ಸೇವಂತಿಗೆ ಪಕೋಡಾ: ಎಲಾ.. ಯಾವನೋ ಇವ್ನು ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋನು; ವೈರಲ್ ವಿಡಿಯೋಕ್ಕೆ ಸಕತ್ ರೆಸ್ಪಾನ್ಸ್
ಕನ್ನಡ ಸುದ್ದಿ  /  ಕರ್ನಾಟಕ  /  ಸೇವಂತಿಗೆ ಪಕೋಡಾ: ಎಲಾ.. ಯಾವನೋ ಇವ್ನು ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋನು; ವೈರಲ್ ವಿಡಿಯೋಕ್ಕೆ ಸಕತ್ ರೆಸ್ಪಾನ್ಸ್

ಸೇವಂತಿಗೆ ಪಕೋಡಾ: ಎಲಾ.. ಯಾವನೋ ಇವ್ನು ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋನು; ವೈರಲ್ ವಿಡಿಯೋಕ್ಕೆ ಸಕತ್ ರೆಸ್ಪಾನ್ಸ್

Chrysanthemum: ಸೇವಂತಿಗೆ ಪಕೋಡಾ ವೈರಲ್ ಮಾಡೋದಕ್ಕಾಗಿಯೇ ಮಾಡಿದ್ದಾ ಅಥವಾ ತಿನ್ನೋದಕ್ಕಾ, ಸಂದೇಹವಂತೂ ಹಲವರಲ್ಲಿದೆ. ಸೇವಂತಿಗೆ ಪಕೋಡಾ ವಿಡಿಯೋ ನೋಡಿದ ಕೂಡಲೇ ಯಾವನೋ ಇವ್ನು ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋನು ಎಂಬ ಪ್ರತಿಕ್ರಿಯೆ ವ್ಯಕ್ತವಾಗಿರೋದು. ಈ ವೈರಲ್ ವಿಡಿಯೋಕ್ಕೆ ಸಕತ್ ಪ್ರತಿಕ್ರಿಯೆ ಇದ್ದು, ಅದರ ವಿವರ ಇಲ್ಲಿದೆ.

ಸೇವಂತಿಗೆ ಪಕೋಡಾ: ವೈರಲ್ ವಿಡಿಯೋಕ್ಕೆ ಸಕತ್ ರೆಸ್ಪಾನ್ಸ್ ಸಿಕ್ಕಿದ್ದು, ವಿಡಿಯೋದಿಂದ ತೆಗೆದ ಚಿತ್ರಗಳು.
ಸೇವಂತಿಗೆ ಪಕೋಡಾ: ವೈರಲ್ ವಿಡಿಯೋಕ್ಕೆ ಸಕತ್ ರೆಸ್ಪಾನ್ಸ್ ಸಿಕ್ಕಿದ್ದು, ವಿಡಿಯೋದಿಂದ ತೆಗೆದ ಚಿತ್ರಗಳು.

Chrysanthemum: ತಿಂಡಿ ತಿನಿಸು ಯಾರಿಗೆ ಇಷ್ಟ ಆಗಲ್ಲ ಹೇಳಿ.. ಬಾಯಿ ರುಚಿ, ನಾಲಗೆ ಚಪಲ ಹೊಸ ಹೊಸ ರುಚಿ ಬೇಕು ಎನ್ನುತ್ತಿರುತ್ತದೆ. ಹೀಗಾಗಿ ಹೊಸ ತಿನಿಸು ಏನಿದೆ ಎಂದು ಜಾಲಾಡುವವರಿಗೇನೂ ಕೊರತೆ ಇಲ್ಲ. ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದ ಬಳಿಕವಂತೂ ಹೊಸ ಹೊಸ ಪ್ರಯೋಗಗಳ ವಿಡಿಯೋಗಗಳು ಗಮನಸೆಳೆಯುತ್ತಿರುತ್ತವೆ. ಇಡ್ಲಿ, ದೋಸೆ ಮಾಡುವುದರಿಂದ ಹಿಡಿದು ಪ್ರತಿಯೊಂದರ ಬಗ್ಗೆಯೂ ಮಾಡುವುದು ಹೇಗೆ ಎಂಬ ವಿಡಿಯೋಗಳು ಯೂಟ್ಯೂಬ್‌ನಲ್ಲೂ ಸಾಕಷ್ಟು ಸಿಗುತ್ತವೆ. ಎಲ್ಲ ವಿಡಿಯೋಗಳೂ ವೈರಲ್ ಆಗುವುದಿಲ್ಲ. ಕೆಲವೇ ಕೆಲವು ಮಾತ್ರ ಗಮನಸೆಳೆಯುತ್ತವೆ. ಅಂಥ ವೈರಲ್‌ ವಿಡಿಯೋ ಪೈಕಿ ಇದೂ ಒಂದು. ಕಳೆದೆರಡು ದಿನಗಳಿಂದ ಕರ್ನಾಟಕದಲ್ಲಿ ಇದು ಸದ್ದು ಮಾಡಿದೆ. ಹಲವರು ಈ ವಿಡಿಯೋವನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡರೆ ಇನ್ನು ಕೆಲವರು ರೀಟ್ವೀಟ್ ಮಾಡಿ ತಮ್ಮ ಕಾಮೆಂಟ್‌ ಅನ್ನು ಸೇರಿಸಿದ್ದಾರೆ.

ಯಾವನೋ ಇವ್ನು ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋನು!

ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಅಪರಾಜಿತೆ ಎಂಬುವವರು ಮಾಡಿದ್ದ ಟ್ವೀಟ್ ಅನ್ನು ಹರ್ಷಿತಾ (@gharshitha_) ಎಂಬುವವರು ರೀಟ್ವೀಟ್ ಮಾಡಿದ್ದು, ಲೇ ಯಾವನೋ ಇವ್ನು ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋನು ಎಂದು ಕಾಮೆಂಟ್ ಮಾಡಿದ್ದಾರೆ. ವಿಡಿಯೋ ನೋಡ್ತಿದ್ದ ಹಾಗೆ ಹೊಳೆದ ಕಾಮೆಂಟ್ ಇರಬೇಕು ಅದು. ಅವರು ಶೇರ್ ಮಾಡಿದ ವಿಡಿಯೋದ ಹಿನ್ನೆಲೆಯಲ್ಲಿ ಪಂಜಾಬಿ ಮೋಡಿಯ ಹಾಡು ಕೇಳಿದಂತೆ ಭಾಸವಾಗುತ್ತದೆ. ಹಾಗಾಗಿ ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋದು ಉತ್ತರ ಭಾರತೀಯರು ಎಂಬ ನಿರ್ಧಾರಕ್ಕೆ ಬರಲಾಗದು. ಏನೇ ಆಗಲಿ, ಸೇವಂತಿಗೆ ಹೂವನ್ನು ಕೂಡ ಪಕೋಡಾ ಮಾಡೋದಕ್ಕೆ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಂತೆ ಇದೆ. ಸೇವಂತಿಗೆ ಹೂವಿನ ಪಕೋಡಾ ಮಾಡೋದು ಹೇಗೆ? ಎಂಬ ಪ್ರಶ್ನೆಗೆ ಉತ್ತರದಂತೆಯೂ ಇದೆ. ನೀವೂ ನೋಡಿ ಈ ವೈರಲ್ ವಿಡಿಯೋ..

ಸೋಷಿಯಲ್ ಮೀಡಿಯಾ ಪ್ರತಿಕ್ರಿಯೆ ಹೀಗಿದೆ

ಸೇವಂತಿಯೇ ಸೇವಂತಿಯೇ ಎಣ್ಣೆಗೆ ಹಾಕಿದ್ರೆ ಚುರ್ರ್ ಅಂತಿಯೇ ಎಂದು ಸಾಮಾನ್ಯ ವೈದ್ಯ (ನಾನೇ ನಿರಂಜನ) ಎಂಬುವವರು ಕಾಮೆಂಟ್ ಮಾಡಿದ್ದಾರೆ. ಅದೇ ರೀತಿ, ಸೇವಂತಿಯೆ ಸೇವಂತಿಯೆ ಮಲ್ಲಿಗೆ ಇಡ್ಡ್ಲಿಗಿಂತಲು ಘಮ್ಮಂತಿಯೇ ಎಂದು ವಿಶ್ವ ದೇವಯ್ಯ ಎಂಬುವವರು ಪ್ರತಿಕ್ರಿಯಿಸಿದ್ದಾರೆ. ಇದನ್ನು ಹೇಗೆ ತಿಂತಾರೋ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “ಸೇವಂತಿಗೆ ಹೂವುಗಳು ಪ್ರೋಟೀನ್‌ನ ಒಳ್ಳೆಯ ಸೋರ್ಸ್ , ಈ ಹೂವು ಸಾಮಾನ್ಯ 61.2% ಪ್ರೋಟೀನ್, 2.0% ಕೊಬ್ಬು ಮತ್ತು 35.2% ಕಾರ್ಬೋಹೈಡ್ರೇಟ್‌ ಹೊಂದಿದೆ. ಇತ್ತೀಚೆ ಬಾಳೆ ಹೂವು ಕೂಡ ಖಾದ್ಯ ಪದಾರ್ಥವಾಗಿ ತುಂಬಾ ಹೆಸರು ವಾಸಿ ಆಗಿದೆ. ಇದೇನು ಆಶ್ಚರ್ಯ ಚಕಿತವಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರ ಪ್ರತಿಕ್ರಿಯೆಗೆ ವಿಡಿಯೋ ತುಣುಕು ಇತ್ತು. ಅದು ಹೀಗಿದೆ

ಇನ್ನು ಅಪರಾಜಿತಾ ಅವರ ಪೋಸ್ಟ್ ಕಡೆಗೆ ಗಮನಹರಿಸಿದರೆ ಅಲ್ಲಿ ಕೂಡ ಬಹಳಷ್ಟು ಕಾಮೆಂಟ್‌ಗಳಿವೆ.

ಮಂಜುನಾಥ್ ಕಾರಂತ ಅವರು, “ದೇವರ ತಲೆ ಮೇಲೆ, ನಂತರ ಪ್ರಸಾದವಾಗಿ ಭಕ್ತರ ಕಿವಿ ಜುಟ್ಟಿಗೆ..ಸಂಜೆ ಬಾಣಲೆಯಿಂದ ಬಾಯಿಗೆ.” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನು ನೋಡ್ತಾ ಇದ್ರೆ ನಾವು ಎಲ್ಲವನ್ನೂ ಪಕೋಡ ಮಾಡಿ ಬಿಡ್ತೇವಾ ಅಂತ ಅನ್ನಿಸತೊಡಗಿದೆ ಎಂದು ಸಂದೀಪ್ ಹೆಗಡೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೆಲ್ಲ ಯಾರಾದರೂ ತಿಂದಿದ್ದಾರೆಯೇ ಅಥವಾ ಸುಮ್ನೇ ರೀಲ್ಸ್‌ಗಾಗಿ ಮಾಡ್ತಿದ್ದಾರೋ ಹೇಗೆ ಎಂದು ಜಯಂತ್ ವಸಿಷ್ಠ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.

ಮಿಡಿ ಉಪ್ಪಿನಕಾಯಿ ಖಾತೆಯ ಅವ್ಯುಕ್ತ ಭೈರವ ಅವರು, “ಪ್ರತಿಯೊಬ್ಬರು ಇದನ್ನು ಅಮ್ಮನಿಗೆ ತೋರಿಸಬೇಕು…” ಎಂದಿದ್ದಾರೆ.

ಗಮನಿಸಿ: ಈ ವೈರಲ್ ವಿಡಿಯೋ ವಿಚಾರವನ್ನು ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ಈ ರೆಸಿಪಿ ಪ್ರಯತ್ನಿಸಿ ಅಥವಾ ಪ್ರಯೋಗ ಮಾಡಿ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (HTಕನ್ನಡ) ಶಿಫಾರಸು ಮಾಡುವುದಿಲ್ಲ.

Whats_app_banner