ಅಮೆರಿಕಾ ಅಧ್ಯಕ್ಷೀಯ ಚುನಾವಣೆ; ಭಾರತ ಒಲವಿನ ಡೊನಾಲ್ಡ್ ಟ್ರಂಪ್ ಎದುರು ಭಾರತೀಯ ಮೂಲದ ಕಮಲಾ ಅರಳಲು ತುರುಸಿನ ಹಣಾಹಣಿ
Oct 24, 2024 08:50 PM IST
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
- US Presidential Election:ಜಗತ್ತಿನ ಗಮನ ಸೆಳೆದಿದೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆ. ಮೊದಲ ಬಾರಿಗೆ ಭಾರತೀಯ ಹಿನ್ನೆಲೆಯ ಕಮಲಾ ಹ್ಯಾರಿಸ್ ಉನ್ನತ ಹುದ್ದೆ ಅಲಂಕರಿಸುವ ಉಮೇದಿನಲ್ಲಿದ್ದಾರೆ. ಈಗಾಗಲೇ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಭಾರತೀಯ ಮೂಲದ ಮತದಾರರ ಮನ ಗೆದ್ದು ಎರಡನೇ ಬಾರಿ ಶ್ವೇತ ಭವನ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಚುನಾವಣೆ ನೋಟ ಇಲ್ಲಿದೆ.
ವಾಷಿಂಗ್ಟನ್: ವಿಶ್ವದಲ್ಲೇ ವಿಭಿನ್ನ ಚುನಾವಣೆ ಎಂದು ಹೆಸರು ಪಡೆದಿರುವ ಹಾಗೂ ಇಡೀ ಜಗತ್ತಿನ ಹಿರಿಯಣ್ಣನಂತಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ಪ್ರಬಲ ಪೈಪೋಟಿಯ ನಡುವೆ ನಡೆದಿದೆ. ಈ ಬಾರಿ ಹಲವು ವಿಶೇಷಗಳೊಂದಿಗೆ ಚುನಾವಣೆ ನಡೆದಿದೆ. ಎರಡೂವರೆ ಶತಮಾನದ ಸುದೀರ್ಘ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲಿ ಈವರೆಗೂ ಒಬ್ಬರೂ ಮಹಿಳೆಯರು ಅಧ್ಯಕ್ಷರಾಗಿಲ್ಲ. ಕೆಲವರು ಸ್ಪರ್ಧಿಸಿದರೂ ಸೋತಿರುವ ಇತಿಹಾಸವಿದೆ. ಭಾರತೀಯ ಹಿನ್ನೆಲೆಯ ಅಭ್ಯರ್ಥಿಯೊಬ್ಬರು ಅಮೆರಿಕಾದ ಉನ್ನತ ಸ್ಥಾನದ ಚುನಾವಣೆ ಕಣದಲ್ಲಿರುವುದೂ ಇದೇ ಮೊದಲು. ಉಪಾಧ್ಯಕ್ಷರಾದವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದು, ಸೋತಿರುವ ಉದಾಹರಣೆಯಿದೆ. ಹಾಗೆ ಹಾಲಿ ಉಪಾಧ್ಯಕ್ಷರಾಗಿರುವ, ಭಾರತೀಯ ಹಿನ್ನೆಲೆಯ ಕಮಲಾ ಹ್ಯಾರಿಸ್ ಕಣದಲ್ಲಿರುವುದರಿಂದ ಚುನಾವಣೆ ಭಾರತದಲ್ಲೂ ಭಾರೀ ಗಮನ ಸೆಳೆದಿದೆ.
ಈಗಾಗಲೇ ಕೆಳ ಹಂತದಲ್ಲಿ ಮತದಾನ ಪ್ರಕ್ರಿಯೆಗಳು ನಡೆದಿವೆ. ಮುಖ್ಯ ಚುನಾವಣೆ 2024ರ ನವೆಂಬರ್ 5ರ ಮಂಗಳವಾರ ನಿಗದಿಯಾಗಿದೆ.
ಕಣದಲ್ಲಿ ಯಾರಿದ್ದಾರೆ
ಈ ಬಾರಿ ಅಧ್ಯಕ್ಷೀಯ ಚುನಾವಣೆ ಕಣದಲ್ಲಿರುವ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಉಪಾಧ್ಯಕ್ಷೆ, ಭಾರತೀಯ ಹಿನ್ನೆಲೆಯ ಕಮಲಾ ಹ್ಯಾರಿಸ್ ಹುರಿಯಾಳುಗಳು.
ಸಾಕಷ್ಟು ವಿವಾದಗಳನ್ನೇ ಬೆನ್ನಿಗಿಟ್ಟುಕೊಂಡೇ ನಾಲ್ಕು ವರ್ಷ ಅಧ್ಯಕ್ಷರಾಗಿ, ನಂತರದ ಅವಧಿಯಲ್ಲಿ ಸೋತ ಡೊನಾಲ್ಡ್ ಟ್ರಂಪ್ ಈಗ ಎರಡನೇ ಅವಧಿ ಅಧ್ಯಕ್ಷರಾಗಲು ಹೆಣಗಾಡುತ್ತಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಹಿತ ಹಲವರ ಬೆಂಬಲ ಪಡೆದಿರುವ ಕಮಲಾ ಹ್ಯಾರಿಸ್ ಅವರು ಟ್ರಂಪ್ ಅನ್ನು ಕಟ್ಟಿ ಹಾಕಿ ಶ್ವೇತ ಭವನದ ಉನ್ನತ ಹುದ್ದೆ ಅಲಂಕರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಈಗಿನ ಸನ್ನಿವೇಶದ ಪ್ರಕಾರ ಬಲಾಬಲದ ಸ್ಪರ್ಧೆ ಏರ್ಪಟ್ಟಿದೆ. ಗೆಲುವಿನ ಅಂತರವೂ ಕೂದಲೆಳೆಯಷ್ಟೇ ಇರಲಿದೆ. ಯಾರು ಗೆದ್ದರೂ ಅಚ್ಚರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಚುನಾವಣೆಯಿದೆ.
ಭಾರತೀಯ ಮತಗಳ ಲೆಕ್ಕಾಚಾರ
ಅಮೆರಿಕಾದಲ್ಲಿ ಭಾರತೀಯ ಮತಗಳೂ ನಿರ್ಣಾಯಕ ಸಂಖ್ಯೆಯಲ್ಲಿವೆ. ಅಮೆರಿಕಾದಲ್ಲಿ ಎರಡೇ ಪಕ್ಷಗಳಿದ್ದರೂ ಭಾರತದಂತೆಯೇ ಎಡ ಬಲದ ನಡುವೆ ಹಂಚಿ ಹೋಗಿದೆ. ರಿಪಬ್ಲಿಕನ್ ಪಕ್ಷ ಬಲಪಂಥೀಯ ಚಿಂತನೆಗಳ ಬೆಂಬಲಿತರಾದ್ದರೆ, ಡೆಮಾಕ್ರಟಿಕ್ ಪಕ್ಷವು ಎಡಪಂಥೀಯ ಹಾಗೂ ಪ್ರಗತಿಪರ ಚಿಂತಕರ ಚಾವಡಿ.
ಅಮೆರಿಕಾದಲ್ಲಿರುವ ಭಾರತೀಯ ಹಿನ್ನೆಲೆಯವರಲ್ಲಿ ಮೋದಿ ಬೆಂಬಲಿಗರೂ ಅಧಿಕವಾಗಿದ್ದಾರೆ. ಈ ಕಾರಣದಿಂದಲೇ ಟ್ರಂಪ್ ಅತಿಯಾದ ಆತಿಥ್ಯ ಮೋದಿಗೆ ಸಿಕ್ಕಿದೆ. ಮೋದಿ ಲೆಕ್ಕದಲ್ಲಿ ನಮಗೆ ಮತ ಸಿಗಬಹುದು ಎಂದು ಟ್ರಂಪ್ ನೆಚ್ಚಿಕೊಂಡಿದ್ದಾರೆ. ಮತ್ತೊಂದು ಕಡೆ ಭಾರತೀಯ ಹಿನ್ನೆಲೆಯವರಾದರೂ ಕಮಲಾ ಹ್ಯಾರಿಸ್ ಅವರು ಭಾರತೀಯರ ಪರವಾಗಿ ಇಲ್ಲ. ಭಾರತೀಯ ನೀತಿಗಳಿಗೆ ವಿರುದ್ದವಾಗಿದ್ದಾರೆ, ಅವರು ಗೆದ್ದರೆ ಭಾರತೀಯರಿಗೆ ತೊಂದರೆಯಾಗಬಹುದು ಎನ್ನುವ ಭಾವನೆಯೂ ಅಲ್ಲಿ ನೆಲೆಸಿರುವವರಲ್ಲಿದೆ. ಈ ಕಾರಣದಿಂದ ಅವರು ಟ್ರಂಪ್ ಪರ ಇರುವ ವಾತಾವರಣ ಇದೆ.
ಟ್ರಂಪ್ ಆಡಳಿತದಲ್ಲಿನ ಲೋಪಗಳು, ಅವರ ನೀತಿಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಆಕ್ಷೇಪಗಳಿವೆ. ಟ್ರಂಪ್ ಆಡಳಿತದಿಂದ ಜಾಗತಿಕ ಮಟ್ಟದಲ್ಲಿ ಅಮೆರಿಕಾದ ಗೌರವ ತಗ್ಗಬಹುದು ಎನ್ನುವ ಅಭಿಪ್ರಾಯವಿದ್ದು, ಇದು ಕಮಲಾ ಹ್ಯಾರಿಸ್ ಅವರ ಪರ ಒಲವು ಹೆಚ್ಚಲು ಕಾರಣವಾಗಿದೆ.
ನಾಲ್ಕು ವರ್ಷಗಳಿಗೊಮ್ಮೆ
ಅಮೆರಿಕ ಅಧ್ಯಕ್ಷಿಯ ಚುನಾವಣೆಯು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ. ಅಮೆರಿಕ ಸಂವಿಧಾನದ ಪ್ರಕಾರ ಅಧ್ಯಕ್ಷೀಯ ಅಭ್ಯರ್ಥಿಯಾಗುವವರು ಅಮೇರಿಕಾದಲ್ಲೇ ಹುಟ್ಟಿರಬೇಕು ಮತ್ತು ಅಮೆರಿಕದ ಪೌರನಾಗಿರಬೇಕು. ಕನಿಷ್ಠ 35 ವರ್ಷ ವಯೋಮಿತಿ ಇರಬೇಕು.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯೇ ಸಂಕೀರ್ಣವಾಗಿದೆ. ಭಾರತಕ್ಕಿಂತ ಭಿನ್ನವಾಗಿದೆ. ಇಲ್ಲಿ ಇಡೀ ದೇಶದ ಚುನಾಯಿತ ಪ್ರತಿನಿಧಿಗಳು ಅದರಲ್ಲೂ ಶಾಸಕರು, ಸಂಸದರು ಮತ ಚಲಾಯಿಸುತ್ತಾರೆ. ಅಮೆರಿಕಾದಲ್ಲಿ ಮೂರ್ನಾಲ್ಕು ಹಂತದಲ್ಲಿ ಒಂದು ವರ್ಷ ಕಾಲ ಚುನಾವಣೆ ನಡೆಯುತ್ತದೆ.
ಚುನಾವಣೆ ಹೇಗೆ ನಡೆಯಲಿದೆ
ಅಮೆರಿಕ ಪ್ರಜಾಪ್ರಭುತ್ವದ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆಯಲ್ಲಿ ಮತದಾರರು ನೇರವಾಗಿ ಮತದಾನ ಮಾಡುವುದಿಲ್ಲ. ಪರೋಕ್ಷ ಚುನಾವಣೆಯ ಮೂಲಕ ಅಧ್ಯಕ್ಷ ಅಭ್ಯರ್ಥಿಯನ್ನು ಆಯ್ಕೆಮಾಡಲಾಗುತ್ತದೆ. ಅಮೆರಿಕಾ ಅಧ್ಯಕ್ಷರನ್ನು ಎಲೆಕ್ಟೊರೋಲ್ ಕಾಲೇಜುಗಳ ಮೂಲಕ ಆಯ್ಕೆಮಾಡಲಾಗುತ್ತದೆ. ಸಾರ್ವಜನಿಕರು ಎಲೆಕ್ಟೋರಾಲ್ ಕಾಲೇಜುಗಳ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಮತ ಹಾಕುತ್ತಾರೆ. ಆಯ್ಕೆಯಾದಂತಹ ಚುನಾಯಿತ ಪ್ರತಿನಿಧಿಗಳು ಅಧ್ಯಕ್ಷ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಪಡೆಯುವುದು ವಿಶೇಷ.
ಅಮೆರಿಕಾದಲ್ಲಿ ಒಟ್ಟು 50 ರಾಜ್ಯಗಳಿದ್ದು, ಒಟ್ಟು 538 ಮಂದಿ ಚುನಾಯಿತ ಪ್ರತಿನಿಧಿಗಳಿರುತ್ತಾರೆ. ಈ ಪ್ರತಿನಿಧಿಗಳಲ್ಲಿ ಪ್ರತಿ ರಾಜ್ಯವನ್ನು ಪ್ರತಿನಿಧಿಸಲು ಇಬ್ಬರು ಸೆನೆಟರ್ ಗಳಾಗಿ ಆಯ್ಕೆಯಾಗುತ್ತಾರೆ. ಒಟ್ಟು 100 ಮಂದಿ ಸೆನೆಟರ್ ಗಳನ್ನು ಆಯ್ಕೆ ಮಾಡಲಾಗುತ್ತದೆ. ಚುನಾಯಿತ ಪ್ರತಿನಿಧಿಗಳು ದೇಶದ ಜನಸಂಖ್ಯೆಗೆ ಅನುಗುಣವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತದೆ. ವಾಷಿಂಗ್ಟನ್ ಡಿಸಿ ಒಳಗೊಂಡ ಒಟ್ಟು 51 ಎಲೆಕ್ಟೊರಾಲ್ ಕಾಲೇಜುಗಳಿವೆ. ಪ್ರತಿ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬಹುಮತ ದೊರೆಯುತ್ತದೆಯೋ ಆ ಅಭ್ಯರ್ಥಿಗೆ ರಾಜ್ಯದ ಇತರ ಎಲ್ಲ ಮತಗಳು ಸೇರುತ್ತವೆ. ಎರಡೂ ರಾಜಕೀಯ ಪಕ್ಷಗಳು ಆಯಾ ರಾಜ್ಯದಲ್ಲಿ ಚುನಾವಣೆಗೂ ಮುನ್ನ ತಮ್ಮ ಚುನಾಯಿತ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತವೆ.
ಸೆನೆಟ್ ಸದಸ್ಯರು
ರಾಜ್ಯದ ಜನಸಂಖ್ಯೆ ಆಯಾ ಪಕ್ಷದ ಅಭ್ಯರ್ಥಿಗೆ ಅಥವಾ ತಮಗಿಷ್ಟವಾದ ಚುನಾಯಿತ ಪ್ರತಿನಿಧಿಗೆ ಮತ ಚಲಾಯಿಸುತ್ತಾರೆ. ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನ ಅಲಂಕರಿಸಬೇಕಾದರೆ ಕನಿಷ್ಠ 270 ಮತಗಳನ್ನು ಪಡೆಯಬೇಕು. ಬಹುಮತ ಸಿಗದೇ ಇದ್ದಲ್ಲಿ, ಅಧ್ಯಕ್ಷರನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಆಯ್ಕೆ ನಡೆಯುತ್ತದೆ.
ಉಪಾಧ್ಯಕ್ಷರನ್ನು ಸೆನೆಟ್ ಸದಸ್ಯರು ಆಯ್ಕೆ ಮಾಡುತ್ತಾರೆ. ಈಗಾಗಲೇ ಕೆಳ ಹಂತದಲ್ಲಿ ಮತದಾನ ಪ್ರಕ್ರಿಯೆ ಜನವರಿಂದ ನಡೆದಿದೆ. ಅದರಲ್ಲಿ ಒಂದು ಕೋಟಿ ಗೂ ಅಧಿಕ ಮಂದಿ ಅಂಚೆ ಮೂಲಕ, 78 ಲಕ್ಷ ಮಂದಿ ವ್ಯಕ್ತಿಗತ ಮತದಾನ ಮಾಡಿದ್ದಾರೆ. ಬಹುತೇಕ ಕೆಳ ಹಂತದ ಮತದಾನ ಮುಗಿದು ನವೆಂಬರ್ 5ರಂದು ಅಂತಿಮ ಹಂತದ ಮತದಾನ ನಡೆದು ಅಧ್ಯಕ್ಷರ ಘೋಷಣೆಯಾಗಲಿದೆ.