ಬಳ್ಳಾರಿಯಲ್ಲಿ ನಡೆಯಲಿದೆ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ; ಬಿಸಿಲೂರನ್ನು ತಂಪಾಗಿಸಲಿದೆ ಕನ್ನಡದ ಕಂಪು
Kannada Sahitya Sammelana: ಕರ್ನಾಟಕದ ಗಡಿನಾಡು ಪ್ರದೇಶವಾದ ಬಳ್ಳಾರಿಯಲ್ಲಿ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಐತಿಹಾಸಿಕ ಮಹತ್ವವಿರುವ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
Kannada Sahitya Sammelana: ಬರೋಬ್ಬರಿ 66 ವರ್ಷಗಳ ಬಳಿಕ ಮುಂದಿನ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತೇರನ್ನು ಎಳೆಯುವ ಅವಕಾಶ ಬಳ್ಳಾರಿಗೆ ಸಿಕ್ಕಿದೆ. ಹೌದು, ಮುಂದಿನ ಅಂದರೆ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯಲಿದೆ. ಮಂಡ್ಯದಲ್ಲಿ ಶನಿವಾರ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಜರುಗಿದ ಎಲ್ಲ ಜಿಲ್ಲೆಗಳ ಕಸಾಪ ಪ್ರತಿನಿಧಿಗಳ ಸಭೆಯಲ್ಲಿ ಮುಂದಿನ ಸಮ್ಮೇಳನ ಎಲ್ಲಿ ನಡೆಸುವುದು ಎಂಬ ಸಮಾಲೋಚನೆ ನಡೆದು ಅಂತಿಮ ತೀರ್ಮಾನವಾಗಿದೆ. ಇದರಂತೆ, ಗಡಿನಾಡು ಬಳ್ಳಾರಿಯಲ್ಲಿ ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ ಮೂಲಗಳು ತಿಳಿಸಿವೆ.
ತಪ್ಪಿ ಹೋಯಿತು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕನ್ನಡದ ಕಂಪು ಹರಡುವ ಅವಕಾಶ
ಕಳೆದ ಬಾರಿ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಯಾರದ್ದು ಎಂದು ಸಮಾಲೋಚಿಸುವಾಗ, ಬಳ್ಳಾರಿ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ಎಲ್ಲರೂ ಕೊನೆಗೆ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ತೀರ್ಮಾನ ಕೈಗೊಂಡಿದ್ದರು. ಇಂದು ಮೂರು ದಿನಗಳ ಮಂಡ್ಯ ಸಾಹಿತ್ಯ ಸಮ್ಮೇಳನದ ಕೊನೇ ದಿನ. ನಿನ್ನೆ (ಶನಿವಾರ) ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಪ್ರತಿನಿಧಿಗಳ ಸಭೆ ನಡೆದಾಗ ಅಲ್ಲಿ, ಚಿಕ್ಕಮಗಳೂರು, ಬಳ್ಳಾರಿ ಅಥವಾ ದೆಹಲಿಯಲ್ಲಿ ಸಮ್ಮೇಳನ ಆಯೋಜಿಸುವ ವಿಚಾರ ಚರ್ಚೆಗೆ ಒಳಗಾಗಿತ್ತು. ಅಂತಿಮವಾಗಿ ಬಳ್ಳಾರಿಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ಆಯೋಜಿಸುವ ತೀರ್ಮಾನಕ್ಕೆ ಬಂದರು.
ಬಳ್ಳಾರಿಯಲ್ಲಿ ನಡೆಯಲಿದೆ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ನಿನ್ನೆ (ಡಿಸೆಂಬರ್ 21) ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ನಿರ್ಧಾರದೊಂದಿಗೆ ಬಳ್ಳಾರಿ ಜನ ಖುಷಿಯಾಗಿದ್ದು, ಬಿಸಿಲೂರಿನಿಂದ ಸರ್ವತ್ರ ಕನ್ನಡ ಕಂಪು ಹರಡಲು ಮುಂದಾಗಿದ್ದಾರೆ.
ಬಳ್ಳಾರಿಯಲ್ಲಿ ಈ ಹಿಂದೆ 1926 ಹಾಗೂ 1938ರಲ್ಲಿ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದವು. ಅದಾಗಿ, ಸ್ವಾತಂತ್ರ್ಯಾನಂತರ 1958 ರಲ್ಲಿ ವಿ.ಕೃ.ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮ್ಮೇಳನ ಅರ್ಥಪೂರ್ಣವಾಗಿ ನಡೆದಿತ್ತು. ಅದಾದ ನಂತರದಲ್ಲಿ ಸುದೀರ್ಘ 66 ವರ್ಷಗಳ ಬಳಿಕ ಈಗ ಬಳ್ಳಾರಿಗೆ ಸಾಹಿತ್ಯ ಸಮ್ಮೇಳನದ ಆತಿಥ್ಯವಹಿಸುವ ಅವಕಾಶ ದಕ್ಕಿದೆ.