ಬಾಲ್ಯದ ಸೆಲೆಕ್ಟರ್ಸ್ ಜೊತೆಗೆ ಹಾರ್ದಿಕ್ ಪಾಂಡ್ಯ ವಿಡಿಯೋ ಕಾಲ್; 400 ರೂ ಮೇಲೆ ದೊಡ್ಡ ಚರ್ಚೆ, ವಿಡಿಯೋ ವೈರಲ್
Hardik Pandya: ತಮ್ಮ ಆರಂಭಿಕ ದಿನಗಳಲ್ಲಿ ಕಲಿಸಿದ ಆಟ ಮತ್ತು ತೋರಿದ ಕಾಳಜಿಗೆ ಬಾಲ್ಯದ ಸೆಲೆಕ್ಟರ್ಗಳಿಗೆ ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.
ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಬಾಲ್ಯದ ಕ್ರಿಕೆಟ್ ಸೆಲೆಕ್ಟರ್ಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಆರಂಭಿಕ ದಿನಗಳಲ್ಲಿ ಕಲಿಸಿದ ಆಟ ಮತ್ತು ತೋರಿದ ಕಾಳಜಿಗೆ ಆಯ್ಕೆದಾರರಿಗೆ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ. ಬಾಲ್ಯದ ಸೆಲೆಕ್ಟರ್ಗಳೊಂದಿಗೆ ವಿಡಿಯೋ ಕಾಲ್ ಕ್ಲಿಪ್ ವೈರಲ್ ಆಗುತ್ತಿದೆ. ಇದೇ ಅವಧಿಯಲ್ಲಿ ವೃತ್ತಿಜೀವನದ ಆರಂಭದಲ್ಲಿ ಪಂದ್ಯದ ಶುಲ್ಕ 400 ರೂಪಾಯಿ ನೀಡಿದ್ದ ತನ್ನ ಸೆಲೆಕ್ಟರ್ಸ್ಗೆ ಧನ್ಯವಾದ ಸಲ್ಲಿಸಿದ್ದಾರೆ. ಇದು ಅವರ ವೃತ್ತಿಜೀವನದ ಹಾದಿಯನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದಕ್ಕೂ ಮುನ್ನ ದೊಡ್ಡ ಪ್ರಮಾಣದ ಆರ್ಥಿಕ ಸಂಕಷ್ಟ ಎದುರಿಸಿದ್ದ ಹಾರ್ದಿಕ್, ತನ್ನ ಪರಿಶ್ರಮ, ಪ್ರತಿಭೆ, ಸಾಮರ್ಥ್ಯ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಬೆಳಕಿಗೆ ಬಂದರು. ದೇಶೀಯ ಕ್ರಿಕೆಟ್ನಲ್ಲಿ ಮಿಂಚಿನ ಪ್ರದರ್ಶನ ನೀಡಿದ ಪಾಂಡ್ಯ, 2015ರಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಪದಾರ್ಪಣೆ ಮಾಡಿದರು. ಐಪಿಎಲ್ನಲ್ಲೂ ಅಬ್ಬರಿಸಿದ ಅವರು 2 ವರ್ಷಗಳ ನಂತರ ಅಂದರೆ 2017ರಲ್ಲಿ ಭಾರತೀಯ ಕ್ರಿಕೆಟ್ಗೆ ಡೆಬ್ಯು ಮಾಡಿದರು.
ಬಲಗೈ ಬ್ಯಾಟಿಂಗ್, ಬಲಗೈ ಮಧ್ಯಮ ವೇಗದ ಬೌಲರ್ ಆಗಿ ಗುರುತಿಸಿಕೊಂಡಿರುವ ಹಾರ್ದಿಕ್, ವಿಶ್ವ ಕ್ರಿಕೆಟ್ನಲ್ಲಿ ತನ್ನದೇಯಾದ ಛಾಪು ಮೂಡಿಸಿದರು. ಪಂದ್ಯದಿಂದ ಪಂದ್ಯಕ್ಕೆ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದ ಆಲ್‌ರೌಂಡರ್, ಇದುವರೆಗೂ 109 ಟಿ20ಐ, 86 ಏಕದಿನ, 11 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಒಟ್ಟು 4001 ರನ್, 190 ವಿಕೆಟ್ ಪಡೆದಿದ್ದಾರೆ. ನಾಯಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ಆದರೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಬರುವುದಕ್ಕೂ ಮುನ್ನ ಹಾರ್ದಿಕ್ ಜೀವನ ಧಾರುಣವಾಗಿತ್ತು.
ಪ್ರಸ್ತುತ ಟಿ20ಐ, ಏಕದಿನ ಕ್ರಿಕೆಟ್ಗೆ ಸೀಮಿತವಾಗಿರುವ ಬರೋಡಾ ಆಲ್‌ರೌಂಡರ್, ತನ್ನ ಹದಿಹರೆಯದಲ್ಲಿ ಸ್ಥಳೀಯ ಮತ್ತು ಟೆನಿಸ್-ಬಾಲ್ ಕ್ರಿಕೆಟ್ ಸ್ಪರ್ಧೆಗಳಲ್ಲಿ ಆಡಲು ಪ್ರತ್ಯೇಕವಾದ ಗುಜರಾತಿ ಹಳ್ಳಿಗಳಿಗೆ ನಿಯಮಿತವಾಗಿ ಪ್ರಯಾಣಿಸುತ್ತಿದ್ದ. ಈ ಸ್ಪರ್ಧೆಗಳಿಂದ ಅವರಿಗೆ ಆಗಾಗ್ಗೆ 400-500 ರೂ ಪಂದ್ಯದ ಶುಲ್ಕ ನೀಡಲಾಗುತ್ತಿತ್ತು. ಈ ಸಾಧಾರಣ ಪಂದ್ಯದ ವೆಚ್ಚವು ಅವರ ಆರಂಭಿಕ ತೊಂದರೆಗಳ ಸಮಯದಲ್ಲಿ ಸಹಾಯದ ಪ್ರಮುಖ ಮೂಲವಾಗಿತ್ತು.
2024ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಾಂಡ್ಯ, ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ತ್ರಿಪುರ ವಿರುದ್ಧ 23 ಎಸೆತಗಳಲ್ಲಿ 47 ರನ್ ಗಳಿಸಿ ಬರೋಡಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪಾಂಡ್ಯ, ಸುಲ್ತಾನ್ ಬೌಲಿಂಗ್ನಲ್ಲಿ ಭರ್ಜರಿ 5 ಸಿಕ್ಸರ್ಗಳನ್ನು ಬಾರಿಸಿದರು. ಇದುವರೆಗೂ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಹಾರ್ದಿಕ್, ಔಟಾಗದೆ 74, ಔಟಾಗದೆ 41, 69 ಮತ್ತು 47 ರನ್ ಸಿಡಿಸಿ ಮಿಂಚಿದ್ದಾರೆ.
ಐಪಿಎಲ್ನಲ್ಲಿ ಮತ್ತೆ ಮುಂಬೈ ತಂಡ ಮುನ್ನಡೆಸಲಿದ್ದಾರೆ ಹಾರ್ದಿಕ್
2024ರ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಹಾರ್ದಿಕ್ ಪಾಂಡ್ಯ, 5 ಬಾರಿ ಚಾಂಪಿಯನ್ ಆಗಿದ್ದ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಮುನ್ನಡೆಸಲು ಸಜ್ಜಾಗಿದ್ದಾರೆ. ಮುಂಬೈಗೆ ಮರಳುವುದಕ್ಕೂ ಮುನ್ನ 2 ವರ್ಷಗಳ ಕಾಲ ಗುಜರಾತ್ ಟೈಟಾನ್ಸ್ಗೆ ನಾಯಕತ್ವ ವಹಿಸಿದ್ದರು. ಈ ವೇಳೆ ತಂಡವನ್ನು ಒಂದು ಬಾರಿ ಚಾಂಪಿಯನ್, ಮತ್ತೊಂದು ಬಾರಿಗೆ ರನ್ನರ್ಅಪ್ ಮಾಡಿದ್ದರು. 2024ರಲ್ಲಿ ಟ್ರೇಡ್ ಮೂಲಕ ಮುಂಬೈ ಸೇರಿದ್ದ ಪಾಂಡ್ಯ ನಾಯಕತ್ವವನ್ನೂ ಪಡೆದಿದ್ದರು. 2025ರ ಐಪಿಎಲ್ಗೂ ಮುನ್ನ ರಿಟೇನ್ ಆಗಿದ್ದು ಮತ್ತೆ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ ತಂಡದ ನಾಯಕತ್ವ ಕಳ್ಕೊಂಡ ಹಾರ್ದಿಕ್
ಭಾರತೀಯ ಕ್ರಿಕೆಟ್ ತಂಡದಲ್ಲಿ ರೋಹಿತ್ ಶರ್ಮಾ ಉತ್ತರಾಧಿಕಾರಿ ಆಗಿದ್ದ ಹಾರ್ದಿಕ್ ಪಾಂಡ್ಯ, ತನ್ನದೇ ತಪ್ಪುಗಳಿಂದ ನಾಯಕತ್ವ ಸಹ ಕಳೆದುಕೊಂಡರು. ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ಯಾದವ್ ಟಿ20ಐ ಕ್ರಿಕೆಟ್ನ ನೂತನ ನಾಯಕನಾಗಿ ನೇಮಕಗೊಂಡರು. ಉನ್ನತ ಹಂತಕ್ಕೇರಿದರೂ ದೇಶೀಯ ಕ್ರಿಕೆಟ್ ಆಡುವಂತೆ ಸೂಚಿಸಿದರೂ ನಿರ್ಲಕ್ಷ್ಯ ವಹಿಸಿದ್ದರು.