು. ಇದರಂತೆ, ಲೋಕಸಭೆ ಕಲಾಪ ಜೂನ್ 24 ರಿಂದ ಜುಲೈ 3 ರ ತನಕ, ರಾಜ್ಯ ಸಭೆ ಕಲಾಪ ಜೂನ್ 27 ರಿಂದ ಜುಲೈ 3 ರ ತನಕ ನಡೆಯಲಿದೆ.

ಜೂನ್ 24 ಹಾಗೂ 25ರಂದು ನೂತನ ಸಂಸದರಿಗೆ ಪ್ರಮಾಣ ವಚನ

ಜೂನ್ 26 ರಂದು ಲೋಕಸಭಾ ಸಭಾಪತಿ ಸ್ಥಾನಕ್ಕೆ ಚುನಾವಣೆ

ಜೂನ್ 27 - ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

ಜುಲೈ 3 ರವರೆಗೂ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಸೇರಿದಂತೆ ಹಲವಾರು ಕಲಾಪ

ಸ್ಪೀಕರ್ ಸ್ಥಾನದ ಮೇಲೆ ತೆಲುಗುದೇಶಂ ಪಾರ್ಟಿ ಕಣ್ಣು

ಈ ನಡುವೆ, ತೆಲುಗುದೇಶಂ ಪಾರ್ಟಿ ಲೋಕಸಭಾ ಸ್ಪೀಕರ್‌ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರೂ ಈ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಇನ್ನೊಂದು ಮಿತ್ರಪಕ್ಷವಾದ ಜೆಡಿಯು ಪಕ್ಷ ಕೂಡಾ ಈ ಸ್ಥಾನ ತನಗೆ ಬೇಕು ಎಂದು ಹೇಳಿತ್ತು. ಆದರೆ ಈಗ ನಿಲುವು ಬದಲಿಸಿದೆ.

ಜೆಡಿಯು ಅಥವಾ ಟಿಡಿಪಿ ಈ ಸ್ಥಾನ ಪಡೆದುಕೊಳ್ಳಬೇಕೆಂದು ಆಪ್ ಸೇರಿದಂತೆ ಪ್ರತಿಪಕ್ಷಗಳು ಸಲಹೆ ನೀಡಿವೆ. ಆದಾಗ್ಯೂ, ಬಿಜೆಪಿಯ ಹಿರಿಯ ಸಂಸದರೊಬ್ಬರು ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಸುಮಿತ್ರಾ ಮಹಾಜನ್ ಲೋಕಸಭೆ ಸ್ಪೀಕರ್ ಆಗಿದ್ದರು. ಎರಡನೇ ಅವಧಿಯಲ್ಲಿ ಓಂ ಬಿರ್ಲಾ ಈ ಹುದ್ದೆ ಅಲಂಕರಿಸಿದ್ದರು.

ಪಕ್ಷದ ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿದೇಶ ಪ್ರವಾಸ ಮುಗಿಸಿ ಬಂದ ನಂತರ ಲೋಕಸಭಾ ಸಭಾಪತಿ ಯಾರಾಗಬೇಕೆಂಬುದರ ಬಗ್ಗೆ ಚರ್ಚೆ ನಡೆಯಲಿದೆ. ಲೋಕಸಭೆಯ ಸ್ಪೀಕರ್ ಆಗಿ ಯಾರನ್ನು ಆರಿಸಬೇಕೆಂಬುದರ ಕುರಿತು ಬಿಜೆಪಿಯೊಳಗೆಯೇ ಚರ್ಚೆ ನಡೆದ ನಂತರ ಮಿತ್ರ ಪಕ್ಷಗಳೊಂದಿಗೆ ಆ ಬಗ್ಗೆ ಪರಾಮರ್ಶಿಸಲಾಗುತ್ತದೆ. ಮಿತ್ರಪಕ್ಷಗಳಿಂದ ಈ ವಿಚಾರವಾಗಿ ಸಲಹೆ ಅಥವಾ ಬೇಡಿಕೆ ಬಂದರೆ ಬಿಜೆಪಿ ಹೊಸ ಸೂತ್ರ ಅನುಸರಿಸಲಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.