US Election 2024: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಜಯಭೇರಿ, ಅರಳದ ಕಮಲ: ಫಲಿತಾಂಶ ಘೋಷಣೆಯೊಂದೇ ಬಾಕಿ
Nov 06, 2024 02:17 PM IST
ಅಮೆರಿಕಾದ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಜಯಭೇರಿ ಬಾರಿಸಿದ್ದು, ಅಧಿಕೃತ ಘೋಷಣೆ ಸಂಜೆ ಹೊತ್ತಿಗೆ ಆಗಲಿದೆ.
- us election 2024: ಅಮೆರಿಕಾದ 47 ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಒಂದು ಬಾರಿ ಗೆದ್ದು ಕಳೆದ ಬಾರಿ ಸೋತಿದ್ದ ಟ್ರಂಪ್ ಛಲ ಬಿಡದೇ ಮತ್ತೆ ಶ್ವೇತ ಭವನ ಪ್ರವೇಶಕ್ಕೆ ಅಣಿಯಾಗಿದ್ದಾರೆ.
us election results 2024: ಇಡೀ ಜಗತ್ತೇ ಗಮನ ಸೆಳೆದಿದ್ದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಟ್ರಂಪ್ ಭಾರೀ ಜಯಭೇರಿ ಬಾರಿಸಿದ್ದಾರೆ. ಅಮೆರಿಕಾದ 47 ನೇ ಅಧ್ಯಕ್ಷರಾಗಿ ಟ್ರಂಪ್ ಒಂದು ಸೋಲಿನ ಬಳಿಕ ಪುನರಾಯ್ಕೆಯಾಗಿದ್ದಾರೆ. ಭಾರತೀಯ ಹಿನ್ನೆಲೆಯವರಾದ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಮಣಿಸುವ ಮೂಲಕ ಮತ್ತೊಮ್ಮೆ ಶ್ವೇತ ಭವನ ಪ್ರವೇಶಿಸುವುದು ಖಚಿತವಾಗಿದೆ. ಸದ್ಯದ ಟ್ರೆಂಡ್ ಪ್ರಕಾರ ಟ್ರಂಪ್ ಅವರು 277 ಮತಗಳನ್ನು ಪಡೆದಿದ್ದು, ಬಹುಮತದ ಗುರಿಯನ್ನು ದಾಟಿದ್ದಾರೆ. ಇನ್ನೂ ಮತ ಎಣಿಕೆ ನಡೆಯುತ್ತಿದ್ದು, ಸಂಜೆ ಹೊತ್ತಿಗೆ ಅಧಿಕೃತ ಘೋಷಣೆ ಬಾಕಿಯಿದೆ. ಅಮೆರಿಕಾದ ಹಲವಾರು ರಾಜ್ಯಗಳಲ್ಲಿ ರಿಪಬ್ಲಿಕ್ ಪಕ್ಷವನ್ನು ತನ್ನ ಭದ್ರ ಕೋಟೆಯನ್ನು ಸಾಬೀತುಪಡಿಸಿದ್ದರೆ, ಡೆಮಾಕ್ರಟಿಕ್ ಪಕ್ಷದ ಬೆಂಬಲದಲ್ಲಿದ್ದ ಹಲವು ರಾಜ್ಯಗಳು ಟ್ರಂಪ್ ಪರ ವಾಲಿರುವುದು ಗೆಲುವನ್ನು ಖಚಿತಪಡಿಸಿದೆ.
ತೀವ್ರ ಕುತೂಹಲದ ಜತೆಗೆ ತುರುಸಿನ ಸ್ಪರ್ಧೆಗೂ ದಾರಿ ಮಾಡಿಕೊಟ್ಟಿದ್ದ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ 538 ಎಲೆಕ್ಟ್ರೋಲ್ ಮತಗಳಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ 277 ಮತ ಪಡೆದರೆ, ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ 226 ಸ್ಥಾನಗಳಲ್ಲಿ ಗೆಲುವು ಸಾಧಿಸಿದರು. ಇನ್ನೂ ಅಧಿಕೃತ ಘೋಷಣೆ ನಂತರ ಈ ಸಂಖ್ಯೆಯಲ್ಲಿ ವ್ಯತ್ಯಾಸವಾಗಲಿವೆ.
ಎಂಟು ವರ್ಷದ ಹಿಂದೆ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಡೊನಾಲ್ಡ್ ಟ್ರಂಪ್ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅವರನ್ನು ಮಣಿಸಿ ಶ್ವೇತ ಭವನ ಪ್ರವೇಶಿಸಿದ್ದರು. ನಾಲ್ಕು ವರ್ಷದ ಹಿಂದೆ ಎರಡನೇ ಬಾರಿಗೆ ಕಣಕ್ಕಿಳಿದಿದ್ರೂ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ವಿರುದ್ದ ಸೋಲು ಕಂಡಿದ್ದರು. ಈಗ ಮತ್ತೆ ಕಣಕ್ಕಿಳಿದು ರಿಪಬ್ಲಿಕನ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಟ್ರಂಪ್.
ಸಾಕಷ್ಟು ವಿವಾದಗಳು, ಕೋರ್ಟ್ ಕಟ್ಟಳೆಗಳು, ಅಪವಾದಗಳು, ಆತಂಕಗಳ ನಡುವೆಯೇ ಚುನಾವಣಕ್ಕೆ ಕಣಕ್ಕೆ ಇಳಿದಿದ್ದ ಟ್ರಂಪ್ ಸತತ ಎರಡನೇ ಬಾರಿಗೆ ಸೋಲುವರೇ ಎನ್ನುವ ಆತಂಕವನ್ನು ಎದುರಿಸಿದ್ದರು. ಕಮಲಾ ಹ್ಯಾರಿಸ್ ಪರವಾಗಿ ಮಾಜಿ ಅಧ್ಯಕ್ಷರು ಗಟ್ಟಿಯಾಗಿ ನಿಂತಿದ್ದರಿಂದ ಫಲಿತಾಂಶ ಬದಲಾಗಬಹುದು ಎಂದುಕೊಂಡಿದ್ದರು. ಆದರೆ ಅಲ್ಲಿಯ ಜನ ಹಿಂದಿನ ಚುನಾವಣೆಯಲ್ಲಿ ಕೈ ಹಿಡಿದಿದ್ದ ಡೆಮಾಕ್ರಟಿಕ್ ಪಕ್ಷ ಸೋಲಿಸಿ ರಿಪಬ್ಲಿಕನ್ ಪಕ್ಷಕ್ಕೆ ಮತ್ತೆ ಮಣೆ ಹಾಕಿದ್ದಾರೆ.
ಅಮೆರಿಕಾದಲ್ಲಿ ಎರಡು ಅವಧಿಗೆ ಅಧ್ಯಕ್ಷರಾಗಲು ಮಾತ್ರ ಅವಕಾಶವಿದೆ. ಸ್ಪರ್ಧೆ ಎಷ್ಟು ಬಾರಿ ಬೇಕಾದರೂ ಮಾಡಬಹುದು. ಅದೇ ರೀತಿ ಒಮ್ಮೆ ಗೆದ್ದು ಒಮ್ಮೆ ಸೋತಿದ್ದ ಟ್ರಂಪ್‌ಗೆ ಇನ್ನೊಂದು ಬಾರಿ ಅವಕಾಶವಿತ್ತು.
ಈ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಸತತವಾಗಿ ಗೆಲುವು ತಪ್ಪಿಸಿಕೊಂಡಿದ್ದ ಟ್ರಂಪ್ ಮೂರನೇ ಸ್ಪರ್ಧೆಯಲ್ಲಿ ಗೆದ್ದು ಎರಡು ಬಾರಿ ಅಧ್ಯಕ್ಷರಾದವರ ಕ್ಲಬ್ ಸೇರಿಕೊಂಡರು.
ಚುನಾವಣೆ ಪ್ರಕ್ರಿಯೆ ಸಂಜೆಯ ಹೊತ್ತಿಗೆ ಅಧಿಕೃತವಾಗಿ ಪ್ರಕಟವಾಗಲಿದೆ. ಆನಂತರ 2025 ಜನವರಿ 20 ರಂದು ಹೊಸ ಅಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಹಿಂದಿನಿಂದಲೂ ಇದೇ ಪರಂಪರೆ ಅಲ್ಲಿ ಮುಂದುವರೆದುಕೊಂಡು ಬಂದಿದೆ.