logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Xi Jinping: ಹಾಂಕಾಂಗ್‌, ತೈವಾನ್‌ ಮೇಲೆ ಬಿಗಿಹಿಡಿತ: ಮೂರನೇ ಅವಧಿಗೆ ಅಧ್ಯಕ್ಷರಾಗಲಿರುವ ಚೀನಾದ ಕ್ಸಿ ಜಿನ್‌ಪಿಂಗ್‌ ಇಂಗಿತ!

Xi Jinping: ಹಾಂಕಾಂಗ್‌, ತೈವಾನ್‌ ಮೇಲೆ ಬಿಗಿಹಿಡಿತ: ಮೂರನೇ ಅವಧಿಗೆ ಅಧ್ಯಕ್ಷರಾಗಲಿರುವ ಚೀನಾದ ಕ್ಸಿ ಜಿನ್‌ಪಿಂಗ್‌ ಇಂಗಿತ!

HT Kannada Desk HT Kannada

Oct 16, 2022 11:11 AM IST

google News

ಕ್ಸಿ ಜಿನ್‌ಪಿಂಗ್

    • ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್ಸ್‌ನಲ್ಲಿ ಚೀನಿ ಕಮ್ಯೂನಿಸ್ಟ್‌ ಪಕ್ಷದ‌ 20ನೇ ಮಹಾ ಅಧಿವೇಶನದಲ್ಲಿ ಆಯ್ದ ಸಾವಿರಾರು ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿರುವ ಕ್ಸಿ ಜಿನ್‌ಪಿಂಗ್‌, ಹಾಂಕಾಂಗ್‌ ಮತ್ತು ತೈವಾನ್‌ ಮೇಲಿನ ಚೀನಾದ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಕ್ಸಿ ಮೂರನೇ ಬಾರಿಗೆ ಚೀನಾದ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.
ಕ್ಸಿ ಜಿನ್‌ಪಿಂಗ್
ಕ್ಸಿ ಜಿನ್‌ಪಿಂಗ್ (ANI)

ಬೀಜಿಂಗ್:‌ ಕ್ಸಿ ಜಿನ್‌ಪಿಂಗ್‌ ಮೂರನೇ ಬಾರಿ ಚೀನಾದ ಅಧ್ಯಕ್ಷರಾಗಲು ಸಕಲ ಸಿದ್ಧತೆ ನಡೆಸಿದ್ದಾರೆ. ಚೀನಾದ ಕಮ್ಯೂನಿಸ್ಟ್‌ ಪಕ್ಷದ ರಾಷ್ಟ್ರೀಯ ಸಮಾವೇಶ, ಕ್ಸಿ ಜಿನ್‌ಪಿಂಗ್‌ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸುವ ನಿರ್ಣಯ ಕೈಗೊಳ್ಳಲಿದೆ. ಅದರಂತೆ ಪಕ್ಷ ಮತ್ತು ಸರ್ಕಾರದ ಮೇಲಿನ ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿರುವ ಕ್ಸಿ ಜಿನ್‌ಪಿಂಗ್‌, ತಮ್ಮ ಮೂರನೇ ಅವಧಿಯ ಆಡಳಿತ ಹೇಗಿರಲಿದೆ ಎಂಬ ಮುನ್ಸೂಚನೆ ನೀಡತೊಡಗಿದ್ದಾರೆ.

ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್ಸ್‌ನಲ್ಲಿ ಚೀನಿ ಕಮ್ಯೂನಿಸ್ಟ್‌ ಪಕ್ಷದ‌ 20ನೇ ಮಹಾ ಅಧಿವೇಶನದಲ್ಲಿ ಆಯ್ದ ಸಾವಿರಾರು ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿರುವ ಕ್ಸಿ ಜಿನ್‌ಪಿಂಗ್‌, ಹಾಂಕಾಂಗ್‌ ಮತ್ತು ತೈವಾನ್‌ ಮೇಲಿನ ಚೀನಾದ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಚೀನಾದ ಹಿಡಿತದಿಂದ ಹೊರಬರಲು ಪ್ರಯತ್ನಿಸುತ್ತಿರುವ ತೈವಾನ್ ಮತ್ತು ಹಾಂಕಾಂಗ್ ಮೇಲೆ, ಸಂಪೂರ್ಣ ನಿಯಂತ್ರಣ ಪಡೆದುಕೊಳ್ಳಲು ಇದು ಸಕಾಲ ಎಂದು ಕ್ಸಿ ಜಿನ್‌ಪಿ<ಗ್‌ ಹೇಳಿರುವುದು ಜಾಗತಿಕವಾಗಿ ಗಮನಸೆಳೆದಿದೆ.

ಅರಾಜಕತೆ ಸೃಷ್ಟಿಯಾಗಿದ್ದ ಹಾಂಕಾಂಗ್ ಮೇಲೆ ಚೀನಾ, ಪರಿಣಾಮಕಾರಿ ನಿಯಂತ್ರಣವನ್ನು ಸಾಧಿಸುವ ಮೂಲಕ ಅದನ್ನು ಸಮರ್ಪಕ ಆಡಳಿತ ವ್ಯವಸ್ಥೆಯನ್ನಾಗಿ ಬದಲಿಸಿದೆ. ಹಾಂಕಾಂಗ್‌ನಲ್ಲಾದ ಈ ಪರಿವರ್ತನೆ ಅಲ್ಲಿನ ಜನರ ಒಳಿತಿಗಾಗಿ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಕ್ಸಿ ಜಿನ್‌ಪಿಂಗ್‌ ಹೇಳಿದ್ದಾರೆ.

ಇನ್ನು ತೈವಾನ್‌ನಲ್ಲಿ ವಿದೇಶಿ ಹಸ್ತಕ್ಷೇಪವನ್ನು ಚೀನಾ ಸಹಿಸುವುದಿಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿರುವ ಕ್ಸಿ ಜಿನ್‌ಪಿಂಗ್‌, ಪ್ರತ್ಯೇಕತಾವಾದ ಮತ್ತು ಹಸ್ತಕ್ಷೇಪದ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ ಎಂದು ಘೋಷಿಸಿದ್ದಾರೆ. ತೈವಾನ್‌ ನಮ್ಮ ಅವಿಭಾಜ್ಯ ಅಂಗ ಎಂಬುದನ್ನು ಜಗತ್ತು ಅರ್ಥ ಮಾಡಿಕೊಂಡಷ್ಟು ಒಳ್ಳೆಯದು ಎಂದು ಕ್ಸಿ ಜಿನ್‌ಪಿಂಗ್ ಪರೋಕ್ಷವಾಗಿ ಅಮೆರಿಕವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.‌

ಚೀನಾದ ಸಾರ್ವಭೌಮತೆಯನ್ನು ಪ್ರಶ್ನಿಸುವ ಅವಕಾಶವನ್ನು ಯಾರಿಗೂ ನೀಡಲಾಗದು. ತೈವಾನ್‌ನಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ನಮ್ಮ ಸಾವರ್ವಭಮತೆಗೆ ತೋರುವ ಅಗೌರವ ಎಂದೇ ನಾವು ಪರಿಗಣಿಸುತ್ತೇವೆ. ಅಲ್ಲದೇ ಚೀನಾದ ಸಾರ್ವಭೌಮತೆಯನ್ನು ರಕ್ಷಿಸಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಅನುಸರಿಸುತ್ತೇವೆ ಎಂದು ಕ್ಸಿ ಜಿನ್‌ಪಿಂಗ್‌ ಸ್ಪಷ್ಟಪಡಿಸಿದ್ದಾರೆ.

ಆಧುನಿಕ ಚೀನಾದ ನಿರ್ಮಾಣದಲ್ಲಿ ಚೀನಿ ಕಮ್ಯೂನಿಸ್ಟ್‌ ಪಕ್ಷದ ಪಾತ್ರ ಅತ್ಯಂತ ಮಹತ್ವದ್ದು. ಚೀನಾ ಈಗ ಜಾಗತಿಕವಾಗಿ ಆರ್ಥಿಕ, ರಾಜಕೀಯ ಹಾಗೂ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಕಮ್ಯೂನಿಸ್ಟ್‌ ಪಕ್ಷ ಸಾಕಷ್ಟು ಕೊಡುಗೆ ನೀಡಿದೆ. ಈಗ ನಾವು ಚೀನಾದ ಭವಿಷ್ಯವನ್ನು ನಿರ್ಧರಿಸುವ ಐತಿಹಾಸಿಕ ಕಾಲಘಟ್ಟ ತಲುಪಿದ್ದೇವೆ. ಚೀನಾದ ಭವಿಷ್ಯ ಉಜ್ವಲವಾಗಿರಲಿದೆ ಎಂಬುದರಲ್ಲಿ ನನಗೆ ಯಾವುದೇ ಅನುನಾಮವಿಲ್ಲ ಎಂದು ಕ್ಸಿ ಜಿನ್‌ಪಿಂಗ್‌ ಹೇಳಿದ್ದಾರೆ.

ಕೋವಿಡ್‌ ನೀತಿಗೆ ಸಮರ್ಥನೆ:

ಚೀನಾದ ಕೋವಿಡ್‌ ನೀತಿಯನ್ನು ಸಮರ್ಥಿಸಿಕೊಂಡಿರುವ ಕ್ಸಿ ಜಿನ್‌ಪಿಂಗ್‌, ಮಾರಕ ವೈರಾಣುವಿನ ಹರಡುವಿಕೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳು ಅಗತ್ಯವಾಗಿತ್ತು ಎಂದು ಹೇಳಿದ್ದಾರೆ. ಜನರ ಸುರಕ್ಷತೆಗಾಗಿಯೇ ಈ ನೀತಿಗಳನ್ನು ಜಾರಿಗೆ ತರಲಾಗಿದೆ ಎಂದು ಕ್ಸಿ ಸಮರ್ಥನೆ ನೀಡಿದ್ದಾರೆ.

ಈ ನೀತಿಗಳು ಜನರ ಸುರಕ್ಷತೆ ಮತ್ತು ಆರೋಗ್ಯವನ್ನು ಅತ್ಯಧಿಕ ಪ್ರಮಾಣದಲ್ಲಿ ರಕ್ಷಿಸಿದೆ. ಕೋವಿಡ್‌ ಹಾವಳಿಯನ್ನು ತಡೆಗಟ್ಟುವಲ್ಲಿ ಮಹತ್ವದ ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸಿವೆ. ಜನರ ಸುರಕ್ಷತೆಗಾಗಿ ಸರ್ಕಾರ ಕೆಲವೊಮ್ಮೆ ಕಟ್ಟುನಿಟ್ಟಿನ ಕ್ರಮಾನುಸರಿಸಬೇಕಾಗುತ್ತದೆ ಎಂದು ಹೇಳುವ ಮೂಲಕ, ಬಲವಣತದ ಕ್ವಾರಂಟೈನ್‌ ಕ್ರಮವನ್ನು ಕ್ಸಿ ಜಿನ್‌ಪಿಂಗ್‌ ಸಮರ್ಥಿಸಿಕೊಂಡಿದ್ದಾರೆ.

ʼಜೀವಗಳು ಮೊದಲುʼ ಎಂಬ ನೀತಿಯ ಆಧಾರದ ಮೇಲೆ ಕೋವಿಡ್‌ ಸಾಂಕ್ರಾಮಿಕ ರೋಗವನ್ನು ಹತ್ತಿಕ್ಕಲು ನಾವು ಮುಂದಾದೆವು. ಈ ಪ್ರಯತ್ನದಲಿ ಚೀನಾ ಯಶಸ್ವಿಯಾಗಿದೆ ಎಂದು ಕ್ಸಿ ಜಿನ್‌ಪಿಂಗ್‌ ಹೇಳಿದ್ದಾರೆ.

ಒಟ್ಟಿನಲ್ಲಿ ಮೂರನೇ ಬಾರಿಗೆ ಚೀನಾದ ಅಧ್ಯಕ್ಷರಾಗಲಿರುವ ಕ್ಸಿ ಜಿನ್‌ಪಿಂಗ್‌, ಹಾಂಕಾಂಗ್‌ ಮತ್ತು ತೈವಾನ್‌ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ತಮ್ಮ ಆಕ್ರಮಣಕಾರಿ ನೀತಿಯನ್ನು ಮುಂದುವರೆಸುವ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ