ಮಿಥುನ ಭವಿಷ್ಯ 2025: ನಿರೀಕ್ಷಿಸಿದ ಸಹಾಯ ಸಿಗುವುದಿಲ್ಲ, ನಿಮ್ಮ ತಪ್ಪಿನಿಂದ ಕುಟುಂಬದರಿಗೆ ಹಣಕಾಸಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ
ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಿದ್ದಂತೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ಕೆಲವರಿಗೆ ತಮ್ಮ ಮುಂದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. 2025 ರಲ್ಲಿ ಮಿಥುನ ರಾಶಿಯವರ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ. (ಬರಹ: ಎಚ್ ಸತೀಶ್, ಜ್ಯೋತಿಷಿ)
ಮಿಥುನ ರಾಶಿ ಭವಿಷ್ಯ ಭವಿಷ್ಯ 2025: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. 2024ರ ಹಳೆಯ ವರ್ಷ ಮುಗೀದು ಹೊಸ ವರ್ಷಕ್ಕೆ ಪ್ರವೇಶಿಸುವ ಮುನ್ನ 2025ರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕಾತುರ ಕೆಲವರಲ್ಲಿ ಇರುತ್ತದೆ. ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು '2025ರ ಭವಿಷ್ಯ' ಹೇಗಿದೆ ಎಂದು ನೋಡುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಮಿಥುನ ರಾಶಿಯವರಿಗೆ 2025 ವರ್ಷ ಹೇಗಿರಲಿದೆ ಎಂಬುದನ್ನು ತಿಳಿಯೋಣ.
ನಿಮ್ಮ ಮನಸ್ಸಿನಲ್ಲಿ ಇರುವ ವಿಚಾರಗಳನ್ನು ಬೇರೆಯವರಿಗೆ ತಿಳಿಸುವುದಿಲ್ಲ. ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲೂ ಇರುವುದಿಲ್ಲ. ಯಾವುದೋ ಒಂದು ರೀತಿಯ ಚಿಂತೆ ಸದಾ ಕಾಡಲಿದೆ. ತೆಗೆದುಕೊಂಡ ನಿರ್ಧಾರಗಳನ್ನು ಪದೇಪದೆ ಬದಲಿಸುವಿರಿ. ಇದರಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುತ್ತದೆ. ಆತ್ಮೀಯರ ಸೋಲು ಗೆಲುವಿನ ವಿಚಾರದಲ್ಲಿ ಚಿಂತೆಗೆ ಒಳಗಾಗುವಿರಿ. ನಿಮ್ಮೊಂದಿಗೆ ನಿಮ್ಮನ್ನು ನಂಬಿದವರನ್ನು ಯಶಸ್ಸಿನ ಪಥದಲ್ಲಿ ಕರೆದೊಯ್ಯುವಿರಿ. ಒಮ್ಮೆ ಮಾನಸಿಕ ಒತ್ತಡವು ಕೆಲಸ ಕಾರ್ಯಗಳನ್ನು ಅಪೂರ್ಣಗೊಳಿಸುತ್ತದೆ.
ದೃಢವಾದ ನಿಲುವನ್ನು ತೆಗೆದುಕೊಳ್ಳದ ಕಾರಣ ಕುಟುಂಬದಲ್ಲಿ ಶಾಂತಿ ನೆಮ್ಮದಿಯ ಕೊರತೆ ಕಾಣುತ್ತದೆ. ಕುಟುಂಬದಲ್ಲಿ ವಯೋವೃದ್ಧರು ಇದ್ದರೆ ಅವರ ಆರೋಗ್ಯದಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಬಹುದಿನದಿಂದ ನಿರೀಕ್ಷಿಸುತ್ತಿದ್ದ ಉದ್ಯೋಗದ ಅವಕಾಶವನ್ನು ಕಳೆದುಕೊಳ್ಳುವ ಸಂಭವವಿದೆ. ಕಷ್ಟ ನಷ್ಟಗಳಿಗೆ ಬೆದರದೆ ಗೆಲುವನ್ನು ಸಾಧಿಸಲು ಪ್ರಯತ್ನಿಸುವಿರಿ. ಕೈಕಾಲುಗಳಲ್ಲಿ ಊತ ಕಂಡು ಬರಬಹುದು. ಸ್ವಂತ ಉದ್ದಿಮೆ ಹೊಂದಿರುವವರಿಗೆ ಮಧ್ಯಮ ಗತಿಯ ಪ್ರಗತಿಯು ಕಂಡುಬರುತ್ತದೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುವ ಲಕ್ಷಣಗಳಿವೆ. ಮಕ್ಕಳ ಸಾಧನೆಯಿಂದ ನಿಮಗೆ ವಿಶೇಷ ಗೌರವ ಲಭಿಸುತ್ತದೆ. ವಾಸ ಸ್ಥಳವನ್ನು ಬದಲಿಸುವಿರಿ. ಹೊಸ ವಾಹನಕೊಳ್ಳುವ ಸಾಧ್ಯತೆಗಳಿವೆ. ಮಕ್ಕಳಿಗೆ ಸಂಬಂಧಿಸಿದ ಶುಭಕಾರ್ಯಗಳು ನಡೆಯುತ್ತವೆ.
ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನಿದಿಂದ ತಮ್ಮ ಗುರಿಯನ್ನು ತಲುಪಲಿದ್ದಾರೆ. ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ದೊರೆಯಲಿದೆ. ನಿರುದ್ಯೋಗಿಗಳಿಗೆ ವಿದೇಶದ ಆಡಳಿತ ಇರುವ ಕಂಪನಿಗಳಲ್ಲಿ ಉದ್ಯೋಗ ದೊರೆಯುತ್ತದೆ. ಉದ್ಯೋಗದಲ್ಲಿ ಇರುವವರು ಶಾಂತಿ ನೆಮ್ಮದಿಯ ವಾತಾವರಣದಲ್ಲಿ ಇರಲಿದ್ದಾರೆ. ತಪ್ಪು ನಿರ್ಧಾರವನ್ನು ತೆಗೆದುಕೊಂಡಲ್ಲಿ ಸಾಲದ ಹೊರೆ ಹೆಚ್ಚುತ್ತದೆ. ನಿಮಗೆ ದೊರೆಯುವ ಅವಕಾಶಗಳನ್ನು ಬಳಸಿಕೊಳ್ಳುತ್ತೀರಿ. ಇರುವ ಅನುಕೂಲತೆಗಳಿಗೆ ಹೊಂದಿಕೊಂಡು ನಡೆಯುವುದು ಶ್ರೇಯಸ್ಕರ. ಸ್ವಂತ ಹಣಕಾಸಿನ ಸಂಸ್ಥೆ ಇರುವವರಿಗೆ ನೌಕರರ ಕೊರತೆ ಕಂಡು ಬರುತ್ತದೆ.
ಕುಟುಂಬದಲ್ಲಿ ವಿವಾಹಿತರಿಗೆ ಹೆಚ್ಚಿನ ಜವಾಬ್ದಾರಿ ಇರಲಿದೆ. ರಾಜಕೀಯ ವ್ಯಕ್ತಿಗಳಿಗೆ ನಿರಾಶೆ ಇರಲಿದೆ. ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಜೀವನದಲ್ಲಿ ಮುಂದುವರೆಯುವ ಅಗತ್ಯತೆ ಕಂಡುಬರುತ್ತದೆ. ಪಾಲುಗಾರಿಕೆಯ ವ್ಯಾಪಾರವಿದ್ದಲ್ಲಿ ಲಾಭಾಂಶದ ಹಂಚಿಕೆಯಲ್ಲಿ ನಿಮಗೆ ಸಮಾಧಾನವಿರುವುದಿಲ್ಲ. ಮನದಲ್ಲಿನ ಬೇಸರವನ್ನು ದೂರ ಮಾಡಲು ದೂರದ ಸ್ಥಳಕ್ಕೆ ಪ್ರಯಾಣ ಬೆಳೆಸುವಿರಿ. ದಂಪತಿ ನಡುವೆ ಉತ್ತಮ ಸಂಬಂಧ ಬೆಸುಗೆ ಏರ್ಪಡುತ್ತದೆ. ತಾಯಿಯವರ ತವರು ಮನೆಯಿಂದ ಉಡುಗೊರೆಯು ಹಣದ ರೂಪದಲ್ಲಿ ಬರಲಿದೆ. ವಿದೇಶ ಪ್ರಯಾಣ ಯೋಗವಿದೆ. ಆರಂಭಿಸಿದ ಕೆಲಸ ಕಾರ್ಯಗಳು ಒಂದೇ ರೀತಿಯಲ್ಲಿ ನಡೆಯುವುದಿಲ್ಲ. ಹಣಕಾಸಿನ ನಿರ್ವಹಣೆಯಲ್ಲಿ ಹಿಂದೆ ಉಳಿಯುವಿರಿ. ಬೇರೆಯವರಿಂದ ನಿರೀಕ್ಷಿತ ಸಹಾಯವು ಲಭ್ಯವಾಗುವುದಿಲ್ಲ.
2025 ರಲ್ಲಿ ಹಣಕಾಸಿಗೆ ಸಂಬಂಧ ನಿರ್ಧಾರಗಳಲ್ಲಿ ಎಚ್ಚರಿಕೆ ವಹಿಸಿ
ಆಡುವ ಮಾತುಕತೆಯಲ್ಲಿ ಸಹಜತೆ ಇರುವುದಿಲ್ಲ. ಇದರಿಂದಾಗಿ ಬಂದು ಬಳಗದವರ ವಿಶ್ವಾಸ ಕಡಿಮೆಯಾಗುತ್ತದೆ. ನಿಮ್ಮ ಮನಸ್ಸಿಗೆ ಹತ್ತಿರವಾದವರ ಜೊತೆಯಲ್ಲಿ ಮನದಲ್ಲಿರುವ ರಹಸ್ಯವನ್ನು ಹಂಚಿಕೊಳ್ಳುವಿರಿ. ಆತ್ಮೀಯರ ಸಮಸ್ಯೆಗಳನ್ನು ಆಲಿಸುವ ಮನಸ್ಥಿತಿ ಇರುವುದಿಲ್ಲ. ಎಲ್ಲರ ಮನಸ್ಸನ್ನು ಅರ್ಥ ಮಾಡಿಕೊಂಡು ನಡೆಯುವ ಅವಶ್ಯಕತೆ ಇದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕು. ನಿಮ್ಮ ತಪ್ಪಿನಿಂದಾಗಿ ಕುಟುಂಬದ ಸದಸ್ಯರು ಹಣದ ಕೊರತೆಯನ್ನು ಎದುರಿಸಲಿದ್ದಾರೆ. ನಿಮಗೆ ಸೇರಿದ ಜಮೀನನ್ನು ವಿಲೇವಾರಿ ಮಾಡಿ ಹೊಸ ಮನೆಯನ್ನು ಕೊಳ್ಳುವಿರಿ.
ಮಕ್ಕಳ ಜೀವನದ ಬದಲಾವಣೆಗಳು ನಿಮಗೆ ಸಹಕಾರಿಯಾಗಲಿವೆ. ಯಂತ್ರೋಪಕರಣಗಳ ಸರಬರಾಜಿನ ವ್ಯವಹಾರವು ಲಾಭದಾಯಕವಾಗಿರುತ್ತದೆ. ಬೇಸಾಯವನ್ನು ಅವಲಂಭಿಸಿದವರಿಗೆ ಇದ್ದ ಆತಂಕದ ಪರಿಸ್ಥಿತಿಯು ದೂರವಾಗುತ್ತದೆ. ವಿದೇಶಿ ಸಂಸ್ಥೆಗಳ ಜೊತೆಯಲ್ಲಿ ವ್ಯಾಪಾರ ಇದ್ದಲ್ಲಿ ಮಧ್ಯಮಗತಿಯ ಲಾಭ ದೊರೆಯಲಿದೆ. ಮಕ್ಕಳ ಜೊತೆಯಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಯನ್ನು ಆರಂಭಿಸುವ ಸಾಧ್ಯತೆಗಳಿವೆ. ಗೃಹಿಣಿಯರ ಆರೋಗ್ಯದಲ್ಲಿ ಏರಿಳಿತಗಳು ಕಂಡುಬರುತ್ತದೆ. ವಂಶಾನುಗತವಾಗಿ ಬಂದಿರುವ ವೃತ್ತಿಯಲ್ಲಿ ಪ್ರಗತಿ ಇರಲಿದೆ. ನಿಮ್ಮ ಧಾರ್ಮಿಕ ತಳಹದಿಯ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯಲಿವೆ. ಗುಟ್ಟಾಗಿ ಹಣ ಸಂಪಾದಿಸುವಿರಿ. ನಿಮ್ಮ ಆಹಾರ ಸೇವನೆಯಲ್ಲಿ ಇತಿ ಮಿತಿ ಇರಲಿ. ಬೇರೆಯವರ ಅನಾವಶ್ಯಕ ಟೀಕೆಗಳಿಗೆ ಉತ್ತರ ನೀಡಬೇಕಾಗುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ