logo
ಕನ್ನಡ ಸುದ್ದಿ  /  Sports  /  Gymnast Dipa Karmakar Gets Doping Ban

Dipa Karmakar: ಡೋಪಿಂಗ್‌ ಪರೀಕ್ಷೆಯಲ್ಲಿ ಫೇಲ್‌; ಜಿಮ್ನಾಸ್ಟ್ ದೀಪಾ ಕರ್ಮಾಕರ್‌ಗೆ 21 ತಿಂಗಳ ನಿಷೇಧ

Jayaraj HT Kannada

Feb 04, 2023 02:28 PM IST

ದೀಪಾ ಕರ್ಮಾಕರ್

    • “ದೀಪಾ ಕರ್ಮಾಕರ್ ಅವರನ್ನು 21 ತಿಂಗಳ ಅವಧಿಗೆ ನಿಷೇಧಿಸಲಾಗಿದೆ. ಹೈಜೆನಾಮೈನ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದ್ದು, 2023ರ ಜುಲೈ 10ರವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ” ಎಂದು ಐಟಿಎ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ದೀಪಾ ಕರ್ಮಾಕರ್
ದೀಪಾ ಕರ್ಮಾಕರ್ (AFP)

ನವದೆಹಲಿ: ಜಿಮ್ನಾಸ್ಟಿಕ್‌ನಲ್ಲಿ ಪ್ರಪ್ರಥಮ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಜಿಮ್ನಾಸ್ಟ್‌ ದೀಪಾ ಕರ್ಮಾಕರ್ ನಿಷೇಧಕ್ಕೊಳಗಾಗಿದ್ದಾರೆ. ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ ( International Testing Agency) ನಡೆಸಿದ ಡೋಪಿಂಗ್‌ ಪರೀಕ್ಷೆಯಲ್ಲಿ ಕರ್ಮಾಕರ್‌ ವಿಫಲರಾಗಿದ್ದು, ನಿಷೇಧೀತ ಪದಾರ್ಥಗಳನ್ನು ಸೇವಿಸಿರುವುದು ಸಾಬೀತಾಗಿದೆ. ಹೀಗಾಗಿ 21 ತಿಂಗಳಿಗೆ ಅನ್ವಯವಾಗುವಂತೆ ಇವರನ್ನು ಕ್ರೀಡೆಯಿಂದ ನಿಷೇಧಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಫೆಡರೇಶನ್ (FIG)ನ ಸಲಹೆಯಂತೆ ಡೋಪಿಂಗ್ ವಿರೋಧಿ ಪರೀಕ್ಷೆಗಳನ್ನು ನಡೆಸುವ ಸ್ವತಂತ್ರ ಲಾಭರಹಿತ ಸಂಸ್ಥೆಯಾಗಿದೆ. ಇದು ದೀಪಾ ಕರ್ಮಾಕರ್‌ ಅವರಿಗೆ ನಿಷೇಧ ಹೇರಿದೆ.

ದೀಪಾ ಅವರು ಹೈಜೆನಾಮೈನ್(higenamine), ಬೀಟಾ-2 ಅಗೊನಿಸ್ಟ್‌ ಎಂಬ ಪದಾರ್ಥಗಳನ್ನು ಸೇವಿಸಿರುವುದು ಪರೀಕ್ಷೆಯಲ್ಲಿ ಸಾಬೀತಾಗಿದೆ. ಈ ಪದಾರ್ಥಗಳನ್ನು ಸ್ಪರ್ಧೆಯ ವೇಳೆ ಮತ್ತು ಹೊರಗೆ ಎಲ್ಲಾ ಸಮಯದಲ್ಲೂ ಸೇವಿಸುವುದನ್ನು ನಿಷೇಧಿಸಲಾಗಿದೆ. ಆದರೂ ನಿಷೇಧಿತ ಪದಾರ್ಥಗಳನ್ನು ದೀಪಾ ಸೇವಿಸಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ದೀಪಾ ಅವರ ಮಾದರಿಗಳನ್ನು 2021ರ ಅಕ್ಟೋಬರ್ 11ರಂದು ಸಂಗ್ರಹಿಸಲಾಗಿತ್ತು. ಹೀಗಾಗಿ ಸೇವಿಸಿದ ದಿನದಿಂದ 21 ತಿಂಗಳವರೆಗೆ ನಿಷೇಧ ವಿಧಿಸಲಾಗಿದೆ. ಹೀಗಾಗಿ ಈ ನಿಷೇಧವು 2023ರ ಜುಲೈ 10 ರವರೆಗೆ ಇರುತ್ತದೆ.

“ದೀಪಾ ಕರ್ಮಾಕರ್ ಅವರನ್ನು 21 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ. ಹೈಜೆನಾಮೈನ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದ್ದು, 2023ರ ಜುಲೈ 10ರವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ” ಎಂದು ಐಟಿಎ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. “ಎಫ್‌ಐಜಿ ವಿರೋಧಿ ಡೋಪಿಂಗ್ ನಿಯಮಗಳ ಆರ್ಟಿಕಲ್ 10.8.2ರ ಪ್ರಕಾರ, ಕೇಸ್ ರೆಸಲ್ಯೂಶನ್ ಒಪ್ಪಂದದ ಮೂಲಕ ಪ್ರಕರಣವನ್ನು ಪರಿಹರಿಸಲಾಗಿದೆ” ಎಂದು ಹೇಳಿಕೆ ತಿಳಿಸಿದೆ.

ಯುನೈಟೆಡ್ ಸ್ಟೇಟ್ಸ್ ಆಂಟಿ-ಡೋಪಿಂಗ್ ಏಜೆನ್ಸಿ (USADA) ಪ್ರಕಾರ, ಹೈಜೆನಮೈನ್ ಎಂಬುದು ರಾಸಾಯನಿಕ ಪದಾರ್ಥವಾಗಿದ್ದು, ದೇಹಕ್ಕೆ ಸಾಮಾನ್ಯ ಉತ್ತೇಜಕವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 2017ರಲ್ಲಿ ಇದನ್ನು ನಿಷೇಧಿತ ಪದಾರ್ಥಗಳ ಪಟ್ಟಿಗೆ ಸೇರಿಸಲಾಗಿದೆ. ಇದು ದೇಹದ ವಾಯುನಾಳಗಳನ್ನು ತೆರೆಯಲು ಆಸ್ತಮಾ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಕಾರ್ಡಿಯೋಟೋನಿಕ್ ಆಗಿಯೂ ಕಾರ್ಯನಿರ್ವಹಿಸಬಲ್ಲದು ಎಂದು ಹೇಳಲಾಗಿದೆ. ಅಂದರೆ, ಇದು ಹೃದಯದ ಕೆಲಸವನ್ನು ಸುಧಾರಿಸಲು ಬೇಕಾದ ಸಾಮರ್ಥ್ಯವನ್ನು ಬಲಪಡಿಸುತ್ತದೆ ಎನ್ನಲಾಗಿದೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ದೀಪಾ, ಭಾರತದ ಜಿಮ್ನಾಸ್ಟಿಕ್‌ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದರು. ವಿದೇಶಿ ಪ್ರಾಬಲ್ಯವಿರುವ ಜಿಮ್ನಾಸ್ಟಿಕ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ದೇಶಕ್ಕೆ ಪದಕ ಗೆದ್ದಷ್ಟೇ ಸಂಭ್ರಮವನ್ನು ಉಣಬಡಿಸಿದ್ದರು. ಕೊನೆಯ ಬಾರಿಗೆ ಬಾಕುವಿನಲ್ಲಿ ನಡೆದ ಎಫ್‌ಐಜಿ ವಿಶ್ವಕಪ್‌ನಲ್ಲಿ ಸ್ಪರ್ಧಿಸಿ ಫೈನಲ್‌ಗೆ ತಲುಪಿದ್ದರು‌. ಆದರೆ, ಬ್ಯಾಲೆನ್ಸ್‌ಡ್‌ ಬೀಮ್‌ ವಿಭಾಗದಲ್ಲಿ ಅಗ್ರ ಎಂಟರೊಳಗೆ ಸ್ಥಾನ ಪಡೆಯಲು ವಿಫಲರಾದರು.

ಈ ನಡುವೆ, 2017ರಲ್ಲಿ ಬಲ ಮೊಣಕಾಲಿನ ಗಾಯಕ್ಕೆ ಒಳಗಾಗಿ ದೀಪಾ ಶಸ್ತ್ರಚಿಕಿತ್ಸೆಗೆ ಒಳಗಾದರು. 2018ರಲ್ಲಿ ಏಷ್ಯನ್ ಗೇಮ್ಸ್‌ ವೇಳೆಗೆ ಗಾಯವು ಉಲ್ಬಣಗೊಂಡಿತ್ತು. ಆ ಬಳಿಕ ಜಕಾರ್ತಾದಲ್ಲಿ ನಡೆದ ಆರ್ಟಿಸ್ಟಿಕ್‌ ಟೀಮ್‌ ಫೈನಲ್‌ನಿಂದ ದೀಪಾ ಹೊರಗುಳಿಯಬೇಕಾಯಿತು. ಟೋಕಿಯೊ ಒಲಿಂಪಿಕ್ಸ್‌ ಕೂಟವನ್ನೂ ಮಿಸ್‌ ಮಾಡಿಕೊಳ್ಳುವ ಮೊದಲು ಏಷ್ಯನ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಿಂದಲೂ ಹೊರಗುಳಿದರು. ಸದ್ಯ ಮತ್ತೆ ಒಂದಷ್ಟು ತಿಂಗಳು ಕ್ರೀಡೆಯಿಂದ ಹೊರಗುಳಿಯಲಿದ್ದು, ಮುಂದಿನ ಮಹತ್ವದ ಕ್ರೀಡಾಕೂಟಗಳ ಸಂದರ್ಭದಲ್ಲಿ ಲಭ್ಯರಾಗುವ ಸಾಧ್ಯತೆ ಇದೆ.

ಆಂಟ್‌ವರ್ಪ್‌ನಲ್ಲಿ 2023ರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ನಾಲ್ಕು ವರ್ಷಗಳ ವನವಾಸವನ್ನು ಕೊನೆಗೊಳಿಸಲಿದ್ದಾರೆ. ಇದು ಒಲಿಂಪಿಕ್ಸ್ ಅರ್ಹತಾ ಪಂದ್ಯವಾಗಿರುವುದರಿಂದ ಮಹತ್ವ ಪಡೆದಿದೆ.

    ಹಂಚಿಕೊಳ್ಳಲು ಲೇಖನಗಳು