ಏಕಾದಶಿ ಉಪವಾಸದಿಂದ ದೇಹವಷ್ಟೇ ಅಲ್ಲ ಮನಸ್ಸೂ ಶುದ್ಧಿಯಾಗುತ್ತೆ; ಏಕಾದಶಿ ಆಚರಣೆಗಿದೆ ಅಧ್ಯಾತ್ಮಿಕ ಶಕ್ತಿ
Ekadashi fasting: ತಿಂಗಳಲ್ಲಿ 2 ಬಾರಿ ಬರುವ ಏಕಾದಶಿ ಆಚರಣೆ ಹಿಂದೆ ಪುರಾಣದ ಕತೆಯಿದೆ ಎನ್ನುವುದು ನಿಮಗೆ ತಿಳಿದಿರಬಹುದು. ಆದರೆ ಏಕಾದಶಿ ಎಂಬ ಆಚರಣೆಯು ನಿಖರವಾಗಿ ಹೇಗೆ ಶುರುವಾಯ್ತು? ಏಕಾದಶಿ ಉಪವಾಸದಿಂದ ಲಾಭವೇನು? ಹಾಗೂ ಇದರಿಂದ ನಿಮ್ಮ ಆರೋಗ್ಯ ಎಷ್ಟು ಸುಧಾರಿಸಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ
ಹಿಂದೂ ಪಂಚಾಂಗಗಳಲ್ಲಿ ಏಕಾದಶಿಗೆ ತುಂಬಾನೇ ಮಹತ್ವವಿದೆ . ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಏಕಾದಶಿ ಎನ್ನುವುದು ಆಧ್ಯಾತ್ಮಿಕವಾಗಿ ಕೂಡ ಸಾಕಷ್ಟು ಮಹತ್ವವನ್ನು ಹೊಂದಿದೆ . ತಿಂಗಳಲ್ಲಿ ಎರಡು ಬಾರಿ ಏಕಾದಶಿ ಆಚರಣೆ ಮಾಡಲಾಗುತ್ತದೆ. ಅಮಾವಾಸ್ಯೆ ಕಳೆದು 11 ದಿನಗಳ ಬಳಿಕ ಹಾಗೂ ಹುಣ್ಣಿಮೆ ಕಳೆದು 11 ದಿನಗಳ ನಂತರ ಏಕಾದಶಿ ಆಚರಣೆ ಮಾಡಲಾಗುತ್ತದೆ. ಶತ ಶತಮಾನಗಳಿಂದ ಜನರು ಏಕಾದಶಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಏಕಾದಶಿಯ ಆಚರಣೆಯಿಂದ ಆಧ್ಯಾತ್ಮಿಕವಾಗಿ ನಾವು ಪ್ರಗತಿ ಕಾಣುವುದರ ಜೊತೆಯಲ್ಲಿ ದೇಹದಲ್ಲಿರುವ ವಿಷಕಾರಿ ಅಂಶಗಳು ನಿರ್ಮೂಲನೆಯಾಗಲು ಕೂಡ ಇದು ಸಹಾಯಕವಾಗಿದೆ.
ಏಕಾದಶಿ ಆಚರಣೆಯ ಹಿನ್ನೆಲೆ :
ಜಂಗಾಸುರ ಎಂಬ ರಾಕ್ಷಸನ ಪುತ್ರ ವರವಾಸುರ ಚಂದ್ರಾವತಿ ಎಂಬ ನಗರದಲ್ಲಿ ದೇವತೆಗಳಿಗೆ ತೊಂದರೆ ನೀಡುತ್ತಿರುತ್ತಾನೆ. ವರವಾಸುರನ ಕಾಟ ತಡೆಯಲಾರದೇ ದೇವತೆಗಳು ಮಹಾವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ವಿಷ್ಣುವು ದೇವತೆಗಳ ಮೇಲೆ ಯುದ್ಧ ಸಾರುತ್ತಾನೆ. ಎಷ್ಟೋ ವರ್ಷ ಕಳೆದರೂ ಯುದ್ಧ ಮುಗಿಯುವುದೇ ಇಲ್ಲ. ಕೊನೆಗೆ ಮಹಾವಿಷ್ಣುವು ಒಂದು ಗುಹೆಯೊಳಗೆ ಹೋಗಿ ಮಲಗಿಬಿಡುತ್ತಾನೆ. ನಿದ್ದೆಯಲ್ಲಿ ವಿಷ್ಣು ಅಸುರರನ್ನು ಹೇಗೆ ಸೋಲಿಸುವುದು ಎಂದು ಆಲೋಚನೆ ಮಾಡುತ್ತಿರುತ್ತಾನೆ. ಆಗ ಆಲೋಚನೆಗಳೆಲ್ಲ ಸ್ತ್ರೀ ರೂಪ ತಾಳಿ ಏಕಾದಶಿ ಎಂಬಾಕೆಯ ಜನನವಾಗುತ್ತದೆ.
ಈಕೆ ರಾಕ್ಷಸರನ್ನು ಯುದ್ಧದಲ್ಲಿ ಸೋಲಿಸಲು ಯಶಸ್ವಿಯಾಗುತ್ತಾಳೆ . ಹಾಗೂ ಇದು ವಿಷ್ಣುವಿನ ಖುಷಿಗೆ ಕಾರಣವಾಗುತ್ತದೆ. ಇದಕ್ಕೆ ಪ್ರತಿಯಾಗಿ ಏಕಾದಶಿಯು ವಿಷ್ಣುವಿನಲ್ಲಿ ವರವನ್ನು ಬೇಡುತ್ತಾಳೆ. ನಾನು ಜನಿಸಿದ ದಿನದಂದು ಯಾರೆಲ್ಲ ನನಗಾಗಿ ಉಪವಾಸ ಇರುತ್ತಾರೋ ಅವರು ಕೇಳಿದ್ದನೆಲ್ಲ ನೀನು ಕೊಡಬೇಕು ಎಂದು ಕೇಳಿಕೊಳ್ಳುತ್ತಾಳೆ. ಇದಕ್ಕೆ ವಿಷ್ಣು ಸಮ್ಮತಿ ಸೂಚಿಸುತ್ತಾನೆ. ಅಲ್ಲದೇ ಏಕಾದಶಿಯು ವರ್ಷದಲ್ಲಿ 24 ಸಲ ಬರುವುದಾಗಿ ಹೇಳುತ್ತಾಳೆ. ಈ ದಿನಗಳಂದು ಯಾರ್ಯಾರು ಏಕಾದಶಿ ಆಚರಣೆ ಮಾಡುತ್ತಾರೋ ಅವರಿಗೆ ವಿಷ್ಣು ಸಕಲ ಸಿದ್ಧಿ ಪ್ರಾಪ್ತಿ ಮಾಡುತ್ತಾನೆ ಎಂಬ ನಂಬಿಕೆಯಿದೆ.
ಏಕಾದಶಿ ಉಪವಾಸದ ಪ್ರಯೋಜನಗಳು
ಏಕಾದಶಿ ಆಚರಣೆಯು ಆಧ್ಯಾತ್ಮಿಕವಾಗಿ ನಿಮ್ಮನ್ನು ನೀವು ಬಲಿಷ್ಠಗೊಳಿಸಲು ಒಂದು ಉತ್ತಮ ಅವಕಾಶವಾಗಿದೆ. ಈ ದಿನದಂದು ಯಾರು ಉಪವಾಸವಿದ್ದು ದೇಹ ಹಾಗೂ ಮನಸ್ಸನ್ನು ಶುದ್ಧಿಗೊಳಿಸಿಕೊಳ್ಳುತ್ತಾರೋ ಅವರು ದೈವಿ ಅನುಗ್ರಹವನ್ನು ಜೊತೆಯಲ್ಲಿ ಆತ್ಮ ಶುದ್ಧಿಯನ್ನು ಪಡೆದುಕೊಳ್ಳುತ್ತಾರೆ. ಎಲ್ಲಾ ರೀತಿಯ ಭೋಗಗಳು ಹಾಗೂ ಭೌತಿಕ ಆಸೆಗಳಿಂದ ದೂರವಿರುವ ವ್ಯಕ್ತಿಯು ಆಧ್ಯಾತ್ಮಿಕವಾಗಿ ಹೆಚ್ಚು ಬೆಳೆಯುತ್ತಾನೆ.
ಆಧ್ಯಾತ್ಮಿಕತೆಯನ್ನು ಹೊರತುಪಡಿಸಿದರೆ ಏಕಾದಶಿ ಉಪವಾಸವು ವಿವಿಧ ಆರೋಗ್ಯ ಪ್ರಯೋಜನಗಳನ್ನೂ ಸಹ ನೀಡುತ್ತದೆ. ಒಂದು ದಿನ ನೀವು ಉಪವಾಸ ಇರುವದರಿಂದ ದೇಹ ಶುದ್ಧೀಕರಣಗೊಳ್ಳುತ್ತದೆ ಹಾಗೂ ಜೀರ್ಣ ಕ್ರಿಯೆ ವ್ಯವಸ್ಥೆ ಸುಧಾರಿಸುತ್ತದೆ. ಅಲ್ಲದೆ ಜೀರ್ಣಾಂಗ ವ್ಯವಸ್ಥೆಗೆ ಒಂದು ದಿನ ವಿಶ್ರಾಂತಿ ಸಿಕ್ಕಂತೆ ಕೂಡ ಆಗುತ್ತದೆ. ಉಪವಾಸದಿಂದ ದೇಹದ ಚಯಾಪಚಯ ಕ್ರಿಯೆಯು ಸುಧಾರಣೆಗೊಳ್ಳುತ್ತದೆ. ತೂಕ ನಿರ್ವಹಣೆ ಮಾಡಬೇಕು ಎಂದುಕೊಂಡವರು ಸಹ ಏಕಾದಶಿ ಉಪವಾಸ ಮಾಡುವುದು ಒಳ್ಳೆಯದು.
ಒಂದು ವರ್ಷದಲ್ಲಿ 24 ಏಕಾದಶಿ ಆಚರಣೆಗಳು ಬರುತ್ತದೆ. ಅಧಿಕ ಮಾಸ ಇರುವ ವರ್ಷಗಳಲ್ಲಿ ಏಕಾದಶಿ ಸಂಖ್ಯೆಯು 26 ಆಗುತ್ತದೆ. ಅಧಿಕ ಮಾಸದಲ್ಲಿ ಪದ್ಮಿನಿ ಏಕಾದಶಿ ಬರುತ್ತದೆ. ಇದನ್ನು ಅತ್ಯಂತ ಮಂಗಳಕರ ಏಕಾದಶಿ ಎಂದು ಹೇಳಲಾಗುತ್ತದೆ.