ಲಡ್ಡು ಮುತ್ಯಾ ಎಂಬ ಸರ್ವಸಂಗ ಪರಿತ್ಯಾಗಿಯ ನಿಜವಾದ ಕಥೆ ಇದು, ಫ್ಯಾನ್‌ಗೆ ಕೈಹಾಕುವ ರೀಲ್ಸ್ ಅವತಾರಿಗಳನ್ನು ನಂಬದಿರಿ - ಗುರುರಾಜ ಕೊಡ್ಕಣಿ ಬರಹ
Who is Laddu Mutya?: ಲಡ್ಡು ಮುತ್ಯಾ ಎಂಬವರು ದೇಶಕಂಡ ಸಾವಿರಾರು ಸಂತರ, ಅವತಾರಪುರುಷರ ಪೈಕಿ ಒಬ್ಬರು. ಆದರೆ, ಈಗ ಅದ್ಯಾವುದೋ ವ್ಯಕ್ತಿ ತಿರುಗುವ ಫ್ಯಾನ್ ಗೆ ಕೈ ಹಾಕಿ ನಿಲ್ಲಿಸುತ್ತಾನೆ, ' ಲಡ್ಡು ಮುತ್ಯಾನ ಅವತಾರ' ಅಂತ ಹಾಡು ಬರುತ್ತದೆ.- ಗುರುರಾಜ್ ಕೊಡ್ಕಣಿ ಬರೆದ ಸೋಷಿಯಲ್ ಮೀಡಿಯಾ ಬರಹ ಇಲ್ಲಿದೆ.
ಲಡ್ಡು ಮುತ್ಯಾ ಕುರಿತು ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ಸಾಕಷ್ಟು ಜನರಿಗೆ ಈ ಲಡ್ಡು ಮುತ್ಯಾ ಯಾರು ಎಂಬ ಪ್ರಶ್ನೆಯೂ ಮೂಡಿದೆ. ಫೇಸ್‌ಬುಕ್‌ನಲ್ಲಿ ಗುರುರಾಜ ಕೊಡ್ಕಣಿ ಬರೆದ ಬರಹವೊಂದು ಲಡ್ಡು ಮುತ್ಯಾರ ಬಗ್ಗೆ ಸಾಕಷ್ಟು ವಿವರ ನೀಡಿದೆ. ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಲಡ್ಡು ಮುತ್ಯಾರ ಅವತಾರಗಳ ಕುರಿತು ಚರ್ಚೆಯಾಗುತ್ತಿದೆ. ಗುರುರಾಜ್ ಕೊಡ್ಕಣಿ ಸೋಷಿಯಲ್ ಮೀಡಿಯಾ ಪೋಸ್ಟ್ ಇಲ್ಲಿ ನೀಡಲಾಗಿದೆ.
ನಿಜವಾದ ಲಡ್ಡು ಮುತ್ಯಾ ಯಾರು?
"ಉತ್ತರ ಕರ್ನಾಟಕದಲ್ಲಿ 'ಮುತ್ಯಾ' ಎಂದರೆ ಅಜ್ಜ ,ತಾತ ಅಂತರ್ಥ. ಅಜ್ಜ ಎನ್ನುವ ಪದ , ಜ್ಞಾನಿ , ಅವಧೂತ ಎನ್ನುವ ಪದಕ್ಕೆ ಪರ್ಯಾಯ ಅರ್ಥವಾಗಿಯೂ ಬಳಕೆಯಿದೆ. ಶಿಶುನಾಳ ಶರೀಫರನ್ನು ತುಂಬ ಜನ 'ಶರೀಫಜ್ಜಾ' ಎಂದು ಕರೆಯುವುದನ್ನು ಗಮನಿಸಬಹುದು. ನಾನು ಲಡ್ಡು ಮುತ್ಯಾನ ಹೆಸರನ್ನು ಕೇಳಿದ್ದು ಬಹುಶಃ 2004 - 05 ರಲ್ಲಿ. ಬಾಗಲಕೋಟೆಯ ಸ್ನೇಹಿತನೊಬ್ಬ ' ಲಡ್ಡು ಮುತ್ಯಾ ನಮಗ ದೇವರಿದ್ದಂಗಲೇ ' ಎಂದಿದ್ದ ಕಾರಣಕ್ಕೆ ಅವರ ಕುರಿತು ನನಗೆ ಗೊತ್ತಾಗಿತ್ತು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ ದೇಶಕಂಡ ಸಾವಿರಾರು ಸಂತರ, ಅವತಾರಪುರುಷರ ಪೈಕಿ ಒಬ್ಬಾತ ಲಡ್ಡು ಮುತ್ಯಾ. ಸಾಂಸಾರಿಕ ಗೊಂದಲಗಳ ನಂತರ, ಉಟ್ಟುಡುಗೆಯನ್ನೂ ದಾನವಾಗಿ ಕೊಟ್ಟು , ಗೋಣಿಚೀಲವನ್ನುಟ್ಟು ನಡೆದ ಯೋಗಿಯಾತ. ಯಾರೋ ಕೊಟ್ಟರೇ ತಿನ್ನುತ್ತಿದ್ದ, ಎಲ್ಲಿಯೋ ಮಲಗುತ್ತಿದ್ದ ಅಲೆಮಾರಿ ಸಂತ. ಆದರೆ ಹಾಗಿದ್ದವನಲ್ಲೊಂದು ದೈವೀಕ ಶಕ್ತಿಯಿತ್ತು ಎನ್ನುವುದು ಸ್ಥಳೀಯರ ಅನುಭವ. ಆತ ಯಾವುದಾದರೊಂದು ಅಂಗಡಿ ಹೊಕ್ಕು ಅಲ್ಲಿ ತಿಂಡಿಯನ್ನೆತ್ತಿಕೊಳ್ಳುತ್ತಿದ್ದ. ಯಾರಿಗೋ ಬೆನ್ನ ಮೇಲೆ ರಪ್ಪನೇ ಗುದ್ದುತ್ತಿದ್ದ. ಆತನನ್ನೂ ಯಾರೂ ತಡೆಯುತ್ತಿರಲಿಲ್ಲ. ಏಕೆಂದರೆ ಆತ ಕಾಲಿಡುತ್ತಿದ್ದ ಅಂಗಡಿಗಳು ಉದ್ಧಾರವಾಗಿಬಿಡುತ್ತಿದ್ದವು. ಆತನ ಕೈಯಲ್ಲಿ ಏಟು ತಿಂದವನ ಬಡತನ ತೀರಿ ಹೋಗುತ್ತಿತ್ತು. ಮಕ್ಕಳಿಲ್ಲದ ಸಿರಿವಂತ ದಂಪತಿಗಳು ಆತನ ಕೈಯಲ್ಲಿ ಹಣ್ಣೊಂದನ್ನು ಪ್ರಸಾದವಾಗಿ ಸ್ವೀಕರಿಸಿ ಮಕ್ಕಳು ಹೊಂದಿದ್ದರು ಎನ್ನುವ ಪ್ರತೀತಿಯೂ ಇದೆ. ಬಾಗಲಕೋಟೆಯಲ್ಲಿರುವ ನನ್ನ ಮಾವನಹೊಟೆಲ್ಲಿನ ಗೋಡೆಯ ಮೇಲೆ ಇಂದಿಗೂ ಮುತ್ಯಾನ ಪಟವೊಂದು ರಾರಾಜಿಸುತ್ತಿದೆ.
ಈ ಕತೆಗಳನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟಿದ್ದು. ಆದರೆ ಅಷ್ಟು ಪ್ರಖ್ಯಾತನಾದ ನಂತರವೂ,ದೈವಾಂಶ ಸಂಭೂತವೆನ್ನುವ ಪಟ್ಟ ಪಡೆದ ನಂತರವೂ ಲಡ್ಡು ಮುತ್ಯಾ ಯಕಶ್ಚಿತ್ ಭಿಕ್ಷುಕನಂತಲೇ ಓಡಾಡಿಕೊಂಡಿದ್ದ. ಚಿನ್ನದ ಸರ, ನಾಣ್ಯಗಳನ್ನು ಕೊಟ್ಟರೆ'ಪಾಶ' ಎನ್ನುವಂತೆ ಕಿತ್ತೆಸೆದ. ಒಂದೆಡೆ ಕೂತು ತಿನ್ನುವುದು ಹಾಗಿರಲಿ, ಯಾವತ್ತೊ ಹಾಕಿಕೊಂಡ ಚೀಲದ ಅಂಗಿಯನ್ನು ಸಹ ಬದಲಿಸಲಿಲ್ಲ. ಭವಬಂಧನಗಳನ್ನು ಕಡಿದುಕೊಂಡ ನಿಜವಾದ ಸರ್ವಸಂಗ ಪರಿತ್ಯಾಗಿ ಆತ.
ಆದರೆ ಈಗೇನಾಗಿದೆ ನೋಡಿ,ಅದ್ಯಾವುದೋ ವ್ಯಕ್ತಿ ತಿರುಗುವ ಫ್ಯಾನ್ ಗೆ ಕೈ ಹಾಕಿ ನಿಲ್ಲಿಸುತ್ತಾನೆ, ' ಲಡ್ಡು ಮುತ್ಯಾನ ಅವತಾರ' ಅಂತ ಹಾಡು ಬರುತ್ತದೆ. ಅದು ತಮಾಷೆಯ ವಸ್ತುವಂತೆ ರೀಲ್ಸ್ ನ ತುಂಬ ಹರಿದಾಡುತ್ತದೆ ಮತ್ತು ಜಗತ್ತಿನಾದ್ಯಂತ ಲಡ್ಡು ಮುತ್ಯಾ ಎನ್ನುವ ಶರಣನ ಹೆಸರು , ಹಾಸ್ಯದ ವಸ್ತುವಾಗಿ ಬಳಕೆಯಾಗುತ್ತದೆ. ಬಹುಶಃ ಇದಕ್ಕಿಂತ ದುರ್ದೈವ ಇನ್ನೊಂದಿಲ್ಲ
ಹಾಗೆಂದು ಸಂಪೂರ್ಣವಾಗಿ ತಪ್ಪು ಅಲ್ಲೆಲ್ಲೋ ಕೂತು ರೀಲ್ಸ್ ನೋಡಿ, ತಮಾಷೆ ಮಾಡುವವರದ್ದು ಮಾತ್ರವೇ ಎನ್ನಲಾಗುವುದಿಲ್ಲ. ಸಂತರ ಹೆಸರನ್ನು, ಸಾಧಕರ ಹೆಸರನ್ನು ದುರ್ಬಳಕೆ ಮಾಡುವ ಚಾಳಿ ನಮ್ಮವರಿಗೆ ಹೊಸದೇನೂ ಅಲ್ಲ. ಒಬ್ಬಾತ ತಾನು ಮುತ್ಯಾನ ಅವತಾರ ಎನ್ನುತ್ತಾನೆ, ಇನ್ಯಾರೋ ಹೆಂಗಸು ತಾನು ನಾಗದೇವತೆಯ ಅವತಾರ ಎನ್ನುತ್ತ ಹುತ್ತದ ಮೇಲೆಲ್ಲ ಹಾಲು ಉಗುಳುತ್ತ ಓಲಾಡುತ್ತಾಳೆ. ಇನ್ಯಾರೋ,' ತಾನು ಸ್ವಾಮಿ ರಾಮರ ಶಿಷ್ಯೆ, ಸ್ವಾಮಿರಾಮರು ತೀರಿಕೊಂಡ ನಂತರವೂ ತನ್ನೊಟ್ಟಿಗೆ ಮಾತಾಡುತ್ತಿದ್ದರು ' ಎನ್ನುತ್ತ ಐಶಾರಾಮಿಯ ಬದುಕು ಬದುಕುತ್ತಾರೆ. ಉಫ್..!! ಸತ್ಯ ಕಣ್ರೀ, ಹಿಂದೂ ಧರ್ಮಕ್ಕೆ ಅವಮಾನಕ್ಕೆ ಹೊರಗಿನವರ‌್ಯಾರೂ ಬೇಕಿಲ್ಲ, ನಮ್ಮವರೇ ಸಾಕು ನಮ್ಮ ಮಾನ ಮರ್ಯಾದೆ ಹರಾಜು ಹಾಕುವುದಕ್ಕೆ ಎನ್ನುವ ಮಾತು.
ಒಂದಂತೂ ಸತ್ಯ , ಮನುಷ್ಯ ದೇವರಾಗುವುದು ಅಸಾಧ್ಯವೇನಲ್ಲ. ಆದರೆ . ಹಾಗೆಂದು ದೇವರಾಗುವುದಕ್ಕೆ , ದೈವಾಂಶಕ್ಕೆ, ಆಧ್ಯಾತ್ಮ ಸಾಧನೆಗೆ ಕ್ರಾಶ್ ಕೋರ್ಸ್ ಗಳಿಲ್ಲ ಎನ್ನುವ ಪ್ರಜ್ಞೆ ನಮ್ಮೊಳಗೆ ಬೆಳೆಯದಿದ್ದರೆ ನಮ್ಮ ಸಂತರಿಗೆ ಸಾಧುಗಳಿಗೆ ಆಗುವ ಅವಮಾನಗಳನ್ನು ತಪ್ಪಿಸುವುದು ಯಾರಿಂದಲೂ ಸಾಧ್ಯವಿಲ್ಲ. ಕಟು ವಾಸ್ತವವೆಂದರೆ ಇದೇ" (ಗುರುರಾಜ ಕೊಡ್ಕಣಿ, ಸೋಷಿಯಲ್ ಮೀಡಿಯಾ ಪೋಸ್ಟ್).
ಲಡ್ಡು ಮುತ್ಯಾ ನಿಜವಾದ ಹೆಸರು ಲಡ್ಡು ಅಲ್ಲ, ಲಡ್ಡ ಮುತ್ಯಾ
ಈ ಪೋಸ್ಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. "ಗುರುರಾಜ ರವರೆ, ನಾನು ಇಲಾಖೆಗೆ ಸೇರುವ ಮುನ್ನ ಮೋಟಾರು ವೈಂಡಿಂಗ್ ಕೆಲಸ ಮಾಡುತ್ತಿದ್ದೆ. 1970 -80 ರ ದಶಕದಲ್ಲಿ ವಾರದಲ್ಲಿ ಎರಡು ಬಾರಿ ಬಾಗಲಕೋಟೆ ಗೆ ವೈಂಡಿಂಗ್ ವೈರ್ ತರಲು ಹೋಗುತ್ತಿದ್ದೆ. ಬಾಗಲಕೋಟೆ ಗೆ ಹೋದಾಗೊಮ್ಮೆ ಈ ಲಡ್ಡು ಮುತ್ಯಾ ಇವರಿಗೆ ನೋಡಿದ್ದೇನೆ ಹಾಗೂ ಅಲ್ಲಿಯ ಅನೇಕ ಅಂಗಡಿಗಳವರು ನನಗೆ ಸಾಕಷ್ಟು ಪರಿಚಯದವರಾಗಿದ್ದರು. ವಾಸ್ತವಿಕವಾಗಿ ಲಡ್ಡು ಅಲ್ಲ... ಅದು ಲಡ್ಡ ( ಲಡ್ಡ ಅಂದರೆ ಯಾವುದಾದರೂ ಬಟ್ಟೆ ಅಥವಾ ಹಗ್ಗವನ್ನು ಸುರುಳಿಯಾಗಿ ಸುತ್ತಿದಾಗ ಕಾಣುವುದಕ್ಕೆ ಲಡ್ಡ ಎನ್ನುವುದು) ಇವರು ಗೋಣಿ ಚೀಲದ ತಟ್ಟನ್ನು ಉದ್ದವಾಗಿ ಸುರುಳಿ ಸುತ್ತಿ ಸೊಂಟದಲ್ಲಿ ಸುತ್ತಿಕೊಳ್ಳುತ್ತಿದ್ದರು ಹಾಗೂ ಅದೇ ತಟ್ಟು ಅಥವಾ ಒಮ್ಮೊಮ್ಮೆ ಬಟ್ಟೆಯನ್ನು ತಲೆಗೆ ಸುತ್ತಿ ಕೊಳ್ಳುತ್ತಿದ್ದರು. ಇಡೀ ಬಾಗಲಕೋಟೆಯ ಜನರು ಮುತ್ಯಾ ರವರು ಬೆತ್ತಲೆ ಕಂಡರೂ ಪೂಜ್ಯ ಭಾವನೆಯಿಂದ ಅವರೆದುರು ಬಗ್ಗಿ ನಮಸ್ಕರಿಸುತ್ತಿದ್ದರು. ಅವರು ಅಕಸ್ಮಾತ್ ಯಾವುದೇ ಅಂಗಡಿಯಲ್ಲಿ ಹೋದರೂ ಅವರು ಅಂಗಡಿಯಲ್ಲಿ ಪಾದಾರ್ಪಣೆ ಮಾಡಿದರೆ ಸಾಕು ಧನ್ಯರಾದೆವು ಎಂಬ ಭಾವನೆ ಇತ್ತು. ನಾನು ನೋಡಿದ ಹಾಗೆ ಯಾರಾದರೂ ಅವರಿಗೆ ನಮಸ್ಕರಿಸಿ ಹಣ್ಣು ಅಥವಾ ಹಣವನ್ನು ಅವರ ಕೈಯಲ್ಲಿ ಕೊಟ್ಟರೆ ಮುಂದೆ ಹೋಗುತ್ತ ಯಾರಾದರೂ ಮಕ್ಕಳು ಅಥವಾ ಮಹಿಳೆಯರು ಕಂಡರೆ ಅವರಿಗೆ ಆ ಹಣ್ಣು ಹಾಗೂ ಹಣವನ್ನು ಕೊಟ್ಟು ಬಿಡುತ್ತಿದ್ದರು. ಹಾಗೆ ಅವರ ಕೈಯಿಂದ ಪಡೆದವರು ನಮ್ಮ ಮಹಾ ಭಾಗ್ಯವೆಂದು ಪುನೀತರಾಗುತ್ತಿದ್ದರು" ಎಂದು ನದಾಫ್ ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ.
"ನಮ್ಮೂರಿನ ಕಡೆ ಕಲಮೂಡ್ ಮುತ್ಯಾನ ಗುಂಪಾ( ಗುಡಿ) ಕಟ್ಸಿದ್ದಾರೆ. ಆ ಮುತ್ಯಾ ಹೀಗೆ ಭವ ಬಂಧನಗಳೆಲ್ಲವನ್ನೂ ತೊರೆದು ಕಲಮೂಡ್ ಎನ್ನುವ ಊರಿನಲ್ಲಿರೋ ಒಂದು ಗುಡ್ಡದ ಮೇಲೆ ತಪಸ್ಸಿಗೆ ಕುಳಿತಿರ್ತಿದ್ನಂತೆ..ಇದೆಲ್ಲ ಬರಗಾಲದ ಸಮಯದಲ್ಲಿನ ಸಂಗತಿ. ಆ ಮುತ್ಯಾ ಹತ್ರ ಬಂದವ್ರಿಗೆ ಬೈತಿದ್ರಂತೆ..ಅದೇ ಆಶೀರ್ವಾದ ಅಂತ ಜನ ಅಂದ್ಕೊಳ್ತಿದ್ರು,ಅದ್ರಿಂದ ಅವ್ರಿಗೆಲ್ಲ ಒಳ್ಳೆಯದೇ ಆಗಿದೆಯಂತೆ..ಇವತ್ತು ಅವ್ರಿಲ್ಲ...ಯಾವುದೇ ಆಸ್ತಿ ಅಂತಸ್ತು ಮಾಡಿ ಕೊಂಡಿರಲಿಲ್ಲ ,ಭಕ್ತರು ಆ ಗುಡ್ಡದಲ್ಲಿ ಒಂದು ದೇವಸ್ಥಾನ ಕಟ್ಟಿ ಬೆಳೆಸಿದ್ದಾರೆ... ಆ ಜಾಗಕ್ಕೆ ಹೋದ್ರೆ ಒಂಥರಾ ಮನಸ್ಸಿಗೆ ಶಾಂತಿ,ನೆನ್ಮದಿ ಸಿಗುತ್ತೆ. ತುಂಬಾ ಪ್ರಶಾಂತವಾದ ಸ್ಥಳ" ಎಂದು ಪ್ರಿಯಾದರ್ಶಿನಿ ತೆಂಗ್ಲಿ ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ.
ಲಡ್ಡು ಮುತ್ಯಾ ಹೆಸರು ಬಂದದ್ದು ಹೇಗೆ?
ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಜಯಂತ್ ದೇಸಾಯಿ ಎಂಬವರು ಲಡ್ಡು ಮುತ್ಯಾ ಹೆಸರು ಹೇಗೆ ಬಂದದ್ದು ಎಂದು ತಿಳಿಸಿದ್ದಾರೆ. "ಸತ್ಯ ನೀವು ಹೇಳಿದ್ದು. ಲಡ್ಡು ಮುತ್ಯಾ ಅಂತ ಹೆಸರು ಬಂದಿದ್ದು ಕೆಲವೊಮ್ಮೆ ಆತ ಲಡ್ಡುಗಳೂ ತಿನ್ನುತ್ತಿದ್ದ ಅಥವಾ ಪ್ರಸಾದವಾಗಿ ಯಾರ್ಯಾರಿಗೋ ಕೊಟ್ಟು ಬಿಡುತ್ತಿದ್ದ. ದೈವ ಸಂಭೂತರು ಅಧ್ಯಾತ್ಮ ಪರಿಕಲ್ಪನೆಯಲೀ ಅವರದ್ದೇ ಹಾದಿಯಲ್ಲಿ ನಡೆಯುತ್ತಿರುತ್ತಾರೆ. ಇಂತಹ ಜನರನ್ನು ಅಪಹಾಸ್ಯಕ್ಕೆ ಬಳಸುವುದು ಯಾವು ಯಾವುದೋ ವಿಡಿಯೋ ಗೆ ರೀಲ್ಸ್ ಮಾಡೋದು ನೋಡಿದ್ರೆ ನಂಗೂ ಹೀಕರಿಕೆ ಬೇಜಾರ ಆಗತ್ತೆ ಎಲ್ಲದಕ್ಕೆ ಒಂದು ಮಿತಿ ಇರುತ್ತದೆ ಇವು ಮೀತಿ ಮೀರಿ ಆಡುತ್ತವೆ. ನಮ್ಮ ಜನವೇ ಸಾಕು ನೀವೇ ಹೇಳಿದಂತೆ ನಮ್ಮತನವನ್ನು ಅಪಹಾಸ್ಯ ಮಾಡಲು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
"ಲಡ್ಡು ಮುತ್ಯಾ ಯಾರ್ಯಾರ್ ಅಂಗಡಿಗ್ ಹೋಗಿದ್ದಾನೋ ಯಾರ್ಯಾರ ಮನೆಗೆ ಹೋಗಿದ್ದಾನೋ ಅವರೆಲ್ಲರೂ ಇವತ್ತು ತುಂಬಾ ತುಂಬಾ ಅನುಕೂಲಕರವಾಗಿದ್ದಾರೆ ಎಂಬುದನ್ನು ಕಣ್ಣಾರೆ ನೋಡಿದ್ದೇವೆ.. ಅಂದಹಾಗೆ ಶಾಲಾ ದಿನಗಳಲ್ಲಿ ಪೊಲೀಸ್ ಕ್ವಾಟರ್ಸಿನಲ್ಲಿದ್ದ ನಾವು ಪ್ರತಿ ಶನಿವಾರ ನಿಮ್ಮ ಮಾವನವರ ಮೊದಲಿದ್ದ ಹೋಟೆಲ್‌ನಲ್ಲಿ ತಿಂಡಿಯನ್ನು ತೆಗೆದುಕೊಂಡು ಹೋಗುತ್ತಿದ್ವಿ. ಈಗೇನು ಬಸವನಗುಡಿಯ ಬ್ರಾಹ್ಮಿನ್ಸ್ ಕಾಫಿ ಬಾರ್ ನಲ್ಲಿ ಇಡ್ಲಿಯೊಂದಿಗೆ ತೆಳುವಾದ ಚಟ್ನಿ ಕೊಡುತ್ತಾರೊ ಹಾಗೆ ಆ ಕಾಲದಲ್ಲಿ ಇಡ್ಲಿಯೊಂದಿಗೆ ತೆಳು ಚಟ್ನಿ ಮತ್ತು ಮೇಲೆ ಗಟ್ಟಿ ಚಟ್ನಿ ಹಾಕಿ ನಮ್ಮ ಡಬ್ಬಿ ಮುಚ್ಚಿ ಕೊಡುತ್ತಿದ್ದರು ನಿಮ್ಮ ಮಾವನವರು. ಆ ಕಾಲದ ರುಚಿಯೇ ಬೇರೆ. ನಿಮ್ಮ ಮಾವ ಕಠಿಣ ಪರಿಶ್ರಮದ ತುಂಬಾ ಶಿಸ್ತಿನ ಮನುಷ್ಯ" ಎಂದು ಸಿದ್ಧಾರ್ಥ್ ಚಿಂಚಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
"ಲಡ್ಡೂಮುತ್ಯಾರನ್ನ ಬಾಗಲಕೋಟೆಯಲ್ಲಿ 75- 80 ರಲ್ಲಿ ನೋಡಿದ ನೆನಪಿದೆ. ಬಹುಶ ಅಲ್ಲಿಯ ಮೆಯಿನ್ ಬಜಾರ್ ನಲ್ಲಿ ಹೋಗ್ತಿದ್ದರು. ಪಕ್ಕದ ಅಂಗಡಿಗಳ ಹತ್ತಿರದ ಜನ ದೂರದಿಂದಲೇ ಅವರಿಗೆ ಅಡ್ಡಬೀಳ್ತಿದ್ದರು. ಅವರು ಇದಾವುದರ ಪರಿವೆ ಇಲ್ಲವೆನ್ನುವಂತೆ ತಮ್ಮ ಗೋಣಿಚೀಲದ ದಿರಿಸಿನಲ್ಲಿ ನಡೆದುಕೊಂಡು ಹೋಗ್ತಿದ್ದರು" ಎಂದು ಬದರಿ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ತಿರುಗುವ ಫ್ಯಾನ್ ನಿಲ್ಲಿಸುವಾತ ಲಡ್ಡು ಮುತ್ಯಾ ಅಲ್ಲ
ಸಾಕಷ್ಟು ಜನರು ತಿರುಗುವ ಫ್ಯಾನ್ ನಿಲ್ಲಿಸುವ ರೀಲ್ಸ್ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಓ. ಈ ವಿಷಯ ಗೊತ್ತೇ ಇರಲಿಲ್ಲ. ತಿರುಗುವ ಫ್ಯಾನ್ ನಿಲ್ಲಿಸುವವರ ಹೆಸರೇ ಲಡ್ಡು ಮುತ್ಯಾ ಎಂದು ತಿಳಿದುಕೊಂಡಿದ್ದೆ" "ನಿಜ .ಆ ಡೋಂಗಿಯ ಕಾಲಿಗೆ ಬೀಳುವ ಜನರನ್ನು ನೋಡದರೆ ಅಯ್ಯೊ ಅನಿಸುತ್ತದೆ ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ " "ಮೂರು ದಿನದಲ್ಲಿ ಮೂರು ದತ್ತ ಪೀಠಗಳ ಸುತ್ತಿದ್ದೇನೆ .. original ಲಡ್ಡ ಮುತ್ಯಾ ರೀತಿಯೇ ನಿಜವಾದ avadhitaru ಯಾರೂ ತಾನು ಅವತಾರ ಪುರುಷ ಅಂತ ಹೇಳಿ ಕೊಳ್ಳುವುದಿಲ್ಲಾ .. ಜನಗಳು ಅವರನ್ನು ಗುರುತಿಸುತ್ತಾರೆ" "ಬಾಗಲಕೋಟೆ ಕಡೆ ಲಡ್ಡು ಮುತ್ಯಾ, ಬಿಜಾಪುರದ ಕಡೆ ಅಮೋಘ ಸಿದ್ದೇಶ್ವರರು, ಬೀದರ್ ಕಡೆ ಬಾಳು ಮಾಮ ಅವರು, ಕಲಬುರ್ಗಿ ಕಡೆ ಶರಣ ಬಸವೇಶ್ವರರು, ರಾಯಚೂರು ಕಡೆ ಬೂದಿ ಬಸವೇಶ್ವರರು, ಯಾದಗಿರಿ ಕಡೆ ವಿಶ್ವರಾದ್ಯರು, ಕೋರಿ ಸಿದ್ದೇಶ್ವರರು ಹೀಗೆ ಉತ್ತರ ಕರ್ನಾಟಕದ ಕಡೆ ಅನೇಕ ಹಳ್ಳಿಗಳಲ್ಲಿ ಸಾಧು ಸಂತರು ಇದ್ದು ಸಮಾಜಕ್ಕೆ ಉತ್ತಮ ಮಾರ್ಗ ದರ್ಶನ ನೀಡಿ ಹೋಗಿದ್ದಾರೆ..ಅದಕ್ಕೆ ಇಲ್ಲಿನ ಜನ ಇಂದಿಗೂ ಅವರನ್ನು ಆರಾಧಿಸುತ್ತಾ ಬಂದಿರುವುದು...ಕೆಲವು ಅಧಿಕ ಪ್ರಸಂಗಿಗಳಿಂದ ಇಲ್ಲಿನ ಸಾಧು ಸಂತರ ಬಗ್ಗೆ ಆಡಿಕೊಳ್ಳುವಂತೆ ಆಗುತ್ತಿರುವುದು ವಿಷಾದನೀಯ" ಎಂದು ಕೆಲವರು ಖೇದ ವ್ಯಕ್ತಪಡಿಸಿದ್ದಾರೆ.
(ಗಮನಿಸಿ: ಇದು ಸೋಷಿಯಲ್ ಮೀಡಿಯಾ ಕ್ಯೂರೇಟೆಡ್ ಬರಹ)