FIFA World Cup 2022: ಫುಟ್ಬಾಲ್ ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದ ರೊನಾಲ್ಡೊ; ಈ ಸಾಧನೆ ಮಾಡಿದ ಮೊದಲ ಆಟಗಾರ
Nov 25, 2022 11:32 AM IST
ಕ್ರಿಸ್ಟಿಯಾನೊ ರೊನಾಲ್ಡೊ
- ರೊನಾಲ್ಡೊ, ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಪಂದ್ಯಾವಳಿಯ ಐದು ಆವೃತ್ತಿಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು.
ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ ವಿವಿಧ ದಾಖಲೆಗಳು ಹಾಗೂ ರೋಚಕ ಕಾದಾಟಗಳು ನಡೆಯುತ್ತಲೇ ಇವೆ. ಗುರುವಾರ ನಡೆದ ಪೋರ್ಚುಗಲ್‌ನ ಮೊದಲ ಗುಂಪು ಹಂತದ ಪಂದ್ಯದಲ್ಲಿ ಫುಟ್‌ಬಾಲ್ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಘಾನಾ ವಿರುದ್ಧ ಐತಿಹಾಸಿಕ ಪೆನಾಲ್ಟಿ ಕಿಕ್ ಗಳಿಸಿ ದಾಖಲೆ ಬರೆದಿದ್ದಾರೆ.
ರೊನಾಲ್ಡೊ, ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಪಂದ್ಯಾವಳಿಯ ಐದು ಆವೃತ್ತಿಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. 2006ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಪಂದ್ಯಗಳಲ್ಲಿ ಆಡಿದ ರೊನಾಲ್ಡೊ, ವಿಶ್ವಕಪ್‌ನಲ್ಲಿ ತಮ್ಮ ದೇಶದ ಪರ ಆಡಿದ 18ನೇ ಪಂದ್ಯದಲ್ಲಿ 8ನೇ ವಿಶ್ವಕಪ್ ಗೋಲನ್ನು ಗಳಿಸಿದ್ದಾರೆ.
ರೊನಾಲ್ಡೊ FIFA ವಿಶ್ವಕಪ್‌ನ 2006, 2010, 2014, 2018 ಮತ್ತು 2022ನೇ ಆವೃತ್ತಿಗಳಲ್ಲಿ ಗೋಲು ಗಳಿಸಿದ್ದಾರೆ. ಈ ಮೂಲಕ ಲಿಯೋನೆಲ್ ಮೆಸ್ಸಿ, ಪೀಲೆ, ಉವೆ ಸೀಲರ್ ಮತ್ತು ಮಿರೊಸ್ಲಾವ್ ಕ್ಲೋಸ್ ಅವರನ್ನು ಹಿಂದಿಕ್ಕಿ ಐದು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಸ್ಕೋರ್ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಿನ್ನೆ ಘಾನಾ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೋ ಬಳಗ 3-2ರಿಂದ ಪಂದ್ಯ ಗೆದ್ದಿತು. ಪೆನಾಲ್ಟಿ ಪ್ರಯೋಜನ ಪಡೆದು ರೊನಾಲ್ಡೊ ಗೋಲು ಬಾರಿಸುವ ಮೂಲಕ, ಪೋರ್ಚುಗಲ್ ಪರ ರೊನಾಲ್ಡೊ 118ನೇ ಗೋಲು ಬಾರಿಸಿದರು. ರೊನಾಲ್ಡೊ ಅವರ ಪೆನಾಲ್ಟಿಯ ನೆರವಿನಿಂದ ಪೋರ್ಚುಗಲ್ 1-0 ಮುನ್ನಡೆ ಸಾಧಿಸಿತು.
ಪೋರ್ಚುಗಲ್ ಮತ್ತು ಘಾನಾ ನಡುವಿನ ಪಂದ್ಯವು ಕೆಲವು ರೋಚಕ ಸನ್ನಿವೇಶಕ್ಕೆ ಕಾರಣವಾಯ್ತು. ಘಾನಾ ತ್ವರಿತವಾಗಿ ನಾಯಕ ಆಂಡ್ರೆ ಅಯೆವ್ ಗಳಿಸಿದ ಗೋಲಿನ ಮೂಲಕ ಸಮಬಲ ಸಾಧಿಸಿತು. ಜೋವೊ ಫೆಲಿಕ್ಸ್ ಮತ್ತು ರಾಫೆಲ್ ಲಿಯೊ ಅವರ ಎರಡು ಗೋಲುಗಳೊಂದಿಗೆ ಪೋರ್ಚುಗಲ್ ಮತ್ತೆ ಪುಟಿದೆದ್ದಿತು. ಆದರೂ ಕೊನೆಯ ಒಂದು ಗೋಲು ಗಳಿಸಲು ಘಾನಾ ವಿಫಲವಾಗಿ, ಪಂದ್ಯ ಸೋತಿತು. ಸಾಕಷ್ಟು ನಾಟಕೀಯತೆಯ ಬಳಿಕ ಪಂದ್ಯವು 3-2ರಿಂದ ಕೊನೆಗೊಂಡಿತು. ಸದ್ಯ ಈ ಗೆಲುವಿನೊಂದಿಗೆ ಫಿಫಾ ವಿಶ್ವಕಪ್ 2022ರ ಅಂಕಪಟ್ಟಿಯಲ್ಲಿ ಪೋರ್ಚುಗಲ್ ಮೂರು ಅಂಕಗಳನ್ನು ಪಡೆದು, H ಗುಂಪಿನಲ್ಲಿ ಅಗ್ರಸ್ಥಾನಕ್ಕೆ ನೆಗೆಯಿತು.
ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ತಂಡವು ತನ್ನ ಮುಂದಿನ ಎರಡು ಗುಂಪು ಹಂತದ ಪಂದ್ಯಗಳಲ್ಲಿ ಉರುಗ್ವೆ ಮತ್ತು ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.
“ನಾನು ದಾಖಲೆಗಳನ್ನು ಫಾಲೋ ಮಾಡುವುದಿಲ್ಲ, ದಾಖಲೆಗಳೇ ನನ್ನನ್ನು ಹಿಂಬಾಲಿಸುತ್ತವೆ!”. ಇದು ಈ ದೈತ್ಯ ಆಟಗಾರನ ಹೇಳಿಕೆ. ವಿಶ್ವಕಪ್‌ನಲ್ಲಿ ಘಾನಾ ವಿರುದ್ಧ ನಿರ್ಮಿಸಿದ ದಾಖಲೆ ಬಗ್ಗೆ ಕೇಳಿದಾಗ ಕ್ರಿಸ್ಟಿಯಾನೋ ರೊನಾಲ್ಡೊ ಕೊಟ್ಟ ಬೋಲ್ಡ್ ಹೇಳಿಕೆ ಇದು. CR7 ಎಂಬ ಅಡ್ಡಹೆಸರಿನೊಂದಿಗೆ, ಮಾಜಿ ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರನದ ರೊನಾಲ್ಡೊ ಜಾಗತಿಕ ಅಭಿಮಾನಿಗಳನ್ನು ಹೊಂದಿದ್ದಾರೆ.
ಗಮನಿಸಬಹುದಾದ ಇತರೆ ಸುದ್ದಿಗಳು
ಫೇವರೆಟ್ ಪೋರ್ಚುಗಲ್‌ಗೆ ಜಯ, ಬಲಿಷ್ಠ ಬ್ರೆಜಿಲ್‌ಗೆ ದಿಗ್ವಿಜಯ; ನಿನ್ನೆಯ ಪಂದ್ಯಗಳ ಫಲಿತಾಂಶ ಹೀಗಿವೆ
ಫುಟ್ಬಾಲ್ ವಿಶ್ವಕಪ್‌ನಲ್ಲಿ ಗುರುವಾರ ನಡೆದ ಪಂದ್ಯಗಳು ರೋಚಕವಾಗಿ ಸಾಗಿತು. ಖ್ಯಾತ ಆಟಗಾರ ರೊನಾಲ್ಡೊ ಪ್ರತಿನಿಧಿಸುವ ಪೋರ್ಚುಗಲ್, ರೋಚಕ ಜಯದೊಂದಿಗೆ ಅಭಿಯಾನ ಆರಂಭಿಸಿದೆ. ಮತ್ತೊಂದೆಡೆ ಫುಟ್ಬಾಲ್‌ನ ಅತ್ಯಂತ ಯಶಸ್ವಿ ತಂಡ ಬ್ರೆಜಿಲ್ ಕೂಡಾ ಜಯದೊಂದಿಗೆ ವಿಶ್ವಕಪ್ ಪಯಣ ಆರಂಭಿಸಿದೆ. ನಿನ್ನೆ ನಡೆದ ಎಲ್ಲಾ ನಾಲ್ಕು ಪಂದ್ಯಗಳ ಫಲಿತಾಂಶ ಹೀಗಿವೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಫುಟ್ಬಾಲ್ ಲೆಜೆಂಡ್ ರೊನಾಲ್ಡೊಗೆ ದಂಡ, ಎರಡು ಪಂದ್ಯಗಳಿಂದ ಅಮಾನತು ಶಿಕ್ಷೆ
ಫುಟ್ಬಾಲ್‌ನ ಸ್ಟಾರ್ ಹಾಗೂ ಲೆಜೆಂಡ್ ಆಟಗಾರ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಮಾಜಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಫುಟ್‌ಬಾಲ್ ಅಸೋಸಿಯೇಷನ್ (FA) ಎರಡು ಪಂದ್ಯಗಳ ನಿಷೇಧ ಮತ್ತು 50,000 ಪೌಂಡ್ ದಂಡ(ಸರಿಸುಮಾರು 50 ಲಕ್ಷ ರೂಪಾಯಿ)ವನ್ನು ವಿಧಿಸಿದೆ. ಇದಕ್ಕೆ ಕಾರಣ, ಈ ವರ್ಷದ ಆರಂಭದಲ್ಲಿ ರೊನಾಲ್ಡೋ ಅವರು ಅಭಿಮಾನಿಯೊಬ್ಬರ ಮೊಬೈಲ್ ಫೋನ್‌ಗೆ ಹಾನಿ ಮಾಡಿರುವುದು. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ