Year in Review 2022: ಪುನಶ್ಚೇತನದ ಹಾದಿ ಹಿಡಿಯಿತೇ ಕಾಂಗ್ರೆಸ್?: ಏಳು-ಬೀಳುಗಳ ವರ್ಷದಲ್ಲಿ ಕಂಡಿದೆಷ್ಟು ಸಕ್ಸಸ್?
Dec 13, 2022 09:14 PM IST
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
- ನಿಮ್ಮ ನೆಚ್ಚಿನ 'ಹಿಂದುಸ್ತಾನ್ ಟೈಮ್ಸ್ ಕನ್ನಡ' ಡಿಜಿಟಲ್ ಪತ್ರಿಕೆಯು, 2022ರಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಸಾಗಿಬಂದ ದಾರಿಯನ್ನು 'Year in Review 2022 ' ಸರಣಿಯಲ್ಲಿ ಅವಲೋಕಿಸುತ್ತಿದೆ. ಈ ಸರಣಿ ಲೇಖನಗಳು ರಾಜಕೀಯ ಪಕ್ಷಗಳು ವರ್ಷಪೂರ್ತಿ ನಡೆಸಿದ ಚಟುವಟಿಕೆಗಳತ್ತ ಬೆಳಕು ಚೆಲ್ಲಲಿದೆ. ಇದರ ಎರಡನೇ ಸರಣಿಯಲ್ಲಿ 2022ರಲ್ಲಿ ಕಾಂಗ್ರೆಸ್ ಸಾಗಿಬಂದ ಪಥ ಹೇಗಿತ್ತು ಎಂಬುದನ್ನು ಅವಲೋಕಿಸೋಣ.
ಬೆಂಗಳೂರು: 2022 ಸರಿದು 2023 ಬರತ್ತಿದೆ. ಈ ಮೂಲಕ ಭೂಮಿಯ ಇತಿಹಾಸದ ಪುಟಕ್ಕೆ ಮತ್ತೊಂದು ವರ್ಷ ಸೇರಿಕೊಂಡಿದೆ. ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಆದರೆ ನೀ ಸಾಗುವ ದಾರಿಯನ್ನೊಮ್ಮೆ ಹಿಂತಿರುಗಿ ನೋಡು ಎಂಬಂತೆ, ಹೊಸ ವರ್ಷವನ್ನು ಸ್ವಾಗತಿಸುವ ಮೊದಲು ನಾವೆಲ್ಲರೂ 2022ರಲ್ಲಿ ದೇಶ ಸಾಗಿ ಬಂದ ದಾರಿಯ ಮೇಲೆ ಕಣ್ಣಾಡಿಸುವುದು ಅವಶ್ಯ.
ಅದರಲ್ಲೂ ದೇಶದ ರಾಜಕೀಯ ಕ್ಷೇತ್ರದಲ್ಲಿ 2022 ನಿಜಕ್ಕೂ ರೋಚಕ ಕ್ಷಣಗಳನ್ನು ಹೊತ್ತು ತಂದ ವರ್ಷ ಎಂದರೆ ತಪ್ಪಾಗಲಾರದು. ವರ್ಷಪೂರ್ತಿ ನಡೆದ ರಾಜಕೀಯ ಬೆಳವಣಿಗೆಗಳು, ರಾಜಕೀಯ ಪಕ್ಷಗಳು, ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಕೈಗೊಂಡ ಮಹತ್ವದ ನಿರ್ಧಾರಗಳು, ರಾಜಕೀಯ ನಿರ್ಣಯಗಳಿಂದ ದೇಶದ ಮೇಲಾದ ಪ್ರಭಾವ ಹೀಗೆ ಎಲ್ಲವನ್ನೂ ಅವಲೋಕಿಸುವುದು ಅವಶ್ಯ.
ಈ ಹಿನ್ನೆಲೆಯಲ್ಲಿ ನಿಮ್ಮ ನೆಚ್ಚಿನ 'ಹಿಂದುಸ್ತಾನ್ ಟೈಮ್ಸ್ ಕನ್ನಡ' ಡಿಜಿಟಲ್ ಪತ್ರಿಕೆಯು, 2022ರಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಸಾಗಿಬಂದ ದಾರಿಯನ್ನು 'Year in Review 2022 ' ಸರಣಿಯಲ್ಲಿ ಅವಲೋಕಿಸುತ್ತಿದೆ. ಈ ಸರಣಿ ಲೇಖನಗಳು ರಾಜಕೀಯ ಪಕ್ಷಗಳು ವರ್ಷಪೂರ್ತಿ ನಡೆಸಿದ ಚಟುವಟಿಕೆಗಳತ್ತ ಬೆಳಕು ಚೆಲ್ಲಲಿದೆ.
ಅದರಂತೆ ದೇಶದ ಅತ್ಯಂತ ಪುರಾತನ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಂಗ್ರೆಸ್, 2022ರಲ್ಲಿ ಸಾಗಿಬಂದ ಪಥ ಹೇಗಿತ್ತು ಎಂಬುದನ್ನು ನಾವು ಎರಡನೇ ಸರಣಿಯಲ್ಲಿ ಅವಲೋಕಿಸೋಣ.
ಕಾಂಗ್ರೆಸ್:
ಕಾಂಗ್ರೆಸ್ ಈ ದೇಶದ ಅತ್ಯಂತ ಪುರಾತನ ಪಕ್ಷ. ದೇಶದ ಸ್ವಾತಂತ್ರ್ಯದಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿದ್ದ ಕಾಂಗ್ರೆಸ್, ಸ್ವಾತಂತ್ರ್ಯೋತ್ತರ ಭಾರತದ ಪಥವನ್ನೂ ನಿರ್ದೇಶಿಸಿತ್ತು ಎಂಬುದು ಸುಳ್ಳಲ್ಲ. ಕೆಲವು ಐತಿಹಾಸಿಕ ನಿರ್ಣಯಗಳು ಮತ್ತೆ ಕೆಲವು ಐತಿಹಾಸಿಕ ಪ್ರಮಾದಗಳೊಂದಿಗೆ, ಸ್ವಾತಂತ್ರ್ಯೋತ್ತರದ ಭಾರತದ ಇತಿಹಾಸವನ್ನು ಕಾಂಗ್ರೆಸ್ ಬಹುವಾಗಿ ಬರೆಯಿತು.
ಆದರೆ ಒಂದು ಕಾಲದಲ್ಲಿ ದೇಶದ ರಾಜಕಾರಣದಲ್ಲಿ ಮಿಂಚಿದ್ದ ಕಾಂಗ್ರೆಸ್, ಈಗ ಅವಸಾನದ ಹಾದಿ ಹಿಡಿದಿರುವಂತೆ ಭಾಸವಾಗುತ್ತಿದೆ. ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ನಿರ್ವಹಿಸುತ್ತಿರುವ ಪಾತ್ರ ದಿನದಿಂದ ದಿನಕ್ಕೆ ಗೌಣವಾಗುತ್ತಿದ್ದು, ಕಾಂಗ್ರೆಸ್ ಮತ್ತೆ ಈ ದೇಶದ ರಾಜಕಾರಣದಲ್ಲಿ ಧ್ರುವತಾರೆಯಂತೆ ಮಿನುಗುವುದೇ ಎಂಬ ಸಂದೇಹ ಬಹುತೇಕರನ್ನು ಕಾಡುತ್ತಿದೆ.
ಆದರೆ ಕಾಂಗ್ರೆಸ್ ಈ ಹಿಂದೆಯೂ ಹಲವು ಸವಾಲುಗಳನ್ನು ಎದುರಿಸಿತ್ತು. ಸದ್ಯದ ಸವಾಲನ್ನೂ ಎದುರಿಸಿ ಫಿನಿಕ್ಸ್ ಹಕ್ಕಿಯಂತೆ ಮೇಲೆಳಲಿದೆ ಎಂದು ವಾದಿಸುವ ಕಟ್ಟಾ ಕಾಂಗ್ರೆಸ್ ಬೆಂಬಲಿಗರ ಸಂಖ್ಯೆಗೇನೂ ಕಮ್ಮಿಯಿಲ್ಲ. ಕಾಂಗ್ರೆಸ್ ಹಿಮ್ಮುಖ ನಡೆ 2014ರಿಂದಲೇ ಆರಂಭವಾಗಿದೆಯಾದರೂ, ಅದರ ಬೇರುಗಳು ಇನ್ನೂ ಹಿಂದಕ್ಕೆ ಹೋಗುತ್ತವೆ. ಆದರೆ ಸದ್ಯ ನಾವು ಕೇವಲ 2022ರಲ್ಲಿ ಕಾಂಗ್ರೆಸ್ ನಡೆದು ಬಂದ ದಾರಿಯ ಬಗ್ಗೆ ಮಾತ್ರ ಚರ್ಚಿಸೋಣ.
ಗೋವಾ ವಿಧಾನಸಭೆ ಚುನಾವಣೆ:
2022ರಲ್ಲಿ ಕಾಂಗ್ರೆಸ್‌ಗೆ ಮೊದಲ ಹೊಡೆತ ಬಿದ್ದಿದ್ದು ಗೋವಾ ವಿಧಾನಸಭೆ ಚುನಾವಣೆಯಲ್ಲಿ. ಈ ಹಿಂದಿನ ಬಿಜೆಪಿ ಸರ್ಕಾರ ಕಿತ್ತೆಸೆದು ತನ್ನ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್‌ಗೆ, ಗೋವಾದ ಮತದಾರ ವರ್ಷದ ಮೊದಲ ಶಾಕ್ ನೀಡಿದ್ದ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಬಿಜೆಪಿ ಸರ್ಕಾರವನ್ನೇ ಮತ್ತೆ ಅಧಿಕಾರಕ್ಕೆ ತರುವ ಮೂಲಕ, ಗೋವಾದ ಮತದಾರ ಕಾಂಗ್ರೆಸ್‌ನ್ನು ತಿರಸ್ಕರಿಸಿದ್ದ. ಅದಾದ ಬಳಿಕ ಗೋವಾ ಕಾಂಗ್ರೆಸ್‌ನಲ್ಲಿ ಹಲವು ಬಾರಿ ಆಂತರಿಕ ಬಂಡಾಯ ನಡೆದು, ಸದ್ಯ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ಪಕ್ಷ ತ್ಯಜಿಸಿ ಬಿಜೆಪಿ ಪಾಳೆಯಕ್ಕೆ ಸೇರಿದ್ದಾರೆ.
ಉತ್ತರಾಖಂಡ್ ವಿಧಾನಸಭೆ ಚುನಾವಣೆ:
ಅದೇ ರೀತಿ ಫೆಬ್ರವರಿಯಲ್ಲಿ ನಡೆದ ಉತ್ತರಾಖಂಡ್ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಹೇಳಿಕೊಳ್ಳುವಂತ ಸಾಧನೆಯನ್ನು ಮಾಡಲಿಲ್ಲ. ರಾಜ್ಯದ 70 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ 19 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಆದರೆ 2017ರ ವಿಧಾನಸಭೆ ಚುನಾವಣೆಗಿಂತ ಈ ಬಾರಿ 8 ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಕಾಂಗ್ರೆಸ್ ಸಫಲವಾಗಿತ್ತು. ಉತ್ತರಾಖಂಡ್ ಮತದಾರ ಮತ್ತೆ ಬಿಜೆಪಿಗೆ ಮಣೆ ಹಾಕುವ ಮೂಲಕ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತಂದ.
ಪಂಜಾಬ್ ವಿಧಾನಸಭೆ ಚುನಾವಣೆ:
2022ರಲ್ಲಿ ಕಾಂಗ್ರೆಸ್‌ಗೆ ಅತ್ಯಂತ ದೊಡ್ಡ ಹೊಡೆತ ನೀಡಿದ್ದು ಪಂಜಾಬ್ ವಿಧಾನಸಭೆ ಚುನಾವಣೆ ಫಲಿತಾಂಶ. ಅಂದಿನ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಬದಲಾವಣೆ, ಚುನಾವಣೆಗೂ ಕೆಲವೇ ತಿಂಗಳುಗಳ ಮೊದಲ ಚರಣ್‌ಜೀತ್ ಸಿಂಗ್ ಚನ್ನಿ ಅವರನ್ನು ಸಿಎಂ ಮಾಡಿದ್ದು, ಕ್ಯಾ, ಸಿಂಗ್ ಬಂಡಾಯ ಇವೆಲ್ಲಾ ಸೇರಿ, ರಾಜ್ಯದ ಮತದಾರ ಕಾಂಗ್ರೆಸ್‌ನ್ನು ಸಂಪೂರ್ಣವಾಗಿ ತಿರಸ್ಕರಿಸುವಂತಹ ಸನ್ನಿವೇಶ ಸೃಷ್ಟಿಯಾಯಿತು. ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್, ವಿಧಾನಸಭೆ ಚುನಾವಣೆ ಬಳಿಕ ಕೇವಲ 18 ಕ್ಷೇತ್ರಗಳಲ್ಲಿ ಜಯಗಳಿಸಿ ಭಾರೀ ಮುಖಭಂಗ ಅನುಭವಿಸಿತು. ಪಂಜಾಬ್ ಮತದಾರ ಆಮ್ ಆದ್ಮಿ ಪಕ್ಷ(ಆಪ್)ಕ್ಕೆ ಮಣೆ ಹಾಕಿದ್ದರಿಂದ, ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಪ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ:
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿ ದಶಕಗಳೇ ಕಳೆದಿವೆ. 2022ರ ವಿಧಾನಸಭೆ ಚುನಾವಣೆಯಲ್ಲಿ ಇದು ಮತ್ತೊಮ್ಮೆ ಸಾಬೀತಾಯಿತು. ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದಿದ್ದು ಕೇವಲ 2 ಕ್ಷೇತ್ರಗಳನ್ನು ಮಾತ್ರ. ಯುಪಿ ಮತದಾರ ಸತತ ಎರಡನೇ ಬಾರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಧಿಕಾರದಲ್ಲಿ ಕುಳ್ಳಿರಿಸಿದ್ದು ಇದೀಗ ಇತಿಹಾಸ.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ:
ತೀರ ಇತ್ತೀಚಿಗೆ ಅಂದರೆ ಡಿಸೆಂಬರ್ 8ರಂದು ಘೋಷಣೆಯಾದ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ, ಕಾಂಗ್ರೆಸ್ ಪಾಲಿಗೆ ವರ್ಷಾಂತ್ಯದಲ್ಲಿ ಸಂತಸ ತಂದ ಸುದ್ದಿ. ಹಿಮಾಚಲ ಪ್ರದೇಶದಲ್ಲಿ ಬರೋಬ್ಬರಿ 40 ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಅಧಿಕಾರಕ್ಕೇರಿದ ಕಾಂಗ್ರೆಸ್, ಸುಖ್ವಿಂದರ್ ಸಿಂಗ್ ಸುಖು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಬಿಜೆಪಿಯಿಂದ ಒಂದು ರಾಜ್ಯವನ್ನು ಕಸಿದುಕೊಳ್ಳುವಲ್ಲಿ ಕಾಂಗ್ರೆಸ್ ಸಫಲವಾಗಿದೆ.
ಗುಜರಾತ್ ವಿಧಾನಸಭೆ ಚುನಾವಣೆ:
ಆದರೆ ಇದೇ ಹೊತ್ತಿಗೆ ಘೋಷಣೆಯಾದ ಗುಜರಾತ್ ವಿಧಾನಸಭೆ ಚುನಾವಣೆ, ಕಾಂಗ್ರೆಸ್ ಪಾಲಿಗೆ ಕಹಿ ಅನುಭವ ನೀಡಿದೆ. 2017ರಲ್ಲಿ 77 ಸ್ಥಾನಗಳಲ್ಲಿ ಗೆದ್ದು ಬಿಜೆಪಿಗೆ ಟಕ್ಕರ್ ನೀಡಿದ್ದ ಕಾಂಗ್ರೆಸ್, ಈ ಬಾರಿ ಕೇವಲ 17 ಸ್ಥಾನಗಳಲ್ಲಿ ಜಯಗಳಿಸಿ ಹೀನಾಯ ಸೋಲುಂಡಿದೆ. ಗುಜಾತ್ ಮತದಾರ ಮತ್ತೊಮ್ಮೆ ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿ ಗಾದಿ ಮೇಲೆ ಕುಳ್ಳಿರಿಸಿದ್ದಾನೆ.
ಭಾರತ್ ಜೋಡೋ ಯಾತ್ರೆ:
ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಹೊರತುಪಡಿಸಿದರೆ, ಕಾಂಗ್ರೆಸ್ ಈ ವರ್ಷ ಬಹುತೇ ಸುದ್ದಿಯಲ್ಲಿದ್ದಿದ್ದು, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಕಾರಣಕ್ಕೆ. ಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಈ ಯಾತ್ರೆ, ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸಂಚರಿಸುತ್ತಿದೆ. ಪ್ರಸ್ತುತ ಯಾತ್ರೆಯು ರಾಜಸ್ಥಾನದಲ್ಲಿದ್ದು, ಅಂತಿಮವಾಗಿ ಕಾಶ್ಮೀರವನ್ನು ತಲುಪಲಿದೆ.
ದೇಶದ ಕೋಮು ಸೌಹಾರ್ದತೆಯನ್ನು ಕಾಪಾಡುವ ಉದ್ದೇಶದಿಂದ ಭಾರತ್ ಜೋಡೋ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ಯಾತ್ರೆ ಹೋದಲೆಲ್ಲಾ ಸಾಕಷ್ಟು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು, ಪ್ರಮುಖವಾಗಿ ದಕ್ಷಿಣದ ರಾಜ್ಯಗಳಲ್ಲಿ ಯಾತ್ರೆಗೆ ಭಾರೀ ಜನಬೆಂಬಲ ದೊರೆತಿದೆ. ಆದರೆ ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ಗೆ 2023ರ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಮತ ಬರಲಿದೆಯೇ ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರ ದೊರೆತಿಲ್ಲ.
ಮಲ್ಲಿಕಾರ್ಜುನ ಖರ್ಗೆ ತೆಕ್ಕೆಗೆ ಎಐಸಿಸಿ ಅಧ್ಯಕ್ಷ ಸ್ಥಾನ:
ಬರೋಬ್ಬರಿ ಎರಡು ದಶಕಕ್ಕೂ ಹೆಚ್ಚಿನ ಸಮಯದ ನಂತರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಆಂತರಿಕ ಚುನಾವಣೆಯಲ್ಲಿ, ಹಿರಿಯ ನಾಯಕ ಮಲ್ಲಿಖಾರ್ಜುನ ಖರ್ಗೆ ಅವರು ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್ ವಿರುದ್ಧ ಜಯಗಳಿಸಿದರು. ಈ ಮೂಲಕ ಎರಡು ದಶಕಗಳ ಬಳಿಕ ಗಾಂಧಿ ಕುಟುಂಬದ ಹೊರಗಿನ ನಾಯಕರೊಬ್ಬರು ಕಾಂಗ್ರೆಸ್ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿದರು.
ರಾಹುಲ್ ಗಾಂಧಿ ಸ್ಪರ್ಧೆಯ ಪರವಾಗಿದ್ದ ಖರ್ಗೆ, ಅಂತಿಮವಾಗಿ ರಾಹುಲ್ ಅವರ ನಿರಾಕರಣೆಯ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದರು. ಆದರೆ ಖರ್ಗೆ ಅವರು ಗಾಂಧಿ ಕುಟುಂಬದ ಇಶಾರೆಯಂತೆ ನಡೆಯುವ ನಾಯಕ ಎಂಬ ಆರೋಪದಿಂದ ಹೊರಬರುತ್ತಾರಾ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.
ಮಲ್ಲಿಖಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ, ಕಾಂಗ್ರೆಸ್ ಗುಜರಾತ್‌ನಲ್ಲಿ ಸೋಲು ಮತ್ತು ಹಿಮಾಚಲ ಪ್ರದೇಶದಲ್ಲಿ ಗೆಲುವು ಸಾಧಿಸಿದೆ.
ಒಟ್ಟಿನಲ್ಲಿ 2022ರಲ್ಲಿ ಕಾಂಗ್ರೆಸ್ ಪುನಶ್ಚೇತನದ ಹಾದಿಗೆ ತನ್ನನ್ನು ತಾನು ತೆರೆದುಕೊಂಡಿದ್ದು, 2023 ರ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಹೇಗೆ ಪ್ರದರ್ಶನ ತೋರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವಿಭಾಗ