ಕೆಎಲ್ ರಾಹುಲ್ ಬೆನ್ನಲ್ಲೇ ರೋಹಿತ್ ಶರ್ಮಾ ಮೊಣಕಾಲಿಗೆ ಗಾಯ; ಅರ್ಧಕ್ಕೆ ನಿಲ್ಲಿಸಿದ ಅಭ್ಯಾಸ, ಭಾರತ ತಂಡಕ್ಕೆ ಹೆಚ್ಚಿದ ಚಿಂತೆ
Rohit Sharma Injury: ಕೆಎಲ್ ರಾಹುಲ್ ಬೆನ್ನಲ್ಲೇ ರೋಹಿತ್ ಶರ್ಮಾ ಮೊಣಕಾಲಿಗೆ ಗಾಯಗೊಂಡಿದ್ದು, ಅಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದು ಭಾರತ ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯಕ್ಕೂ ಮುನ್ನ ಭರ್ಜರಿ ಕಸರತ್ತು ನಡೆಸುತ್ತಿರುವ ಟೀಮ್ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಉತ್ತಮ ಲಯದಲ್ಲಿದ್ದ ಕೆಎಲ್ ರಾಹುಲ್ (KL Rahul) ಕೈ ಬೆರಳಿಗೆ ಗಾಯಗೊಂಡ ಬೆನ್ನಲ್ಲೇ ಇದೀಗ ನಾಯಕ ರೋಹಿತ್ ಶರ್ಮಾ (Rohit sharma) ಕೂಡ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಇದು ಟೀಮ್ ಮ್ಯಾನೇಜ್ಮೆಂಟ್ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಡಬ್ಲ್ಯುಟಿಸಿ ಫೈನಲ್ (WTC Final) ಪ್ರವೇಶಿಸಲು ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಸಿಲುಕಿದ ಭಾರತ ಇದೀಗ ಇಬ್ಬರ ಗಾಯದಿಂದ ಸಂಕಷ್ಟಕ್ಕೆ ಸಿಲುಕಿದೆ.
ಈಗ ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಸರಣಿಯ ಜೊತೆಗೆ ಈ ಎರಡೂ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿಯೇ ಮೆಲ್ಬೋರ್ನ್ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಬೆವರು ಹರಿಸುತ್ತಿದೆ. ಅದರಂತೆ ರೋಹಿತ್ ಕೂಡ ನೆಟ್ಸ್‌ನಲ್ಲಿ ಕಠಿಣ ಪರಿಶ್ರಮ ಪಡುತ್ತಿದ್ದರು. ಆದರೆ ಡಿ 22ರ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ಅವರ ಮೊಣಕಾಲಿಗೆ ಗಾಯವಾಗಿದೆ. ಮೊದಲ ನೆಟ್ ಸೆಷನ್‌ನಲ್ಲಿ ಕೆಎಲ್ ರಾಹುಲ್ ಕೈಗೆ ಗಾಯವಾಯಿತ್ತು. ಇದೀಗ ಈ ಇಬ್ಬರ ಗಾಯದ ಹೊಡೆತ ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಐಸ್ ಪ್ಯಾಕ್ ಹಾಕಿಕೊಂಡು ಕುಳಿತ ರೋಹಿತ್
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಬೆವರು ಹರಿಸಲು ಆರಂಭಿಸಿದ ಭಾರತಕ್ಕೆ ಕೆಟ್ಟ ಸುದ್ದಿ ಸಿಕ್ಕಿದ್ದು, 2ನೇ ಅವಧಿಯ ನೆಟ್ ಸೆಷನ್‌ನಲ್ಲಿ ಹಿಟ್ಮ್ಯಾನ್ ಗಾಯಗೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಥ್ರೋಡೌನ್ ಸ್ಪೆಷಲಿಸ್ಟ್ ದಯಾರನ್ನು ಎದುರಿಸುತ್ತಿದ್ದ ವೇಳೆ ಅವರ ಎಡ ಮೊಣಕಾಲಿಗೆ ಗಾಯವಾಗಿದೆ. ಇದರ ಹೊರತಾಗಿ ಭಾರತ ತಂಡದ ನಾಯಕ ಸ್ವಲ್ಪ ಹೊತ್ತು ಬ್ಯಾಟಿಂಗ್ ಮಾಡಲು ಯತ್ನಿಸಿದರು. ಆದರೆ, ನೋವು ತಡೆಯಲಾಗದೆ ಅಭ್ಯಾಸ ನಿಲ್ಲಿಸಿದರು. ತಕ್ಷಣವೇ ಗಾಯದ ಜಾಗಕ್ಕೆ ರೋಹಿತ್ ಐಸ್ ಪ್ಯಾಕ್ ಹಾಕಿಕೊಂಡು ಕುರ್ಚಿಯ ಮೇಲೆ ಕುಳಿತು ಬಿಟ್ಟರು. ಈ ವೇಳೆ ತಂಡದ ಫಿಸಿಯೋ ಕೂಡ ಜೊತೆಗಿದ್ದರು. ವರದಿ ಪ್ರಕಾರ, ಈ ಗಾಯವು ತುಂಬಾ ಗಂಭೀರವಾಗಿಲ್ಲ.
ಪಂದ್ಯಕ್ಕೆ ಫಿಟ್ ಆಗುವ ನಿರೀಕ್ಷೆ?
ಆದರೆ, ಮಂಡಿಯಲ್ಲಿ ಊತ ಆಗದಂತೆ ಫಿಸಿಯೋಗಳು ಮುಂಜಾಗ್ರತೆ ವಹಿಸುತ್ತಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ ಗೆ ಇನ್ನೂ 4 ದಿನ ಬಾಕಿ ಇದೆ. ಹೀಗಾಗಿ, ಸಂಪೂರ್ಣವಾಗಿ ಫಿಟ್ ಆಗುವ ನಿರೀಕ್ಷೆ ಇದೆ. ಗಾಯಕ್ಕೆ ತುತ್ತಾಗಿರುವ ರೋಹಿತ್ ಪಂದ್ಯಗಳಲ್ಲಿ ರನ್ ಗಳಿಸಲು ಸಹ ವಿಫಲರಾಗಿದ್ದಾರೆ. ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ರೋಹಿತ್ ಎರಡು ಮತ್ತು ಮೂರನೇ ಪಂದ್ಯಕ್ಕೆ ಲಭ್ಯರಾದರು. ತನ್ನ ಆರಂಭಿಕ ಸ್ಥಾನ ರಾಹುಲ್ಗೆ ತ್ಯಾಗ ಮಾಡಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ರೋಹಿತ್ ಕಳಪೆ ಪ್ರದರ್ಶನ ನೀಡಿದರು. ಮೆಲ್ಬೋರ್ನ್ ಮೈದಾನವು ಸ್ಪಿನ್ನರ್‌ಗಳ ಸಹಾಯವನ್ನು ಪಡೆಯುವ ನಿರೀಕ್ಷೆಯಿದೆ. ಹಾಗಾಗಿ ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡೋಣ.