WhatsApp Update: ಹೊಸ ಕ್ಯೂಆರ್ ಕೋಡ್ ಫೀಚರ್ ಪರಿಚಯಿಸುತ್ತಿದೆ ವಾಟ್ಸಪ್, ಏನಿದು ಫೀಚರ್, ಏನಿದರ ಉಪಯೋಗ
ಸ್ಮಾರ್ಟ್‌ಫೋನ್ ಮೆಸೆಂಜರ್ ವಾಟ್ಸಪ್ ಇದೀಗ ತನ್ನ ಚಾನೆಲ್ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ವಾಟ್ಸಪ್ ಚಾನೆಲ್‌ನಲ್ಲಿ ಕ್ಯೂಆರ್ ಕೋಡ್ ಜನರೇಷನ್ ಎಂಬ ಫೀಚರ್ ಪರಿಚಯಿಸಲಿದೆ. ಬಳಕೆದಾರರು ತಮ್ಮ ಚಾನೆಲ್‌ಗಳನ್ನು ಪ್ರಮೋಟ್ ಮಾಡಲು, ಹಂಚಿಕೊಳ್ಳಲು ಇದು ನೆರವಾಗಲಿದೆ.
ಚಾನೆಲ್ ಬಳಕೆದಾರರು ತಮ್ಮ ಕಂಟೆಂಟ್‌ಗಳನ್ನು ಪ್ರಮೋಟ್ ಮಾಡುವುದು ಸುಲಭವಾಗುವಂತೆ ಹೊಸ ಫೀಚರ್ ಪರಿಚಯಿಸಲು ವಾಟ್ಸಪ್ ಮುಂದಾಗಿದೆ. ಒಂದು ವರ್ಷದ ಹಿಂದೆ ಪರಿಚಯಿಸಲಾದ ಚಾನೆಲ್ ಎಂಬ ವಾಟ್ಸಪ್ ಫೀಚರ್ ಈಗ ಸಾಕಷ್ಟು ಜನಪ್ರಿಯತೆ ಪಡೆದಿದೆ. ಆರಂಭದಲ್ಲಿ ಇದು ಸೆಲೆಬ್ರಿಟಿಗಳು ಮತ್ತು ಪ್ರಮುಖ ಬ್ರಾಂಡ್‌ಗಳಿಗಾಗಿ ಇದನ್ನು ಲಾಂಚ್ ಮಾಡಲಾಗಿತ್ತು. ಆದರೆ, ಈಗ ಎಲ್ಲಾ ಬಳಕೆದಾರರು ಇದನ್ನು ಬಳಸುತ್ತಾರೆ. ಎಲ್ಲರೂ ತಮ್ಮ ಸ್ವಂತ ಚಾನೆಲ್ ಪರಿಚಯಿಸುತ್ತಿದ್ದಾರೆ. ಈಗ ಬಳಕೆದಾರರು ತಮ್ಮ ಚಾನೆಲ್ ಅನ್ನು ಲಿಂಕ್ ಮೂಲಕ ಇತರರ ಜತೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಕಂಪನಿಯು ಈ ಹಂಚಿಕೊಳ್ಳುವಿಕೆಯನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುತ್ತಿದೆ. ಜನರೇಟ್ ಕ್ಯೂಆರ್ ಕೋಡ್ ಎಂಬ ಫೀಚರ್ ಪರಿಚಯಿಸುತ್ತಿದೆ.
WABetaInfo ವರದಿ ಪ್ರಕಾರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಾಗಿ ಬೀಟಾ ಟೆಸ್ಟರ್‌ಗಳು ಬೀಟಾ ಆವೃತ್ತಿ 2.24.25.7ನಲ್ಲಿ ಹೊಸ ಕ್ಯೂಆರ್ ಕೋಡ್ ಟೆಸ್ಟ ಮಾಡುತ್ತಿದ್ದಾರೆ. ಇದನ್ನು ಪರೀಕ್ಷೆ ಮಾಡಲು ಸೀಮಿತ ವಾಟ್ಸಪ್ ಬಳಕೆದಾರರ ಗುಂಪಿಗೆ ಅವಕಾಶ ನೀಡಲಾಗಿದೆ. ಒಂದಿಷ್ಟು ಪರೀಕ್ಷೆ ಬಳಿಕ ಈ ಫೀಚರ್ ಎಲ್ಲರಿಗೂ ಲಭಿಸುವ ನಿರೀಕ್ಷೆಯಿದೆ.
ಇತ್ತೀಚಿನ ಬೀಟಾ ಆವೃತ್ತಿಯಲ್ಲಿ ಇನ್ನೂ ವಾಟ್ಸಪ್ ಕ್ಯೂಆರ್ ಕೋಡ್ ಆಯ್ಕೆ ಕಾಣಿಸಿಲ್ಲ. ಇದೇ ಫೀಚರ್ ವಾಟ್ಸಪ್ ಐಒಎಸ್ ಬೀಟಾ ಆವೃತ್ತಿಯಲ್ಲಿಯೂ ಇದೆ. ಹೀಗಾಗಿ, ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಈ ಫೀಚರ್ ದೊರಕುವ ಸೂಚನೆಯಿದೆ.
ಇತ್ತೀಚಿನ ವಾಟ್ಸಪ್ ಅಪ್‌ಡೇಟ್‌ಗಳು
ಚಾನೆಲ್ ಶೇರಿಂಗ್ ಮಾತ್ರವಲ್ಲದೆ ವಾಟ್ಸಪ್ ಇನ್ನಷ್ಟು ಅಪ್‌ಡೇಟ್‌ಗಳನ್ನು ಮಾಡುತ್ತಿದೆ. ಮೀಡಿಯಾ ಶೇರಿಂಗ್ ಆಯ್ಕೆಯನ್ನು ಇನ್ನಷ್ಟು ಸುಧಾರಿಸಲು ವಾಟ್ಸಪ್ ಪ್ರಯತ್ನಿಸುತ್ತಿದೆ. ಇತ್ತೀಚಿನ ಬೀಟಾ ಆವೃತ್ತಿಯ ಅಪ್‌ಡೇಟ್‌ಪ್ರಕಾರ ಚಾಟ್ ಟೆಕ್ಸ್‌ಬಾಕ್ಸ್‌ನಲ್ಲಿ ಹೊಸ ಗ್ಯಾಲರಿ ಆಯ್ಕೆ ಕಾಣಿಸಿಕೊಂಡಿದೆ. ಕ್ಯಾಮೆರಾ ಶಾರ್ಟ್‌ಕಟ್ ಬದಲು ಗ್ಯಾಲರಿ ಆಯ್ಕೆ ಕಾಣಿಸಿದೆ. ವಾಟ್ಸಪ್‌ನಲ್ಲಿ ಲಿಸ್ಟ್ ಫೀಚರ್ ಕೂಡ ಕಾಣಿಸಿದೆ. ಈ ತಿಂಗಳು ವಾಟ್ಸಪ್‌ನಲ್ಲಿ ವಾಯ್ಸ್ ಟ್ರಾನ್ಸ್‌ಸ್ಕ್ರಿಪ್ಷನ್ ಫೀಚರ್ ಆಗಮಿಸಲಿದೆ. ಒಟ್ಟಾರೆ, ವಾಟ್ಸಪ್ ಬಳಕೆ ಇನ್ನಷ್ಟು ಸೊಗಸಾಗುವ ಸೂಚನೆ ಇದೆ.