Dream Astrology: ಕನಸಿನಲ್ಲಿ ಹಾವುಗಳು ಬರುತ್ತವೆ, ಏನಾದರೂ ಅಪಾಯವಿದೆಯೇ? ಜ್ಯೋತಿಷ್ಯದ ಹಿನ್ನೆಲೆಯಲ್ಲಿ ಕನಸುಗಳ ಅರ್ಥ ವ್ಯಾಖ್ಯಾನ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Dream Astrology: ಕನಸಿನಲ್ಲಿ ಹಾವುಗಳು ಬರುತ್ತವೆ, ಏನಾದರೂ ಅಪಾಯವಿದೆಯೇ? ಜ್ಯೋತಿಷ್ಯದ ಹಿನ್ನೆಲೆಯಲ್ಲಿ ಕನಸುಗಳ ಅರ್ಥ ವ್ಯಾಖ್ಯಾನ ಇಲ್ಲಿದೆ

Dream Astrology: ಕನಸಿನಲ್ಲಿ ಹಾವುಗಳು ಬರುತ್ತವೆ, ಏನಾದರೂ ಅಪಾಯವಿದೆಯೇ? ಜ್ಯೋತಿಷ್ಯದ ಹಿನ್ನೆಲೆಯಲ್ಲಿ ಕನಸುಗಳ ಅರ್ಥ ವ್ಯಾಖ್ಯಾನ ಇಲ್ಲಿದೆ

Magha Nakshatra: ದೇವರು, ಧರ್ಮ, ಜ್ಯೋತಿಷ್ಯದ ಬಗ್ಗೆ ನಿಮ್ಮ ಪ್ರಶ್ನೆಗಳಿಗೆ ಈ ಅಂಕಣದಲ್ಲಿ ಬೆಂಗಳೂರಿನ ಜ್ಯೋತಿಷಿ ಎಚ್‌.ಸತೀಶ್ ಉತ್ತರಿಸಲಿದ್ದಾರೆ. ಧಾರ್ಮಿಕ ಆಚರಣೆಗಳು, ಜಾತಕ ಫಲಗಳು, ಮಖಾ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವ ಹಾಗೂ ಉತ್ತಮ ಫಲ ಹೊಂದಲು ಏನು ಮಾಡಬೇಕು ಎನ್ನುವ ಓದುಗರ ಪ್ರಶ್ನೆಗಳಿಗೆ ಈ ಬಾರಿ ಉತ್ತರಿಸಲಾಗಿದೆ. ನೀವೂ ಪ್ರಶ್ನೆ ಕಳಿಸಬಹುದು.

ಕನಸಿನಲ್ಲಿ ಹಾವು ಬಂದರೆ ಏನು ಫಲ? (ಒಳಚಿತ್ರದಲ್ಲಿ ಜ್ಯೋತಿಷಿ ಎಚ್.ಸತೀಶ್)
ಕನಸಿನಲ್ಲಿ ಹಾವು ಬಂದರೆ ಏನು ಫಲ? (ಒಳಚಿತ್ರದಲ್ಲಿ ಜ್ಯೋತಿಷಿ ಎಚ್.ಸತೀಶ್)

ಪ್ರಶ್ನೆ: 1) ನನ್ನ ಹೆಂಡತಿಗೆ ಆರೋಗ್ಯ ಸರಿಯಿಲ್ಲ. ಸುಮಾರು ಎರಡು ವರ್ಷಗಳಿಂದಲೂ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಅವಳದು ಮಖಾ ನಕ್ಷತ್ರ, ಸಿಂಹ ರಾಶಿ. ದೇವರ ಬಗ್ಗೆಯೂ ಅಷ್ಟು ನಂಬಿಕೆ ಇಲ್ಲ. ನಾನು ಅವಳ ಪರವಾಗಿ ಪ್ರಾರ್ಥಿಸಿದರೆ ಅವಳ ಆರೋಗ್ಯ ಸುಧಾರಿಸಬಹುದೇ? ಯಾವ ದೇವರಿಗೆ ಯಾವ ಮಂತ್ರ ಹೇಳಿ ಪೂಜೆ ಮಾಡಲಿ. ದಯವಿಟ್ಟು ಮಾರ್ಗದರ್ಶನ ಮಾಡಿ ಗುರುಗಳೇ.- ರಾಘವೇಂದ್ರ, ದೊಡ್ಡಬಳ್ಳಾಪುರ

ಉತ್ತರ: ನಿಮ್ಮ ಮಡದಿಯ ಆರೋಗ್ಯದಲ್ಲಿ ಎರಡು ವರ್ಷಗಳಿಂದಲೂ ತೊಂದರೆ ಇದೆ ಎಂದು ತಿಳಿಸಿದ್ದೀರಿ . ಆಕೆ ಮಖಾ ನಕ್ಷತ್ರದಲ್ಲಿ ಜನಿಸಿದ್ದು ಸಿಂಹ ರಾಶಿ ಆಗುತ್ತದೆ. ಮುಖ್ಯವಾಗಿ ಮಖಾ ನಕ್ಷತ್ರದ ಅಧಿಪತಿ ಕೇತು. ಕೇತು ಛಾಯಾಗ್ರಹವಾಗಿದ್ದು ಒಂದು ರೀತಿಯ ಭ್ರಮೆಯನ್ನು ಉಂಟುಮಾಡುತ್ತಾನೆ. ಕೇತು ನಕ್ಷತ್ರದ ದೇವತೆ ಗಣೇಶ. ಕೇತು ಹಿಂದಿನ ಕಾಲವನ್ನು ಸಹ ನೆನಪಿಸುತ್ತಾನೆ. ಈ ಕಾರಣದಿಂದಾಗಿ ಈಕೆಯ ಆರೋಗ್ಯ ವೃದ್ಧಿಗಾಗಿ ಸಂಕಷ್ಟಹರ ಚತುರ್ಥಿಯ ದಿನದಂದು ಗಣಪತಿ ದೇವಸ್ಥಾನಕ್ಕೆ 21 ಗರಿಕೆಯನ್ನು ಅರ್ಪಿಸಬೇಕು. ಇದಲ್ಲದೆ ಗಣಪತಿ ದೇವಸ್ಥಾನಕ್ಕೆ ಕಪ್ಪು ಮತ್ತು ಬಿಳಿ ಮಿಶ್ರ ಬಣ್ಣದ ನೆಲಹಾಸು ಅಥವಾ ಕಂಬಳಿಯನ್ನು ದಾನವಾಗಿ ನೀಡತಕ್ಕದ್ದು. ಇದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.

ಮಖ ನಕ್ಷತ್ರವನ್ನು ಪಿತೃದೇವತೆಗಳೂ ಪ್ರಭಾವಿಸುತ್ತಾರೆ. ಒಂದು ಹೆಣ್ಣಿನ ಜಾತಕವಾಗಲಿ ಅಥವಾ ಗಂಡಿನ ಜಾತಕವಾಗಲಿ ರವಿಯು ತಂದೆಯನ್ನು ವಿವಾಹವಾದ ಮೇಲೆ ಮಾವನನ್ನು ಸೂಚಿಸುತ್ತಾನೆ. ಇದೇ ರೀತಿ ಚಂದ್ರನು ತಾಯಿಯನ್ನು ವಿವಾಹವಾದ ನಂತರ ಅತ್ತೆಯನ್ನು ಸೂಚಿಸುತ್ತಾನೆ. ಈ ಕಾರಣದಿಂದಾಗಿ ತಂದೆ, ತಾಯಿ ಅಥವಾ ಅತ್ತೆ, ಮಾವನ ಆಶೀರ್ವಾದವೂ ಬಹುಮುಖ್ಯವಾಗುತ್ತದೆ.

ವಿವಾಹ ಆದ ನಂತರ ದಂಪತಿಗಳು ಒಟ್ಟಿಗೆ ದೇವಸ್ಥಾನದಲ್ಲಿ ಪೂಜೆ ಮಾಡಿಸಿದಲ್ಲಿ ಮಾತ್ರ ಅದರ ಫಲ ದೊರೆಯುತ್ತದೆ. ದಂಪತಿಗಳು ಪ್ರತ್ಯೇಕವಾಗಿ ಯಾವುದೇ ದೇವಸ್ಥಾನಕ್ಕೆ ತೆರಳಿದರೂ ಯಾವುದೇ ಉಪಯೋಗ ಬರುವುದಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ದೇವಾಲಯದಲ್ಲಿ ಪತಿ ಅಥವಾ ಪತ್ನಿಯ ಪರವಾಗಿ ಸಂಕಲ್ಪವನ್ನು ಮಾಡಿಸಿ ಪೂಜೆ ಮಾಡಿಸಬೇಕು. ರಾಹುವಿನ ಜೊತೆಯಲ್ಲಿ ಶನಿ, ಅಥವಾ ಗುರುವಿನ ಜೊತೆಯಲ್ಲಿ ರಾಹು ಇದ್ದಲ್ಲಿ ಉದರಾಮ್ಲದ ದೋಷ ಉಂಟಾಗುತ್ತದೆ. ಸಿಂಹ ರಾಶಿಯಲ್ಲಿ ಜನಿಸಿರುವ ಕಾರಣ ಶ್ರೀ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದರಿಂದ ಅಥವಾ ಕೇಳುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು.

ಪ್ರಶ್ನೆ: 3) ನನಗೆ ಒಮ್ಮೊಮ್ಮೆ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುತ್ತದೆ. ಏನಾದರೂ ಅಪಾಯ ಇರಬಹುದಾ? - ಧನಂಜಯ, ಮುತ್ತೂರು

ಉತ್ತರ: ಕನಸಿನಲ್ಲಿ ಹಾವುಗಳು ಕಂಡಲ್ಲಿ ವಿವಿಧ ರೀತಿಯ ಪರಿಣಾಮಗಳು ದೊರೆಯುತ್ತವೆ. ಜೋಡಿಹಾವು ಒಂದೇ ಕಡೆ ಇದ್ದಲ್ಲಿ ಕುಟುಂಬದಲ್ಲಿ ವಿವಾಹದ ಯೋಗ ಇದೆ ಎಂಬ ಅರ್ಥ. ಹಾವು ಹರಿದುಹೋದಲ್ಲಿ ಕಷ್ಟ ಬಂದು ಹೋಗುತ್ತದೆ ಎಂದು ತಿಳಿಯಬಹುದು. ಆದರೆ ಹಾವು ಯಾರಿಗೆ ಆದಲ್ಲಿ ಕನಸಿನಲ್ಲಿ ಕಡಿದರೆ ವಾದ ವಿವಾದ ಜಗಳ ಶತಸಿದ್ಧ. ಹಾವು ಹೆಡೆಯನ್ನು ಬಿಚ್ಚಿದರೆ ಧನ ಲಾಭವಿದೆ ಎಂದು ಅರ್ಥ. ಕನಸಿನಲ್ಲಿ ಹಾವು ಅಟ್ಟಾಡಿಸಿಕೊಂಡು ಬರುತ್ತದೆ ಎಂದರಲ್ಲಿ ವೈರಿಗಳು ನಿಮ್ಮ ಬೆನ್ನಿಗೆ ಬೀಳುತ್ತಾರೆ ಎಂದು ತಿಳಿಯಬಹುದು. ಜನರ ಮಧ್ಯೆ ಹಾವು ನಿಮ್ಮ ಮುಂದೆ ಬಂದು ನಿಂತಾಗ ವಿರೋಧಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎಂಬ ಅರ್ಥ ಬರುತ್ತದೆ. ಕನಸಿನಲ್ಲಿ ಹಾವು ಹಾಲನ್ನು ಕುಡಿಯಲು ಪ್ರಯತ್ನಿಸಿದರೆ ನೀವು ಸರ್ಪದ ಪೂಜೆ ಮಾಡಿ ಬ್ರಹ್ಮಚಾರಿಗಳಿಗೆ ಹಾಲನ್ನು ನೀಡಬೇಕು ಎಂದು ಅರ್ಥ. ಇದೇ ರೀತಿ ಕನಸಿನಲ್ಲಿ ಕಾಣುವ ಹಾವುಗಳ ಬಗ್ಗೆ ವಿವಿಧ ರೀತಿಗಳಲ್ಲಿ ಅರ್ಥೈಸಬೇಕಾಗುತ್ತದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.