logo
ಕನ್ನಡ ಸುದ್ದಿ  /  Sports  /  Cristiano Ronaldo Will Play For Saudi Arabian Club Al Nassr

Cristiano Ronaldo: ಸೌದಿ ಕ್ಲಬ್ ಸೇರಿಕೊಂಡ ರೊನಾಲ್ಡೊ; ಫುಟ್ಬಾಲ್ ದಿಗ್ಗಜನಿಗೆ ಇನ್ಮುಂದೆ ರಾಜಮರ್ಯಾದೆ

HT Kannada Desk HT Kannada

Dec 31, 2022 02:48 PM IST

ಕ್ರಿಸ್ಟಿಯಾನೋ ರೊನಾಲ್ಡೊ

    • “ಯುರೋಪ್‌ ಖಂಡದ ಫುಟ್‌ಬಾಲ್‌ನಲ್ಲಿ ನಾನು ಗೆಲ್ಲಬೇಕು ಎಂದು ಯೋಜಿಸಿದ್ದನ್ನೆಲ್ಲಾ ಗೆದ್ದಿರುವುದು ನನ್ನ ಅದೃಷ್ಟ. ಇದೀಗ ಏಷ್ಯಾದಲ್ಲಿ ನನ್ನ ಅನುಭವವನ್ನು ಹಂಚಿಕೊಳ್ಳಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ” ಎಂದು ರೊನಾಲ್ಡೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕ್ರಿಸ್ಟಿಯಾನೋ ರೊನಾಲ್ಡೊ
ಕ್ರಿಸ್ಟಿಯಾನೋ ರೊನಾಲ್ಡೊ (REUTERS)

ಕೆಲ ತಿಂಗಳುಗಳ ಹಿಂದಷ್ಟೇ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ ತೊರೆದಿದ್ದ ಪೋರ್ಚುಗಲ್ ಫುಟ್ಬಾಲ್‌ ತಂಡದ ನಾಯಕ ಹಾಗೂ ಜಾಗತಿಕ ಕ್ರೀಡಾ ಕ್ಷೇತ್ರದ ಹೆಸರಾಂತ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು, ಇದೀಗ ಸೌದಿ ಅರೇಬಿಯಾದ ಕ್ಲಬ್ ಸೇರಿಕೊಂಡಿದ್ದಾರೆ. ಅರಬ್‌ ರಾಷ್ಟ್ರದ ಅಲ್ ನಾಸರ್‌(Al Nassr) ಹೆಸರಿನ ಕ್ಲಬ್‌ ಅನ್ನು ಮುಂದಿನ ಎರಡೂವರೆ ವರ್ಷಗಳ ಒಪ್ಪಂದದ ಮೇಲೆ ಸೇರಿಕೊಂಡಿದ್ದಾರೆ ಎಂದು ಕ್ಲಬ್ ಶುಕ್ರವಾರ ಘೋಷಿಸಿದೆ. ಮ್ಯಾಂಚೆಸ್ಟರ್ ಯುನೈಟೆಡ್ ತೊರೆದ ಬಳಿಕ, ರೊನಾಲ್ಡೋ ಮುಂದಿನ ನಡೆ ಏನು ಎಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿತ್ತು.

ಟ್ರೆಂಡಿಂಗ್​ ಸುದ್ದಿ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ರೊನಾಲ್ಡೊ ಕಳೆದ ತಿಂಗಳು ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ನ ತವರು ಮೈದಾನವಾದ ಓಲ್ಡ್ ಟ್ರಾಫರ್ಡ್‌ನಿಂದ ನಿರ್ಗಮಿಸಿದ್ದರು. 37 ವರ್ಷದ ರೊನಾಲ್ಡೋ, ಕ್ಲಬ್‌ ತನಗೆ ದ್ರೋಹ ಮಾಡಿದೆ ಎಂದು ಆರೋಪಿಸಿದ್ದರು.

ಐದು ಬಾರಿಯ ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತ ರೊನಾಲ್ಡೊ, 2025ರವರೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಅಲ್ ನಾಸರ್ ಹೇಳಿಕೆ ತಿಳಿಸಿದೆ. ಆದರೆ, ಯಾವುದೇ ಹಣಕಾಸಿನ ವಿವರಗಳನ್ನು ಈ ಕ್ಲಬ್‌ ಬಹಿರಂಗಪಡಿಸಲಿಲ್ಲ. ಆದರೂ, ಜಾಗತಿಕ ಫುಟ್ಬಾಲ್‌ನ ಹೆಸರಾಂತ ಆಟಗಾರನ ಮಾರುಕಟ್ಟೆ ಮೌಲ್ಯ ತುಂಬಾ ಹೆಚ್ಚು. ಹೀಗಾಗಿ ರೊನಾಲ್ಡೊ ಅವರ ಒಪ್ಪಂದವು 200 ಮಿಲಿಯನ್ ಯುರೋಗಳಿಗಿಂತ ಹೆಚ್ಚು (214.04 ಮಿಲಿಯನ್ ಡಾಲರ್‌) ಮೌಲ್ಯದ್ದಾಗಿದೆ ಎಂದು ಮಾಧ್ಯಮಗಳಿಂದ ಅಂದಾಜಿಸಲಾಗಿದೆ.

“ಯುರೋಪ್‌ ಖಂಡದ ಫುಟ್‌ಬಾಲ್‌ನಲ್ಲಿ ನಾನು ಗೆಲ್ಲಬೇಕು ಎಂದು ಯೋಜಿಸಿದ್ದನ್ನೆಲ್ಲಾ ಗೆದ್ದಿರುವುದು ನನ್ನ ಅದೃಷ್ಟ. ಇದೀಗ ಏಷ್ಯಾದಲ್ಲಿ ನನ್ನ ಅನುಭವವನ್ನು ಹಂಚಿಕೊಳ್ಳಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ” ಎಂದು ರೊನಾಲ್ಡೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ನನ್ನ ಹೊಸ ತಂಡದ ಸದಸ್ಯರನ್ನು ಸೇರಲು ನಾನು ಎದುರು ನೋಡುತ್ತಿದ್ದೇನೆ. ಹೊಸತನದೊಂದಿಗೆ ಕ್ಲಬ್‌ಗೆ ಯಶಸ್ಸು ತಂದುಕೊಡಲು ಸಹಾಯ ಮಾಡುತ್ತೇನೆ,” ಎಂದು ಅವರು ಹೇಳಿದ್ದಾರೆ.

2009ರಿಂದ 18ರವರೆಗೆ ಸ್ಪ್ಯಾನಿಷ್ ಫುಟ್ಬಾಲ್‌ ಕ್ಲಬ್‌ ಆಗಿರುವ ರಿಯಲ್ ಮ್ಯಾಡ್ರಿಡ್‌(Real Madrid) ಪರ ಆಡಿದ್ದ ರೊನಾಲ್ಡೋ, ಕ್ಲಬ್‌ ಹೆಸರನ್ನು ಆಕಾಶದೆತ್ತರಕ್ಕೆ ಕೊಂಡೊಯ್ದಿದ್ದರು. ಅಲ್ಲಿ ಅವರು ಎರಡು ಲಾಲಿಗಾ ಪ್ರಶಸ್ತಿ, ಎರಡು ಸ್ಪ್ಯಾನಿಷ್ ಕಪ್‌, ನಾಲ್ಕು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳು ಮತ್ತು ಮೂರು ಕ್ಲಬ್ ವಿಶ್ವಕಪ್‌ಗಳನ್ನು ಗೆದ್ದರು. ಇದೀಗ ಸೌದಿ ಅರೇಬಿಯಾದ ಕ್ಲಬ್ ಒಂದಕ್ಕೆ ಗ್ರ್ಯಾಂಡ್‌ ಎಂಟ್ರಿ ನೀಡುತ್ತಿದ್ದಾರೆ. ಇದು ಸೌದಿ ಅರೇಬಿಯಾ ಮಾತ್ರವಲ್ಲದೆ ಏಷ್ಯಾ ಫುಟ್ಬಾಲ್‌ಗೂ ಗೌರವದ ಸಂಕೇತವಾಗಿದೆ.

ಇತ್ತೀಚೆಗೆ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಪೋರ್ಚುಗಲ್‌ ಪರ ಆಡಿದ್ದ ರೊನಾಲ್ಡೋ, ಘಾನಾ ವಿರುದ್ಧದ ಆರಂಭಿಕ ಗುಂಪು ಹಂತದ ಪಂದ್ಯದಲ್ಲಿ ಪೆನಾಲ್ಟಿ ಗಳಿಸುವ ಮೂಲಕ ಅಮೋಘ ಸಾಧನೆಯೊಂದನ್ನು ಮಾಡಿದರು. ಐದು ವಿಶ್ವಕಪ್‌ಗಳಲ್ಲಿ ಸ್ಕೋರ್ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ, ಪೋರ್ಚುಗಲ್ ಕ್ವಾರ್ಟರ್ ಫೈನಲ್‌ನಲ್ಲಿ ಮೊರಾಕೊ ವಿರುದ್ಧ ಸೋಲನುಭವಿಸಿತು. ಅಂತಿಮವಾಗಿ ಈ ಬಾರಿ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ವಿಶ್ವಕಪ್‌ ಗೆದ್ದಿತು.

ರೊನಾಲ್ಡೊ ಅವರು 40ನೇ ವಯಸ್ಸಿನಲ್ಲಿ ನಿವೃತ್ತರಾಗಲು ಯೋಜಿಸಿರುವ ಕಾರಣ, ಕತಾರ್ ವಿಶ್ವಕಪ್‌ ಅವರ ಪಾಲಿನ ಕೊನೆಯ ವಿಶ್ವಕಪ್ ಆಗಿರಬಹುದು ಎಂದು ಹೇಳಲಾಗಿದೆ.

ತಮ್ಮ ಕ್ಲಬ್‌ಗೆ ರೊನಾಲ್ಡೋ ಬರುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅಲ್ ನಾಸರ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಮುಸಲ್ಲಿ ಅಲ್ಮುಅಮ್ಮರ್, "ಇದು ಇತಿಹಾಸ ನಿರ್ಮಿಸುವುದಕ್ಕಿಂತ ಹೆಚ್ಚು" ಎಂದು ಹೇಳಿದರು. “ಇದು ನಮ್ಮ ಕ್ಲಬ್‌ನ ಯಶಸ್ಸಿಗೆ ಮಾತ್ರ ಪ್ರೇರೇಪಿಸುವುದಲ್ಲದೆ, ನಮ್ಮ ಲೀಗ್, ನಮ್ಮ ರಾಷ್ಟ್ರ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ,” ಎಂದು ಅವರು ಹೇಳಿದ್ದಾರೆ.

ಒಂಬತ್ತು ಸೌದಿ ಪ್ರೊ ಪ್ರೀಮಿಯರ್ ಲೀಗ್ ಪ್ರಶಸ್ತಿಗಳನ್ನು ಗೆದ್ದಿರುವ ಸೌದಿ ಅರೇಬಿಯಾದ ಕ್ಲಬ್, ರೊನಾಲ್ಡೊ ಅವರಿಗೆ ಮತ್ತೊಂದು ದೇಶೀಯ ಲೀಗ್ ಪ್ರಶಸ್ತಿ ಮತ್ತು ಮೊದಲ AFC ಏಷ್ಯನ್ ಚಾಂಪಿಯನ್ಸ್ ಲೀಗ್ ಗೆಲ್ಲಲು ಸಹಾಯ ಮಾಡಬಹುದು ಎಂದು ಆಶಿಸುತ್ತಿದೆ.

ಎರಡು ಪಂದ್ಯಗಳಿಂದ ಅಮಾನತು ಶಿಕ್ಷೆ

ಫುಟ್ಬಾಲ್‌ನ ಸ್ಟಾರ್ ಹಾಗೂ ಲೆಜೆಂಡ್‌ ಆಟಗಾರ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಮಾಜಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಫುಟ್‌ಬಾಲ್ ಅಸೋಸಿಯೇಷನ್ ​​(FA) ಎರಡು ಪಂದ್ಯಗಳ ನಿಷೇಧ ಮತ್ತು 50,000 ಪೌಂಡ್‌ ದಂಡ(ಸರಿಸುಮಾರು 50 ಲಕ್ಷ ರೂಪಾಯಿ)ವನ್ನು ವಿಧಿಸಿದೆ. ಇದಕ್ಕೆ ಕಾರಣ, ಈ ವರ್ಷದ ಆರಂಭದಲ್ಲಿ ರೊನಾಲ್ಡೋ ಅವರು ಅಭಿಮಾನಿಯೊಬ್ಬರ ಮೊಬೈಲ್ ಫೋನ್‌ಗೆ ಹಾನಿ ಮಾಡಿರುವುದು.

ಈ ವರ್ಷ ಏಪ್ರಿಲ್ 9ರಂದು, ಗೂಡಿಸನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಎವರ್ಟನ್‌ ತಂಡದ ವಿರುದ್ಧ 1-0 ಅಂತರದಲ್ಲಿ ಸೋಲಿಗೆ ಶರಣಾದ ಬಳಿಕ, ರೊನಾಲ್ಡೋ ವಾಗ್ವಾದ ನಡೆಸಿದ್ದರು. ಸ್ಕೈ ಸ್ಪೋರ್ಟ್ಸ್ ಪ್ರಕಾರ,‌ ರೊನಾಲ್ಡೊಗೆ ಮರ್ಸಿಸೈಡ್ ಪೊಲೀಸರು ಎಚ್ಚರಿಕೆ ಕೂಡಾ ನೀಡಿದ್ದರು. ಈ ವೇಳೆ ಅಭಿಮಾನಿಯೊಬ್ಬರ ಮೊಬೈಲ್‌ ಫೋನ್‌ ಅನ್ನು ರೊನಾಲ್ಡೊ ಹಾಳು ಮಾಡಿದ್ದರು. ಫುಟ್ಬಾಲ್‌ ಅಸೋಸಿಯೇಷನ್‌ ರೊನಾಲ್ಡೊ ವಿರುದ್ಧ ಅನುಚಿತ ವರ್ತನೆಯ ಆರೋಪವನ್ನೂ ಹೊರಿಸಿದೆ. ಹೀಗಾಗಿ ಸ್ವತಂತ್ರ ಸಮಿತಿಯು ಅವರಿಗೆ ಅಮಾನತು ಶಿಕ್ಷೆ ಮತ್ತು ದಂಡವನ್ನು ನೀಡಿದೆ.

ರೊನಾಲ್ಡೊ ಮುಂದೆ ಕ್ಲಬ್‌ ಪರ ಆಡುವಾಗ, ಈ ನಿಷೇಧ ಅನ್ವಯವಾಗುತ್ತದೆ. ಕ್ಲಬ್‌ ಯಾವುದೇ ದೇಶದ್ದಾದರೂ, ಆ ತಂಡದ ಪರ ಆಡುವಾಗ ನಿಷೇಧವನ್ನು ವರ್ಗಾಯಿಸಲಾಗುತ್ತದೆ. ಹೀಗಾಗಿ ಮೊದಲ ಎರಡು ಪಂದ್ಯಗಳಲ್ಲಿ ರೊನಾಲ್ಡೊ ಆಡುವಂತಿಲ್ಲ. ಆ ಬಳಿಕ ಆಡಬಹುದಾಗಿದೆ.

    ಹಂಚಿಕೊಳ್ಳಲು ಲೇಖನಗಳು