logo
ಕನ್ನಡ ಸುದ್ದಿ  /  Sports  /  Cricket News Ipl 2023 Virat Kohli On His T20 Cricket Declining Claim After Successive Century Against Gt Vs Rcb Jra

Virat Kohli: ನನ್ನ ಟಿ20 ಕ್ರಿಕೆಟ್ ಸಾಮರ್ಥ್ಯ ಕುಸಿಯುತ್ತಿದೆ ಎಂದು ಹಲವರು ಭಾವಿಸಿದ್ದಾರೆ; ಟೀಕಾಕಾರರಿಗೆ ತಕ್ಕ ಉತ್ತರ ಕೊಟ್ಟ ಕೊಹ್ಲಿ

Jayaraj HT Kannada

May 22, 2023 11:29 AM IST

ವಿರಾಟ್‌ ಕೊಹ್ಲಿ

    • ತಮ್ಮನ್ನು ಟೀಕಿಸುವವರಿಗೆ ವಿರಾಟ್ ದಿಟ್ಟ ಉತ್ತರ ನೀಡಿದ್ದಾರೆ. ವಿರಾಟ್‌ ಸ್ಟ್ರೈಕ್ ರೇಟ್‌ ಬಗ್ಗೆ ಮಾತೆತ್ತಿದ್ದ ಟೀಕಾಕಾರರಿಗೆ ಬ್ಯಾಟ್‌ನಲ್ಲೇ ಉತ್ತರಿಸಿದ ಕೊಹ್ಲಿ, ಬಳಿಕ ಮಾತಿನ ಛಾಟಿ ಬೀಸಿದ್ದಾರೆ.
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ (PTI)

ಸತತ 16ನೇ ಆವೃತ್ತಿಯಲ್ಲೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಘಾತ ಅನುಭವಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೊಚ್ಚಲ ಕಪ್‌ ಗೆಲ್ಲುವ ಕನಸನ್ನು ಮತ್ತೊಂದು ವರ್ಷಕ್ಕೆ ಮುಂದೂಡಿದೆ. ತಂಡವು ಪ್ಲೇಆಫ್ ಅರ್ಹತೆಗಾಗಿ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ಆರು ವಿಕೆಟ್‌ಗಳ ಸೋಲನ್ನು ಎದುರಿಸಿದ ಆರ್‌ಸಿಬಿ ಮತ್ತೊಮ್ಮೆ ನಿರಾಸೆ ಅನುಭವಿಸಿತು. ಆ ಮೂಲಕ ಈ ಸಲ ಕಪ್‌ ನಮ್ದೇ ಘೋಷಣೆಯು ಮತ್ತೊಮ್ಮೆ ಬದಲಾಗಿದೆ. ಅಭಿಮಾನಿಗಳು ಮುಂದಿನ ಸಲ ಕಪ್‌ ನಮ್ದೇ ಅನ್ನಲು ಶುರು ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಪಂದ್ಯದಲ್ಲಿ ಆರ್‌ಸಿಬಿ ಸೋತರೂ, ಅಭಿಮಾನಿಗಳು ಖುಷಿ ಪಡುವ ಒಂದೇ ಒಂದು ಅಂಶವೆಂದರೆ ಅದು ವಿರಾಟ್‌ ಕೊಹ್ಲಿ ಶತಕ. ಮಳೆ ಬಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಪಿಚ್‌ ಬ್ಯಾಟ್‌ ಬೀಸುವವರಿಗೆ ಸವಾಲು ಎಸೆದಿತ್ತು. ಅಂತಹ ಸನ್ನಿವೇಶದಲ್ಲೂ ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿದ ಕಿಂಗ್‌, ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಸತತ ಎರಡನೇ ಶತಕ ಸಿಡಿಸಿದರು.

ಪಂದ್ಯದ ನಡುವೆ ನಡೆದ ಸಂದರ್ಶನದಲ್ಲಿ ಮಾತನಾಡಿದ ವಿರಾಟ್‌, ತಮ್ಮನ್ನು ಟೀಕಿಸುವವರಿಗೆ ದಿಟ್ಟ ಉತ್ತರ ನೀಡಿದರು. ವಿರಾಟ್‌ ಸ್ಟ್ರೈಕ್ ರೇಟ್‌ ಬಗ್ಗೆ ಮಾತೆತ್ತಿದ್ದ ಟೀಕಾಕಾರರಿಗೆ ಬ್ಯಾಟ್‌ನಲ್ಲೇ ಉತ್ತರಿಸಿದ ಕೊಹ್ಲಿ, ಬಳಿಕ ಮಾತಿನ ಛಾಟಿ ಬೀಸಿದರು.

“ನನಗೆ ನನ್ನ ಪ್ರದರ್ಶನ ನಿಜಕ್ಕೂ ಉತ್ತಮ ಅನಿಸಿತು. ನನ್ನ ಟಿ20 ಕ್ರಿಕೆಟ್ ಸಾಮರ್ಥ್ಯ ಕುಸಿಯುತ್ತಿದೆ ಎಂದು ಬಹಳಷ್ಟು ಜನರು ಭಾವಿಸಿದ್ದಾರೆ. ಆದರೆ ನನಗೆ ಹಾಗೇನೂ ಅನಿಸುತ್ತಿಲ್ಲ. ನಾನು ಮತ್ತೊಮ್ಮೆ ನನ್ನೊಳಗಿನ ಅತ್ಯುತ್ತಮ ಟಿ20 ಕ್ರಿಕೆಟ್ ಆಡುತ್ತಿದ್ದೇನೆ ಎಂದು ನಾನು ಭಾವಿಸುತ್ತೇನೆ” ಎಂದು ಕೊಹ್ಲಿ ಹೇಳಿದ್ದಾರೆ.

“ನಾನು ನನ್ನ ಆಟವನ್ನು ಆನಂದಿಸುತ್ತಿದ್ದೇನೆ. ಟಿ20 ಕ್ರಿಕೆಟ್ ಅನ್ನು ಹೀಗೆಯೇ ಆಡುತ್ತೇನೆ. ನಾನು ಮೈದಾನದಲ್ಲಿ ಅಂತರವನ್ನು ನೋಡಿಕೊಂಡು ಚೆಂಡನ್ನು ಬೌಂಡರಿಗೆ ಅಟ್ಟುತ್ತೇನೆ. ಪರಿಸ್ಥಿತಿಯನ್ನು ನೋಡಿಕೊಂಡು ಅವಕಾಶ ಸಿಕ್ಕಂತೆಲ್ಲಾ ದೊಡ್ಡ ಹೊಡೆತಕ್ಕೆ ಕೈ ಹಾಕುತ್ತೇನೆ. ಆಟಗಾರನು ಸಂದರ್ಭವನ್ನು ಅರ್ಥ ಮಾಡಿಕೊಂಡು ಆಡಬೇಕು. ತಂಡದ ಅಗತ್ಯಕ್ಕನುಗುಣವಾಗಿ ಹೊಡೆತಗಳನ್ನು ನಿರ್ಧರಿಸಬೇಕು. ಈ ಸಮಯದಲ್ಲಿ ನನ್ನ ಆಟ ಮತ್ತು ನಾನು ಹೇಗೆ ಬ್ಯಾಟಿಂಗ್ ಮಾಡುತ್ತಿದ್ದೇನೆ ಎಂಬುದರ ಬಗ್ಗೆ ನನಗೆ ಖುಷಿ ಇದೆ,” ವಿರಾಟ್‌ ತಮ್ಮ ಶತಕದ ಬಳಿಕ ಹೇಳಿದ್ದಾರೆ.

ಕೊಹ್ಲಿಯ ಅಮೋಘ ಇನ್ನಿಂಗ್ಸ್ ಹೊರತಾಗಿಯೂ ಆರ್‌ಸಿಬಿಯು ಸೋಲೊಪ್ಪಿತು. ಶುಬ್ಮನ್ ಗಿಲ್ ಅವರ ಸೊಗಸಾದ ಶತಕದ ನೆರವಿನಿಂದ ಗೆದ್ದ ಗುಜರಾತ್‌, ಆರ್‌ಸಿಬಿಯನ್ನು ಪ್ಲೇ ಆಫ್‌ ರೇಸ್‌ನಿಂದ ಹೊರದಬ್ಬಿತು. ಹತ್ತನೇ ಜಯದೊಂದಿಗೆ 20 ಅಂಕ ಗಳಿಸಿದ ಗುಜರಾತ್‌, ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಆ ಮೂಲಕ ಲೀಗ್ ಹಂತದಲ್ಲಿ ಸತತ ಎರಡನೇ ವರ್ಷದಲ್ಲಿ ಗುಜರಾತ್ ಅಗ್ರಸ್ಥಾನಿಯಾಗಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿತು.

ವಿರಾಟ್ ಐಪಿಎಲ್‌ನಲ್ಲಿ ಒಟ್ಟು ಏಳು ಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ. ಆ ಮೂಲಕ ಆರ್‌ಸಿಬಿ ತಂಡದ ಮಾಜಿ ಸಹ ಆಟಗಾರ ಕ್ರಿಸ್ ಗೇಲ್ ಅವರ ದೀರ್ಘಕಾಲದ ಇಂಡಿಯನ್ ಪ್ರೀಮಿಯರ್ ಲೀಗ್ ದಾಖಲೆಯನ್ನು ಮುರಿದಿದ್ದಾರೆ. ಇದು ಪ್ರಸಕ್ತ ಋತುವಿನಲ್ಲಿ ಕೊಹ್ಲಿ ಅವರ ಸತತ ಎರಡನೇ ಶತಕವಾಗಿದೆ. 34 ವರ್ಷದ ಬ್ಯಾಟರ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಹಿಂದಿನ ಪಂದ್ಯದಲ್ಲೂ 100 ರನ್ ಗಳಿಸಿದ್ದರು.

ಕ್ರಿಸ್ ಗೇಲ್ ಅವರು ಈ ಹಿಂದೆ ರಾಯಲ್ ಚಾಲೆಂಜರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾಗ ಪಂದ್ಯಾವಳಿಯ 2018ರ ಆವೃತ್ತಿಯಲ್ಲಿ ಲೀಗ್‌ನಲ್ಲಿ ತಮ್ಮ ಆರನೇ ಮತ್ತು ಅಂತಿಮ ಶತಕ ಸಿಡಿಸಿದ್ದರು. ಕುತೂಹಲಕಾರಿ ಎಂಬಂತೆ, ಈ ಋತುವಿಗಿಂತ ಹಿಂದೆ, ಕೊಹ್ಲಿ ಅವರ ಕೊನೆಯ ಶತಕವು 2019ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬಂದಿತ್ತು.

    ಹಂಚಿಕೊಳ್ಳಲು ಲೇಖನಗಳು