Bhairathi Ranagal: ಭೈರತಿ ರಣಗಲ್‍ ಚಿತ್ರವನ್ನು ಇಂದು ಕೇವಲ 99 ರೂಪಾಯಿಗೆ ನೋಡಿ; ಪ್ರೇಕ್ಷಕನಿಗೆ ಯಾಕೆ ಈ ಆಫರ್‌?
ಕನ್ನಡ ಸುದ್ದಿ  /  ಮನರಂಜನೆ  /  Bhairathi Ranagal: ಭೈರತಿ ರಣಗಲ್‍ ಚಿತ್ರವನ್ನು ಇಂದು ಕೇವಲ 99 ರೂಪಾಯಿಗೆ ನೋಡಿ; ಪ್ರೇಕ್ಷಕನಿಗೆ ಯಾಕೆ ಈ ಆಫರ್‌?

Bhairathi Ranagal: ಭೈರತಿ ರಣಗಲ್‍ ಚಿತ್ರವನ್ನು ಇಂದು ಕೇವಲ 99 ರೂಪಾಯಿಗೆ ನೋಡಿ; ಪ್ರೇಕ್ಷಕನಿಗೆ ಯಾಕೆ ಈ ಆಫರ್‌?

Bhairathi Ranagal: ನವೆಂಬರ್ 15ರಂದು ಬಿಡುಗಡೆಯಾಗಿದ್ದ ‘ಭೈರತಿ ರಣಗಲ್‍’ ಚಿತ್ರವು ಎರಡು ವಾರಗಳನ್ನು ಯಶಸ್ವಿಯಾಗಿ ಮುಗಿಸಿ, ಮೂರನೇ ವಾರಕ್ಕೆ ಕಾಲಿಡುತ್ತಿದೆ. ಸಹಜವಾಗಿಯೇ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಗಿದೆ. ಪ್ರೇಕ್ಷಕರನ್ನು ಸೆಳೆಯುವ ಸಲುವಾಗಿ ಚಿತ್ರತಂಡ ಹೊಸ ಆಫರ್ ನೀಡಿದೆ.

ಮಲ್ಟಿಫ್ಲೆಕ್ಸ್‌ನಲ್ಲಿ ಭೈರತಿ ರಣಗಲ್‌ ನೋಡಬೇಕೆನ್ನುವವರಿಗೆ ಆಫರ್‌ ಕೊಟ್ಟ ಚಿತ್ರತಂಡ
ಮಲ್ಟಿಫ್ಲೆಕ್ಸ್‌ನಲ್ಲಿ ಭೈರತಿ ರಣಗಲ್‌ ನೋಡಬೇಕೆನ್ನುವವರಿಗೆ ಆಫರ್‌ ಕೊಟ್ಟ ಚಿತ್ರತಂಡ

Bhairathi Ranagal: ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಆಕರ್ಷಿಸುವುದಕ್ಕೆ ಚಿತ್ರತಂಡಗಳು ಏನೇನೋ ಕಸರತ್ತು ಮಾಡುತ್ತಿವೆ. ಅದರಲ್ಲಿ ಪ್ರಮುಖವಾಗಿದ್ದು ಟಿಕೆಟ್‍ ದರ ಕಡಿಮೆ ಮಾಡುವುದು. ಇತ್ತೀಚಿನ ದಿನಗಳಲ್ಲಿ ಕೆಲವು ಚಿತ್ರತಂಡಗಳು ಇಂಥದ್ದೊಂದು ಪ್ರಯೋಗಕ್ಕೆ ಕೈ ಹಾಕಿದೆ. ರಿಷಿ ಅಭಿನಯದ ‘ರಾಮನ ಅವತಾರ’ ಚಿತ್ರತಂಡವು ಮೊದಲ ಎರಡು ದಿನಗಳ ಕಾಲ ಟಿಕೆಟ್‍ ದರವನ್ನು 99 ರೂ.ಗೆ ಇಳಿಸಿತ್ತು. ಕಳೆದ ವಾರ ಬಿಡುಗಡೆಯಾದ ಅನೀಶ್‍ ತೇಜೇಶ್ವರ್ ಅಭಿನಯದ ‘ಆರಾಮ್‍ ಅರವಿಂದ ಸ್ವಾಮಿ’ ಚಿತ್ರದ ಟಿಕೆಟ್‍ ಬೆಲೆಯನ್ನೂ ಮೊದಲ ಮೂರು ದಿನಗಳಿಗಾಗಿ 99 ರೂ.ಗೆ ಮೀಸಲಿಡಲಾಗಿತ್ತು. ಇಂದು ಬಿಡುಗಡೆಯಾಗುತ್ತಿರುವ ‘ನಾ ನಿನ್ನ ಬಿಡಲಾರೆ’ ಚಿತ್ರ ಸಹ ರಾಜ್ಯಾದ್ಯಂತ 99 ರೂ.ಗಳಿಗೆ ತೋರಿಸಲಾಗುತ್ತಿದೆ. ಇದೀಗ ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್‍’ ಚಿತ್ರತಂಡ ಸಹ ಪ್ರೇಕ್ಷಕರಿಗೆ ಇದೇ ಆಫರ್ ನೀಡುತ್ತಿದೆ.

ಕೇವಲ 99 ರೂಪಾಯಿಯಲ್ಲಿ ಭೈರತಿ ವೀಕ್ಷಿಸಿ

ನವೆಂಬರ್ 15ರಂದು ಬಿಡುಗಡೆಯಾಗಿದ್ದ ‘ಭೈರತಿ ರಣಗಲ್‍’ ಚಿತ್ರವು ಎರಡು ವಾರಗಳನ್ನು ಯಶಸ್ವಿಯಾಗಿ ಮುಗಿಸಿ, ಮೂರನೇ ವಾರಕ್ಕೆ ಕಾಲಿಡುತ್ತಿದೆ. ಸಹಜವಾಗಿಯೇ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಗಿದೆ. ಪ್ರೇಕ್ಷಕರನ್ನು ಸೆಳೆಯುವ ಸಲುವಾಗಿ ಚಿತ್ರತಂಡ ಹೊಸ ಆಫರ್ ನೀಡಿದೆ. ಇಂದು ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲೂ ಚಿತ್ರವನ್ನು ಕೇವಲ 99 ರೂ.ಗಳಿಗೆ ನೋಡಬಹುದು. ಈ ಆಫರ್ ಇದೊಂದು ದಿನ ಮಾತ್ರ. ನಾಳೆಯಿಂದ ಯಥಾಪ್ರಕಾರ, ಮಾಮೂಲೀ ದರವೇ ಇರುತ್ತದೆ.

ಇಂದಿನಿಂದ ತೆಲುಗು, ತಮಿಳಿನಲ್ಲಿ ರಣಗಲ್‌ ಅಬ್ಬರ

ಬರೀ ಮಲ್ಟಿಪ್ಲೆಕ್ಸ್‌ನಲ್ಲಿ ಇಂದು ಬೆಲೆ ಕಡಿಮೆ ಆಗುತ್ತಿರುವುದಷ್ಟೇ ಅಲ್ಲ, ಚಿತ್ರ ಇಂದು ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ಶಿವರಾಜಕುಮಾರ್ ಅಭಿನಯದ ‘ವೇದ’ ಚಿತ್ರವು ತೆಲುಗಿಗೂ ಡಬ್‍ ಆಗಿ ಬಿಡುಗಡೆಯಾಗಿತ್ತು. ಇದೀಗ ‘ಭೈರತಿ ರಣಗಲ್‍’ ಚಿತ್ರವು ತೆಲುಗು ಮತ್ತು ತಮಿಳು ಎರಡೂ ಭಾಷೆಗಳಿಗೆ ಡಬ್‍ ಆಗಿ ಬಿಡುಗಡೆಯಾಗತ್ತಿರುವುದು ವಿಶೇಷ. ಇತ್ತೀಚೆಗೆ ತೆಲುಗು ನಟ ನಾನಿ ಮತ್ತು ತಮಿಳು ನಟ ಶಿವಕಾರ್ತಿಕೇಯನ್‍ ಇಬ್ಬರೂ ತೆಲುಗು ಮತ್ತು ತಮಿಳು ಚಿತ್ರಗಳ ಟ್ರೇಲರ್‌ಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ತೆಲುಗು ಚಿತ್ರವನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮೈರಾ ಕ್ರಿಯೇಷನ್ಸ್ ಬಿಡುಗಡೆ ಮಾಡಿದರೆ, ತಮಿಳುನಾಡಿನಲ್ಲಿ ಎ.ಪಿ ಇಂಟರ್‌ನ್ಯಾಷನಲ್‍ ಸಂಸ್ಥೆ ಬಿಡುಗಡೆ ಮಾಡುತ್ತಿದೆ.

‘ಭೈರತಿ ರಣಗಲ್‍’ ಚಿತ್ರವನ್ನು ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ನಿರ್ಮಿಸಿದ್ದಾರೆ. ಇದು ಅವರ ಗೀತಾ ಪಿಕ್ಚರ್ಸ್ ಬ್ಯಾನರ್‌ನ ಎರಡನೇ ಚಿತ್ರ. ‘ಭೈರತಿ ರಣಗಲ್‍’ ಚಿತ್ರವು ‘ಮಫ್ತಿ’ಯ ಪ್ರೀಕ್ವೆಲ್‍ ಆಗಿದ್ದು, ಆ ಚಿತ್ರವನ್ನು ನಿರ್ದೇಶಿಸಿದ್ದ ನರ್ತನ್‍, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶಿವರಾಜಕುಮಾರ್ ಜೊತೆಗೆ ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್‍, ಛಾಯಾ ಸಿಂಗ್‍, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದು, ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.

ಭೈರತಿ ರಣಗಲ್‌ ಚಿತ್ರದ ಕಲೆಕ್ಷನ್‌ ಎಷ್ಟಾಯ್ತು?

ರಾಜ್ಯಾದ್ಯಂತ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಭೈರತಿ ರಣಗಲ್‌ ಸಿನಿಮಾ, ಕಲೆಕ್ಷನ್‌ ವಿಚಾರದಲ್ಲಿಯೂ ಮುಂದಿದ್ದಾನೆ. ನವೆಂಬರ್‌ 15ರಂದು ಬಿಡುಗಡೆ ಆಗಿದ್ದ ಈ ಸಿನಿಮಾ, ಈ 14 ದಿನಗಳ ಅವಧಿಯಲ್ಲಿ ಈ ವರೆಗೂ 17.69 ಕೋಟಿ ಕಲೆಕ್ಷನ್‌ ಮಾಡಿದೆ ಎಂದು sacnilk ವರದಿ ಮಾಡಿದೆ. ಇತ್ತ ವಿತರಕರ ವಲಯದಿಂದ ಇದೇ ಸಿನಿಮಾ 30ರಿಂದ 35 ಕೋಟಿ ಕಲೆಕ್ಷನ್‌ ಮಾಡಿದೆ ಎಂಬ ಮಾತೂ ಕೇಳಿಬರುತ್ತಿದೆ. ಇದೀಗ ಕನ್ನಡದಲ್ಲಿ ಹಿಟ್‌ ಆದ ಬಳಿಕ, ತೆಲುಗು, ತಮಿಳಿನಲ್ಲಿಯೂ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಆ ಎರಡೂ ಭಾಷೆಗಳಿಂದ ಎಷ್ಟು ಕಲೆಕ್ಷನ್‌ ಆಗಬಹುದು ಎಂಬುದು ಸದ್ಯದ ಕುತೂಹಲ.‌

ವರದಿ: ಚೇತನ್‌ ನಾಡಿಗೇರ್

Whats_app_banner