logo
ಕನ್ನಡ ಸುದ್ದಿ  /  Sports  /  Cricket News Icc Finally Scraps Soft Signal By On Field Umpires International Cricket Council Sourav Ganguly Jra

Soft Signal: ವರ್ಷಗಳ ಗೊಂದಲಕ್ಕೆ ತೆರೆ ಎಳೆದ ಐಸಿಸಿ; ವಿವಾದಿತ 'ಸಾಫ್ಟ್ ಸಿಗ್ನಲ್' ಕೊನೆಗೂ ರದ್ದು

Jayaraj HT Kannada

May 15, 2023 08:28 PM IST

ಸಾಫ್ಟ್‌ ಸಿಗ್ನಲ್‌ (ಸಾಂದರ್ಭಿಕ ಚಿತ್ರ)

    • ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್‌ನೊಂದಿಗೆ ಈ ಹೊಸ ಬದಲಾವಣೆಗಳು ಜೂನ್ 1ರಿಂದ ಜಾರಿಗೆ ಬರಲಿವೆ.
ಸಾಫ್ಟ್‌ ಸಿಗ್ನಲ್‌ (ಸಾಂದರ್ಭಿಕ ಚಿತ್ರ)
ಸಾಫ್ಟ್‌ ಸಿಗ್ನಲ್‌ (ಸಾಂದರ್ಭಿಕ ಚಿತ್ರ) (ICC)

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯು ಕೊನೆಗೂ ಆನ್-ಫೀಲ್ಡ್ ಅಂಪೈರ್‌ಗಳು ಥರ್ಡ್‌ ಅಂಪೈಯರ್‌ಗಳಿಗೆ ಕೊಡುವ ವಿವಾದಾತ್ಮಕ 'ಸಾಫ್ಟ್ ಸಿಗ್ನಲ್' ಸನ್ನೆಯನ್ನು ರದ್ದುಗೊಳಿಸಿದೆ. ಆ ಮೂಲಕ ಕ್ರಿಕೆಟಿಗರು ಮತ್ತು ಆಟದ ಮೇಲ್ವಿಚಾರಕರ ನಡುವೆ ವರ್ಷಗಳ ಕಾಲ ಇದ್ದ ಗೊಂದಲಕ್ಕೆ ತೆರೆ ಬೀಳುತ್ತಿದೆ.

ಟ್ರೆಂಡಿಂಗ್​ ಸುದ್ದಿ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಈ ಸಂಬಂಧ ಸೌರವ್ ಗಂಗೂಲಿ ನೇತೃತ್ವದ ಪುರುಷರ ಕ್ರಿಕೆಟ್ ಸಮಿತಿಯ ಶಿಫಾರಸುಗಳನ್ನು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಸಮಿತಿಯು ಸೋಮವಾರ ಅನುಮೋದಿಸಿದೆ. ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್‌ನೊಂದಿಗೆ ಈ ಹೊಸ ಬದಲಾವಣೆಗಳು ಜೂನ್ 1ರಿಂದ ಜಾರಿಗೆ ಬರಲಿವೆ.

ಆಟಗಾರರು ಮತ್ತು ಅಂಪೈರ್‌ಗಳ ನಡುವಿನ ದೀರ್ಘಕಾಲದ ಸಮಸ್ಯೆಯಾದ ಸಾಫ್ಟ್‌ ಸಿಗ್ನಲ್‌ಗೆ ಮಂಗಳ ಹಾಡಲಾಗಿದೆ. ಫೀಲ್ಡರ್‌ಗಳು ಹಿಡಿದ ಕ್ಯಾಚ್‌ಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮೈದಾನದಲ್ಲಿರುವ ಅಂಪೈರ್‌ಗಳು ಟಿವಿ ಅಂಪೈರ್‌ಗಳಿಗೆ ಉಲ್ಲೇಖಿಸುವಾಗ ಸಾಫ್ಟ್ ಸಿಗ್ನಲ್ ಅನ್ನು ಬಳಸುತ್ತಾರೆ. ಕ್ಯಾಚ್‌ ಅನ್ನು ಅವರು ಸರಿಯಾಗಿ ತೆಗೆದುಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಟಿವಿ ಅಂಪೈಯರ್‌ಗಳು ಅಂತಿಮವಾಗಿ ನಿರ್ಧರಿಸುತ್ತಾರೆ. ಒಂದು ವೇಳೆ ಟಿವಿ ಅಂಪೈಯರ್‌ಗಳು ಕೂಡಾ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಗೊಂದಲಕ್ಕೊಳಗಾದರೆ, ಆನ್‌ ಫೀಲ್ಡ್‌ ಅಂಪೈಯರ್‌ ಮಾಡಿದ ಸಾಫ್ಟ್‌ ಸಿಗ್ನಲ್‌ ನಿರ್ಧಾರವನ್ನೇ ಅಂತಿಮ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಈ ಬಗ್ಗೆ ವ್ಯಾಪಕ ಚರ್ಚೆ ಎದ್ದಿತ್ತು.

ಐಸಿಸಿ ನಿಯಮಗಳ ಪ್ರಕಾರ, ಈ ಸಾಫ್ಟ್‌ ಸಿಗ್ನಲ್‌ ಎಂಬದು ಮೈದಾನದಲ್ಲಿರುವ ಅಂಪೈರ್‌ ಮೂರನೇ ಅಂಪೈರ್‌ಗೆ ಮಾಡುವ ದೃಶ್ಯ ಸಂವಹನವಾಗಿದೆ. ಅಂದರೆ ಅಂಪೈಯರ್‌ ತಮ್ಮ ಹೊಟ್ಟೆಗಿಂತ ಸ್ವಲ್ಪ ಮೇಲ್ಭಾಗದಲ್ಲಿ ಔಟ್‌ ಎಂಬ ಸಿಗ್ನಲ್‌ ತೋರಿಸುತ್ತಾರೆ. ಅಗತ್ಯವಿರುವಲ್ಲಿ ದ್ವಿಮುಖ ರೇಡಿಯೊ ಮೂಲಕ ಹೆಚ್ಚುವರಿ ಮಾಹಿತಿಯನ್ನು ಕೂಡಾ ಟಿವಿ ಅಂಪೈಯರ್‌ ಜೊತೆಗೆ ಹಂಚಿಕೊಳ್ಳುತ್ತಾರೆ.

ಕೆಲವೊಂದು ಕ್ಯಾಚ್‌ಗಳನ್ನು ಬರಿಗಣ್ಣಿನಿಂದ ನೇರವಾಗಿ ನೋಡಿದಾಗ ಅಂತಹ ಕ್ಯಾಚ್‌ಗಳ ಸಿಂಧುತ್ವವನ್ನು ಖಚಿತಪಡಿಸಿಕೊಳ್ಳುವುದು ಅಸಾಧ್ಯ. ಹೀಗಾಗಿ ಅದರ ನಿಖರತೆಗಾಗಿ ಟಿವಿ ಫೂಟೇಜ್ ಮರುವೀಕ್ಷಣೆ ಮಾಡಲಾಗುತ್ತದೆ. ಒಂದು ವೇಳೆ ಥರ್ಡ್‌ ಅಂಪೈಯರ್‌ ಕೂಡಾ ಅಂತಿಮ ನಿರ್ಧಾರ ಮಾಡಲು ಗೊಂದಲಕ್ಕೊಳಗಾದಾಗ, ಆನ್‌ ಫೀಲ್ಡ್ ಅಂಪೈಯರ್‌ ತೆಗೆದುಕೊಂಡ ನಿರ್ಧಾರವನ್ನೇ ಥರ್ಡ್‌ ಅಂಪೈಯರ್‌ ಕೂಡಾ ಅಂತಿಮಗೊಳಿಸುತ್ತಾರೆ.

2021ರಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ 57 ರನ್‌ ಗಳಿಸಿದ್ದ ಸೂರ್ಯಕುಮಾರ್ ಯಾದವ್, ವೇಗಿ ಸ್ಯಾಮ್ ಕರನ್ ಎಸೆತವನ್ನು ಡೀಪ್ ಸ್ಕ್ವೇರ್-ಲೆಗ್ ಕಡೆಗೆ ಹೊಡೆದಿದ್ದರು. ಅಲ್ಲಿ ಡೇವಿಡ್ ಮಲನ್ ಅದನ್ನು ಕ್ಯಾಚ್ ಹಿಡಿದಂತೆ ಕಂಡುಬಂದಿತು. ಈ ವೇಳೆ ಆನ್‌ ಫೀಲ್ಡ್ ಅಂಪೈರ್ ಕೆಎನ್ ಅನಂತಪದ್ಮನಾಭನ್ ಅವರು‌, "ಔಟ್" ಎಂಬ ಮೃದು ಸಿಗ್ನಲ್‌ನೊಂದಿಗೆ ಟಿವಿ ಅಂಪೈಯರ್‌ಗೆ ಮೇಲ್ಮನವಿ ಹಾಕಿದರು. ಆದರೆ, ಮೂರನೇ ಅಂಪೈರ್ ವೀರೇಂದ್ರ ಶರ್ಮಾ ಅವರು ಸುಮಾರು ನಾಲ್ಕು ನಿಮಿಷಗಳ ಕಾಲ ದೃಶ್ಯಗಳನ್ನು ಪರಿಶೀಲಿಸಿದರೂ, ಅದು ಕ್ಲೀನ್ ಕ್ಯಾಚ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ, ನಿಯಮಗಳಿಗೆ ಅಂಟಿಕೊಂಡ ಅವರು, ಅನಂತಪದ್ಮನಾಭನ್ ಅವರ ಸಾಫ್ಟ್ ಸಿಗ್ನಲ್‌ ನಿರ್ಧಾರದ ಪ್ರಕಾರ ಯಾದವ್ ಅವರನ್ನು ಔಟ್ ಎಂದು ಘೋಷಿಸಿದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.

ಆಗ ಭಾರತದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಈ ನಿರ್ಧಾರದಿಂದ ಬೇಸರಗೊಂಡಿದ್ದರು. ಖಚಿತವಾಗಿಲ್ಲದಿದ್ದರೆ ಅಂಪೈರ್‌ಗಳು ನಿರ್ಧಾರಕ್ಕೆ ಬದ್ಧರಾಗಬಾರದು ಎಂದು ಒತ್ತಾಯಿಸಿದ್ದರು.

ಈ ರೀತಿಯ ಹಲವು ಸಂದರ್ಭಗಳು ಕ್ರಿಕೆಟ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಇದನ್ನು ರದ್ದುಪಡಿಸಲು ಹಲವು ವರ್ಷಗಳಿಂದ ಒತ್ತಾಯ ಕೇಳಿಬರುತ್ತಿತ್ತು.

ನಿಯಮವನ್ನು ರದ್ದುಗೊಳಿಸುವುದರಿಂದ ಟಿವಿ ಅಂಪೈರ್‌ಗೆ ಈಗ ಇನ್ನಷ್ಟು ಶಕ್ತಿ ತುಂಬಿದೆ. "ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಆನ್-ಫೀಲ್ಡ್ ಅಂಪೈರ್‌ಗಳು ಟಿವಿ ಅಂಪೈರ್‌ನೊಂದಿಗೆ ಸಮಾಲೋಚಿಸುತ್ತಾರೆ" ಎಂದು ಐಸಿಸಿ ಹೇಳಿದೆ.

    ಹಂಚಿಕೊಳ್ಳಲು ಲೇಖನಗಳು